ಯಂತ್ರಗಳು ತಿರುಗುವ ಕಾಲದಲ್ಲಿ ತಿರುಗುವುದನ್ನು ನಿಲ್ಲಿಸಿದ ಬೀಸುಕಲ್ಲುಗಳು~ನಾಗಭೂಷಣ್ ಬೇಳೂರು 

ಆಧುನಿಕತೆಯ ಯಂತ್ರಗಳ ಗೀಳಿಗೆ ಬಿದ್ದು ಇಂದು ಮನುಷ್ಯ ಪಡಲಾರದ ಕಷ್ಟ ಪಡುತ್ತಾ ಇದ್ದಾನೆ. ಆದರೂ ಅವನಿಗೆ ತಾನು ಆರಾಮದಾಯಕ ಜೀವನ ನಡೆಸುತ್ತ ಇದ್ದೇನೆ ಎಂದು ಭಾವಿಸಿದ್ದಾನೆ. ಬೆಳಿಗ್ಗೆ ಹಾಸಿಗೆಯಿಂದ ಎದ್ದು ಪುನಃ ಹಾಸಿಗೆಗೆ ಹೋಗಿ ಮಲಗುವ ತನಕ ಯಾಂತ್ರೀಕೃತ ಜೀವನ.  
ಮನುಷ್ಯ ಈ ಆಧುನಿಕತೆಗೆ ಹೆಚ್ಚು ಅವಲಂಬಿತವಾದಂತೆ ಹೆಚ್ಚು ಆಲಸ್ಯಕ್ಕೆ ಒಳಪಟ್ಟನೆ ಹೊರತು ಚುರುಕು ಆಗಲಿಲ್ಲ. ವಿಜ್ಞಾನ ಹಾಗೂ ಆಧುನಿಕ ಯಂತ್ರಗಳ ಆವಿಷ್ಕಾರ ಮುಂದುವರಿಯಿತು . ಆದರೆ ಮನುಷ್ಯನ ಆಯಸ್ಸು ಕ್ಷೀಣಿಸುತ್ತ ಬಂತು. ಯಾಕೆ ಇಷ್ಟೆಲ್ಲಾ ಹೇಳುತಾ ಇದ್ದೇನೆ ಅಂತ ಅರ್ಥ ಆಗದೆ ಇರಬಹುದು. 
ಆದರೆ ನಿಮಗೆ ನಿಜ ಅನಿಸಿರಬೇಕು ಅಲ್ವಾ?
ಹೌದು ಹಿಂದೆಲ್ಲ ಯಾರು ಕೂಡ ಯಂತ್ರಗಳ ಮೊರೆ ಹೋಗಲಿಲ್ಲ , ಅಲ್ಲದೆ ಯಂತ್ರಗಳು ಇರಲಿಲ್ಲ. ಅಕ್ಕಿ ಹುಡಿ, ರಾಗಿ ಹುಡಿ, ಉದ್ದಿನ ಬೇಳೆ ಆಗಬೇಕಿದ್ದರೆ ಈವಾಗ ಹಿಟ್ಟಿನ ಗಿರಣಿಯತ್ತ ಮುಖ ಮಾಡುವ ನಾವು ಮೊದಲಿನವರು ಮನೆಯಲ್ಲೇ ಮಾಡ್ತಾ ಇದ್ರು ಅಂತ ಕೇಳಿದರೆ  ಆಶ್ಚರ್ಯ ಆಗಬಹುದು.
ಬೀಸುವ ಕಲ್ಲೇ ಇವರಿಗೆ ಬಹು ದೊಡ್ಡ ಯಂತ್ರ.
ಅಂದಿನ ಆರ್ಥಿಕ ಸ್ಥಿತಿಗೂ ಮತ್ತು ದೇಹದ ಆರೋಗ್ಯ ದ್ರಷ್ಟಿಯಿಂದಲೂ ಉತ್ತಮವಾದ ಒಂದು ಸಾಧನ. ಬೆಳಿಗ್ಗೆ ಎದ್ದು ಬೀಸುವ ಕಲ್ಲಿನೆದುರು ಕೂತರೆ ಅವರಿಗೆ ಯಾವ ವ್ಯಾಯಾಮವೂ ಬೇಕಿರಲಿಲ್ಲ. ಅಲ್ಲದೆ ಅದರಲ್ಲಿ ಬೀಸಿದ ಬೇಳೆಯು ಉತ್ತಮ ಗುಣಮಟ್ಟದಿಂದ ಕೂಡಿರುತಿತ್ತು. ಇವಾಗಿನ ತರ ಯಾವುದೇ ಜಿಮ್ ನಂತಹ ವ್ಯಾಯಾಮ ಇರಲಿಲ್ಲ ಈ ಬೀಸುವ ಕಲ್ಲೇ ಸಾಕಾಗುತಿತ್ತು. ಬೀಸುವ ಕಲ್ಲಿನ ಎದುರು ಕೂತರೆ ಸಾಕು. 
ರಾಗಿ ಬೀಸೋ ಕಲ್ಲೇ ಚಿನ್ನಾ ರನ್ನದಾ ಕಲ್ಲೇ|
ನಾ ಬೀಸೋ ಕಲ್ಲೇ ರಾಗಿ ಕಲ್ಲೇ ||
ಬೆಳದಿಂಗಳು ಚೆಲ್ಲ್ಐತೆ ಮಲ್ಲಿಗೆ ಅರಲೈತೆ |
ಬೆಳಗಾಗಿ ನಾನೆದ್ದು ಬೀಸುವ ನನ್ನ ಕಲ್ಲೇ ||
ಹಸುಕಂದ ಅಳುತವ್ನೆ ಹಾಲುಣಿಸೋ ಹೊತ್ತಾಯ್ತು |
ಉಳುವ ಗಂಡನಿಗೆ ರಾಗಿರೊಟ್ಟಿ ತಟ್ಟಬೇಕು ||
ಮಾದಯ್ಯನ ಗಿರಿಯಲ್ಲಿ ಮಾಡಿದ ನನ್ನ ಕಲ್ಲೇ |
ಕುಂತುರೂ ಮಠದಲ್ಲಿ ಬೀಸುವ ನನ್ನ ಕಲ್ಲೇ ||
ಇದೆ ತರಹದ ಹಲವಾರು ಹಾಡು ತಾನಾಗಿ ಬರುತ್ತಿತ್ತು. ಆ ಹಾಡಿಗೆ ಅವರು ಹಾಕಿದ ಗಾಜಿನ ಬಳೆಗಳ ಸದ್ದೇ ಹಿನ್ನಲೆ ಸಂಗೀತವಾಗಿತ್ತು. ಇದು ಒಂದು ತರಹದ ಜಾನಪದ ಕಲೆ ಅಂತಾನೂ ಕರೆಯಬಹುದು.
ಇತ್ತಿಚಿನ ದಿನಗಳಲ್ಲಿ ಇದು ಮರೆಯಾಗಿದೆ. ಇವಾಗೆಲ್ಲ ಪ್ರತಿಯೊಂದು ಕೆಲಸಕ್ಕೂ ಅತ್ಯಾಧುನಿಕ ಯಂತ್ರಗಳು. ದೋಸೆಯ ಹಿಟ್ಟು ಅರೆಯಲು ಮೊದಲೆಲ್ಲ ಕಡೆಯುವ ಕಲ್ಲನ್ನು ಉಪಯೋಗಿಸಿದರೆ, ಮಜ್ಜಿಗೆಯನ್ನು ಕೈಯಲ್ಲೇ ಕಡೆಯುತ್ತಿದ್ದರು. ಭತ್ತವನೆಲ್ಲ ಒನಕೆಯ ಮೂಲಕ ಕುಟ್ಟಿ ಅಕ್ಕಿ ಮಾಡುತ್ತಿದ್ದರು. ಆದರೆ ಇವಾಗೆಲ್ಲ ಇದಕ್ಕೆ ಪರ್ಯಾಯ ಮಾರ್ಗವಾಗಿ ಯಂತ್ರಗಳು ಬಂದಿದ್ದಾವೆ. ಇಷ್ಟೆಲ್ಲ ಯಂತ್ರ ಬಂದರು
ಮನುಷ್ಯನಿಗೆ ಆರೋಗ್ಯ ಕ್ಷೀಣಿಸಿದೆ. 
ಗೆಳೆಯರು ಹಾಗೂ ಬಂಧು ಬಾಂಧವರಲ್ಲಿ ಮಾತನಾಡಲು ಸಮಯ ಇಲ್ಲದಂತೆ ಆಗಿದೆ. ಆದರೂ ಕೆಲವು ಹಳ್ಳಿಗಳಲ್ಲಿ ಇಂದಿಗೂ ಬೀಸುವ ಕಲ್ಲನ್ನು ಉಪಯೋಗಿಸುವುದನ್ನು ನಾವು ಅಲ್ಲಿ ಇಲ್ಲಿ ನೋಡಬಹುದು. ಕೆಲವೊಂದು ಪಂಗಡದ ಮದುವೆಯಲ್ಲಿ ಈ ಬೀಸುವ ಕಲ್ಲಿಗೆ ಉದ್ದಿನ ಮುಹೂರ್ತ ಮಾಡುದರ ಮೂಲಕ ಮಹತ್ವ ಕೊಡುವುದನ್ನು ನಾವು ನೋಡಬಹುದು. ಆದರೂ ಆ ಹಳೆಯ ದಿನಗಳು ಮತ್ತೆ ಮರಳಿ ಬಂದು ಆ ಖುಷಿಯನ್ನು ಪಡೆಯಲು ಆಗದೆ ನಾವುಗಳು ಈಗ ಪರಿತಪಿಸುವಂತಾಗಿದೆ. 

 
 
 
 
 
 
 
 
 
 
 

Leave a Reply