Janardhan Kodavoor/ Team KaravaliXpress
26.6 C
Udupi
Sunday, November 27, 2022
Sathyanatha Stores Brahmavara

!’ಅಮ್ಮ’ನೆಂಬ ‘ವಾತ್ಸಲ್ಯಮಯಿ ‘ದುರ್ಗಾ’ !-ನವರಾತ್ರಿ~5: ಕೆ.ಎಲ್ .ಕುಂಡಂತಾಯ

ಅಮ್ಮಾ……ಈ ಎರಡಕ್ಷರದ ಶಬ್ದಕ್ಕಿರುವ ‘ಅಮೇಯ’ವಾದ ‘ಅಮಿತ’ ಭಾವನೆಗಳನ್ನು‌ ಉದ್ದೀಪಿಸಬಲ್ಲ ‘ಅಮೂಲ್ಯ’, ‘ಅಮಲ’ ಸಂಬಂಧವನ್ನು ನೆನಪಿಸಿ ಸ್ಥಾಯಿಗೊಳಿಸಬಲ್ಲ ‘ಅನನ್ಯತೆ’ ‘ಅನ್ಯ’ ಸಂಬಂಧವಾಚಕಗಳಿಗಿಲ್ಲ. ಇದು ಅಪ್ಪಟ ಸತ್ಯ, ನಿಷ್ಕಳಂಕ‌ ಅನುಬಂಧ, ವಾತ್ಸಲ್ಯ – ಕರುಣೆಯ ನಿಧಿ , ಅಮೂರ್ತ ಭಾವಬಂಧನ ,ಸಂಭವಿಸಿದ ಸ್ನೇಹ – ನಂಟು ಅಥವಾ ಬಾಂಧವ್ಯ, ಆದುದರಿಂದ ಅಮ್ಮಾ…ಎಂಬುದು ಶ್ರೇಷ್ಠ – ಜ್ಯೇಷ್ಠ ಸರ್ವಮಾನ್ಯ .ಪ್ರೀತಿಯ ಚಿಲುಮೆ. ಒಬ್ಬಳೆ ಮಾತೆಯಿಂದ ಮೊದಲ್ಗೊಂಡ ಮಾನವನ ಬದುಕು ,ಆ ತಾಯಿಯ ಆಸರೆಯಲ್ಲಿ ಸಾವಿರಾರು ವರ್ಷ ಕಳೆದಿದೆ. ತಾಯ್ತನ ಅಂದಿಗೂ ಸತ್ಯ, ಇಂದಿಗೂ ನಿಚ್ಚಳ. ಜನ್ಮ ನೀಡಿ , ರಕ್ಷಕಳಾಗಿ ಪೊರೆದು ಬೆಳೆಸಿ ವ್ಯಕ್ತಿಯ ಬದುಕನ್ನು ಸುಂದರ-ನಿಯಮಿತವಾಗಿ ಅರಳಿಸುವ ಹೊಣೆ ಸ್ತ್ರೀಗೆ ಪ್ರಾಚೀನ ಬಳುವಳಿ. ಇದು ದೇಶದಲ್ಲಿ ರೂಢಗೊಂಡ ಮೌಲ್ಯ.

ಆದುದರಿಂದಲೇ ನಮ್ಮಲ್ಲಿ ಅಮ್ಮನಿಗಿಂತ ಅನ್ಯ ಬಂಧುವಿಲ್ಲ. ಈ ಭಾವ ಮುಗ್ಧವಾದುದು – ನಿಷ್ಕಲ್ಮಷವಾದುದು.
ಅದು ತಾಯಿ ಮಗು ಸಂಬಂಧದ ಅದ್ಭುತ ವ್ಯಾಖ್ಯೆಯೊಂದಿಗೆ ಮಾನವೀಯತೆಗೆ ನೀಡುವ ಸಂದೇಶವೂ ಹೌದು.
ತಾಯಿಯ ಪ್ರೀತಿಯಿಂದ ವಂಚಿತನಾದ‌ ಯಾವ ವ್ಯಕ್ತಿಯೂ ಮನುಷ್ಯನಾಗಿ ಬದುಕಲು ಕಷ್ಟಸಾಧ್ಯ. ಏಕೆಂದರೆ ಆತನಿಗೆ ಅಮ್ಮನ ಪ್ರೀತಿಯಿಂದ ದೊರೆಯುವ ವಾತ್ಸಲ್ಯದ ಅನುಭವವಿರಲಾರದು. ಈ ಅನುಭವದ ಕೊರತೆಯೇ ಆ ವ್ಯಕ್ತಿಯ ಜೀವನದ ಸರ್ವ ಆಯಾಮಗಳಲ್ಲಿಯೂ ಪರಿಣಾಮ ಬೀರಿ‌ ಸಮಗ್ರ ವ್ಯಕ್ತಿತ್ವಕ್ಕೆ ವ್ಯಕ್ತಿರೇಖೆಯನ್ನು ಎಳೆಯುತ್ತದೆ. ಈ ಪ್ರೀತಿಯೇ ಜೀವ ಪ್ರೀತಿಯಾಗಿ ಅರಳಿ ಮಾನವ ಬದುಕಿಗೆ ಮಾರಕವಾಗದೆ, ಪೂರಕವಾಗುತ್ತದೆ 

ಸಜ್ಜನಿಕೆಯಂತಹ ಸದ್ಗುಣಗಳು ನಿಖರವಾಗಿ ವ್ಯಕ್ತಿತ್ವಕ್ಕೆ ವರ್ಚಸ್ಸನ್ನು, ಶೋಭೆಯನ್ನು ಒದಗಿಸುತ್ತದೆ. ಶಕ್ತಿ ಆರಾಧನೆಯು ದಾಷ್ಟ್ಯ,ದುರಹಂಕಾರಗಳ ಮರ್ದನಕ್ಕೆ ವಿಶೇಷ ಪ್ರಾಶಸ್ತ್ಯ ನೀಡುತ್ತದೆ. ಜಗದವ್ವೆಯ ಮಹಿಷಮರ್ದಿನಿ ಸ್ವರೂಪವು ಇದೇ ಅಲ್ಲವೆ ? ಕೋಣನಿಗೆ ಇರುವ ಈ ಸಹಜ ಗುಣದ ಸಂಕೇತವೇ ‘ಮಹಿಷ ದಾನವ’. ಈ ದುರ್ಗುಣಗಳ ಮರ್ದನವೇ ಮಹಿಷಾಸುರ ವಧೆ. ನಾವೆಲ್ಲವನ್ನೂ ತಾಯಿಯಿಂದ ಕಲಿಯುತ್ತೇವೆ. ಪ್ರಾಪಂಚಿಕ ಸತ್ಯವನ್ನು‌ ಅಮ್ಮನಿಂದ ತಿಳಿದು ನಂಬುತ್ತೇವೆ. ಪ್ರೀತಿ, ವಾತ್ಸಲ್ಯಗಳ ಮುಗ್ಧ ಹಾಗೂ ಪರಿಶುದ್ಧ ಭಾವ ಮಾತೆಯೊಂದಿಗೆ ಮಾತ್ರ ಸ್ಪಂದಿಸಬಲ್ಲುದು‌. ಏಕೆಂದರೆ ಇದು ಪರಮ ಸತ್ಯ. 

ಆದುದರಿಂದಲೇ ಅಮ್ಮಾ…ಎಂಬ ಶಬ್ದ ಅನಘ. ಜಗಜ್ಜನನಿಯ ಚಿಂತನೆ ಸ್ವಂತ ಜನನಿಯನ್ನು ಅರಿತಾಗ ಸಾಧ್ಯ .ತಾಯಿ ಮೊದಲು, ಬಳಿಕ ಪ್ರಕೃತಿ, ಈ ಎರಡು‌ ಸ್ವೀಕರಿಸಲ್ಪಟ್ಟಾಗ ಶಕ್ತಿಯ ಅನುಭವ. ಇದೇ ‘ಜ್ಞಾನ’ ವಿಕಾಸದ ಹಂತವಾಗಿ ದುರ್ಗಾಮಾತೆಯ ಪೂಜೆ. ಶಾಕ್ತ ಪಂಥ ಜನಪ್ರಿಯವಾಗುತ್ತಾ ಪ್ರಸ್ತುತ ಸ್ಥಿತಿಗೆ ತಲುಪಿರಬೇಕು.
ಯಾವುದು ನಿಲುಮೆಗೆ ನಿಲುಕದೋ ಅಥವಾ ಕಲ್ಪನಾತೀತವೋ ಅದು ದೊಡ್ದದು. ನಾವು ಯಾವುದರ ಮುಂದೆ ಸಣ್ಣವರಾಗುತ್ತೇವೆಯೋ ನಮ್ಮ ಮುಂದಿರುವುದೇ ಗುರು, ಬ್ರಹ್ಮ ಅಥವಾ ಪರಬ್ರಹ್ಮ. ಈ ಅನಂತವಾದ ವ್ಯಾಪ್ತಿ ಆಕಾಶ ಮತ್ತು ಭೂಮಿ. vಇಲ್ಲಿ ಪ್ರಕೃತಿ – ಪುರುಷ ಕಲ್ಪನೆ. ಮುಂದೆ ಸೃಷ್ಟಿ. (ಓದಿದ್ದು)

ದೈವಾರಾಧನೆಯ ಮೂಲದಲ್ಲೆ ಮಾತೃ ಆರಾಧನೆಯ ಕಲ್ಪನೆಯ ಕಲ್ಪನೆ ಇರುವುದನ್ನು ಗಮನಿಸಬಹುದು .ಶಿಷ್ಟದ ವೈಭವದಲ್ಲೂ ಜಾನಪದ ಎದ್ದು ತೋರುತ್ತದೆ .ಗುರುತಿಸುವ ಹೃದಯವಂತಿಕೆ ಬೇಕು. ತುಳುನಾಡಿನ‌ ಎಲ್ಲ ಹೆಣ್ಣು ದೈವಗಳಲ್ಲಿಯೂ ಶಕ್ತಿ ಸ್ವರೂಪಿಯಾದ ಪಾರ್ವತಿಯ ಅಂಶವಿದೆ ಎಂದು ಜನಪದರು ನಂಬುತ್ತಾರೆ. ಅಬ್ಬಗ- ದಾರಗರು ಸೂರ್ಯನಾರಾಯಣ ದೇವರಿಂದ ಭೂಮಿಗೆ ಕಳುಹಿಸಲ್ಪಡುತ್ತಾರೆ ಎಂದು ಸಿರಿ ಪಾಡ್ದನ ಹೇಳುತ್ತದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!