ವಿಶ್ವ ಅಂಚೆ ದಿನ – ಅಕ್ಟೋಬರ್ 9

ಜಾಗತಿಕ ಸಂವಹನ ಕ್ರಾಂತಿಗೆ ಕಾರಣವಾದ ಯೂನಿ ವರ್ಸಲ್ ಪೋಸ್ಟಲ್ ಯೂನಿಯನ್ (UPU) 1874 ರ ಅಕ್ಟೋಬರ್ 9 ರಂದು ಸ್ವಿಜರ್ಲ್ಯಾಂಡ್ ನ ಬಾರ್ನ್ ನಗರದಲ್ಲಿ ಆರಂಭವಾದ ಹಿನ್ನಲೆಯಲ್ಲಿ ವಿಶ್ವ ಅಂಚೆ ದಿನವನ್ನು ಆಚರಿಸಲಾಗುತ್ತಿದೆ.

ವಿಶ್ವ ಅಂಚೆ ಒಕ್ಕೂಟವು 1969 ರ ಅಕ್ಟೋಬರ್ 9 ರಂದು ಮೊದಲ‌ ಬಾರಿಗೆ ವಿಶ್ವ ಅಂಚೆ ದಿನವನ್ನು ಟೋಕಿಯೋದಲ್ಲಿ ಘೋಷಿಸಿದ ಬಳಿಕ ಸುಮಾರು 150 ರಾಷ್ಟ್ರಗಳಲ್ಲಿ ವಿಶ್ವ ಅಂಚೆ ದಿನದ ಸಂಭ್ರಮ. ಅಂದಿನಿಂದ ಜಗತ್ತಿನ‌ ಜನರು ಜಗದಗಲ ಪತ್ರ ಮಾಧ್ಯಮವನ್ನು ಒಪ್ಪಿ ಕೊಂಡು ಸಂವಹನ ಹಾಗು ಸಂದೇಶದ ಹೊಸ ಶಕೆ ಆರಂಭವಾಗಿ ಜನಪ್ರಿಯವಾಯಿತು.

1854ರಲ್ಲಿ ಭಾರತದಲ್ಲಿ ಸಾರ್ವಜನಿಕ ಅಂಚೆ ವ್ಯವಸ್ಥೆ ಯು ಆರಂಭವಾಗಿ ಇದೀಗ ಭಾರತೀಯ ಅಂಚೆ ಇಲಾಖೆ ಸುಮಾರು 1,55,000 ಅಂಚೆ ಕಚೇರಿಗಳ ಮೂಲಕ ದೇಶಾದ್ಯಂತ ಹಳ್ಳಿ ನಗರಗಳನ್ನು ಬೆಸೆಯುತ್ತಾ ವಿಶ್ವದಲ್ಲೇ ಅತಿ ದೊಡ್ಡದಾದ ಸಂಪರ್ಕ ಜಾಲ ಹೊಂದಿದೆ.

1852 ರಲ್ಲಿ ಮೊದಲ‌ಬಾರಿಗೆ ಅಂಚೆ ಚೀಟಿ ಸ್ಟಾಂಪ್ ಗಳ ಉಪಯೋಗ ಚಾಲ್ತಿಗೆ ಬಂದಿತು.1863 ರಲ್ಲಿ ರೈಲ್ವೇ ಮೇಲ್ ಸರ್ವಿಸ್( ಆರ್ ಎಂ ಎಸ್) ಆರಂಭವಾಗಿ, 1876 ರಲ್ಲಿ ಪಾರ್ಸೆಲ್ ಪೋಸ್ಟ್ ಯುನಿಟ್, 1879 ರಲ್ಲಿ ಪೋಸ್ಟ್ ಕಾರ್ಡ್, 1880 ರಲ್ಲಿ ಮನಿ ಆರ್ಡರ್ ಸೇವೆ, 1911 ರಲ್ಲಿ ವಿಮಾನ ಅಂಚೆ ಸೇವೆ ಅಂದರೆ ಏರ್ ಮೇಲ್, 1964 ರಲ್ಲಿ ಭಾರತೀಯ ಅಂಚೆ ಸೇವೆ,            (ಇಂಡಿಯಾಪೋಸ್ಟ್) 1972 ರಲ್ಲಿ ಪಿನ್ ಕೋಡ್ ,1984ರಲ್ಲಿ ಅಂಚೆ ಜೀವ ವಿಮೆ, 1986 ರಲ್ಲಿ ತ್ವರಿತ ಅಂಚೆ ಅಂದರೆ ಸ್ಪೀಡ್ ಪೋಸ್ಟ್, 1995 ರಲ್ಲಿ ಗ್ರಾಮೀಣ ಅಂಚೆ ಜೀವ ವಿಮೆ

1996 ರಲ್ಲಿ‌ ಮೀಡಿಯಾ ಪೋಸ್ಟ್, 1997 ರಲ್ಲಿ ಬ್ಯುಸಿನೆಸ್‌‌ ಪೋಸ್ಟ್, 2000 ದಲ್ಲಿ ಗ್ರೀಟಿಂಗ್ ಪೋಸ್ಟ್, 2001 ರಲ್ಲಿ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ ಫರ್, 2002 ರಲ್ಲಿ ಅಂತರ್ಜಾಲ ಆಧಾರಿತ ಟ್ರ್ಯಾಕ್ ಮತ್ತು ಟ್ರೇಸ್ ವ್ಯವಸ್ಥೆ, 2003 ರಲ್ಲಿ ಬಿಲ್ ಮೇಲ್ ಸರ್ವಿಸ್, 2004 ರಲ್ಲಿ ಇ ಪೋಸ್ಟ್ ಮತ್ತು ಲಾಜಿಸ್ಟಿಕ್ ಪೋಸ್ಟ್, 2016ರಲ್ಲಿ ಎಟಿಮ್ ಸೇವೆ,2018 ರಲ್ಲಿ ಇಂಡಿಯಾ ‌ಪೋಸ್ಟ್ ಪೇಮೆಂಟ್ ಬ್ಯಾಂಕ್ ಹೀಗೆ ಭಾರತೀಯ ಅಂಚೆ ಇಲಾಖೆ ವಿವಿಧ ಮಜಲುಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಬದಲಾ ಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಬದಲಾಗುತ್ತಿದೆ.

ಪತ್ರ ಬಟವಾಡೆಯೊಂದಿಗೆ ಉಳಿತಾಯದತ್ತಲೂ ಮುಖ ಮಾಡಿರುವ ಅಂಚೆ ಇಲಾಖೆ ಸುಭದ್ರ ಭವಿಷ್ಯಕ್ಕೂ ಭಾಷ್ಯ ಬರೆದಿದೆ. ಜನಸಾಮಾನ್ಯರಿಗೆ ಅನುಕೂಲ ವಾಗುವಂತೆ ಕಡಿಮೆ ಠೇವಣಿ ಹೆಚ್ಚು ಲಾಭ ಇರುವ ಉಳಿತಾಯ ಖಾತೆ, ಆವರ್ತನ ಖಾತೆ, ಮಾಸಿಕ ವರಮಾನ ಖಾತೆ, ಸಾರ್ವಜನಿಕ ಭವಿಷ್ಯ ನಿಧಿ, ಸುಕನ್ಯಾ ಸಮೃದ್ಧಿ ಖಾತೆ, ರಾಷ್ಟ್ರೀಯ ಉಳಿತಾಯ ಖಾತೆ, ಹಿರಿಯ ನಾಗರಿಕರ ಉಳಿತಾಯ ಖಾತೆ ಹೀಗೆ ಹತ್ತು ಹಲವು ಜನೋಪಯೋಗಿ ಖಾತಾ ಠೇವಣಿ ಸೌಲಭ್ಯ ‌ಇಲ್ಲಿ ಲಭ್ಯವಿದೆ.

ಸುಂದರ ಹಾಗು ನಿರಾಳ ಭವಿಷ್ಯದ ದಿನಗಳಿಗಾಗಿ ಅಲ್ಪ‌ಮೊತ್ತದ ಪ್ರೀಮಿಯಮ್ ಕಟ್ಟಿ ದೊಡ್ಡ ಮೊತ್ತದ ಮೆಚ್ಯುರಿಟಿ ಹಣ ಪಡೆಯಬಹುದಾದ ಮತ್ತು ಅಸ್ಥಿರ ಬದುಕಿನಲ್ಲಿ ಮನೆಮಂದಿಗೆ ಆಧಾರವಾಗುವ ಉಳಿ ತಾಯ ಹಾಗು ಜೀವನ ಭದ್ರತೆ ಒದಗಿಸುವ ಅಂಚೆ ಜೀವ ವಿಮೆ, ಗ್ರಾಮೀಣ ಅಂಚೆ ಜೀವ ವಿಮೆ ಸೌಲಭ್ಯ ಗಳು ಕೂಡಾ ಭಾರತೀಯ ಅಂಚೆ ಇಲಾಖೆಯ ಹೆಚ್ಚುಗಾರಿಕೆ.

ವಿವಿಧ ಸಮಯಗಳಲ್ಲಿ ಏಜೆಂಟ್ ಆಗಿ ಕಾರ್ಯ ನಿರ್ವ ಹಿಸುತ್ತಾ ಹಲವಾರು ಮ್ಯೂಚುವಲ್ ಫಂಡ್, ಅಲ್ಲದೆ ಬಿಲ್ ಪಾವತಿಯಂತಹ ಕಾರ್ಯಗಳಲ್ಲಿ ಸಕ್ರಿಯವಾಗಿದೆ ಅಂಚೆ ಇಲಾಖೆ.

ಶತ ಶತಮಾನಗಳ ಇತಿಹಾಸವುಳ್ಳ ಭಾರತೀಯ ಅಂಚೆ ಇಲಾಖೆ ಆಧುನಿಕತೆಯನ್ನು ಒಪ್ಪಿಕೊಂಡು , ನೂತನ ತಂತ್ರಜ್ಞಾನವನ್ನು ಅಪ್ಪಿಕೊಂಡು ಶ್ರೀ ಸಾಮಾನ್ಯರ ಹೆಮ್ಮೆಯ ಇಲಾಖೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಅಂಚೆ ಇಲಾಖೆಯ ಸಿಬ್ಬಂದಿಗಳಿಗೆ ಮತ್ತು ಅಂಚೆ ಗ್ರಾಹಕರಿಗೆ  ಅಕ್ಟೋಬರ್ 9 ರಂದು ವಿಶ್ವದೆಲ್ಲೆಡೆ ಆಚರಿ ಸುವ ವಿಶ್ವ ಅಂಚೆ ದಿನದ ಶುಭಾಶಯಗಳು

ಹಾಗೆಯೇ ಒಂದು ವಾರದ ಪರ್ಯಂತ ಭಾರತೀಯ ಅಂಚೆ ಇಲಾಖೆ ರಾಷ್ಟ್ರದಾದ್ಯಂತ ರಾಷ್ಟ್ರೀಯ ಅಂಚೆ ಸಪ್ತಾಹ ಹಮ್ಮಿಕೊಂಡು ಅಂಚೆ ಇಲಾಖೆಯ ವಿಶಿಷ್ಟ ಸೇವೆಗಳ‌ ಬಗ್ಗೆ ಬೆಳಕು ಚೆಲ್ಲುವ ವೈಶಿಷ್ಟಪೂರ್ಣ ಕಾರ್ಯ ಕ್ರಮಗಳಿಗೆ ಅಭಿಮಾನಪೂರ್ವಕ ಅಭಿನಂದನೆಗಳು.

-📝ಪೂರ್ಣಿಮಾ ಜನಾರ್ದನ್
ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್,  ಮಾರುಕಟ್ಟೆ ಕಾರ್ಯನಿರ್ವಾಹಕರುಉಡುಪಿ ಅಂಚೆ ವಿಭಾಗ, ಉಡುಪಿ 576101. 9481214104

 
 
 
 
 
 
 
 
 

Leave a Reply