‘ತಾಯ್ತನ’ವೇ ‘ಮಾತೃ’ ಉಪಾಸನೆಯ ಮೂಲ~ನವರಾತ್ರಿ-6~ಕೆ.ಎಲ್.ಕುಂಡಂತಾಯ 

ಗರ್ಭಧಾರಣೆ ಹಾಗೂ ಪ್ರಜನನಶಕ್ತಿ ಹೊಂದಿರುವ ಸ್ತ್ರೀ ಮಾತೃ ಆರಾಧನೆಯ ಮೂಲವಾದಳು . ತನ್ನಂತಹ ಪ್ರತಿರೂಪವನ್ನು‌ ನೀಡಬಲ್ಲ ಸ್ತ್ರೀಯ ವಿಶೇಷ ಶಕ್ತಿ, ತಾನು ಪಡೆದುದನ್ನು ಪೋಷಿಸುವ ವಿಶಿಷ್ಟ ಮನಃಸ್ಥಿತಿ ಸ್ತ್ರೀ ಪಾರಮ್ಯವನ್ನು ಮನೆಯಲ್ಲಿ-ಸಮೂಹದಲ್ಲಿ‌-ಸಮಾಜದಲ್ಲಿ ಸ್ಥಾಪಿಸಿಕೊಳ್ಳುವಲ್ಲಿ ಪರಿಣಾಮ ಬೀರಿರುವ ಅಂಶಗಳು ‘ಕೃಷಿ ಸ್ತ್ರೀಯ ಅನ್ವೇಷಣೆ’ ಎಂಬುದು ಸಂಶೋಧಕರ ಅಭಿಪ್ರಾಯವಿದೆ.

ಪೋಷಣೆಯ ಹೊಣೆ ಹೊತ್ತಾಕೆಗೆ ಹಸಿವಿಗಾಗಿ ಅಳುವ ಮಗುವನ್ನು ಸಂತೈಸಲು ಪುರುಷನ ಬರುವಿಕೆಗೆ ಕಾಯುವ ವ್ಯವಧಾನ ಇಲ್ಲದೆ ಆಹಾರ ಕಾಪಿಡುವುದು ಅನಿವಾರ್ಯವಾಗಿತ್ತು. ಅದಕ್ಕೆ ಆಕೆ ಕೃಷಿಯನ್ನು ಆರಂಭಿಸಿ ಆಹಾರ – ಬೆಳೆಯನ್ನು ಉಂಡು-ಉಣ್ಣಿಸಿ ನಾಳೆಗೆ ಅಥವಾ ಮಳೆಗಾಲಕ್ಕೆ ಕಾಪಿಡುವ ಕ್ರಮವನ್ನು ರೂಢಿಗೆ ತಂದಿರಬೇಕು ಅನ್ನಿಸುತ್ತದೆ. ಪುರುಷ ಬೇಟೆಗೆ ,ಪಶುಪಾಲನೆಗೆ ಹೊರಟಾಗ ಕೃಷಿಯ ಸಂಬಂಧ ಸ್ತ್ರೀಯೊಂದಿಗೆ ಸಹಜವಾಗಿ ಬೆಸೆದುಕೊಂಡಿತು . ಬೇಟೆಯಲ್ಲಿ ಪ್ರತಿದಿನವೂ ಪ್ರಾಣಿಗಳು ಲಭಿಸುತ್ತವೆ ಅಥವಾ ಆಶ್ರಿತರೆಲ್ಲರಿಗೂ ಸಾಕಾಗುತ್ತದೆ ಎನ್ನಲಾಗದು. ಹಾಗೆಯೇ ಬೇಟೆಯ ಮಾಂಸವನ್ನು ಬಹುದಿನಗಳ ಬಳಿಕ ಬಳಸಬಹುದೆಂದು ಕಾಪಿಡಲಾಗದು ಅದು ಕೊಳೆಯುವುದಿಲ್ಲವೇ? ಆದುದರಿಂದ ಕೃಷಿ – ಕಾಪಿಡುವ ಪದ್ಧತಿ ರೂಢಿಗೆ ಬಂದಿರಬಹುದು .

ಗರ್ಭಧಾರಣೆ – ಸಸ್ಯಧಾರಣೆ: ಸ್ತ್ರೀಯ ಗರ್ಭಧಾರಣಾ ಸಾಮರ್ಥ್ಯಕ್ಕೆ ಸಂವಾದಿಯಾಗಿ ಭೂಮಿಯ “ಸಸ್ಯಧಾರಣ ಶಕ್ತಿ” ಗಮನಸೆಳೆಯುತ್ತದೆ. ಭೂಮಿಯಲ್ಲಿ ಬಿತ್ತಿದ ಬೀಜ ಮೊಳಕೆಯೊಡೆದು ಗಿಡವಾಗಿ, ಮರವಾಗಿ ಬೆಳೆಯುವ ನಿಸರ್ಗ ನಿಯಮವು ಸ್ತ್ರೀ ಸಹಜವಾದ ತಾಯ್ತತನದಲ್ಲಿ ವ್ಯಕ್ತವಾಗುತ್ತದೆ. ಹಾಗೆ ಭೂಮಿಯನ್ನು ಮತ್ತು ಸ್ತ್ರೀಯನ್ನು ಸಮೀಕರಿಸಿದ, ಸಮಾನವಾದ ಪ್ರಜನನ ಶಕ್ತಿಯನ್ನು ಗುರುತಿಸಿದ, ತಲೆಬಾಗಿದ – ಶರಣಾದ. ಅಮ್ಮ ಮತ್ತು ಭೂಮಿ‌ ದೈವೀಶಕ್ತಿ ಅಥವಾ ನಿಯಾಮಕ ಶಕ್ತಿಯ ಕೆಲಸ ಎಂಬುದು ಒಂದು ಪ್ರಮಾಣ .ಈ ದೈವೀ ಶಕ್ತಿಯನ್ನು ಮಹಾಮಾತೆ, ಶಕ್ತಿ‌ ಎನ್ನಲೇ ಬೇಕಾಯಿತು. ಅಂದರೆ ಎರಡೂ ವಿಸ್ಮಯಗಳಲ್ಲಿ (ಸ್ತ್ರೀ – ಭೂಮಿ) ಅನನ್ಯತೆ ಸ್ಪಷ್ಟ ಕಾರಣ. ಈ ಅದ್ಭುತ ,ಕಲ್ಪನಾತೀತ ಸಾಮರ್ಥ್ಯವನ್ನು ಕಂಡು ಬೆರಗಾದ ಮನುಷ್ಯ ನಿಯಾಮಕ ಶಕ್ತಿಯನ್ನು ಹೆಚ್ಚಿನ ಎತ್ತರದ, ವಿಶೇಷ ಬಲ‌ ಸಮನ್ವಿತವಾದುದೆಂದು ಊಹಿಸಿದ. ಈ ಜ್ಞಾನದ ಅರಿವಿನ‌ ಹಂತವೇ ‘ಶಕ್ತಿ ಆರಾಧನೆ’ ಮೊದಲಿಟ್ಟಿರಬಹುದಾದ ಮಾನವ ವಿಕಾಸದ ಹಂತವೆಂದು ಪರಿಗ್ರಹಿಸಬಹುದು.

ಹಸಿವಾದಾಗ ತಿನ್ನುತ್ತಿದ್ದ ಆಹಾರ ಸಂಗ್ರಹಣೆಯುಗ, ಬೇಟೆಯುಗ, ಪಶುಪಾಲನೆ-ಕೃಷಿಯುಗ, ಕೈಗಾರಿಕೆ ಯುಗಗಳೆಂದು ಮಾನವ ಬದುಕಿನ ಪುರಾತನ‌ ಜೀವನ ವಿಧಾನಗಳ ವಿವಿಧ ಹಂತಗಳನ್ನು‌ ಗುರುತಿಸಿರುವ ವಿದ್ವಾಂಸರು ಪಶುಪಾಲನೆ-ಕೃಷಿಯೊಂದಿಗೆ ದೇವತೆಗಳ ಕಲ್ಪನೆಯ ಆರಂಭ ಎನ್ನುತ್ತಾರೆ .ಇದರೊಂದಿಗೆ ವೈದಿಕ ಪೂರ್ವದ ಮಾತೃ – ಪ್ರಕೃತಿ – ಶಕ್ತಿ ಆರಾಧನೆಯ ಅಸ್ಪಷ್ಟ ನಿಲುವಿನ‌ ಜ್ಞಾನದಿಂದ ಸುವ್ಯವಸ್ಥಿತ ,ಮೌಖಿಕ – ಲಿಖಿತ ಆಧಾರಗಳುಳ್ಳ ವೈದಿಕ ಕಾಲಕ್ಕೆ ಪ್ರವೇಶಿಸಲು ಅವಕಾಶವಾಯಿತು. ಇದೇ ತಿಳುವಳಿಕೆಯ ವಿಕಾಸವಲ್ಲವೇ? ಭಾರತೀಯ ಸಂಸ್ಕೃತಿಯ ಬೇರು ಇರುವುದು ಜನಪದರ ಬದುಕಿನ ಹರವಿನಲ್ಲಿ. ಸರಳ, ಮುಗ್ಧ ವಿಮರ್ಶೆಗಳಿಲ್ಲದ
ಜೀವನ ವಿಧಾನಗಳಲ್ಲಿ. (ಸಂಗ್ರಹ)

Leave a Reply