ಸವಿ ನೆನಪುಗಳ ಸುಳಿಯಲ್ಲಿ…ಪ್ರವಾಹದಲ್ಲಿ ಸಿಲುಕಿ ಪರದಾಟ…

ಬಾಲ್ಯದಲ್ಲಿ ಅಂದರೆ ಸುಮಾರು ಮೂವತ್ತು ವರುಷಗಳ ಹಿಂದೆ ನಮ್ಮ ಇಷ್ಟದ ತಾಣ ಅಂದರೆ ಕೊಡವೂರು ದೇವಳದ ಸಮೀಪ ದಲ್ಲಿ ರುವ ಇಂದ್ರಾಣೀ‌ ನದೀ ತಟಾಕ.ಓದುವ ನೆಪದಲ್ಲಿ ನಾವು ಮೂರು ಜನ ಗೆಳತಿಯರು ಆಡಲು,ಪಟ್ಟಾಂಗ ಹಾಕಲು ನದಿಯ ದಡ ಹಾಗು ಅದೇ ದಡದಲ್ಲಿರುವ ಪುಟ್ಟ ಗಣಪತಿ ಗುಡಿ ನಮ್ಮ ನಿತ್ಯ ನಿರಂತರ ಆಕರ್ಷಣೆಯ ತಾಣ.

ದೇವಳದ ಹೊರ ಸುತ್ತಿನ ಕೆಳಗಡೆ ಒಂದು ಸಣ್ಣ ತೋಡು.ಅದರ ಆಚೆ ಬದಿಯಲ್ಲಿ ಒಂದಷ್ಟು ಗದ್ದೆಗಳಿದ್ದು ಅಲ್ಲಿಂದ ಮುಂದೆ ಇಂದ್ರಾಣೀ ನದಿಯ ದಡ. ಪ್ರವಾಹ ( ನೆರೆ) ಬಂದಾಗ ಆ ತೋಡಿಗೆ ಇಳಿಯಲು ಹಾಕಿದ ಮೆಟ್ಟಿಲುಗಳ‌ ಮೇಲೆ ನಿಂತು ನಾವು ಒಟ್ಟಿಗೆ ನೆರೆ ವೀಕ್ಷಣೆ ಮಾಡುವುದು ನಮ್ಮ‌ ನೆಚ್ಚಿನ ಕಾಯಕ. ಒಂದು ಮಧ್ಯಾಹ್ನದ ಹೊತ್ತು ಕಳೆದ ಮೂರ್ಕಾಲ್ಕು ದಿನ ಜೋರು ಮಳೆಯಿಂದಾಗಿ ಬಂದ ನೆರೆ ಸ್ವಲ್ಪ ತಗ್ಗಿತೆಂದು ಅನಿಸಿ ಅಲ್ಲೇ ನಿಂತು ನೆರೆ ವೀಕ್ಷಣೆ ಮಾಡುತ್ತಿದ್ದ ನಾವು ಹುಚ್ಚು ಧೈರ್ಯ ಮಾಡಿ ನದಿಯ ದಡದಲ್ಲಿರುವ ಗಣಪತಿ‌ ಗುಡಿಯಲ್ಲಿಗೆ ಹೋಗಿ ಅಲ್ಲಿನ ಕಲ್ಲುಬೆಂಚಿನಲ್ಲಿ ಕುಳಿತು ರಭಸದಿಂದ ಹರಿಯುವ ನದಿ‌ನೀರನ್ನು‌ ನೋಡುತ್ತಾ ಮಾತನಾಡುತ್ತಾ ಇದ್ದಾಗ ಒಮ್ಮೆಲೆ ರಭಸದಿಂದ ಗಾಳಿ ಮಳೆ ಶುರು ಆಗಿ ನಮ್ಮ‌ಕೈಯಲ್ಲಿದ್ದ ಕೊಡೆ ನೀರಿಗೆ ಹಾರಿತ್ತು.. ಪರಿಸ್ಥಿತಿಯ ಗಂಭೀರತೆಯ ಅರಿವಾಗಿ ನಾವು ಮೂವರೂ ಅಲ್ಲಿಂದ ಹೊರಡಲು ಉದ್ಯುಕ್ತರಾದರೆ ಜೋರಾಗಿ ಬೀಸುವ ಸುಳಿ ಗಾಳಿ, ಎಡೆ ಬಿಡದೆ ಸುರಿಯುವ ಜಡಿ‌ಮಳೆ,ಹರಿಯುವ ನೀರಿನಲ್ಲಿ ತೇಲಿ ಬರುವ ಹಾವು ಹುಳ ಹುಪ್ಪಡಿಗಳು, ಸತ್ತ ಪ್ರಾಣಿಗಳ ದೇಹ, ಕಸಕಡ್ಡಿ , ಮರಮುಟ್ಟುಗಳು ಎದೆ ನಡುಗಿಸುತ್ತಿದ್ದವು.

ಆದರೂ ಒಬ್ಬರಿಗೊಬ್ಬರ ಭುಜದ ಒಳಗೆ ಬಂಧಿಸಿ ಗಟ್ಟಿಯಾಗಿ ಕೈ ಹಿಡಿದುಕೊಂಡು ದೇವರ ನಾಮ ಸ್ಮರಣೆ ಮಾಡುತ್ತಾ ಅಲ್ಲಿಂದ ಹೊರಡದೇ ಬೇರೆ ಮಾರ್ಗವಿರಲಿಲ್ಲ ನಮಗೆ. ಗದ್ದೆಯ ಮಧ್ಯ ಭಾಗ ಬರುತ್ತಿದ್ದಂತೆ ಗದ್ದೆ ಯಾವುದು ಗದ್ದೆಯ ಬದಿಯ ಪುಣಿ ಯಾವುದು ಒಂದೂ ತೋಚದೇ ಇನ್ನು ನಮ್ಮ ಜಲಸಮಾಧಿ ಯಾಗುವುದು ಖಂಡಿತ, ಅಪರಾಹ್ನದ ಈ ಹೊತ್ತಿನಲ್ಲಿ ಜನ ವಿರಳ ದಾರಿಯಲ್ಲಿ ನಮ್ಮನ್ನು ರಕ್ಷಿಸಲು ಯಾರೂ ಬರಲಾರರು ಎಂದು ಭಯ ಭೀತಗೊಂಡು ಮೂವರೂ ಕಾಲೆಳೆಯುತ್ತಾ ಬರುತ್ತಿದ್ದೆವು. ಮೂವರಲ್ಲಿ ಉದ್ದ ಅಗಲ ಭರ್ತಿಯಾಗಿದ್ದ ನನ್ನ ಕಾಲಿನ ಗಂಟಿನವರೆಗೆ ನೀರಿದ್ದರೆ ನನಗಿಂತ ಮೂರು ಇಂಚು ಕಡಿಮೆ ಇದ್ದ ಗೆಳತಿಯ ಸೊಂಟ ಮಟ್ಟ ನೀರು.

ಅವಳಿಗಿಂತಲೂ ಒಂದು ಇಂಚು ಕಡಿಮೆ ಇದ್ದ ಇನ್ನೊಬ್ಬ ಗೆಳತಿಯ ಎದೆ ಭಾಗದವರೆಗೂ ನೀರು ಹರಿಯುವುದನ್ನು ನೋಡಿ ಕಂಗಾ ಲಾದ ನಾನು ನನ್ನ ಎರಡೂ ಕೈಗಳ ರೆಟ್ಟೆಯಲ್ಲಿ ಇಬ್ಬರನ್ನೂ ಗಟ್ಟಿಯಾಗಿ ಆನಿಸಿಕೊಂಡು‌ ಮೈಯಲ್ಲಿ ಯಾವುದೋ ಅಗಾಧ ಶಕ್ತಿ ಆವಾಹಿಸಿದಂತೆ ದೇವಳದ ಮೆಟ್ಟಿಲಿನ ತನಕ ಎಳೆದು ತಂದು ಬಿಟ್ಟೆ.

ನಂತರ ಸುಮಾರು ಐದು ನಿಮಿಷ ನಾವು‌ ಮೂವರೂ ಒಬ್ಬರನ್ನೊಬ್ಬರು ಅಪ್ಪಿಕೊಂಡು ಭಾವುಕರಾಗಿ ಸಂತೋಷ, ಭಯ ಭಾವ ಮಿಶ್ರಿತ ರಾಗಿ ಅತ್ತದ್ದೇ ಅತ್ತದ್ದು.ಇವತ್ತಿಗೂ ಮಳೆ ಆರಂಭವಾಗಿ ಪ್ರವಾಹ ಬರುವ ಸಮಯದಲ್ಲಿ ನಾನು ನಮ್ಮೂರಲ್ಲೇ ಇದ್ದು ಇಂದ್ರಾಣಿ ಯನ್ನು ನೋಡುತ್ತಿದ್ದರೆ ಇದೀಗ ಬೆಂಗಳೂರು ಹಾಗು ಬೆಳಗಾವಿಯಲ್ಲಿರುವ ನನ್ನಿಬ್ಬರು ಸ್ನೇಹಿತೆಯರು ಕರೆ ಮಾಡಿ ಆ ದಿನದ ನೆನಪನ್ನು ಹಂಚಿಕೊಳ್ಳುವಾಗ ಮೈ ರೋಮಾಂಚನಗೊಳ್ಳುತ್ತದೆ.

 
 
 
 
 
 
 
 
 

Leave a Reply