ಮುದ್ರಣ ಮಾಧ್ಯಮದ ಒಳ-ಹೊರಗೊಂದು ಸುತ್ತು~✍️ ಸುಬ್ರಹ್ಮಣ್ಯ ಹೆಗಡೆ, ಉಡುಪಿ

ಬೆಳಿಗ್ಗೆ ಎದ್ದು ಟೀ ಜೊತೆಗೆ ಪೇಪರ್ ಇಲ್ಲದೇ ಇದ್ರೆ ಆಗೋದೇ ಇಲ್ಲ. ಚಹ ಮತ್ತು ಪೇಪರ್ ಒಂತರ ಅಣ್ಣ ತಮ್ಮ ಇದ್ದ ಹಾಗೆ..! ಊಟಕ್ಕೆ ಉಪ್ಪಿನಕಾಯಿ ಹೇಗೋ ಬೆಳಿಗ್ಗೆ ಚಹ ದ ಜೊತೆ ಪೇಪರ್. ಮುದ್ರಣದ ಪರಿಮಳ, ಇನ್ನು ಬಿಡಿಸದ ಗರಿ ಗರಿ ಪುಟಗಳನ್ನೆತಿ ಅಕ್ಷರಗಳ ನಡುವಲ್ಲಿ ಕಳೆದುಹೋಗುವ ಸುಖವೇ ಅದ್ಬುತ.

ಅದು ನಿಮಗೆ ಡಿಜಿಟಲ್ ಮಾಧ್ಯಮ ದಲ್ಲಿ ಸಿಗೋದಿಲ್ಲ. ಕೈಯಲ್ಲಿ ಹಿಡಿದು ಮುದ್ದಾಡುತ್ತಾ ಓದುವ ಪರಿ ಅಪರಿಮಿತ ಆನಂದ ತಂದುಕೊಡು ತ್ತದೆ ಅಲ್ಲವೇ… ಇಂದು ಎಲ್ಲಾ ಬಗೆಯ ಮುದ್ರಣ ಮಾಧ್ಯಮಕ್ಕೆ ಸಂಕಷ್ಟದ ಸಮಯ.
ಟೆಲಿವಿಷನ್ ಮತ್ತು ಡಿಜಿಟಲ್ ಮಾಧ್ಯಮಗಳ ಪ್ರಬಲ ಪೈಪೋಟಿ ನಡುವೆಯೂ ತನ್ನ ಪ್ರಾಬಲ್ಯ ಕಾಯ್ದುಕೊಂಡ ಮುದ್ರಣ ಮಾಧ್ಯಮ ಈಗ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುವ ಸ್ಥಿತಿಗೆ ಬಂದಿದೆ ಎಂತ ವಿಪರ್ಯಾಸ ನೋಡಿ ಕೊರೋನಾ ಎನ್ನುವ ಮಹಾಮಾರಿ ಜಗತ್ತಿನ ಮುದ್ರಣ ಮಾಧ್ಯಮವನ್ನೇ ಅಲ್ಲಾಡಿಸುತ್ತಿದೆ.

ಮುದ್ರಣ ಮಾಧ್ಯಮಗಳಲ್ಲಿ ದಿನಪತ್ರಿಕೆಯು ಒಂದು. ದಿನ ಪತ್ರಿಕೆ ಬಗ್ಗೆ ಒಂದಿಷ್ಟು ತಿಳಿಯೋಣ

ಇತಿಹಾಸ: ಮುದ್ರಣ ಅನ್ನುವ ಪರಿಕಲ್ಪನೆ ಪ್ರಾರಂಭವಾಗಿದ್ದೆ ಮೆಸಪಾಟೋಮಿಯ ನಾಗರೀಕತೆಯಿಂದ. ಮರದ ಅಚ್ಚುಗಳಿಂದ ಶುರುವಾದ ಮುದ್ರಣ 2 ನೇ ಶತಮಾನದಲ್ಲಿ ಚೀನಿಯರು ಕಂಡುಹಿಡಿದ ಪೇಪರ್ ನ ಸಂಶೋಧ ನೆಯೇ ಮುದ್ರಣ ಲೋಕಕ್ಕೆ ಮಹತ್ವದ ಮೈಲುಗಲ್ಲು.

ಮರದ ಅಚ್ಚು ತದ ನಂತರ ಪೇಪರ್ ಕಲ್ಪನೆ ಬಂದ ನಂತರ ಹಾಸ್ತಾಕ್ಷರದಿಂದ ಪ್ರಾರಂಭವಾದ ಮುದ್ರಣ ನಂತರದ ದಿನಗಳಲ್ಲಿ 1440ರಲ್ಲಿ ಜರ್ಮನಿಯ ಜೋಹನ್ಸ್ ಗ್ಯೂಟೆನ್ ಬರ್ಗ್ ಮೊದಲ ಮುದ್ರಣ ಯಂತ್ರ ಕಂಡುಹಿಡಿದ ಪರಿಣಾಮ ಮುದ್ರಣ ಲೋಕದಲ್ಲಿ ಕ್ರಾಂತಿ ಕಾರಿ ಬದಲಾವಣೆ ಆರಂಭಗೊಂಡಿತು.

ಮುದ್ರಣ ಲೋಕದಲ್ಲಿ ದಿನಪತ್ರಿಕೆ ಅನ್ನುವ ಕಲ್ಪನೆ ಹುಟ್ಟುಹಾಕಿದ್ದು ಜರ್ಮನಿಯ ಜೋಹಾನ್ ಕಾರ್ಲೊಸ್. 1605 ರಲ್ಲಿ ಆತನೇ ರಿಲೇಷನ್ ಅನ್ನುವ ದಿನ ಪತ್ರಿಕೆ ಪ್ರಕಟಿಸಿದ. ಅದೇ ಜಗತ್ತಿನ ಮೊಟ್ಟ ಮೊದಲ ಮುದ್ರಣ ಯಂತ್ರದಲ್ಲಿ ಪ್ರಕಟಗೊಂಡ ದಿನ ಪತ್ರಿಕೆ.

ಭಾರತದಲ್ಲಿ ಮುದ್ರಣ ಮಾಧ್ಯಮ: ಹೀಗೆ ಪ್ರಾರಂಭಗೊಂಡ ಮುದ್ರಣ ಮಾಧ್ಯಮ 1780 ಜನವರಿ 29 ರಂದು ಭಾರತದ ಮೊಟ್ಟ ಮೊದಲ ದಿನಪತ್ರಿಕೆಯಾದ ದಿ ಬೆಂಗಾಲ್ ಗೆಜಟ್ ಬ್ರಿಟಿಷ್ ಆಳ್ವಿಕೆಯಲ್ಲಿ ಜೇಮ್ಸ್ ಆಗಸ್ತಸ್ ಹಿಕ್ಕಿ ಪ್ರಾರಂಭಿಸುವ ಮೂಲಕ ಭಾರತ ಪ್ರವೇಶಿಸಿತು.

1818 ರಲ್ಲಿ ಭಾರತದ ಮೊದಲ ಪ್ರಾದೇಶಿಕ ಪತ್ರಿಕೆಯಾಗಿ ಬೆಂಗಾಲಿ ಭಾಷೆಯ ಸಮಾಚಾರ್ ದರ್ಪಣ ವಾರ ಪತ್ರಿಕೆ ಪ್ರಕಟಗೊಂಡಿತು. 1838ರಲ್ಲಿ ಜಾರ್ಜ್ ಬುಸ್ಟ್ ಸಂಪಾದಕತ್ವದಲ್ಲಿ ದಿ ಬೊಂಬೆ ಟೈಮ್ಸ್ ಆಂಡ್ ಜರ್ನಲ್ ಆಫ್ ಕಾಮರ್ಸ್ ಪತ್ರಿಕೆ (ವಾರಕ್ಕೆ 2ಬಾರಿ ಪ್ರಕಟ ) ಪ್ರಾರಂಭಗೊಂಡಿತು.

ಭಾರತದಲ್ಲಿದ್ದ ಬ್ರಿಟಿಷರಿಗೆ ಮಾತ್ರ ಸೀಮಿತವಾಗಿತ್ತು.1857 ರಿಂದ ಭಾರತದ ಮುದ್ರಣ ಮಾಧ್ಯಮದ ಇತಿಹಾಸದಲ್ಲಿ ಪತ್ರಿಕೋಧ್ಯಮದ ಪರಿಕಲ್ಪನೆ ಪ್ರಾರಂಭಗೊಂಡಿತು. ನಂತರ ಅದೇ ಪತ್ರಿಕೆ 1861ರಲ್ಲಿ ರಾಬರ್ಟ್ ನೈಟ್ ಸಂಪಾದಕತ್ವದಲ್ಲಿ ದಿ ಟೈಮ್ಸ್ ಆಫ್ ಇಂಡಿಯಾ ಎನ್ನುವ ಹೊಸ ಹೆಸರಿನಿಂದ ದಿನಪತ್ರಿಕೆಯಾಗಿ ಮಾರ್ಪಟ್ಟು ಪ್ರತೀ ಭಾರತೀಯನಿಗೂ ದೊರಕಲಾರಂಭಿಸಿತು.

1843 ರಲ್ಲಿ ಆರಂಭ ಗೊಂಡ ಮಂಗಳೂರು ಸಮಾಚಾರ ದಿನ ಪತ್ರಿಕೆಯೇ ಕನ್ನಡದ ಮೊದಲ ದಿನಪತ್ರಿಕೆ.
ಆ ನಂತರ ಮುದ್ರಣ ಮಾಧ್ಯಮ ಪ್ರಾದೇಶಿಕವಾಗಿ ಭಾಷಾವಾರು ಪತ್ರಿಕೆಗಳ ಉದಯಕ್ಕೆ ನಾಂದಿಯಾಯಿತು.
ಮುದ್ರಣ ಮಧ್ಯಮದ ಇತಿಹಾಸ ಮತ್ತು ಬೆಳವಣಿಗೆ ಬಲು ರೋಚಕ.

ಬ್ರಹತ್ ಉಧ್ಯಮವಾದ ಪರಿ: ಇಂದು ಮುದ್ರಣ ಮಾಧ್ಯಮ ಜಗತ್ತಿನ ಪ್ರಭಾವಶಾಲಿ ಮತ್ತು ವಿಶ್ವಾಸಾರ್ಹ ಮಾಧ್ಯಮವಾಗಿ ಜೊತೆಗೆ ಲಾಭಧಾಯಕ ಉಧ್ಯಮವಾಗಿ ಬೆಳೆದಿದೆ. ಅಸಂಖ್ಯಾತ ಜನರಿಗೆ ಉದ್ಯೋಗ ಒದಗಿಸಿದೆ.
ಪತ್ರಿಕೆ ಎಜೇಂಟ್, ಜಾಹೀರಾತು ಏಜನ್ಸಿಗಳು, ಬರವಣಿಗೆಗಾರರು, ಬಿಡಿ ವರದಿಗಾರರು ಹೀಗೆ ಇದನ್ನೇ ನಂಬಿ ಉಪ ವೃತ್ತಿಗಳಾಗಿ ಸ್ವೀಕರಿಸಿ ಬದುಕುತ್ತಿರುವವರ ಸಂಖ್ಯೆ ದೊಡ್ಡದಿದೆ.

ಮುದ್ರಣ ಮಾಧ್ಯಮಕ್ಕೆ ದೊಡ್ಡ ಓದುಗ ವರ್ಗವೇ ಆದಾಯಕ್ಕೆ ಮೂಲ. ಅದೇ ಅದರ ಬಂಡವಾಳ ಕೂಡ.ಇಂದು ಪತ್ರಿಕೆಯನ್ನು ಮಾರಿ ಬಂದ ಹಣದಿಂದ ಮುದ್ರಣ ಮಾಧ್ಯಮ ಸಂಸ್ಥೆ ನಡೆಸುವುದು ಅಸಾಧ್ಯ. ಉಧ್ಯಮವಾಗಿ ಬೆಳೆದ ಮೇಲೆ ಲಾಭ ನಷ್ಟದ ಲೆಕ್ಕಾಚಾರ ಇದ್ದೇ ಇರುತ್ತದೆ. ಹಾಗಾಗಿ ಜಾಹೀರಾತು ಅನ್ನುವುದು ಪತ್ರಿಕೆಯ ಉಸಿರು.

ಒಂದು ದಿನ ಪತ್ರಿಕೆಯನ್ನ ಸುದ್ದಿ ಮೂಲಗಳಿಂದ ನೋಡುವುದಿದ್ದರೆ ಅದರ ಸಂಪಾದಕಿಯ ಪುಟವೇ ಅದರ ಹೃದಯ. ಅದೇ ರೀತಿ ಜಾಹೀರಾತು ಮೂಲದಿಂದ ನೋಡುವುದಾದರೆ ವರ್ಗಿಕೃತ (Classified)ಜಾಹೀರಾತು ಅದರ ಹೃದಯ. ಇವತ್ತಿನ ದಿನಗಲ್ಲಿ ದೊಡ್ಡ ಓದುಗ ವರ್ಗ ಇದ್ದರೆ ಮಾತ್ರ ಮಾಧ್ಯಮ ಸಂಸ್ಥೆ ಲಾಭಧಾಯಕವಾಗಿದೆ ಅಂತ ತಿಳಿಯಲು ಸಾಧ್ಯವಿಲ್ಲ. ಕಾರಣ ನ್ಯೂಸ್ ಪ್ರಿಂಟ್ ವೆಚ್ಚ ಅಪಾರ ಪ್ರಮಾಣದಲ್ಲಿ ಏರಿಕೆಯಾಗಿದೆ.

ಈ ಕಾಮರ್ಸ್ ಮಾಧ್ಯಮಗಳು ಡೆಲಿವರಿ ಮಾಡಲು ರಟ್ಟಿನ ಬಾಕ್ಸ್ ಬಳಸುವ ಪ್ರಮಾಣ ಏರಿಕೆ ಆದ ಬಳಿಕ ದಿನಪತ್ರಿಕೆ ಪೇಪರ್ ವೆಚ್ಚ ಕೂಡ ಜಾಗತಿಕ ಮಟ್ಟದಲ್ಲಿ ಏರಿದೆ. ದೊಡ್ಡ ಓದುಗ ವರ್ಗವನ್ನು ಆದಾಯ ತರುವ ಮೂಲವಾಗಿ ಪರಿವರ್ತಿಸಿ, ಪತ್ರಿಕೆಯ ಬ್ರಾಂಡ್ ಜೊತೆಗೆ ಜಾಹಿರಾತಿನ ಹೊಸ ಪರಿಕಲ್ಪನೆ ಅಳವಡಿಸಿಕೊಂಡು ವೃತ್ತಿಪರರನ್ನ ನೇಮಿಸಿಕೊಂಡು ಜಗತ್ತಿನ ಕಾರ್ಪೊರೇಟ್ ವಲಯದ ಜಾಹೀರಾತು ಪಡೆಯುವುದು ಮಾಧ್ಯಮ ಸಂಸ್ಥೆಗೆ ಅಷ್ಟೇ ಮುಖ್ಯ.

ಆದರೆ ಇದು ಅಷ್ಟು ಸುಲಭದ ಮಾತಲ್ಲ. ಇಂದು ಕೆಲವೇ ಕೆಲವು ದೈತ್ಯ ಮಾಧ್ಯಮ ಸಂಸ್ಥೆಗಳು ಕಾರ್ಪೊರೇಟ್ ವಲಯವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಾಧ್ಯಮ ಎನ್ನುವ ಕಲ್ಪನೆ ಇರುವುದರಿಂದ ಎಲ್ಲಾ ಪ್ರಕಾರದ ಜಾಹೀರಾತು ಮೂಲವನ್ನು ಹಿಡಿತಕ್ಕೆ ಪಡೆದುಕೊಳ್ಳಲು ಹಲವು ರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳು ಪ್ರಾದೇಶಿಕ ಪತ್ರಿಕೆಗಳನ್ನು ಖರೀದಿಸಿದೆ. 

ಹಾಗಾಗಿ ಇಂದು ಪ್ರಾದೇಶಿಕ ಪತ್ರಿಕೆಗಳನ್ನು ಲಾಭಧಾಯಕವಾಗಿ ನಡೆಸುವುದು ಕಷ್ಟ ಸಾಧ್ಯ. ಇಂದಿನ ಕೊರೋನಾ ಸಂಕಷ್ಟದಲ್ಲಿ ಜಗತ್ತಿನ ದೈತ್ಯ ಮಾಧ್ಯಮ ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ. ಮುದ್ರಣ ಮಾಧ್ಯಮದ ಹಲವು ಪತ್ರಕರ್ತರು, ಪ್ರಸರಣ, ಜಾಹೀರಾತು, ಪ್ರೆಸ್ ನಲ್ಲಿ ಕೆಲಸ ನಿರ್ವಹಿಸುವ ಹಲವರ ಉದ್ಯೋಗಕ್ಕೆ ಕತ್ತರಿ ಹಾಕಲಾಗುತ್ತಿದೆ. ಮುಂದೆ ಒಳ್ಳೆಯ ದಿನಗಳು ಬರಬಹುದೇನ್ನುವ ನಿರೀಕ್ಷೆ ಕೂಡ ಅಷ್ಟೇ ಇದೆ.

ಮುದ್ರಣ ಮಾಧ್ಯಮ ಸತ್ತಿಲ್ಲ..! ಜಗತ್ತಿನಾದ್ಯಂತ ಅಂದಾಜು 2.5 ಬಿಲಿಯನ್ ಜನರು ದಿನಪತ್ರಿಕೆ ಓದುತ್ತಾರೆ. ಅದೇ ಭಾರತದಲ್ಲಿ 2017 ರಲ್ಲಿ ಅಂದಾಜು 407 ಮಿಲಿಯನ್ ಓದುಗರಿದ್ದಾರೆ. ಇಂದಿಗೆ ಈ ಸಂಖ್ಯೆ ಜಾಸ್ತಿ ಆಗಿದೆ.

ಒಮ್ಮೆ ಯೋಚಿಸಿ ದಿನಪತ್ರಿಕೆ ಒಂದರ ಓದುಗರ ಸಂಖ್ಯೆಯೇ ಇಷ್ಟಿದೆ. ಇನ್ನು ಸಂಪೂರ್ಣ ಮುದ್ರಣ ಮಾಧ್ಯಮ ದ ಓದುಗರ ಸಂಖ್ಯೆ ಎಷ್ಟಿರಬಹುದು. ಎಷ್ಟೇ ಡಿಜಿಟಲ್ ಮಾಧ್ಯಮ ಬೆಳೆದರೂ ಮುದ್ರಣ ಮಾಧ್ಯಮ ಕೊಡುವ ಅನುಭವವೇ ಬೇರೆ..

ಇಂದು ಮುದ್ರಣ ಮಾಧ್ಯಮದ ಜಾಹೀರಾತು ಲೋಕ ಬ್ರಹತ್ ಉಧ್ಯಮವಾಗಿದೆ. ಹಲವು ಬ್ರಾಂಡ್ ಗಳು ಜನರನ್ನು ಮುಟ್ಟಲು ಮುದ್ರಣ ಮಾಧ್ಯವನ್ನೇ ಹೆಚ್ಚು ನಂಬಿದ್ದಾರೆ. ಮುದ್ರಣ ಎನ್ನುವುದು ಸಾಕ್ಷಿ ಆಗಿ ಉಳಿಯಬಲ್ಲದು. ಅದೇ ಅದರ ತಾಕತ್ತು. ಅದೆಷ್ಟೇ ಡಿಜಿಟಲ್ ಮಾಧ್ಯಮ ಬೆಳೆದಿದ್ರು ವಿಶ್ವಾಸ ಅನ್ನುವ ಪ್ರಶ್ನೆ ಬಂದಾಗ ಮುದ್ರಣ ಮಾಧ್ಯಮವೇ ಜನಸಾಮಾನ್ಯರ ಮೊದಲ ಆಯ್ಕೆ.

ಈಗಲೂ ಅದೇ ನಂಬಿಕೆ ಇದೆ. ಇಂತ ಸಂಕಷ್ಟ ಸಮಯದಲ್ಲೂ ಓದುಗರ ಹೃದಯದಲ್ಲಿ ಮುದ್ರಣ ಮಾಧ್ಯಮಕ್ಕೆ ವಿಶೇಷ ಸ್ಥಾನ ಜೊತೆಗೆ ಭಾವನಾತ್ಮಕ ಸಂಬಂಧವಿದೆ. ಹಾಗಾಗಿ ಜಗತ್ತಿನ ದೈತ್ಯ ಕಾರ್ಪೊರೇಟ್ ವಲಯ ತನ್ನ ಪ್ರಾಡಕ್ಟ್ ಮತ್ತು ಸೇವೆಗಳ ಪ್ರಚಾರ ಜೊತೆಗೆ ಬ್ರಾಂಡ್ ಮೌಲ್ಯ ವೃದ್ಧಿಸಿಕೊಳ್ಳಲು ಮುದ್ರಣ ಮಾಧ್ಯಮದಲ್ಲಿ ಹೆಚ್ಚಿನ ಒಲವನ್ನು ವ್ಯಕ್ತಪಡಿಸುತ್ತಿದೆ. 5 ರೂ ಮುಖ ಬೆಲೆಯಿಂದ ಪ್ರಾರಂಭವಾಗುವ ಪತ್ರಿಕೆಯ ಜಾಹೀರಾತು ಲೋಕದ ಗಾತ್ರ ಆಶ್ಚರ್ಯ ಉಂಟುಮಾಡದೇ ಇರದು.

ಮುದ್ರಣ ಮಾಧ್ಯಮದ ಜಾಹೀರಾತು ಮಾರುಕಟ್ಟೆ: ಜಾಗತಿಕ ಒಟ್ಟು ಮುದ್ರಣ ಮಾಧ್ಯಮ ದ ಜಾಹೀರಾತು ಆದಾಯ 2018 ರಲ್ಲಿ 98.1 ಬಿಲಿಯನ್ ಯು. ಎಸ್ ಡಾಲರ್ ಕೊರೋನಾ ದಿಂದಾಗಿ 2020 ರಲ್ಲಿ 67.3 ಬಿಲಿಯನ್ ಯು. ಎಸ್ ಡಾಲರ್ ಅಂದರೆ ಅಂದಾಜು 30 ಪರ್ಸೆಂಟ್ ಗೂ ಅಧಿಕ ಜಾಹೀರಾತು ಆದಾಯದಲ್ಲಿ ಇಳಿಕೆ ಆಗಿದೆ. 2021 ರಲ್ಲಿ ಇನ್ನಷ್ಟು ಇಳಿಕೆ ಸಾಧ್ಯತೆ ಎಂದು ಅಂದಾಜಿಸಲಾಗಿದೆ

ಭಾರತದಲ್ಲಿ 2019 ರಲ್ಲಿ ವಾರ್ಷಿಕ 221 ಬಿಲಿಯನ್ ಇಂಡಿಯನ್ ರೂ. ಆದಾಯವಿದ್ದರೆ 2020 ರಲ್ಲಿ 198 ಬಿಲಿಯನ್ ಇಂಡಿಯನ್ ರೂ. ಗೆ ಇಳಿಕೆ ಕಂಡಿದೆ. ಈ ಆರ್ಥಿಕ ವರ್ಷಕ್ಕೆ 107 ಬಿಲಿಯನ್ ಇಂಡಿಯನ್ ರೂ. ಇಳಿಕೆ ಆಗಬಹುದೆಂದು ಅಂದಾಜಿಸಲಾಗಿದೆ.

ಓದಿದ್ರಲ್ಲ.. ಕಣ್ಣಿಗೆ ಕಾಣುವ 10 ರಿಂದ 15 ಪುಟಗಳ ವರ್ಣರಂಜಿತ ದಿನಪತ್ರಿಕೆಯ ಇತಿಹಾಸ,ಬೆಳವಣಿಗೆ ವ್ಯವಹಾರಿಕ ಆಳ ವಿಸ್ತಾರ ಸೋಜಿಗ ಉಂಟುಮಾಡದೇ ಇರದು. ಮುದ್ರಣ ಮಾಧ್ಯಮ ಎಲ್ಲಿಯವರೆಗೆ ವಿಶ್ವಕ್ಕೆ ವಸ್ತುನಿಷ್ಟ, ವಿಶ್ವಾಸಾರ್ಹತೆಯ ಸಾಕ್ಷಿ, ಜ್ಞಾನದ ವಾಣಿ ಯಾಗಿರುತ್ತದೋ ಅಲ್ಲಿಯವರೆಗೆ ಓದುಗ ಪ್ರಭುಗಳು ಅದೆಂತ ಕೊರೋನಾ ದಂತ ಸಾಂಕ್ರಾಮಿಕ ರೋಗ ಬಂದರೂ ಬೆಳಿಗ್ಗಿನ ಚಹ ಜೊತೆಗೆ ದಿನ ಪತ್ರಿಕೆ ಓದುವ ಚಡಪಡಿಕೆಯಲ್ಲೇ ಇರುತ್ತಾರೆ. ಏನು ಹೇಳ್ತೀರಾ…

Leave a Reply