ನಮಸ್ಕಾರ ಎಂದರೇನು ಮತ್ತು ಹೇಗೆ ಮಾಡಬೇಕು~ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ, ಆನೇಕಲ್.

ನಮಸ್ಕಾರ ಎನ್ನುವುದು ಸಂಸ್ಕೃತ ಭಾಷೆಯ ಒಂದು ಪದ. ಇದರಲ್ಲಿ ನಮಸ್ + ಕಾರ ಎನ್ನುವ ಎರಡು ಬೇರೆ ಬೇರೆ ಪದಗಳು ಬರುತ್ತವೆ. ಈ ಪದಗಳ ಅರ್ಥ ನೋಡಿದಾಗ ದೇಹವೂ ಬಾಗಿರಬೇಕು ಮತ್ತು ಮನಸ್ಸೂ ಬಾಗಿರಬೇಕು ಎನ್ನುವ ಅರ್ಥ ಬರುತ್ತದೆ.

ಅಂದರೆ ದೇವರ ಮುಂದೆ ನಮಸ್ಕಾರ ಮಾಡುವಾಗ ದೇಹ ಬಾಗಿಸು ಎಂದರೆ ತಲೆ ಸಹಿತ ದೇಹ ವನ್ನು ಬಗ್ಗಿಸಿ ನಮಿಸುವುದು. ಮನಸ್ಸು ಬಾಗಿಸು ಎಂದರೆ ದೇವರ ಮಹಿಮೆಯಿಂದ ಕೂಡಿದ ಸ್ತೋತ್ರಗಳನ್ನು ಹೇಳುವುದು ಅಥವಾ ದೇವರ ನಾಮ ಜಪ ಮಾಡುವುದು. ಈ ಎರಡೂ ಪ್ರಕ್ರಿಯೆ ಒಟ್ಟಿಗೆ ನಡೆಸುವುದನ್ನು ನಮಸ್ಕಾರ ಎನ್ನುತ್ತೇವೆ.

ಕೇವಲ ಕಾಟಾಚಾರಕ್ಕೋ ಬೇರೆಯವರ ಬಲವಂತಕ್ಕೋ ಭೂಮಿಯ ಮೇಲೆ ಉದ್ದಂಡ ಮಲಗು ವುದು ನಮಸ್ಕಾರವಲ್ಲ. ಅದು ಕೇವಲ ತೋರ್ಪಡಿಕೆ ಮಾತ್ರವೇ ಹೊರತು, ದೇವನಿಗೆ ಸಲ್ಲುವ ಪ್ರಾರ್ಥನೆಯಲ್ಲ. ಧರ್ಮಶಾಸ್ತ್ರಗಳ ಪ್ರಕಾರ.

ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಮ್ |
ಅರ್ಚನಂ ವಂದನಂ ದಾಸ್ಯಂ ಸಖ್ಯಂ ಆತ್ಮನಿವೇದನಮ್ ||

ಎಂದರೆ ವಿಷ್ಣುವಿನ(ವಿಶಾಲ ವ್ಯಾಪ್ತೌ ವಿಷ್ಣುಃ) ಕಥೆ ಕೇಳುವುದು, ಆ ದೇವರನ್ನು ಕುರಿತು ಹಾಡು ವುದು, ಆ ದೇವರ ಸ್ಮರಣೆ ಮಾಡುವುದು, ಆ ದೇವರ ಪಾದ ಸೇವೆ ಮಾಡುವುದು, ಪ್ರೀತಿಯಿಂದ ಅರ್ಚಿಸುವುದು, ನಮಸ್ಕರಿಸುವುದು, ಆ ದೇವರ ದಾಸನೆಂದು (ಹರಿದಾಸ) ಗುರುತಿಸಿ ಕೊಳ್ಳುವುದು, ಆ ದೇವರೇ ನನಗೆ ಸ್ನೇಹಿತ, ಬಂಧುವೆಂದು ಭಾವಿಸಿ, ಕೊನೆಗೆ ದೇವರೇ ನಿನ್ನ ಹೊರತು ಪೊರೆವರ ನಾಕಾಣೆಯೆಂದು ಅವನಲ್ಲೇ ಆತ್ಮ ನಿವೇದನೆ ಮಾಡಿಕೊಳ್ಳುವುದು, ಇವು ನವವಿಧ ಭಕ್ತಿ.

ಈ ವಂದನ ಅಂದರೆ ನಮಸ್ಕಾರದ ಮೂಲಕ ಭಗವಂತನ ದಾಸರಾಗಿ ಆತ್ಮನಿವೇದನೆಯ ಸಾಧನೆ ಮಾಡಿಕೊಳ್ಳುವುದರೊಂದಿಗೆ ದೈಹಿಕ ಆರೋಗ್ಯವನ್ನೂ ಬಲಪಡಿಸಿಕೊಳ್ಳಬಹುದು. ಉದ್ದಂಡ (ಸಾಷ್ಟಾಂಗ) ನಮಸ್ಕಾರ ಮಾಡುವುದರಿಂದ ಪುರುಷರು ದೈಹಿಕ ಕಸರತ್ತು ಮಾಡಿದಂತಾಗುತ್ತದೆ. ಮಹಿಳೆಯರು ಮಂಡಿಯೂರಿ ನಮಸ್ಕಾರ ಮಾಡುವುದರಿಂದ ಇದೊಂದು ರೀತಿಯ ಯೋಗಾಸನದ ಮಾದರಿಯಾಗಿದ್ದು, ಇದರಿಂದ ಸಾಕಷ್ಟು ಆರೋಗ್ಯ ಲಾಭಗಳನ್ನು ಪಡೆಯಬಹುದು.

ನಮಸ್ಕಾರದಲ್ಲಿ ಮೂರು ವಿಧ.

*ಕಾಯಿಕ ವಾಗ್ಭವಶ್ಚೈವ ಮಾನಸಸ್ತ್ರಿವಿಧಸ್ಸ್ಮೃತಃ|
ನಮಸ್ಕಾರಸ್ತು ತತ್ವಜ್ಞೈಃ ಉತ್ತಮಾಧಮಮಧ್ಯಮಾಃ ||*

ನಮಸ್ಕಾರದಲ್ಲಿ ದೈಹಿಕ(ಕಾಯಿಕ), ವಾಚಿಕ, ಮಾನಸಿಕ ಎಂಬ ಮೂರು ವಿಧಗಳಿವೆ. ದೇಹದಿಂದ ಮಾಡುವ ನಮಸ್ಕಾರ ದೈಹಿಕ (ಕಾಯಿಕ) ನಮಸ್ಕಾರ, ಮಾತಿನ ನಮಸ್ಕಾರ ಎನ್ನುವುದು ವಾಚಿಕ ನಮಸ್ಕಾರ ಹಾಗೇ ಮನಸ್ಸಿನಲ್ಲಿ ಮಾಡುವ ನಮಸ್ಕಾರ ಮಾನಸಿಕ ನಮಸ್ಕಾರ. ಈ ರೀತಿಯ ಮೂರು ವಿಧದ ನಮಸ್ಕಾರಗಳು ಒಟ್ಟಾದಾಗ ಮಾತ್ರ ತ್ರಿಕರಣ ಪೂರ್ವಕ ನಮಸ್ಕಾರ ಎನಿಸಿಕೊಳ್ಳುತ್ತದೆ. ಈ ಮೂರು ವಿಧದಲ್ಲಿ ದೈಹಿಕ(ಕಾಯಿಕ) ನಮಸ್ಕಾರ ಉತ್ತಮ, ಮಾನಸಿಕ ನಮಸ್ಕಾರ ಮಧ್ಯಮ ಹಾಗೂ ವಾಚಿಕ ನಮಸ್ಕಾರ ಅಧಮವಾಗಿದೆ.

ಈ ಕಾಯದಿಂದ ಮಾಡುವ ನಮಸ್ಕಾರದಲ್ಲಿಯೂ ಉತ್ತಮ, ಮಧ್ಯಮ ಹಾಗೂ ಅಧಮ ಎಂಬ ಮೂರುವಿಧವಿದೆ.

ಉತ್ತಮ:
ಪ್ರಸಾರ್ಯ ಪಾದೌ ಹಸ್ತೌ ಚ ಪತಿತ್ವಾ ದಂಡವತ್ ಕ್ಷಿತೌ |
ಜಾನುಭ್ಯಾಂ ಧರಣೀಂ ಗತ್ವಾ ಶಿರಸಾ ಸ್ಪೃಶ್ಯ ಮೇದಿನೀಮ್ |
ಕ್ರಿಯತೇ ಯೋ ನಮಸ್ಕಾರಃ ಉತ್ತಮಕಾಯಿಕಸ್ತು ಸಃ ||

ಭೂಮಿಯ ಮೇಲೆ ದಂಡ(ಕೋಲು)ದಂತೆ ಮಲಗಿ, ಹಸ್ತ(ಕೈಗಳು), ಪಾದ(ಕಾಲು)ಗಳನ್ನು ಚಾಚಿ, ಮಂಡಿ, ತಲೆಯಿಂದ ಭೂಮಿಯನ್ನು ಸ್ಪರ್ಶಿಸಬೇಕು. ಮನಸ್ಸನ್ನು ಭಗವಂತನಲ್ಲಿ ನೆಟ್ಟು, ಕಣ್ಣು ಗಳನ್ನು ಪಾದದ ಮೇಲಿಟ್ಟು ನಮಿಸುತ್ತಿದ್ದೇನೆಂದು ಅನುಸಂಧಾನ ಮಾಡಿ ನಮಸ್ಕಾರ ಮಾಡ ಬೇಕು. ಈ ರೀತಿ ಪುರುಷರು ಮಾತ್ರ ಮಾಡಬೇಕು, ಸ್ತ್ರೀಯರ ಸ್ತನಮಂಡಲ ಭೂಮಿಗೆ ತಾಗಬಾರದು ಹಾಗಾಗಿ ಮಹಿಳೆಯರಿಗೆ ನಿಷಿದ್ಧ.

(ಅದರಲ್ಲಿಯೂ ವರಾಹಪುರಾಣದ ಪ್ರಕಾರ ಭಗವಂತನಿಗೆ ನಮಸ್ಕರಿಸಬೇಕಾದಾಗ ಮೊದಲು ಎಡಗಾಲಿನ ಮಂಡಿಯನ್ನು ನೆಲದ ಮೇಲೆ ಊರಬೇಕು. ನಂತರ ಎರಡೂ ಕೈಗಳನ್ನು ನೆಲದ ಮೇಲಿಟ್ಟು, ಬಲಗಾಲಿನ ಮಂಡಿಯನ್ನು ಊರಬೇಕು. ತರುವಾಯ ಹಣೆಯನ್ನು ಭೂಮಿಗೆ ತಾಗಿಸಿ, ತಲೆ ಮೇಲುಗಡೆ ಕೈಗಳನ್ನು ಗುಣಾಕಾರ(x) ಚಿಹ್ನೆಯಂತೆ ಜೋಡಿಸಿ ಬಲಗೈ ದೇವರ ಬಲಪಾದವನ್ನು, ಎಡಗೈ ದೇವರ ಎಡಪಾದವನ್ನು ಸ್ಪಶ್ಷಿಸುವಂತೆ ನಮಸ್ಕರಿಸಬೇಕು.)

ಮಧ್ಯಮ:
ಜಾನುಭ್ಯಾಂ ಚ ಕ್ಷಿತಿಂ ಸ್ಪೃಷ್ಟ್ವಾ ಶಿರಸಾ ಸ್ಪೃಶ್ಯ ಮೇದಿನೀಮ್ |
ಕ್ರಿಯತೇ ಯೋ ನಮಸ್ಕಾರಃ ಮಧ್ಯಮಃ ಕಾಯಿಕಸ್ತು ಸಃ ||

ಮಂಡಿಗಳನ್ನು ಭೂಮಿಯಲ್ಲಿ ಊರಿ, ತಲೆಯನ್ನು ಭೂಮಿಗೆ ತಾಗಿಸಿ, ಮನಸ್ಸನ್ನು ಭಗವಂತನಲ್ಲಿ ನೆಟ್ಟು, ಕಣ್ಣುಗಳನ್ನು ಪಾದದ ಮೇಲಿಟ್ಟು ನಮಿಸುತ್ತಿದ್ದೇನೆಂದು ಅನುಸಂಧಾನ ಮಾಡಿ ನಮಸ್ಕಾರ ಮಾಡಬೇಕು. ಈ ರೀತಿ ನಮಸ್ಕಾರವನ್ನು ಸ್ತ್ರೀ ಪುರುಷರಿಬ್ಬರೂ ಮಾಡಬಹುದು.

ಅಧಮ:
ಪುಟೀಕೃತ್ಯ ಕರೌ ಶೀರ್ಷೇ ದೀಯತೇ ಯದ್ಯಥಾ ತಥಾ |
ಅಸ್ಪೃಷ್ಟ್ವಾ ಜಾನುಶೀರ್ಷಾಭ್ಯಾಂ ಕ್ಷಿತಿಂ ಸೋಡಧಮ ಉಚ್ಯತೇ ||

ಮಂಡಿ ಮತ್ತು ತಲೆ ಯನ್ನು ಭೂಮಿಗೆ ತಾಗಿಸದೇ, ಕೈಯನ್ನು ತಲೆಯಮೇಲಿಟ್ಟುಕೊಂಡು ಮಾಡುವ ನಮಸ್ಕಾರವು ಅಧಮ ನಮಸ್ಕಾರ ಎನಿಸುತ್ತದೆ.
ಹಾಗಾಗಿ ಉತ್ತಮ ರೀತಿಯ ನಮಸ್ಕಾರ ಮಾಡಬೇಕಿ.

ಪ್ರಣಾಮ:

ಅಯಮೇವ ನಮಸ್ಕಾರಃ ದಂಡಾದಿಪ್ರತಿಪತ್ತಿಭಿಃ|
ಪ್ರಣಾಮ ಇತಿ ಜ್ಞೇಯಃ ಸ ಪೂರ್ವಪ್ರತಿಪಾದಿತಃ ||

‘ಪ್ರಣಾಮ’ವೆಂದರೆ ನಮಗಿಂತ ಗುರುಗಳು (ಯತಿಗಳು), ಹಿರಿಯರ ಮುಂದೆ ನಾನು ಅಲ್ಪ ಎನ್ನುವ ಭಾವನೆ ಪ್ರತಿಬಿಂಬಿಸುವ ದೈಹಿಕ ಅನುಸಂಧಾನ. ಇದರಲ್ಲಿ ಸಾಷ್ಟಾಂಗ ನಮಸ್ಕಾರ ಮಾಡಬಹುದು ಅಥವಾ ತಲೆಯ ಮೇಲೆ ಕೈ ಜೋಡಿಸಿ ನಮಿಸಬಹುದು ಇಲ್ಲವೇ ಗುಣಾಕಾರದ ಚಿಹ್ನೆ(X )ಯಂತೆ ಎಡಗೈ ಮೇಲೆ ಬಲಗೈ ಬರುವಂತೆ ಮಾಡಿ ಅವರ ಎಡಪಾದವನ್ನು ಎಡಗೈ ಯಿಂದ, ಬಲಗಾಲನ್ನು ಬಲಗೈಯ್ಯಿಂದ ಮುಟ್ಟುವಂತೆ ಮಾಡುವ ನಮಸ್ಕಾರವೇ ಪ್ರಣಾಮ. ದೇವರಿಗೂ ಪಾದ ಮುಟ್ಟಿ ನಮಿಸುವಂತಿದ್ದರೆ ಇದೇ ರೀತಿ ನಮಿಸಬೇಕು.

ಇಂತಹ ನಮಸ್ಕಾರದಲ್ಲಿ ಮತ್ತೆ ನಾಲ್ಕು ವಿಧಗಳಿವೆ. ಭಕ್ತಿಪೂರ್ವಕ ನಮಸ್ಕಾರ. ಅಷ್ಟಾಂಗ ನಮಸ್ಕಾರ. ಪಂಚಾಂಗ ನಮಸ್ಕಾರ. ಅಭಿವಾದನ.

ಭಕ್ತಿಪೂರ್ವಕ ನಮಸ್ಕಾರ
ಗುರು ಹಿರಿಯರು, ದೇವಸ್ಥಾನ, ಗೋವು, ವಿಪ್ರ ಮುಂತಾದವು ಎದುರಾದಾಗ ನಮ್ಮ ಎರಡೂ ಕೈಗಳನ್ನು ಎದೆಯ ಮೇಲೆ ಜೋಡಿಸಿ ಭಕ್ತಿಪೂರ್ವಕವಾಗಿ ನಮಸ್ಕರಿಸಬೇಕು. ಯಾವುದೇ ಕಾರಣಕ್ಕೂ ಒಂದೇ ಕೈಯಿಂದ ನಮಸ್ಕರಿಸಬಾರದು.

ಅಷ್ಟಾಂಗ ನಮಸ್ಕಾರ
ಉರಸಾ ಶಿರಸಾ ದೃಷ್ಟ್ಯಾ ಮನಸಾ ವಚಸಾ ತಥಾ |
ಪದ್ಭ್ಯಾಂ ಕರಾಭ್ಯಾಂ ಜಾನುಭ್ಯಾಂ ಪ್ರಣಾಮೋಡಷ್ಟಾಂಗ ಈರಿತಃ ||

ಈ ನಮಸ್ಕಾರ ಮಾಡುವಾಗ ನಮ್ಮ ಪಾದ, ಮಂಡಿ, ಭುಜಗಳು, ಕೈ, ಎದೆ ಮತ್ತು ತಲೆ ಭೂಮಿಯ ಮೇಲಿರಬೇಕು. ಕಣ್ಣು ಭಗವಂತನ ಮೂರ್ತಿಯನ್ನು ನೋಡುವುದರೊಂದಿಗೆ. ಮನಸ್ಸಿ ನಲ್ಲಿ ಧ್ಯಾನ ಮಾಡುತ್ತಾ, ಬಾಯಿಯಲ್ಲಿ ದೇವರ ಗುಣಗಾನ ಮಾಡಬೇಕು. ಈ ಅಷ್ಟಾಂಗ ನಮಸ್ಕಾರ ಮಾಡಿದರೆ, ದೇಹದ ಜತೆ ನಮ್ಮೆಲ್ಲ ಇಂದ್ರಿಯಗಳನ್ನು ಭಗವಂತನಿಗೆ ಸಂಪೂರ್ಣವಾಗಿ ಸಮರ್ಪಿಸಿದಂತಾಗುತ್ತದೆ.

ಪಂಚಾಂಗ ನಮಸ್ಕಾರ

ಕಾಯೇನ ಮನಸಾ ವಾಚಾ ಬುದ್ಧ್ಯಾತ್ಮಾಭ್ಯಾಂ ತತಃ ಪರಂ |
ಪಂಚಾಂಗೇನ ಕೃತಂ ಭಕ್ತ್ಯಾ ಪ್ರಣಾಮೋ ಪಂಚಾಂಗ ಈರಿತಃ ||

ಸ್ತ್ರೀಯರು ಮಂಡಿಯೂರಿ, ಮನಸ್ಸು ಬುದ್ಧಿ ಪೂರ್ವಕವಾಗಿ ಪ್ರಾರ್ಥನೆ ಮಾಡಿ, ಆತ್ಮಸಮರ್ಪಣ ಮಾಡುವುದೇ ಪಂಚಾಂಗ ನಮಸ್ಕಾರ.

ಅಭಿವಾದನ

ಶಿಷ್ಯನು ತನ್ನ ಗೋತ್ರವನ್ನು ಹೇಳಿ ಕೊಂಡು ವಿದ್ಯೆ ಕಲಿಸಿದ ಗುರುವಿನ ಪಾದ ಮುಟ್ಟಿ ಮಾಡುವ ನಮಸ್ಕಾರವೇ ಅಭಿವಾದನ. ಈ ವಿಧಾನದಲ್ಲಿ ಎಡಗೈಯ್ಯಿಂದ ಎಡಗಿವಿಯನ್ನು ಬಲಗೈಯ್ಯಿಂದ ಬಲಕಿವಿಯನ್ನು ಮುಟ್ಟಿ, ಬಲಗೈಯಿಂದ ಬಲಪಾದವನ್ನೂ, ಎಡಗೈಯಿಂದ ಎಡಪಾದವನ್ನು ಮುಟ್ಟಿ ನಮಸ್ಕರಿಸಬೇಕು.

ನಮಸ್ಕಾರದ ಫಲ

ದೇವರಿಗೆ ನಮಿಸಿದರೆ ದೈವಾನುಗ್ರಹವಾಗುತ್ತದೆ.

ಅಭಿವಾದನಶೀಲಸ್ಯ ನಿತ್ಯಂ ವೃದ್ಧೋಪಸೇವಿನಃ |
ಚತ್ವಾರಿ ತಸ್ಯ ವರ್ಧಂತೇ ಆಯುರ್ವಿದ್ಯಾಯಶೋಬಲಮ್ ||

ಹಿರಿಯರಿಗೆ ನಮಿಸಿದರೆ ನಮಗೆ ದೀರ್ಘಾಯುಷ್ಯ, ವಿದ್ಯೆ, ಕೀರ್ತಿ, ಶಾರೀರಿಕ ಬಲ ಹೆಚ್ಚುತ್ತದೆ.
ನಮಸ್ಕಾರದ ಬಲ ಹೇಗೆ ಎಂದರೆ, ಕುರುಕ್ಷೇತ್ರ ಯುದ್ಧಾರಂಭಕ್ಕೆ ಮೊದಲು ಧರ್ಮರಾಜನು, ಪಿತಾಮಹರಾದ ಭೀಷ್ಮಾಚಾರ್ಯರು, ಗುರುಗಳಾದ ದ್ರೋಣ, ಹಿರಿಯರಾದ ಕೃಪ, ಶಲ್ಯ ಮತ್ತಿತರರಿಗೆ ನಮಸ್ಕರಿಸಿದ್ದರು.

ಆಗ ಅವರೆಲ್ಲಾ ‘ಆಯುಷ್ಮಾನ್ ಭವ’, ‘ವಿಜಯೀ ಭವ’ ಎಂದು ಆಶೀರ್ವಾದಿಸಿದ ಫಲದ ಬಲದಿಂದ ಯುದ್ಧದಲ್ಲಿ ವಿಜಯ ದೊರೆಯಿತು. ಹಾಗಾಗಿ ಅಮಿತ ಫಲ ದೊರೆಯುವುದರಿಂದಲೇ ಅವಶ್ಯವಾಗಿ ಗುರು-ಹಿರಿಯರು ಕಂಡಾಗ ಅವಶ್ಯವಾಗಿ ನಮಸ್ಕರಿಸಲೇಬೇಕು.

 

 
 
 
 
 
 
 
 
 
 
 

Leave a Reply