ನವರಾತ್ರಿ ‘ಉತ್ಸವ’ವೂ ಹೌದು ,’ವ್ರತ’ವೂ ಹೌದು. ಉತ್ಸವ ಎಂದರೆ ಶ್ರೇಷ್ಠತೆಗೆ, ಉತ್ಕ್ರಾಂತಿಗೆ ಹೇತುವಾದ ‘ಸವ’. ಸವ ಎಂದರೆ ಯಜ್ಞ. ಆದುದರಿಂದಲೇ ನವರಾತ್ರಿಯ ಆಚರಣೆಯಲ್ಲಿ ವ್ರತ ಬದ್ಧತೆ ಇದೆ. ಆಚಾರ ವಿಚಾರಗಳ ನಿಯಮಾನುಸರಣೆ ಇದೆ. ಶ್ಯದ್ಧೆ-ಭಕ್ತಿಯ ಭಾವವಿದೆ. ಆಹಾರ-ವಿಹಾರಗಳ ನಿಯಂತ್ರಣವಿದೆ. ಒಂಬತ್ತು ದಿನಗಳಲ್ಲಿ ದೇವರೊಂದಿಗೆ ತಾದಾತ್ಮ್ಯ ಸಾಧಿಸುವ ಏಕಾಗ್ರತೆ ಇದೆ. ಒಟ್ಟಿನಲ್ಲಿ ಭಕ್ತಿ ಇದೆ. ಇದಕ್ಕೆ ಶ್ರದ್ಧೆ ಪೂರಕವಾಗಿದೆ. ಇಷ್ಟೆಲ್ಲ ನಿಬಂಧನೆಗಳಿದ್ದರೂ ‘ ಅಮ್ಮ’ನ ಉಪಾಸನೆ ಎಂಬ ವಾತ್ಸಲ್ಯಪೂರಿತ ಪುಳಕವಿದೆ.
ದೇವಾಲಯಗಳಲ್ಲಾದರೆ ಮೂಲಸ್ಥಾನ ದುರ್ಗಾ ಪ್ರತಿಮೆಯಲ್ಲಿ, ಹಲವೆಡೆ ಕಲಶದಲ್ಲಿ, ಸ್ವಸ್ತಿಕೆಯಲ್ಲಿ, ಮಂಡಲದ ನವಕೋನ ಮಧ್ಯೆ ಬಿಂದುವಿನಲ್ಲಿ, ದೀಪದಲ್ಲಿ, ಅಗ್ನಿಮುಖದಲ್ಲಿ ದೇವಿಯು ಪೂಜೆಗೊಳ್ಳುತ್ತಾಳೆ. ಹಾಗೆಯೇ ಶಾರದೆಯ ಮಣ್ಣಿನ ಪ್ರತಿಮೆಯಲ್ಲೂ ಆರಾಧಿಸಲ್ಪಡುವ ಶಾರದೆ ಜಲದಲ್ಲಿ ವಿಸರ್ಜಿಸಲ್ಪಡುತ್ತಾಳೆ. ಎಷ್ಟೋ ಮನೆಗಳಲ್ಲಿ ದುರ್ಗೆಯ ಪೂಜೆ, ಹಸ್ತೋದಕಗಳು ನಿರಂತರ ಒಂಬತ್ತು ದಿನಗಳೂ ನಡೆಯುವುದಿದೆ. ಕೆಲವೆಡೆ ಮಧ್ಯಾಹ್ನ ಪೂಜೆ, ಹಲವೆಡೆ ರಾತ್ರಿ ಪೂಜೆ.ಇದು ಆ ಕುಟುಂಬದ ಹಿರಿಯರ ಮನೆಯಲ್ಲಿ ನೆರವೇರುತ್ತದೆ .ಇದರೊಂದಿಗೆ ಮುತ್ತೈದೆಯರಿಗೆ ವಾಯನದಾನ ,ಕನ್ನಿಕಾ ಪೂಜೆಯೂ ಸಂಪನ್ನಗೊಳ್ಳುತ್ತವೆ.
ಸಪ್ತಶತೀ: ಮಾರ್ಕಾಂಡೇಯ ಪುರಾಣದ “ಸಪ್ತಶತೀ” ಎಂದರೆ ಏಳುನೂರು ಶ್ಲೋಕಗಳುಳ್ಳ ಒಂದು ಸಂಪುಟ. ಇದು ಅರ್ಗಲ, ಕೀಲಕ, ಕವಚಗಳಿಂದ ಆರಂಭವಾಗುತ್ತದೆ. ಮುಂದಿನ ಏಳುನೂರು ಶ್ಲೋಕಗಳು ಹದಿಮೂರು ಅಧ್ಯಾಯಗಳಾಗಿ ವಿಂಗಡಿಸಲ್ಪಟ್ಟಿದೆ. ಮೊದಲ ಅಧ್ಯಾಯವು ಪ್ರಥಮ ಚರಿತೆಯಾದರೆ, ಎರಡು, ಮೂರು, ನಾಲ್ಕು ಅಧ್ಯಾಯಗಳು ದ್ವಿತೀಯ ಚರಿತೆ. ಐದನೇ ಅಧ್ಯಾಯದಿಂದ ಹದಿಮೂರನೇ ಅಧ್ಯಾಯದ ವರೆಗೆ ಉತ್ತಮ ಚರಿತ್ರೆಯಾಗಿದೆ. ಇಲ್ಲಿ ಚರಿತ್ರೆ ಎಂದರೆ ದೇವಿಯ ಮಹಾತ್ಮ್ಯೆ.
ಮಾರ್ಕಾಂಡೇಯ ಮುನಿಯು ಕ್ರೌಷ್ಟುಕಿ ಎಂಬ ಮುನಿಗೆ ಈ ಮಹಾತ್ಮ್ಯೆಯನ್ನು ಹೇಳುತ್ತಾನೆ. ಇದು ಪುರಾಣದ ಒಂದು ಭಾಗವಾಗಿದ್ದರೂ ಮಂತ್ರ ಶಾಸ್ತ್ರವೆಂದು ತಂತ್ರಗಳಲ್ಲಿ ಪ್ರಸಿದ್ಧವಾಗಿದೆ. ಕಾತ್ಯಾಯನೀ ತಂತ್ರದ ಪ್ರಕಾರ ದೇವಿಮಹಾತ್ಮ್ಯದ ಪ್ರತಿಯೊಂದು ಶ್ಲೋಕವೂ ಮಂತ್ರವಾಗಿದ್ದು ದೇವಿ ಪೂಜೆಯಲ್ಲಿ ಉಪಯೋಗಿಸಲ್ಪಡುತ್ತವೆ .ಮಂತ್ರಕ್ಕೂ ದೇವಿಗೂ ಯಾವ ಭೇದವೂ ಇಲ್ಲ. ಆದುದರಿಂದಲೇ ದೇವಿಮಹಾತ್ಮ್ಯವನ್ನು ವಿಪದ್ಭಂಜನಕ್ಕೆ ,ದೇವಿ ಅನುಗ್ರಹಕ್ಕೆ ಹಾಗೂ ಸುಖಪ್ರಾಪ್ತಿಗೆ ಉಪಾಸಕರು ಮನೆಮನೆಗಳಲ್ಲಿ ಪಾರಾಯಣ ಮಾಡುತ್ತಾರೆ .ಚಂಡಿಕಾಯಾಗಕ್ಕೆ ಸಪ್ತಶತೀಯೇ ಪ್ರಧಾನ ಹೋಮದ ಮಂತ್ರಗಳು.
ಪ್ರಥಮ ಚರಿತೆಗೆ ಮಹಾಕಾಳಿ ದೇವತೆಯಾದರೆ ದ್ವಿತೀಯ ಚರಿತೆಗೆ ಮಹಾಲಕ್ಷ್ಮೀ, ತೃತೀಯ ಚರಿತೆಗೆ ಮಹಾ ಸರಸ್ವತೀ ದೇವತೆ. ಮಧು ಕೈಟಭರ ವಧ -ಮೇದಿನಿ ನಿರ್ಮಾಣದ ಕತೆ ಪ್ರಥಮಚರಿತೆಯಲ್ಲಿ ಅಡಕವಾಗಿದೆ.
ಮಹಿಷಾದಿ ರಾಕ್ಷಸರ ಸಂಹಾರ ಹಾಗೂ ಶಕ್ರಾದಿಗಳ ಸ್ತುತಿ ದ್ವಿತೀಯ ಚರಿತೆಯಲ್ಲಿದ್ದರೆ. ಮುಂದಿನ ಒಂಬತ್ತು ಅಧ್ಯಾಯಗಳಲ್ಲಿ ಶುಂಭಾದಿ ದೈತ್ಯರ ವಧೆ ಸೇರಿದ್ದು ಮಹತ್ವದ “ನಾರಾಯಣೀ ಸ್ತುತಿ”ಯು ತೃತೀಯ ಚರಿತೆಯಲ್ಲಿದೆ.
ಫಲ ಸ್ತುತಿ, ಸುರಥ-ವೈಶ್ಯರಿಗೆ ವರಪ್ರದಾನದೊಂದಿಗೆ ಸಪ್ತಶತೀ ಮುಕ್ತಾಯವಾಗುತ್ತದೆ. ಮೊದಲು ಮಾಹಾಕಾಳಿಯಾಗಿ ತಾಮಸವನ್ನು ಪ್ರದರ್ಶಿಸುವ ದೇವಿ ರಾಜಸ ಗುಣವುಳ್ಳವಳಾಗಿ ಮಹಾಲಕ್ಷ್ಮೀಯಾಗಿ ಪ್ರಕಟಗೊಳ್ಳುತ್ತಾಳೆ. ಕೊನೆಗೆ ಮಾಹಾಸರಸ್ವತೀಯಾಗಿ ಜ್ಞಾನದ ಪರಮೋಚ್ಚ ಸ್ಥಿತಿಯನ್ನು ಪ್ರದರ್ಶಿಸುವುದು ಅನಂತ ವಿಶ್ವದ ಹುಟ್ಟು, ಬೆಳವಣಿಗೆ, ಲಯದ ಸ್ವರೂಪದ ಅನಾವರಣವಾಗುತ್ತದೆ.
ಕಳೆದ ಕಲ್ಪದಲ್ಲಿ ಲಯವಾದ ಪ್ರಪಂಚವನ್ನು ಸೃಷ್ಟಿಸಲು ಆರಂಭ ಹೇಗೆ, ಲಯದಿಂದಲೇ ಆರಂಭ ಎಂಬುದು ವೇದ್ಯವಾಗುವ ಸಂಗತಿ. ಬ್ರಹ್ಮನಿಂದ ಸೃಷ್ಟಿ, ವಿಷ್ಣುವಿನಿಂದ ಸ್ಥಿತಿ, ಮಹೇಶ್ವರನಿಂದ ಲಯ. ಈ ಚಕ್ರವು ಮರಳಿ ಆರಂಭಕ್ಕೆ ಮತ್ತು ಜ್ಞಾನ ಪ್ರಾಪ್ತಿಗೆ ಆರಂಭದ ಪ್ರಕರಣ. ಲಯಗೊಂಡುದುದು ಯಾವುದಿದೆಯೋ ಅಲ್ಲಿಂದಲೇ ಮತ್ತು ಅದರಿಂದಲೇ ಪುನಃ ಸೃಷ್ಟಿಯ ಆರಂಭ. ಇದು ಸೃಷ್ಟಿ-ಸ್ಥಿತಿ-ಲಯಗಳ ನಿರಂತರತೆಗೆ ಮತ್ತೆ ದೊರಕುವ ಚಾಲನೆ.
ದೇವಿಮಹಾತ್ಮ್ಯದಲ್ಲಿ ಬರುವ ಸ್ತವಗಳೆಲ್ಲ ಅತ್ಯಂರ ಲಾಲಿತ್ಯ ಪೂರ್ಣವಾದ, ರಮಣೀಯವಾದ ಕಾವ್ಯಭಾಷೆಯಲ್ಲಿ ದೇವಿಯ ಉಗ್ರ-ಸುಂದರ ರೂಪಗಳನ್ನು ಹಾಗೂ ದುಷ್ಟಮರ್ದನ, ಶಿಷ್ಡ ರಕ್ಷಣ,ಬಲುವಿಧ ಶಕ್ತಿಗಳನ್ನು ,ವಂದಾರುಜನ ವಾತ್ಸಲ್ಯವನ್ನು, ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳಿಗೆ ಆಲೆ ಕಾರಣಳಾಗಿರುವುದನ್ನೂ ವರ್ಣಗಳಲ್ಲಿ ಮಾತೃಕೆಯಾಗಿರುವುದನ್ನೂ, ವೇದಮಂತ್ರಗಳ ಸ್ವರೂಪವಾಗಿರುವುದನ್ನೂ ವರ್ಣಿಸಿ ನಮಗೆ ಅವಳಲ್ಲಿ ಭಕ್ತಿಯನ್ನೂ ಸಮಸ್ತ ಸ್ತ್ರೀಯರಲ್ಲಿ ಮಾತೃಭಾವವನ್ನೂ ಅಂದರೆ ಆ ಮಾತೆಯಲ್ಲಿ, ಅಮ್ಮನೆಂಬ ಭಾವ ಉತ್ಪನ್ನ ಮಾಡುತ್ತವೆ. ದೇವಿಮಹಾತ್ಮ್ಯವನ್ನು ಭಕ್ತಿಯಿಂದ ಓದಿದವರಿಗೆಲ್ಲ ಜಗದಂಬಿಕೆಯು ಭಕ್ತಿ ಮುಕ್ತಿಗಳನ್ನು ಅನುಗ್ರಹಿಸಲಿ .
“ನಾರಾಯಣೀ ನಮೋsಸ್ತು ತೆ” ( ‘ದುರ್ಗಾ ಸಪ್ತಶತೀ’ಯು ಆಧಾರ).