‘ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು’ ಈ ಗಾದೆ ಮಾತನ್ನು ಈಗಿನ ಪರಿಸ್ಥಿತಿಗೆ ಹೀಗೆ ಹೇಳಬಹುದು ‘ಮನೆಯಲ್ಲಿಯೇ ಪಾಠಶಾಲೆ ತಾಯಿತಂದೆಯರೇ ಇನ್ನೊಮ್ಮೆ ಹೇಳಿಕೊಡುವ ಗುರುಗಳು’.ಕೊರೋನಾ ದಿಂದಾಗಿ ನಮಗೀಗ ಶಾಲೆಗೆ ಹೋಗಲಿಕ್ಕಿಲ್ಲ. ಆದರೆ ಪಾಠ ಮಾತ್ರ ಆನ್ಲೈನ್ನಲ್ಲಿ ಆಗುತ್ತಿದೆ. ಇದರಿಂದ ನಮಗೆ ಅನುಕೂಲನೂ, ಅನಾನುಕೂಲನೂ ಆಗಿದೆ.
ಆನ್ಲೈನ್ ಶಿಕ್ಷಣದಿಂದ ಆಗುವ ಪ್ರಯೋಜನಗಳು : 1.ನಮಗೆ ಈಗ ದಿನಾಲು ರಜೆ. ಮರಗಿಡ, ನಾಯಿ ಬೆಕ್ಕು ಗಳೊಂದಿಗೆ ಆಟವಾಡುತ್ತಾ ವಿಡಿಯೋಗಳನ್ನು ನೋಡುತ್ತಾ ತರಗತಿಯ ಪಾಠಗಳನ್ನು ಕಲಿಯುತ್ತಿದ್ದೇವೆ. 2.ಆನ್ಲೈನ್ ತಂತ್ರಜ್ಞಾನ ಸ್ವಲ್ಪಮಟ್ಟಿಗೆ ಗೊತ್ತಾಗಿದೆ. ಪಾಠದ ಮನೆ ಕೆಲಸ ಛಾಯಾಚಿತ್ರದಲ್ಲಿ ಸರಿಯಾಗಿ ಬರಬೇಕೆಂದು ಅಕ್ಷರಗಳನ್ನು ಸುಂದರವಾಗಿ ದುಂಡು ದುಂಡಾಗಿ ಬರೆಯಲು ಕಲಿತಿದ್ದೇನೆ.
3.ನಾವು ಪಾಠದ ವಿಷಯಗಳನ್ನು ಅರ್ಥಮಾಡಿಕೊಳ್ಳಲು ವಿಡಿಯೋಗಳನ್ನು ಎಷ್ಟು ಸಲ ಬೇಕಾದರೂ, ಯಾವಾಗ ಬೇಕಾದರೂ ನೋಡಬಹುದು. ಶಿಕ್ಷಕರು ಹೇಳಿಕೊಟ್ಟ ಪಾಠಗಳನ್ನು ನಮಗೆ ಬೇಕಾದಷ್ಟು ಸಲ ನೋಡಿ, ಕೇಳಿ ಮನನ ಮಾಡಿಕೊಳ್ಳಬಹುದು.
4. ನನ್ನ ಅಮ್ಮ ನನಗೆ ವಿಡಿಯೋದಲ್ಲಿರುವ ಪಾಠಗಳನ್ನು ಚೆನ್ನಾಗಿ, ಪ್ರಾಯೋಗಿಕವಾಗಿ ಕಥೆಗಳನ್ನು ಹೇಳಿ ಅರ್ಥ ಮಾಡಿಸುತ್ತಾರೆ. ಇದು ನನಗೆ ತುಂಬಾ ಖುಷಿ. ಅಮ್ಮನೂ ನನಗೆ ಪಾಠ ಮಾಡಲಿಕೋಸ್ಕರ ಬಹಳ ವಿಷಯಗಳನ್ನು ಕಲಿಯುತ್ತಿದ್ದಾರೆ.
ಆನ್ಲೈನ್ ಶಿಕ್ಷಣದಿಂದ ಆಗುವ ತೊಂದರೆಗಳು: 1. ನಾನು ದಿನ ಶಾಲೆಯ ಸಮಯಕ್ಕೆ ತಯಾರಾಗಿ, ಶಾಲೆ ಗಾಡಿ ಹತ್ತಿದಾಗ, ಸ್ನೇಹಿತರನ್ನು ನೋಡಿದಾಗ ಆಗುವ ಖುಷಿ ಈಗಿಲ್ಲ. 2. ನನಗೆ ನನ್ನ ಶಿಕ್ಷಕರೊಂದಿಗೆ, ಗೆಳೆಯ ರೊಂದಿಗೆ ಮುಖತಃ ಮಾತನಾಡಬೇಕೆಂದು ತುಂಬಾ ಆಸೆಯಾಗುತ್ತಿದೆ. ಗುಂಪುಗುಂಪಾಗಿ ಆಟ ಆಡ ಬೇಕೆ ನಿಸುತ್ತಿದೆ.ಆದರೆ ಈಗ ಯಾರನ್ನು ಭೇಟಿಯಾಗಲು ಆಗುವುದಿಲ್ಲ. 3. ನೆಟ್ವರ್ಕ್, ವಿದ್ಯುತ್ ಸಮಸ್ಯೆಗಳಿಂದಾಗಿ ಕೆಲವೊಮ್ಮೆ ನೇರವಾದ ಆನ್ಲೈನ್ ಕ್ಲಾಸುಗಳು ತಪ್ಪಿಹೋಗುತ್ತದೆ.
4.ಆನ್ಲೈನ್ ಕ್ಲಾಸ್ ಗಳಿಂದಾಗಿ ಅಮ್ಮನ ಜಾಸ್ತಿ ಸಮಯ ನನಗೆ ಮೀಸಲಾಗಿದೆ, ಅವರಿಗೆ ಅವರ ಒಳ್ಳೆ ಹವ್ಯಾಸ ಗಳ ಕಡೆ ಸಮಯ ಕೊಡಲಾಗುವುದಿಲ್ಲ. 5. ಆನ್ಲೈನ್ ಕ್ಲಾಸ್ ಗಳಿಗೋಸ್ಕರ ಅಪ್ಪ ಇನ್ನೊಂದು ಮೊಬೈಲ್, ಲ್ಯಾಪ್ ಟಾಪ್ ಗಳನ್ನು ತೆಗೆದುಕೊಳ್ಳಬೇಕಾಯಿತು. ಪ್ರತಿ ತಿಂಗಳು ಇಂಟರ್ನೆಟ್ಟಿಗೆ ಅವರು ದುಡ್ಡು ಕೊಡಬೇಕಾಗುತ್ತದೆ. ಅವರ ಹಣ ಖರ್ಚಾಗುತ್ತಿದೆ. 6. ತುಂಬಾ ಸಮಯ ನಾವು ವಿಡಿಯೋಗಳನ್ನು ನೋಡುವುದು ನಮ್ಮ ಕಣ್ಣಿಗೆ, ಆರೋಗ್ಯಕ್ಕೆ ಒಳ್ಳೆಯದಲ್ಲ.
ಭಗವದ್ಗೀತೆಯಲ್ಲಿ ಹೇಳಿದಂತೆ “ಬದಲಾವಣೆ ಜಗದ ನಿಯಮ”. ನಾವು ಹೊಸ ಪದ್ಧತಿಯನ್ನು ಸಕರಾತ್ಮಕವಾಗಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು

.