ಅವರವರ ಬಾಲ್ಯ ಅವರವರಿಗೆ ಚಂದ~ನಾಗಭೂಷಣ್ ಬೇಳೂರು

​​ಸಾವ್ದಾನ್ ವಿಶ್ರಾಂಮ್…. ಹೌದು ಗೆಳೆಯರೆ ನಾವು ಶಾಲೆ ಹೋಗುವಾಗ ಎಲ್ಲಾ ವಿದ್ಯಾರ್ಥಿಗಳು ಸೇರಿ ಎಸೆಂಬ್ಲಿ ಮಾಡ್ತಾ ಇದ್ದಿದ್ವಿ ನೆನಪಿದೆಯಾ? ಅದ್ರಲ್ಲಿ ಕೆಲವರು ಬೆಳಿಗ್ಗೆ  ತಿಂಡಿ ತಿನ್ನದೆ,  ಬಿಸಿಲಿಗೆ ತಲೆ ತಿರುಗಿ ಬೀಳುದು, ಎಲ್ಲರೂ ಒಟ್ಟಾಗಿ ರಾಷ್ಟ್ರಗೀತೆ, ನಾಡ ಗೀತೆ ಹೇಳೋದು ಹಾ ಎಷ್ಟ್ಟು ಮಜಾ ಅಲ್ವಾ.
ಶಾಲೆಯ ಪರಿಸರದ ಕಸ ಹೆಕ್ಕುವುದು, ಹೂವಿನ ತೂಪಿಗೆ ನೀರುಣಿಸುವುದು, ಶಾಲೆಯ ಜಗುಲಿ ಯಲ್ಲಿ ನೀರನ್ನು ಶೇಕರಿಸುವುದು, ತರಗತಿಯ ಎಲ್ಲಾ ಮಕ್ಕಳು 10-10 ಹಿಡಿಕಡ್ಡಿ ತಂದು 2 ದೊಡ್ಡದಾದ ಹಿಡಿಸೂಡಿ ಮಾಡ್ತಾ ಇದ್ವಿ. 
ಶಾಲೆಯಲ್ಲಿ ಮಂತ್ರಿಮಂಡಲ:- ಮುಖ್ಯಮಂತ್ರಿ, ವಾರ್ತಾಮಂತ್ರಿ, ಗ್ರಹಮಂತ್ರಿ, ಕ್ರೀಡಾಮಂತ್ರಿ, ಆರೋಗ್ಯಮಂತ್ರಿ, ಕೃಷಿಮಂತ್ರಿ, ಇಷ್ಟ್ಟು ಮಂತ್ರಿಗಳ ತಪ್ಪನ್ನು ತೋರಿಸುದಕ್ಕಾಗಿ ಒಬ್ಬ ವಿರೋಧ ಪಕ್ಷದ ನಾಯಕ. ಅವನಿಗೆ 5-6 ಸದಸ್ಯರು.. ಆವಾಗಿನ ಈ ಮಂತ್ರಿ ಮಂಡಲ ಎನ್ನುವುದು ನಮಗೆ ಇವಾಗಿನ ವಿಧಾನಸಭೆಯ ಮಂತ್ರಿಮಂಡಲಕ್ಕಿಂತ ಶ್ರೇಷ್ಠವಾಗಿತ್ತು.
ಗ್ರಹಮಂತ್ರಿ ದಿನಾಲೂ ಶಾಲೆ ಬಾಗಿಲು ತೆಗೆದು ಶಾಲೆಯ ಬೆಲ್ಲನ್ನು ಹೊಡೆದರೆ. ಆರೋಗ್ಯಮಂತ್ರಿ ಪ್ರತಿ ತರಗತಿಗೆ ಹೋಗಿ ಸ್ವಚ್ಛತೆ ನೋಡಿ ಕೈ ಉಗುರು ಬೆಳೆದಿದೆಯಾ ಅಂತ ನೋಡುವುದು. ಇನ್ನು ವಾರ್ತಾ ಮಂತ್ರಿ ಶಾಲೆಯ ಎದುರು ಭಾಗದ ಕಪ್ಪು ಹಲಗೆಯಲ್ಲಿ ದೇಶ ವಿದೇಶ ಸ್ಥಳೀಯ ಸುದ್ದಿಯನ್ನು ಬರೆಯುವ ಕೆಲಸ.
ಕ್ರೀಡಾಮಂತ್ರಿ ಆಟೋಟದ ಬಗ್ಗೆ ಕೆಲಸ ಮಾಡುತ್ತಾನೆ.  ಇವರೆಲ್ಲರೂ ಕೆಲಸ ಸರಿಯಾಗಿ ಮಾಡುತ್ತಾರೆ ಅಂತ ನೋಡ್ಲಿಕ್ಕೆ ಒಬ್ಬ ಮುಖ್ಯಮಂತ್ರಿ. ಆಡಳಿತ ಪಕ್ಷದಲ್ಲಿ ಇದ್ದವರು ತಪ್ಪು ಮಾಡಿದರೆ ವಿರೋಧ ಪಕ್ಷದ ನಾಯಕ ಅದನ್ನು ಗಮನಿಸಿ ತಿಂಗಳಿಗೆ ಒಮ್ಮೆ ಆಗುವ ಪಾರ್ಲಿಮೆಂಟ್ ಎನ್ನುವ ಸಮಯದಲ್ಲಿ ಅಧ್ಯಾಪಕರ ಮುಂದೆ ಹೇಳ್ತಾ ಇದ್ದ. 
ಹಾಗೆ ಪ್ರತಿ ಶನಿವಾರ ಬಂದರೆ ನಮಗೆ ಒಂತರ ಹಬ್ಬದ ವಾತಾವರಣ. ಯಾಕಂದ್ರೆ ಆ ದಿನ ಪಾಠಕ್ಕಿಂತ ಬೇರೆ ಚಟುವಟಿಕೆ ಜಾಸ್ತಿ. ಬಾಲಸಭೆ, ಭಜನೆ, ಪಾರ್ಲಿಮೆಂಟ್ ಹೀಗೆ ವಿವಿಧ ಕಾರ್ಯ ಕ್ರಮ.  ಬಾಲಸಭೆ ಇದೆ ಅಂದ್ರೆ ಭಾಷಣ, ಸಂಗೀತ, ನ್ರತ್ಯ, ನಾಟಕ ಹೀಗೆ ಮನೋರಂಜ ನೆ ಕಾರ್ಯಕ್ರಮ ನಡೆಯುತ್ತಿತ್ತು.  ಬಾಲಸಭೆ ಇದ್ರೆ ನಂದು ಒಂದೇ ಆರೋಗ್ಯವೇ ಭಾಗ್ಯ ಇಲ್ಲಾ ಪರಿಸರ ಮಾಲಿನ್ಯ ವಿಷಯದಲ್ಲಿ ಭಾಷಣ. 
ಒಂದು ಭಾರಿ ಹಿಂದಿಯ ‘ಮುಕ್ಕಾಲ ಮುಕ್ಕಬುಲ’ ಹಾಡಿಗೆ ಕುಣಿದಿದ್ದು ಇದೆ. ಇನ್ನು ತಿಂಗಳ ಒಂದು ಶುಕ್ರವಾರ ಸಂಜೆ ಭಜನಾ ಮಂತ್ರಿ ಆದವನು ಪ್ರತಿ ತರಗತಿಗೆ ಹೋಗಿ ನಾಳೆ ಭಜನೆ ಇದೆ ಎಲ್ಲರೂ ಹೂ ತನ್ನಿ ಅನ್ನುವಾಗ ಒಂತರ ಖುಷಿ ಆಗ್ತಾ ಇತ್ತು. ಇನ್ನು ಪ್ರತೀ ತರಗತಿಯ ಒಬ್ಬ ಗಟ್ಟಿಯಾಗಿ ಭಜನೆ ಮಾಡ್ತಾ ಇದ್ದ.  ಅದರ ಮಧ್ಯೆ ಈ ಭಜನೆ ಮಂತ್ರಿ ಕಾಣಿಕೆ ಡಬ್ಬಿ ಹಿಡಿದು ಹೋಗ್ತಾ ಇದ್ದ.
ಆ ಸಂದರ್ಭದಲ್ಲಿ ಯೋಗ ಸ್ಪರ್ಧೆ ಇರುತಿತ್ತು. ನಾವು ಒಂದು 4-5 ಮಂದಿ ಅಭ್ಯಾಸ ಮಾಡ್ಲಿಕ್ಕೆ ಅಂತ ತರಗತಿ ಬಿಟ್ಟು ದಿನವಿಡೀ ಅಭ್ಯಾಸವೇ ಆಗ್ತಾ ಇತ್ತು.  ನಮ್ಮ ಶಾಲೆ ಹತ್ತಿರದಲ್ಲಿ  ಪ್ರಾಥ ಮಿಕ ಆರೋಗ್ಯ ಕೇಂದ್ರ ಇತ್ತು. ನಮಗೆ ಯಾವಾಗಲೂ ಬಾರದ ತಲೆ ನೋವು, ಹೊಟ್ಟೆನೋವು ಗಣಿತ ತರಗತಿಯಲ್ಲಿ ಬರುವುದು. ಅವಾಗ ಅಧ್ಯಾಪಕರು  ನಮ್ಮನ್ನು ಆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಮಂತ್ರಿ ಜೊತೆ ಕಳಿಸ್ತಾ ಇದ್ರು.
ಅವಾಗ ನಾವು ಪುನಃ ಬರುವುದು ಗಣಿತ ತರಗತಿ ಆದ ಮೇಲೆ. ಆ ಒಂದು ನಾಟಕದ ತಲೆ ನೋವು ಕೆಲವೊಮ್ಮೆ ನೆನಪಾದರೆ ಈಗಲೂ ನಗೆ ಬರುವುದು. ಇನ್ನು ಶಾಲೆ ಬಿಟ್ಟ ನಂತರ ನೆಡೆದುಕೊಂಡು ಹೋಗುವಾಗ (ಮಳೆಗಾಲದಲ್ಲಿ)ರಸ್ತೆಯ ಬದಿಯಲ್ಲಿ ಇರುವ ನೇರಳೆಹಣ್ಣು, ಗೇರುಹಣ್ಣು, ಮುಂಡಕ್ಕಿ ಹಣ್ಣು, ಮಾವಿನ ಹಣ್ಣು ಎಲ್ಲಾ ನಮ್ಮನ್ನು ಕೈ ಬೀಸಿ ಕರೆಯುತ್ತಾ ಇದ್ದವು. ಮಳೆಗಾಲದಲ್ಲಿ ಒಂದು ಕೆಂಪು ಬಣ್ಣದ ಹುಳು ಬಿದ್ದಿರುತ್ತಿತ್ತು. 
ಆ ಹುಳಕ್ಕೆ ನಾವು ಸೂರ್ಯನ ಎಂಜಲು ಎಂದು ಕರೆಯುತ್ತಿದ್ದೆವು.  ಆ ಹುಳವನ್ನು ಅಂಗೈ ಯಲ್ಲಿ ಹಿಡಿದು ಕೊಂಡು ಮನೆ ತಲುಪಿ ಅಪ್ಪ ಅಮ್ಮನಿಗೆ ತೋರಿಸಿಯೇ ಕೆಳಗೆ ಬಿಡುವುದುಂಟು. ಆಮೇಲೆ ದೈತ್ಯ ಗಾತ್ರದ ಚೀಲ ಕೆಳಗೆ ಹಾಕಿ ಕೈ ಕಾಲು ತೊಳೆದು, ಅಮ್ಮ ತಯಾರಿಸಿದ ಹಪ್ಪಳ ತಿಂದು ಮುಂದಿನ ಕೆಲಸ ನೋಡ್ತಾ ಇದ್ದೆವು.
ಗೆಳೆಯರೆ ಆಗಿನ ಈ ಮೋಜು ಮಸ್ತಿ ಬಹುಷಃ ಇವಾಗ ಇಲ್ಲಾ ಅಂತ ಅಂದುಕೊಳ್ಳುವೆ. ಯಾಕಂದ್ರೆ ನಾವುಗಳು ಪ್ರಕೃತಿಯ ಸೊಬಗನ್ನು ವೀಕ್ಷಿಸುತ್ತ, ತಂಪಾದ ಗಾಳಿಗೆ ಮೈಯೋಡ್ಡಿ ಶಾಲೆಗೆ ಹೋದವರು. ಇವಾಗ ಏನಿದ್ರೂ ಮನೆ ಮುಂಭಾಗ ಬಸ್ ಬರುತ್ತೆ.  ಸಂಜೆ ಅದೇ ಬಸ್ ನಲ್ಲಿ ಮಕ್ಕಳು ವಾಪಸ್ ಬರ್ತಾರೆ. ಆದ್ರೆ ಏನೇ ಹೇಳಿ ಅವರವರಿಗೆ ಅವರವರ ಬಾಲ್ಯ ಚಂದ… ಅಲ್ವಾ? ನೀವೇ ಹೇಳಿ…
 
 
 
 
 
 
 
 
 
 
 

Leave a Reply