ಶಾಶ್ವತ ಚಿತ್ರ ಸಹಿತ ಅಂಚೆ ಮೊಹರು( ಪರ್ಮನೆಂಟ್ ಪಿಕ್ಟೋರಿಯಲ್ ಕ್ಯಾನ್ಸಲೇಶನ್)~ಪೂರ್ಣಿಮಾ ಜನಾರ್ದನ್

ಅಂಚೆ ಚೀಟಿ ಸಂಗ್ರಹಣಾ ಹವ್ಯಾಸವು ಹವ್ಯಾಸಗಳ ರಾಜ ಅಥವಾ ರಾಜರುಗಳ ಹವ್ಯಾಸ ಎಂದೇ ಖ್ಯಾತಿ‌. ಫಿಲಾಟಲಿಯ ಹಲವು‌ ವಿಭಾಗಗಳಲ್ಲಿ ಶಾಶ್ವತ ಚಿತ್ರ ಸಹಿತ ಅಂಚೆ ಮೊಹರು ( ಪರ್ಮನೆಂಟ್ ಪಿಕ್ಟೋರಿಯಲ್ ಕ್ಯಾನ್ಸಲೇಶನ್ ) ಕೂಡಾ ಪ್ರಮುಖ್ಯತೆ ಪಡೆದಿದೆ. ಕೆಲವೊಂದು ಅಂಚೆ ಕಚೇರಿಗಳಲ್ಲಿ ಆಯಾಯ ಪ್ರದೇಶಗಳ ವಿಶೇಷತೆಗಳನ್ನೊಳಗೊಂಡ ಶಾಶ್ವತ ಚಿತ್ರ ಸಹಿತ ಅಂಚೆ ಮೊಹರು ಲಭ್ಯವಿದ್ದು ಆಸಕ್ತರು ಯಾವುದೇ ಶುಲ್ಕವಿಲ್ಲದೆ ಅದನ್ನು ಪತ್ರ ರವಾನಿಸಲು ಉಪಯೋಗಿಸಬಹುದು.ಸಂಗ್ರಹಕಾರರು ಇಂತಹ ಅಂಚೆ ಕಚೇರಿಗೆ ತೆರಳಿ ಅಲ್ಲಿ ಲಭ್ಯವಿರುವ ಶಾಶ್ವತ ಚಿತ್ರ ಸಹಿತ ಅಂಚೆ ಮೊಹರನ್ನು ಕವರ್,ಕಾರ್ಡ್ ಇಲ್ಲವೇ ಇನ್ ಲ್ಯಾಂಡ್ ಲೆಟರ್ ಗಳಲ್ಲಿ ಮುದ್ರಿಸಿ ಕೊಂಡು ತಮ್ಮ ವಿಳಾಸಕ್ಕೆ ಇಲ್ಲವೇ ತಮ್ಮ ಪರಿಚಿತರ ವಿಳಾಸಕ್ಕೆ ಅದನ್ನು ರವಾನಿಸಿ ನಂತರ ಸಂಗ್ರಹಿಟ್ಟುಕೊಳ್ಳುವ ಈ ಹವ್ಯಾಸ ಫಿಲಾಟಲಿಯಲ್ಲಿ ಆಕರ್ಷಕ ವಿಷಯಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆ ಗಳಲ್ಲಿ ಸುಮಾರು ಹದಿನೈದು ಅಂಚೆ ಕಚೇರಿಗಳಲ್ಲಿ ಈ ಸೌಲಭ್ಯ ಲಭ್ಯವಿದ್ದು ಅದರ ಬಗ್ಗೆ ಸ್ವಲ್ಪ ಕಣ್ಣಾಡಿಸೋಣ:

1. ಉಡುಪಿ ಪ್ರಧಾನ ಅಂಚೆ ಕಚೇರಿ 576101- : ಶ್ರೀ ಕೃಷ್ಣ,ಉಡುಪಿ ದೇವಸ್ಥಾನ: ಜಗದೊಡೆಯ ಶ್ರೀ ಕೃಷ್ಣನ ನೆಲೆವೀಡು, ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳ ರಸಬೀಡು ರಜತಪೀಠ ಪುರ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಪೂಜಿಸಲ್ಪಡುವ ಕಡೆಗೋಲು ಕೃಷ್ಣನ ಚಿತ್ರವನ್ನೊಳಗೊಂಡ ಶಾಶ್ವತ ಚಿತ್ರ ಅಂಚೆ ಮೊಹರು ( ಪರ್ಮ ನೆಂಟ್ ಪಿಕ್ಟೋರಿಯಲ್ ಕ್ಯಾನ್ಸಲೇಷನ್)- 23.01.1985 ರಿಂದ ಉಡುಪಿ ಪ್ರಧಾನ ಅಂಚೆ ಕಚೇರಿಯಲ್ಲಿ ಲಭ್ಯವಿದೆ.2.ಮಣಿಪಾಲ ಪ್ರಧಾನ ಅಂಚೆ ಕಚೇರಿ 576104- ವೇಣುಗೋಪಾಲ ದೇವಸ್ಥಾನ( ಗೋಪಾಲಕೃಷ್ಣ ದೇವ ಸ್ಥಾನ) : ಶೈಕ್ಷಣಿಕವಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮಣಿಪಾಲ್ ನ ಎಮ್ ಐಟಿ( ಮಣಿ ಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಆವರಣದಲ್ಲಿ ವೇಣುಗೋಪಾಲ ದೇವಸ್ಥಾನವಿದ್ದು ಆ ದೇವಸ್ಥಾನದ ಚಿತ್ರಣ ವುಳ್ಳ ಪರ್ಮನೆಂಟ್ ಪಿಕ್ಟೋರಿಯಲ್ ಕ್ಯಾನ್ಸಲೇಷನ್ 04.12.1988 ರಿಂದ ಮಣಿಪಾಲ ಪ್ರಧಾನ ಅಂಚೆ ಕಚೇರಿ ಯಲ್ಲಿ ಲಭ್ಯವಿದೆ.3. ಫಿಲಾಟಲಿ ಕೇಂದ್ರ, ಮಂಗಳೂರು ಪ್ರಧಾನ ಅಂಚೆ ಕಚೇರಿ: ಲೈಟ್ ಹೌಸ್- ಮಂಗಳೂರಿನ ಹೃದಯ ಭಾಗ ದಲ್ಲಿರುವ ಹಂಪನಕಟ್ಟಾದಲ್ಲಿ ಇರುವ ಲೈಟ್ ಹೌಸ್ (ದೀಪಸ್ತಂಭ) ಪ್ರವಾಸಿಗರ ತಾಣವಾಗಿದ್ದು ಮಂಗಳೂರು ಫಿಲಾಟಲಿ ‌ಕೇಂದ್ರ,ಪ್ರಧಾನ ಅಂಚೆ ಕಚೇರಿ ಮಂಗಳೂರಿನಲ್ಲಿ ಈ ಲೈಟ್ ಹೌಸ್ ನ ಪರ್ಮನೆಂಟ್ ಪಿಕ್ಟೋರಿಯಲ್ ಕ್ಯಾನ್ಸಲೇಶನ್ 11 ಸೆಪ್ಟೆಂಬರ್,1989 ರಿಂದ ಲಭ್ಯವಿದೆ.

4. ಕಾರ್ಕಳ ಪ್ರಧಾನ ಅಂಚೆ ಕಚೇರಿ- ಕುಳಿತ (ಆಸೀನರಾದ )ತೀರ್ಥಂಕರ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ, ಜೈನರ ಆಡಳಿತಾವಧಿಯಲ್ಲಿ ಪಾಂಡ್ಯ ನಗರಿ ಎಂದು ಕರೆಯಲ್ಪಟ್ಟು ನಂತರ ಕರಿಕಲ್ಲು, ಕಾರ್ಕಳ ಆದ ಈ ಪಟ್ಟಣವು ಜೈನರಿಗೆ ಪವಿತ್ರ ಕ್ಷೇತ್ರ ವಾಗಿದ್ದು ಧ್ಯಾನಸ್ಥನಾಗಿ ಕುಳಿತ ತೀರ್ಥಂಕರ ರರ ಚಿತ್ರವನ್ನು ಹೊಂದಿದ ಪರ್ಮನೆಂಟ್ ಪಿಕ್ಟೋರಿಯಲ್ ಕ್ಯಾನ್ಸಲೇಶನ್ ಕಾರ್ಕಳ ಅಂಚೆ ಕಚೇರಿಯಲ್ಲಿ 05.03 .1991ರಿಂದ ಸಾರ್ವಜ ನಿಕ ರಿಗೆ ಲಭ್ಯವಿದೆ.

5. ಕೊಲ್ಲೂರು ಅಂಚೆ ಕಚೇರಿ:ಕೊಲ್ಲೂರು ಮುಕಾಂಬಿಕಾ ದೇವಿ_ ಹಿಂದೂಗಳ ಪವಿತ್ರ ಕ್ಷೇತ್ರ ಕೊಲ್ಲೂರು ತಾಯಿ ಮೂಕಾಂಬಿಕೆಯ ದೇವಸ್ಥಾನಕ್ಕೆ ಪ್ರಸಿದ್ಧ. ಶಿವ ಹಾಗು ಶಕ್ತಿಯನ್ನು ಸಂಯೋಜಿರುವ ಜ್ಯೋತಿರ್ಲಿಂಗದ ಸ್ವರೂಪ ಹಾಗು ಆದಿ ಶಂಕರಾಚಾರ್ಯರು ಪ್ರತಿಷ್ಟಾಪಿಸಿದ ಪಂಚಲೋಹದ ವಿಗ್ರಹ ಇರುವ ಕೊಲ್ಲೂರಿನ ಮೂಕಾಂಬಿಕಾ ದೇವಾಲಯದ ಮುಂಭಾಗದ ಚಿತ್ರಣವಿರುವ ಪರ್ಮನೆಂಟ್ ಪಿಕ್ಟೋರಿಯಲ್ ಕ್ಯಾನ್ಸಲೇಶನ್ 13.11.2002 ರಿಂದ ಇಲ್ಲಿ ಲಭ್ಯವಿದೆ.

6. ಮಂದಾರ್ತಿ ಉಪ ಅಂಚೆ ಕಚೇರಿ- ಮಂದಾರ್ತಿಯ ಯಕ್ಷಗಾನ: ಉಡುಪಿಯಿಂದ ಸುಮಾರು 25 ಕಿಲೋ ಮೀಟರ್ ದೂರದಲ್ಲಿರುವ ದುರ್ಗಾ ಪರಮೇಶ್ವರಿ ದೇವಿಯ ಪವಿತ್ರ ಸ್ಥಳ ಮಂದಾರ್ತಿ. ದಿವ್ಯವಾದ ಬೆಳಕು ಎಂಬರ್ಥ ದ ಈ ಕ್ಷೇತ್ರದ ಯಕ್ಷಗಾನ ಮೇಳವು ಬಲು ಪ್ರಸಿದ್ಧಿ ಪಡೆದಿದೆ. ಇಲ್ಲಿಯ ಜನತೆ ಶಾಸ್ತ್ರೀಯ ಕಲೆ ಯಕ್ಷಗಾನವನ್ನು ಮನೋರಂಜನೆಯಾಗಿ, ಆರಾಧನಾ ಕಲೆಯನ್ನಾಗಿ ಕಾಣುತ್ತಾರೆ. ಇಲ್ಲಿನ ದೇವಸ್ಥಾನದ ಬಾಗಿಲಿನಲ್ಲಿ ಯಕ್ಷಗಾನ ವೇಷಧಾರಿಯ ಚಿತ್ರವನ್ನೊಳಗೊಂಡ ಪರ್ಮನೆಂಟ್ ಪಿಕ್ಟೋರಿಯಲ್ ಕ್ಯಾನ್ಸಲೇಶನ್14.10.2005 ರಿಂದ ಇಲ್ಲಿ‌ ಲಭ್ಯವಿದೆ.

7. ಕಟೀಲು ಅಂಚೆ ಕಚೇರಿ- ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ: ಮಂಗಳೂರಿನಿಂದ 29 ಕಿಮೀ ದೂರದ ಲ್ಲಿರುವ ದೇಗುಲ ನಗರ ಕಟೀಲು ನಂದಿನಿ ನದಿಯಿಂದ ಆವೃತವಾಗಿದ್ದು ಇಲ್ಲಿನ‌ ಶಾಶ್ವತ ಅಂಚೆ ಮೊಹರು ನಂದಿನಿ ನದಿಯಿಂದ ಆವೃತವಾದ ತಾಯಿ ದುರ್ಗಾ ಪರಮೇಶ್ವರಿ ದೇವಿ ದೇವಸ್ಥಾನದ ರಮಣೀಯ ಚಿತ್ರವನ್ನೊಳಗೊಂಡಿದ್ದು 20.09.2000 ದಿಂದ ಕಟೀಲು ಅಂಚೆ ಕಚೇರಿಯಲ್ಲಿ ಲಭ್ಯವಿದೆ.8. ಸುಬ್ರಮಣ್ಯ ಅಂಚೆ ಕಚೇರಿ: ಐದು ಹೆಡೆಗಳ ಸರ್ಪ ವಾಸುಕಿ- ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ‌ತಾಲೂಕಿನಲ್ಲಿರುವ ಸುಬ್ರಹ್ಮಣ್ಯ ಕ್ಷೇತ್ರದ ನಗರ ಮಧ್ಯದಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವಿದೆ. ನಿಸರ್ಗ ರಮಣೀಯ ಈ ಕ್ಷೇತ್ರ ದಲ್ಲಿ ವಾಸುಕಿ ಹಾಗು ಇತರ ಸರ್ಪಗಳು ಆಶ್ರಯ ಪಡೆದ ಹಿನ್ನಲೆ ಇದ್ದು ಇಲ್ಲಿ ಸುಬ್ರಹ್ಮಣ್ಯ ದೇವರನ್ನು ನಾಗರೂಪಿ ಯಾಗಿ ಪೂಜಿಸುತ್ತಾರೆ.ಇಲ್ಲಿನ ಅಂಚೆ ಕಚೇರಿಯಲ್ಲಿ ಐದು ಹೆಡೆಯ ಸರ್ಪ ವಾಸುಕಿಯ ಚಿತ್ರಣವುಳ್ಳ ಪರ್ಮನೆಂಟ್ ಪಿಕ್ಟೋರಿಯಲ್ ಕ್ಯಾನ್ಸಲೇಶನ್ 14.04.2005 ರಿಂದ ಲಭ್ಯವಿದೆ.

9.ಮಲ್ಪೆ ಅಂಚೆ ಕಚೇರಿ- ಸೈಂಟ್ ಮೇರಿಸ್ ಐಲ್ಯಾಂಡ್- ತೆಂಗಿನ ಮರಗಳ ದ್ವೀಪ, ತೋನ್ಸೆಪಾರ್ ಎಂದು ಕರೆಯಲ್ಪಡುವ ಸೈಂಟ್ ಮೆರೀಸ್ ದ್ವೀಪವು ನಾಲ್ಕು ದ್ವೀಪಗಳ ಸಮೂಹವಾಗಿದ್ದು ಕಣ್ಣು ಹಾಯಿಸುವುದಕ್ಕೂ ನೀಲಿ ನೀರು, ಆಹ್ಲಾದಕರ ತಂಗಾಳಿ,ನಯನ ಮನೋಹರ ಪ್ರವಾಸಿ ತಾಣ ಸೈಂಟ್ ಮೆರೀಸ್ ಐಲ್ಯಾಂಡ್ ನ ಚಿತ್ರ ವನ್ನೊಳಗೊಂಡ ಪರ್ಮನೆಂಟ್ ಪಿಕ್ಟೋರಿಯಲ್ ಕ್ಯಾನ್ಸಲೇಶನ್ ಮಲ್ಪೆ ಅಂಚೆ ಕಚೇರಿಯಲ್ಲಿ 17.01.2015 ರಿಂದ ಲಭ್ಯವಿದೆ.

10. ಬಾರ್ಕೂರು ಅಂಚೆ ಕಚೇರಿ- ಕತ್ತಲೆ ಬಸದಿ: ಸುಮಾರು 365 ದೇಗುಲಗಳ ನಗರಿ, ತುಳುನಾಡ ರಾಜಧಾನಿ ಯಾಗಿರುವ ಬಾರ್ಕೂರು ಉಡುಪಿಯಿಂದ ಸುಮಾರು 16 ಕಿಮೀ ದೂರದಲ್ಲಿದೆ. ಇಲ್ಲಿ ಬೆಳಕನ್ನೇ ಕಾಣದೆ ಕತ್ತಲಲ್ಲಿ ಹಲವಾರು ರಹಸ್ಯಗಳನ್ನು ಹುದುಗಿಸಿಕೊಂಡಿರುವ ಜೈನರ ಸುಂದರ ದೇಗುಲ ಈ ಕತ್ತಲೆ ಬಸದಿ‌. ಆಳುಪ ಅರಸರ ಕಾಲದಲ್ಲಿ ಅಪೂರ್ವ ಕೆತ್ತನೆಗಳಿಂದ, ಕಲ್ಲಿನ ವಿಶಿಷ್ಟ ಚಪ್ಪಡಿಗಳಿಂದ ಅಲಂಕರಣಗೊಂಡಿದ್ದ ಈ ಕತ್ತಲೆ ಬಸದಿ ಬರಿಯ ಕಲ್ಲುಗಳಿಂದ ನಿರ್ಮಿಸಿದ್ದು ಇದೀಗ ಪಾಳು ಬಿದ್ದರೂ ಭದ್ರವಾಗಿ ನಿಂತಿದೆ.ಈ ಕತ್ತಲೆ ಬಸದಿಯ ಚಿತ್ರವುಳ್ಳ ಪರ್ಮನೆಂಟ್ ಪಿಕ್ಟೋರಿಯಲ್ ಕ್ಯಾನ್ಸಲೇಶನ್ ಬಾರ್ಕೂರು ಅಂಚೆ ಕಚೇರಿಯಲ್ಲಿ 17. 01.2015 ರಿಂದ ಲಭ್ಯವಿದೆ.

11. ನಂದಳಿಕೆ ಶಾಖಾ ಅಂಚೆ ಕಚೇರಿ- ಕನ್ನಡದ ಕವಿ ಮುದ್ದಣ್ಣ: ಮಹಾಕವಿ ಎಂದೇ ಖ್ಯಾತರಾದ ಕನ್ನಡದ ಹೆಸ ರಾಂತ ಸಾಹಿತಿ, ಕವಿ ಮುದ್ದಣ್ಣನವರು ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ನಂದಳಿಕೆಯಲ್ಲಿ ಜನಿಸಿದ್ದು. ಉಡುಪಿ ಯ ಕ್ರಿಶ್ಚಿಯನ್ ಹೈಸ್ಕೂಲ್ ನಲ್ಲಿ ದೈಹಿಕ ಶಿಕ್ಷಕರಾಗಿ, ಕನ್ನಡ ಪಂಡಿತರಾಗಿ ಸೇವೆ ಸಲ್ಲಿಸಿದ್ದ ಇವರ ಪ್ರಸಿದ್ಧ ‌ಕೃತಿ ರಾಮಾಶ್ವಮೇಧದ ಮುದ್ದಣ ಹಾಗು ಕಾಲ್ಪನಿಕ ಮಡದಿ ಮನೋರಮೆಯ ಸಲ್ಲಾಪದ ರೇಖಾ ಚಿತ್ರದ ಪರ್ಮನೆಂಟ್ ಪಿಕ್ಟೋರಿಯಲ್ ಕ್ಯಾನ್ಸಲೇಶನ್ ನಂದಳಿಕೆ ಶಾಖಾ ಅಂಚೆ ಕಚೇರಿಯಲ್ಲಿ 24.01.2015 ರಿಂದ ಲಭ್ಯವಿದೆ.12.ಧರ್ಮಸ್ಥಳ ಅಂಚೆ ಕಚೇರಿ- ಶ್ರೀ ಮಂಜುನಾಥ ದೇವಸ್ಥಾನ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನೇತ್ರಾವತಿ ನದಿ ತಟದಲ್ಲಿರುವ ಧರ್ಮಸ್ಥಳ ಕ್ಷೇತ್ರವು ವಿಶ್ವ ವಿಖ್ಯಾತ. ಈ ಕ್ಷೇತ್ರದಲ್ಲಿ ಶೈವ ಮತದ ಈಶ್ವರ ದೇವ ರನ್ನು ವೈಷ್ಣವ ಧರ್ಮದ ಅರ್ಚಕರು ಪೂಜಿಸುತ್ತಲಿದ್ದು ಇದರ ಆಡಳಿತವನ್ನು ಜೈನಮತದ ಖಾವಂದರು ನಡೆಸುತ್ತಿ ರುವುದು ವಿಶೇಷ. ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಾಲಯದ ವಿಹಂಗಮ ನೋಟದ ಪರ್ಮನೆಂಟ್ ಪಿಕ್ಟೋರಿಯಲ್ ಕ್ಯಾನ್ಸಲೇಶನ್ ಧರ್ಮಸ್ಥಳ ಅಂಚೆ ಕಚೇರಿಯಲ್ಲಿ 02.01.1989 ರಿಂದ ಲಭ್ಯವಿದೆ.

13. ಕಾಪು ಅಂಚೆ ಕಚೇರಿ- ಕಾಪು ಲೈಟ್ ಹೌಸ್ : 1901 ರಲ್ಲಿ ನಿರ್ಮಿತವಾದ ಈ ಲೈಟ್ ಹೌಸ್( ದೀಪ ಸ್ತಂಭ) ಕಾಪು ಮುಖ್ಯ ಬಸ್ ನಿಲ್ದಾಣ ದಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿದೆ. ಉರುಟಾದ ಕಲ್ಲಿನ ಗೋಪುರಾಕೃತಿಯ ಈ ಕಾಪು ಲೈಟ್ ಹೌಸ್ ಕಪ್ಪು ಹಾಗೂ ಬಿಳುಪು ಅಡ್ಡ ಗೆರೆಗಳಿಂದ ಕೂಡಿದ್ದು ಅದರ ಕೆಂಪು ಬಣ್ಣದ ಕಂದೀಲು ಆಕರ್ಷಣೀಯವಾಗಿದೆ. ಪ್ರವಾಸಿಗರ ನೆಚ್ಚಿನ ಕಾಪು ಲೈಟ್ ಹೌಸ್ ನ ಚಿತ್ರವನ್ನೊಳಗೊಂಡ ಪರ್ಮನೆಂಟ್ ಪಿಕ್ಟೋರಿಯಲ್ ಕ್ಯಾನ್ಸಲೇಶನ್ 19.08.2017 ರಿಂದ ಕಾಪು ಅಂಚೆ ಕಚೇರಿಯಲ್ಲಿ ಲಭ್ಯವಿದೆ.

14. ಮೂಡಬಿದ್ರೆ ಅಂಚೆ ಕಚೇರಿ. ಜೈನ ದೇವಸ್ಥಾನ,( ಸಾವಿರ ಕಂಬಗಳ ಬಸದಿ)ಮೂಡಬಿದ್ರೆ: ಮೂಡಬಿದ್ರೆಯ 18 ಜೈನ ದೇವಸ್ಥಾನಗಳು ಹೆಸರುವಾಸಿಯಾಗಿದ್ದು ಅಲ್ಲಿನ ಸಾವಿರ ಕಂಬಗಳ ಬಸದಿಯು ವಿಶ್ವ ವಿಖ್ಯಾತವಾಗಿದೆ. ಈ ದೇವಾಲಯವು ತ್ರಿಭುವನ ತಿಲಕ ಚೂಡಾಮಣಿ ಎಂಬ ಹೆಸರಿನಲ್ಲೂ ಖ್ಯಾತವಾಗಿದೆ.ಇಲ್ಲಿ ಚಂದ್ರಪ್ರಭಾ ತೀರ್ಥಂ ಕರ ರ 8 ಅಡಿ ಎತ್ತರದ ಮೂರ್ತಿಯನ್ನು ಪೂಜಿಸಲಾಗುತ್ತಿದ್ದು ಈ ದೇವಾಲಯಕ್ಕೆ ಚಂದ್ರನಾಥ ದೇವಾಲಯ ಎಂದೂ ಕರೆಯುತ್ತಾರೆ‌. ಸಾವಿರ ಕಂಬಗಳ ಬಸದಿಯ ವಿಹಂಗಮ ನೋಟದ ಪರ್ಮನೆಂಟ್ ಪಿಕ್ಟೋರಿಯಲ್ ಕ್ಯಾನ್ಸಲೇಶನ್ ಮೂಡಬಿದ್ರೆ ಅಂಚೆ ಕಚೇರಿಯಲ್ಲಿ 18.11.2016 ರಿಂದ ಲಭ್ಯವಿದೆ.

15. ವೇಣೂರು ಅಂಚೆ- ಶ್ರೀ ಬಾಹುಬಲಿ ದೇವರು: ಜಗತ್ತಿಗೆ ಶಾಂತಿ, ತ್ಯಾಗ ಮತ್ತು ಅಹಿಂಸೆಯ ಸಂದೇಶ ಸಾರಿದ ಭಗವಾನ್ ಬಾಹುಬಲಿಯ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ರಾಜ್ಯದ ಪ್ರಸಿದ್ಧ ಜೈನ ತೀರ್ಥ ಕ್ಷೇತ್ರಗಳಲ್ಲಿ ಒಂದು. 1604ರಲ್ಲಿ ಪ್ರತಿಷ್ಟಾಪಿಸಲಾಗಿರುವ 35 ಅಡಿ ಎತ್ತರದ ಈ ಏಕ ಶಿಲಾ ಗೋಮಟೇಶ್ವರ ಮಹಾ‌ಮೂರ್ತಿ ಅತೀ ವಿರಳವಾಗಿರುವ ಮಂದಸ್ಮಿತ ಮುಖಮುದ್ರೆ ಯನ್ನು ಹೊಂದಿರುವ ವೇಣೂರಿನ ಭಗವಾನ್ ಬಾಹುಬಲಿಯ ಚಿತ್ರವನ್ನೊಳಗೊಂಡ ಪರ್ಮನೆಂಟ್ ಪಿಕ್ಟೋರಿಯಲ್ ಕ್ಯಾನ್ಸಲೇಶನ್ ವೇಣೂರು ಅಂಚೆ ಕಚೇರಿಯಲ್ಲಿ 18.11.2016 ರಿಂದ ಲಭ್ಯವಿದೆ.

16. ಸಂತ ಲಾರೆನ್ಸ್ ಬಸಿಲಿಕಾ ಚರ್ಚ್,ಅತ್ತೂರು: ಕಾರ್ಕಳ‌ ತಾಲೂಕಿನ ಅತ್ತೂರು ಶಾಖಾ ಕಚೇರಿಯಲ್ಲಿ ಬಹು ಪ್ರಸಿದ್ಧ ಸಂತ ಲಾರೆನ್ಸ್ ಬಸಿಲಿಕಾ ಚರ್ಚ್ ,ಅತ್ತೂರು ಇದರ ಚಿತ್ರವನ್ನೊಳಗೊಂಡ ಶಾಶ್ವತ ಚಿತ್ರ ಅಂಚೆ ಮೊಹರು 18.01.2018 ರಿಂದ ಲಭ್ಯವಿದೆ.

17. ಸೋಮೇಶ್ವರ ಶಾಖಾ ಅಂಚೆ ಕಚೇರಿ- ಬರ್ಖಾ (ಮೌಸ್ ಡೀರ್): ಬಲು ಅಪರೂಪದ ಪ್ರಾಣಿ ಮೌಸ್ ಡೀರ್ ಎಂದು ಕರೆಯಲ್ಪಡುವ ಬರ್ಖಾದ ಚಿತ್ರವನ್ನೊಳಗೊಂಡ ಶಾಶ್ವತ ಚಿತ್ರ ಅಂಚೆ ಮೊಹರು ಕಾರ್ಕಳ ತಾಲೂಕಿನ ಸೋಮೇಶ್ವರ ಶಾಖಾ ಅಂಚೆ ಕಚೇರಿಯಲ್ಲಿ 31.07.2020 ರಿಂದ ಲಭ್ಯವಿದೆ.

ಹೀಗೆ ಅವಿಭಜಿತ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯ ಸುಮಾರು ಹದಿನೇಳು ಅಂಚೆ ಕಚೇರಿಗಳಲ್ಲಿ ಶಾಶ್ವತ ಚಿತ್ರ ಅಂಚೆ ಮೊಹರು( ಪರ್ಮನೆಂಟ್ ಪಿಕ್ಟೋರಿಯಲ್ ಕಾನ್ಸಲೇಶನ್) ಸೇವೆ ಲಭ್ಯವಿದೆ.


ಅಂಚೆ ಇಲಾಖೆಯ ಉದ್ಯೋಗಿ, ಪ್ರಧಾನ ಅಂಚೆ ಕಚೇರಿ, ಉಡುಪಿ
9481214104

 
 
 
 
 
 
 
 
 
 
 

Leave a Reply