ತಾನೊಬ್ಬ ಸಂಗೀತ ವಿದ್ವಾಂಸ, ಚಲನ ಚಿತ್ರಗಳಿಗೆ, ನೃತ್ಯ ನಾಟಕಗಳಿಗೆ ಸಂಗೀತ ಸಂಯೋಜನೆ ನೀಡಿದ ಸಂಗೀತ ನಿರ್ದೇಶಕ, ಹಲವು ಗಣ್ಯ ವ್ಯಕ್ತಿಗಳಿಗೆ ಸಂಗೀತಾಭ್ಯಾಸ ನೀಡಿದ ಸಂಗೀತ ಗುರುವೆಂಬ ಹಮ್ಮು ಬಿಮ್ಮು ಇಲ್ಲದ ಸರಳ ಸಾತ್ವಿಕ ನಡವಳಿಕೆ ನಮಗೆ ಅನುಕರಣೀಯ.
ತನ್ನ ಬಂಧು ಬಳಗ, ಮಿತ್ರ ಸಮುದಾಯದಲ್ಲಿರುವ ಪ್ರತಿಭೆಗಳಿಗೆ ಅವರು ನೀಡುತ್ತಿದ್ದ ಪ್ರೋತ್ಸಾಹ, ತೋರುತ್ತಿದ್ದ ಪ್ರೀತಿ ವಿಶ್ವಾಸ, ದೊರಕಿದ ಅವರ ಒಡನಾಟದ ಭಾಗ್ಯದ ನೆನಪು ಮಾತ್ರ ಶಾಶ್ವತ. ಒಂದು ನಿಮಿಷ ಎನ್ನುತ್ತಾ ಸ್ವಲ್ಪವೇ ಸ್ವಲ್ಪ ನಶ್ಯ ಪುಡಿಯನ್ನು ನಾಸಿಕಕ್ಕೇರಿಸಿ ತನ್ನ ಗತ ಕಾಲದ ವೈಭವವನ್ನು ರೋಚಕವಾಗಿ ಹಾಸ್ಯ ಮಿಶ್ರಿತ ಮಾತುಗಳೊಂದಿಗೆ ವಿವರಿಸುವ ಪರಿ ನಮಗೊಂದು ಸೋಜಿಗ.
ಹತ್ತು ಹಲವು ಸಮಸ್ಯೆಗಳು ಕಾಡಿದರೂ, ಅನಾರೋಗ್ಯ ಬಾಧಿಸಿದರೂ ಜೀವನದಲ್ಲಿ ಹಲವು ನೋವು ನಲಿವು ಕಂಡರೂ ಬಾಡಲಿಲ್ಲ ಅವರ ನಗುಮೊಗ. ಹಲವು ಪ್ರಶಸ್ತಿ ಪುರಸ್ಕಾರಗಳ ಸರದಾರನಾಗಿ, ಸಾವಿರಾರು ಸಂಗೀತಾಭ್ಯಾಸಿಗಳ ಗುರುಗಳಾಗಿ ಅಗಣಿತ ಬಂಧು ಮಿತ್ರರ ಮನದಲ್ಲಿ ಶಾಶ್ವತವಾಗಿ ನೆಲೆ ನಿಂತಿರುವ ಅವರ ಕಾಯ ಅಳಿದರೂ ಕಾಯಕದ ನೆನಪು ಮಾತ್ರ ಅಳಿಯದು ವಾಸು ಮಾಮ.
ಭಾವ ಪೂರ್ವಕ ನಮನದೊಂದಿಗೆ.
