ನಿಸರ್ಗ’ದಿಂದ ‘ಸೌಭಾಗ್ಯ’~ಕೆ .ಎಲ್. ಕುಂಡಂತಾಯ

ಪೃಥ್ವೀ ಸಸ್ಯಶಾಲಿನಿ- ಹಸಿರಾಗಿದೆ ಕೃಷಿ ಸಮೃದ್ಧಿ-‘ನಿಸರ್ಗ’ದಿಂದ ‘ಸೌಭಾಗ್ಯ’. ‘ಅನ್ನ’ದಿಂದ ‘ಜೀ-ಜೀವನ’ .‌

‘ನಿಸರ್ಗ’ ದೇಶಕ್ಕೆ ಸೌಭಾಗ್ಯವನ್ನು ಕೊಡುತ್ತದೆ. ‘ಅನ್ನ’ ಮನುಕುಲಕ್ಕೆ “ಜೀವ – ಜೀವನ” ಕೊಡುತ್ತದೆ. ಹೌದು.‌… ನಿಸರ್ಗ, ತಾನು ಮೊದಲು ಸೌಭಾಗ್ಯವತಿ – ಫಲವತಿಯಾಗಬೇಕು.‌ಆಗ ದೇಶಕ್ಕೆ ಸೌಭಾಗ್ಯದ ಕೊಡುಗೆಯನ್ನು ಕೊಡಲಾದೀತು . ಸದಾ ಸಂಪದ್ಭರಿತ ನಿಸರ್ಗ “ಸೌಮಾಂಗಲ್ಯ”ವನ್ನು ಪಡೆದು ಹಸಿರು ‘ಹೊದ್ದು’ ಫಲ ಸಮೃದ್ಧಿಯನ್ನು ‘ಹೊತ್ತು’ ಸಂಭ್ರಮಿಸುವ ಕಾಲವೇ ವರ್ಷಾಕಾಲ – ಮಳೆಗಾಲ .
ನಿಸರ್ಗ – ಪ್ರಕೃತಿ ‘ಸ್ತ್ರೀ’ . ಆಕಾಶ ‘ಪುರುಷ’. ಸುರಿಯುವ ‘ಮಳೆ’ ; ಭೂಮಿ – ಆಕಾಶಕ್ಕೆ ಸಂಬಂಧವನ್ನು ಬೆಸೆಯುತ್ತದೆ . ರೈತ ಸಕಾಲವೆಂದು ಗದ್ದೆಗಿಳಿಯುತ್ತಾನೆ. ನಿಸರ್ಗ ನೀರೆ ಅರಳಿ ಸಿರಿವಂತಳಾಗುತ್ತಾಳೆ ಅಂದರೆ ಸಮೃದ್ಧಿಯ ಫಲವನ್ನು ಕೊಡುವುದಕ್ಕೆ ಸನ್ನದ್ಧ ಳಾಗುತ್ತಾಳೆ .‌

ಭೂಮಿಯ ಫಲವಂತಿಕೆಯನ್ನು ಕಂಡು ಹೆಣ್ಣು ಫಲವತಿಯಾಗುವುದಕ್ಕೆ ಸಮೀಕರಿಸಿ ಒಬ್ಬಳನ್ನು “ಹೆತ್ತ ತಾಯಿ’ ಎಂದು , ಮತ್ತೊಬ್ಬಳನ್ನು “ಹೊತ್ತ ತಾಯಿ” ಎಂದು‌ ಮಾನವ ಕಂಡುಕೊಂಡುದುದು ಪ್ರಕೃತಿಯ ಅಂತರ್ಗತವಾಗಿರುವ ಪರಮ ಸತ್ಯ . ಈ ಸತ್ಯದ ಅರಿವು ಮೂಡಲು ಸಹಸ್ರಾರು ವರ್ಷಗಳ ಬದುಕಿನ‌‌ ಅನುಭವ ಕಾರಣ. ಇದೇ ‘ಮಾತೃ ಆರಾಧನೆಯ’ ಮೂಲ. ಮಣ್ಣು – ಭೂಮಿಯನ್ನು ನಂಬುವುದು .
ಅದರೊಂದಿಗೆ ಹೋರಾಡುವುದು , ಕೃಷಿಕನ ಕಾಯಕ . ಈ ಸಂಬಂಧ ‘ಕೃಷಿ ಸಂಸ್ಕೃತಿ’ಯ ಪ್ರಾರಂಭದಿಂದ ಸಾಗಿ ಬಂದಿದೆ .

ಮಣ್ಣಿನೊಂದಿಗೆ ನಡೆಸುವ ಹೋರಾಟ – ಕೃಷಿಕಾರ್ಯ , ಫಲ – ಬೆಳೆಯನ್ನು ಕೊಡಬಲ್ಲುದೇ ಹೊರತು , ಅಮ್ಮ ಮುನಿಯಲಾರಳು , ಏಕೆಂದರೆ ಅಮ್ಮನ ಅಂದರೆ ಮಣ್ಣಿನ ಮಗನಲ್ಲವೇ . ವಿಷತುಂಬಿದ ಹಾವು ಕಚ್ಚಿದರೆ ಮದ್ದು ಇದೆ ,ಆದರೆ ಮಣ್ಣು ಕಚ್ಚಿದರೆ – ಮುನಿದರೆ ಅದಕ್ಕೆ ಮದ್ದಿಲ್ಲ – ಪರಿಹಾರವಿಲ್ಲ.  ಜನ್ಮ ಭೂಮಿಯನ್ನು ಜನನಿಗೆ ಹೋಲಿಸಿದರು . ಜನ್ಮ ಭೂಮಿಯ ರಕ್ಷಣೆ ಮೌಲ್ಯಯುತ ಕಾಯಕವಾಯಿತು . ಮಣ್ಣನ್ನು ನಂಬಿದಹಾಗೆ ಮಣ್ಣನ್ನು ಸಾಕ್ಷಿಯಾಗಿರಿಸಿಕೊಂಡರು .

ಜನಪದ ಕತೆಗಳಲ್ಲಿ , ಪುರಾಣಗಳಲ್ಲಿ ಮಣ್ಣಿನ ಸತ್ಯಗಳು ಪ್ರಕಟಗೊಳ್ಳುತ್ತಿರುತ್ತವೆ . ಮಣ್ಣು ,ದಿಕ್ಕುಗಳು , ಆಕಾಶ ,ಸೂರ್ಯ – ಚಂದ್ರ ಮುಂತಾದ ಕಣ್ಣಿಗೆ ಕಾಣುವ ಸತ್ಯಗಳನ್ನು ಮಣ್ಣಿನಷ್ಟೇ‌ ಮುಖ್ಯವಾಗಿ ಮನುಕುಲ‌ ಸ್ವೀಕರಿಸಲ್ಪಟ್ಟಿದೆ. ಮುನಿಯಲು , ಶಾಪಕೊಡಲು‌ ಮಣ್ಣು ಸಾಕ್ಷಿಯಾಗುವ ಪರಿಕಲ್ಪನೆ ಅದ್ಭುತ . ‘ನೆಲಕಾಯಿ ದರ್ತೆರ್’ , “ಮಣ್ಣ್ ಮುಟುದು ಪೊಣ್ಣ ಶಾಪ ಕೊರಿಯೊಲು ಸಿರಿ”. ಸತ್ಯವನ್ನು ದೃಢೀಕರಿಸಲು ಅಥವಾ ಮತ್ತಷ್ಟು ಪರಿಣಾಮಕಾರಿಯಾಗಿಸಲು ‘ತಾಯಿ ಸಾಕ್ಷಿ’ , “ಭೂಮಿ ಸಾಕ್ಷಿ” (‘ಅಪ್ಪೆ ಕಂಟಲ್ದೆ’ , ‘ಭೂಮಿ ಸಾಕ್ಷಿ’ ಇವು ಜನಪದರಲ್ಲಿ ಸಾಮಾನ್ಯ) ಎಂದು ಹೇಳುವುದು ಜನಪದರ ಮುಗ್ಧ ; ಸರಳ ; ವಿಮರ್ಶೆಗಳಿಲ್ಲದ ಜೀವನ ವಿಧಾನದಲ್ಲಿದೆ .

ಜನಪದ – ವೈದಿಕ ವಿಧಿಗಳಲ್ಲಿರುವ ಭೂಮಿ ಪ್ರಧಾನವಾದ ಆಚರಣೆಗಳು ಭೂಮಿಯನ್ನು ಮನುಕುಲ ಒಪ್ಪಿದ ಭಾವವನ್ನು ಪ್ರಕಟಿಸುತ್ತದೆ .
ಅನುಷ್ಠಾನದಲ್ಲಿರುವ ‘ಭೂಮಿಪೂಜೆ’. ಒಂದು ಪ್ರತ್ಯಕ್ಷ ಉದಾಹರಣೆ . ಬೂತ – ದೈವಗಳನ್ನು ಮಣ್ಣಿನ ಸತ್ಯಗಳೆಂದೇ ಸ್ವೀಕಾರ.ಅಬ್ಬರದ ಅಭಯ ಕೊಡಲು ಮಣ್ಣಿನ ಸತ್ಯವೇ ಭರವಸೆ – ಪ್ರೇರಣೆ . ನಾಗ ಭೂಮಿಪುತ್ರ . ವೈದಿಕದ ಹೆಚ್ಚಿನ ದೇವರು ಅವತರಿಸಿದ್ದು , ಲೀಲಾನಾಟಕ ಪ್ರದರ್ಶಿಸುವುದು ಭೂಮಿಯಲ್ಲಿ , ಶಾಪ ವಿಮೋಚನೆಗೆ ಆರಿಸಿಕೊಳ್ಳುವುದು ಧರಿತ್ರಿಯನ್ನೆ . ಇದು ಸನಾತನವಾದುದು. ಎಂದರೆ ‘ಬಾಲ ಪ್ರಾಕ್ ದ ನಂಬಿಕೆಲು’. ಈ ಭೂಮಿ ; ವಾಸಕ್ಕೆ , ಕಾಯಕಕ್ಕೆ , ಹುಟ್ಟಿನಿಂದ ಮರಣ ಪರ್ಯಂತದ ಕರ್ಮಗಳಿಗೆ ವೇದಿಕೆ . ಜೀವನಾಧಾರ ವಾದ ಅನ್ನವನ್ನು ಪಡೆಯಲು ಭೂಮಿ ಸಮೃದ್ಧಿಯ ನೆಲೆ .

ಇಂತಹ ಹತ್ತಾರು ಅನುಸಂಧಾನಗಳೊಂದಿಗೆ ಭೂಮಿಯನ್ನು ಒಪ್ಪಿರುವ ಮಾನವ ಭೂಮಿ ಸಸ್ಯ ಶ್ಯಾಮಲೆಯಾಗಿರಬೇಕು‌ ,ಅದಕ್ಕೆ ಕಾಲಕ್ಕೆ ಸರಿಯಾಗಿ ಮಳೆಬರಬೇಕು‌. ಅದರಿಂದ ಕ್ಷೋಭೆಗಳಿಲ್ಲದ ದೇಶ ,ಸಜ್ಜನರು ನಿರ್ಭಯದಿಂದ ಬದುಕುವಂತಹ ಸ್ಥಿತಿ ಸ್ಥಾಯಿಯಾಗ ಬೇಕು ಎಂಬುದೆ ಸಮಸ್ತರ ಪ್ರಾರ್ಥನೆಯಾಗುವುದು ಅರ್ಥಪೂರ್ಣ. “ಭೂಮಿ – ಮಳೆ – ಕಾಯಕ – ಬೆಳೆ” ಇವು ಶತಮಾನ ಶತಮಾನಗಳ‌ ಅನುಬಂಧ . ಇಲ್ಲಿ ಪ್ರಾಪ್ತಿಯಾಗುವ ಸಮೃದ್ಧಿಯಿಂದ ದೇಶ ಕಟ್ಟಬಹುದು , ನೂತನ ,ಅತಿನೂತನ ಯುಗದಲ್ಲಿ ಪ್ರಸ್ತುತವಾಗಿ ಬದುಕಬಹುದು ಅನ್ನ ಇಲ್ಲದೆ ಜೀವವಿಲ್ಲ , ಜೀವನವೂ ಇಲ್ಲ .

ಭೂಮಿ ಇರುತ್ತದೆ , ಮಳೆ ಬರುತ್ತದೆ , ಆದರೆ ಕಾಯಕ ಬೇಕು ; ಆಗ ಬೆಳೆ – ಫಲ ಸಿದ್ಧಿ‌. ಇದೇ ನಮ್ಮ ಆಧಾರ – ಸಿದ್ಧಾಂತ .ಇದರಿಂದಲೇ ಮತ್ತೆಲ್ಲ ಅಭಿವೃದ್ಧಿ .ಲೋಕಕ್ಕೆ ಸುಭಿಕ್ಷೆ . ಕೃಷಿ ಇದ್ದಲ್ಲಿ ದುರ್ಭಿಕ್ಷೆ ಇಲ್ಲ ; ಹೌದಲ್ಲ. ಮಳೆ ಬರುತ್ತಿದೆ ಕೃಷಿ ಕಾಯಕ ಆರಂಭವಾಗಿದೆ .ಆದರೆ ಪ್ರಮಾಣ ಏಕೆ ಕುಸಿದಿದೆ . ಕೃಷಿ ಭೂಮಿ ಹಡೀಲು ಬಿದ್ದಿವೆ . ಮಣ್ಣು ,ಮಳೆ ಎರಡೂ ಇವೆ ಆದರೆ ಕೃಷಿಕಾಯಕವಿಲ್ಲ . ಮುನಿಯಲಿಕ್ಕಿಲ್ಲವೇ ನಿಸರ್ಗ ಎಂಬ ದಿನಗಳಿದ್ದುವು , ಆದರೆ ಈ ಮಳೆಗಾಲ ಬಹುತೇಕ ಸಮೃದ್ಧ ಗದ್ದೆಗಳು ಸಾಗುವಳಿಯ ಭಾಗ್ಯವನ್ನು ಪಡೆದಿವೆ . ಹಲವು ವರ್ಷಗಳಿಂದ ಹಡೀಲು ( ಪಡೀಲ್ ) ಬಿದ್ದಿದ್ದನ್ನು ಗಮನಿಸಿ ಕೃಷಿ ಕೃಶವಾಗುತ್ತಿದೆ ಎಂಬ ಆತಂಕ ವ್ಯಕ್ತವಾಗಿತ್ತು. ಈ ವರ್ಷ ಅಂತಹ ಗೊಂದಲ ಸ್ವಲ್ಪಮಟ್ಟಿಗೆ ಪರಿಹಾರವಾದಂತೆ ಅನ್ನಿಸುತ್ತಿದೆ ..

ನಮಗೆ ಸೌಭಾಗ್ಯವನ್ನು ಕೊಡಬಲ್ಲ ಭೂಮಿ ಮತ್ತು ಸುರಿಯುವ ಮಳೆ ,ಇವೇ ತಾನೆ “ನಿಸರ್ಗ”ಅಲ್ಲವೆ ?

 

 
 
 
 
 
 
 
 
 
 
 

Leave a Reply