“ಅಮ್ಮನಿದ್ದಿದ್ದರೆ” ~ವಿಶ್ವ ಅಮ್ಮಂದಿರ ದಿನಕ್ಕೊಂದು ಕವನ.

ಅಮ್ಮ ಇದ್ದಿದ್ದರೆ……

ಹಾ….ವರ್ಷಕ್ಕೊಮ್ಮೆ ಮಾತ್ರ ಅಮ್ಮನ ದಿನವಲ್ಲ…
ಅವಳನ್ನು ಎನ್ನ ಮನ ನಿತ್ಯ ನೆನೆಯುತ್ತಿರುತ್ತದೆಯಲ್ಲಾ…

ಬೆಳಿಗ್ಗೆ ಏಳುತ್ತಲೇ ಮನದಲೊಂದು ಯೋಚನೆ “ಅಮ್ಮ ಇದ್ದಿದ್ದರೆ”???
ಎಲ್ಲರಿಗೂ ಈ ಹೊತ್ತು ಬಿಸಿ ಬಿಸಿ ಕಾಫಿ ತಂದು ಕೊಡುತ್ತಿದ್ದಳಲ್ಲ ಎಂದು….

ಹುಂ ಮತ್ತೆ ತಾನೇ ಮಾಡಿ ತಂದ ಕಾಫಿ ಕುಡಿಯುತ್ತಿದ್ದಂತೆ ಮತ್ತೊಮ್ಮೆ ಯೋಚನೆ “ಅಮ್ಮ ಇದ್ದಿದ್ದರೆ” ???
ರುಚಿ ರುಚಿಯಾದ ತಿಂಡಿ ಅಡುಗೆ ಮಾಡಿಡುತ್ತಿದ್ದಳಲ್ಲಾ ಎಂದು….

ಇರಲಿ ಮನೆ ಮಂದಿಗೆ ತಿಂಡಿ ಮಾಡಿಕೊಟ್ಟು ತಾನು ಗಡಿಬಿಡಿಯಲ್ಲಿ ತಿನ್ನುತ್ತಿದ್ದಾಗ ಪುನಃ ಅದೇ ಯೋಚನೆ “ಅಮ್ಮ ಇದ್ದಿದ್ದರೆ “???
ಮನೆ ಇಡೀ ಗುಡಿಸಿ ಒರೆಸಿ ಸ್ವಚ್ಛಗೊಳಿಸುತ್ತಿದ್ದಳಲ್ಲ ಎಂದು….

ಇರಲಿ ಬಿಡಿ ಹಣೆ ಬರಹ ಎಂದು ಮನೆ ಸ್ವಚ್ಛಗೊಳಿಸಿ ಕುಳಿತಿದ್ದಾಗ ಪುನಃ ಮನದಲ್ಲಿ ” ಅಮ್ಮ ಇದ್ದಿದ್ದರೆ” ???
ಸಿಂಕಿನಲ್ಲಿ ನನ್ನ ಅಣಕಿಸುವ ಪಾತ್ರಗಳ ತೊಳೆದು ಒರೆಸಿಟ್ಟಿರುತ್ತಿದ್ದಳಲ್ಲಾ ಎಂದು..

ಅಂತೂ ಆ ಕೆಲಸ ಮುಗಿಸಿ ಬಂದು ತಿರುಗಿ ಬಚ್ಚಲ ಮನೆ ಕಡೆ ಹೊರಳಿದಾಗ ಮನದಲ್ಲಿ “ಅಮ್ಮನಿದ್ದಿದ್ದರೆ”??? ಒಗೆಯಲು ಹರಡಿದ ಬಟ್ಟೆಗಳನ್ನು ವಾಷಿಂಗ್ ಮಿಷನ್ ಗೆ ಹಾಕುತ್ತಿದ್ದಳಲ್ಲ ಎಂದು…

ಅದೂ ಮುಗಿಸಿ ಬಂದು ಬದಿಯಲ್ಲಿ ತಿರುಗಿ ನೋಡಿದಾಗ ಮನದಲ್ಲೊಂದಾಸೆ “ಅಮ್ಮ ಇದ್ದಿದ್ದರೆ.”???
ಒಣಗಿ ಹರವಿದ ಬಟ್ಟೆಗಳಿಗೆ ಇಸ್ತ್ರಿ ಹಾಕಿ ನೀಟಾಗಿ‌ ಮಡಚಿಡುತ್ತಿದ್ದಳಲ್ಲ ಎಂದು…

ಮನೆಯಲ್ಲಿ ಬೆಳಗಿನ ಎಲ್ಲ ಕೆಲಸ ಮುಗಿಸಿ ಕಚೇರಿಗೆ ಹೊರಟವಳಿಗೆ ಯೋಚನೆ “ಅಮ್ಮ ಇದ್ದಿದ್ದರೆ‌‌”???
ಶಾಲೆಗೆ ರಜೆ ಎಂದು ಮನೆಯಲ್ಲೇ ಇರುವ ಮಕ್ಕಳ ಬೇಕು‌ ಬೇಡಗಳನ್ನು,ಆಸೆ ಆಕಾಂಕ್ಷೆಗಳನ್ನು ಪೂರೈಸುತ್ತಿದ್ದಳಲ್ಲಾ ಎಂದು…
.
ಒಂದಷ್ಟು ಒತ್ತಡದ ಕೆಲಸ ಮಾಡುತ್ತಿರುವಾಗ ಮಗಳ ಶಾಲೆಯಿಂದ ಬಂದ ಫೋನ್ ಕರೆಗೆ ತಲ್ಲಣಿಸಿ ಮನದಲ್ಲಿ ಯೋಚನೆಯೊಂದೆ “ಅಮ್ಮ ಇದ್ದಿದ್ದರೆ”???
ಜ್ವರ ಎಂದು ಮನೆಗೆ ವಾಪಾಸಾದ ಪುಟ್ಟ ಮಗಳಿಗೆ ಆರೈಕೆ ಮಾಡುತ್ತಿದ್ದಳಲ್ಲಾ ಎಂದು…

ಗೆಳತಿಯರೊಂದಿಗೆ ಹರಟುತ್ತಾ ರಜೆಯಲೊಂದು ದಿನದ ಪ್ರವಾಸದ ಯೋಜನೆ ಮಾಡುತ್ತಿರುವಾಗ ಮನದಲೊಂದಾಸೆ “ಅಮ್ಮ ಇದ್ದಿದ್ದರೆ”???
ನೀ ಹೋಗಿ ಬಂದು ಖುಷಿಯಾಗಿರು ಎಂದುತ್ತರಿಸಿ ಮನೆ ಮಂದಿಯ ಜವಾಬ್ದಾರಿ ಹೊರುತ್ತಿದ್ದಳಲ್ಲ ಎಂದು..

ಕಚೇರಿ ಕೆಲಸದ ಹೊರೆಯೊಂದಿಗೆ ಅಧಿಕಾರಿಯ ಕಿರುಕುಳಕ್ಕೆ ಬೇಸತ್ತು ತಲೆನೋವು ಕಾಡಿದಾಗ ಮನದಲ್ಲಿ ” ಅಮ್ಮ ಇದ್ದಿದ್ದರೆ”???
ತಲೆಯನ್ನು ತನ್ನ ತೊಡೆಯ ಮೇಲಿರಿಸಿಕೊಂಡು ಅಮೃತಾಂಜನವ ನವಿರಾಗಿ ತಿಕ್ಕಿ ಮೃದುವಾಗಿ ಹಣೆಯ ನೇವರಿಸುತ್ತಿದ್ದಳಲ್ಲಾ ಎಂದು….

ಗಿಡದ ತುಂಬಾ ಮಲ್ಲಿಗೆ ಅಬ್ಬಲಿಗೆ ಹೂ ಕಂಡಾಗಲೆಲ್ಲ ಅದೇ ಯೋಚನೆ “ಅಮ್ಮ ಇದ್ದಿದ್ದರೆ” ???
ಚೆಂದದ ಮಾಲೆ ಮಾಡಿ ಮುಡಿಗೆ ಮುಡಿಸುತ್ತಿದ್ದಳಲ್ಲಾ ಎಂದು..

ತಡ ರಾತ್ರಿ ಕೋಣೆ ಒಳಹೊಕ್ಕು ಕಚೇರಿಯ ಕೆಲಸ ಮುಗಿಸಿ ಆಯಾಸದಿಂದ ಆಕಳಿಸಿದಾಗೆಲ್ಲಾ ಮನದಲ್ಲೊಂದಾಸೆ “ಅಮ್ಮ ಇದ್ದಿದ್ದರೆ”???
ಆರೋಗ್ಯದ ಕಾಳಜಿ‌ ವಹಿಸಿ ಮಲಗು‌ ಮಗೂ ಎಂದು ಪ್ರೀತಿಯ ಮಾತನಾಡುತ್ತಿದ್ದಳಲ್ಲಾ ಎಂದು…

ಗಂಡನ ಅನಾದರ, ಅತ್ತೆಯ ಮುನಿಸು, ನಾದಿನಿಯ ಕುಹಕ , ಮೈದುನನ ದಬ್ಬಾಳಿಕೆ, ಮಕ್ಕಳ ಕಿರಿಕಿರಿಗೆ ಮನ ವ್ಯಗ್ರವಾದಾಗ ಆಸೆಯೊಂದೇ “ಅಮ್ಮ ಇದ್ದಿದ್ದರೆ”???
ಹೆಣ್ಣನ್ನು ಕ್ಷಮಯಾ ಧರಿತ್ರಿ ಎಂದೆನ್ನುವುದು ಸುಮ್ಮನೆ ಅಲ್ಲ ಮಗಳೇ, ತಾಳ್ಮೆ ವಹಿಸೆಂದು ತಿಳಿಹೇಳುತ್ತಿದ್ದಳಲ್ಲಾ ಎಂದು…
.
ಹಿತೈಷಿಗಳು, ಮಿತ್ರರು, ಬಂಧುಗಳೆನಿಸಿಕೊಂಡವರು ಮಾಡಿದ ಮೋಸದ ಅರಿವಾದಾಗ ಮನದಲೊಂದೇ ಯೋಚನೆ “ಅಮ್ಮ ಇದ್ದಿದ್ದರೆ”???
ಬಿಡು ಮಗೂ, ಪ್ರಪಂಚವೇ ಹಾಗಿದೆ, ಯಾರು ಎಷ್ಟೇ ಕೆಟ್ಟವರಾದರೂ ನೀ ಮಾತ್ರ ಒಳ್ಳೆಯವಳಾಗಿರು, ಅದೇ ನಿನ್ನ ಕಾಯುವುದೆಂದು ಸಂತೈಸುತ್ತಿದ್ದಳಲ್ಲಾ ಎಂದು…

ಅಬ್ಬಾ ಮುಗಿಯದು ಅಮ್ಮಾ‌‌‌ ನಿನ್ನ ನೆನಪಿನ ಮೆರವಣಿಗೆ….
ನಾ ಮಾಡುವ ಪ್ರತಿಯೊಂದು ನಡೆಯಲ್ಲಿ ಪ್ರತಿಯೊಂದು ಕೆಲಸದಲ್ಲೂ ನಿನ್ನದೇ ಛಾಯೆ ಕಾಣುವುದೆನಗೆ…

ನಿನ್ನ ಕಾಯವಿಲ್ಲದಿದ್ದರೂ ನಿನ್ನ ನೆನಪು ನನ್ನ ಬಿಟ್ಟು ಹೋಗದು ಅಮ್ಮಾ… ನಾನಿರುವ ತನಕ ,ನನ್ನುಸಿರು ಇರುವ ತನಕ..
ನಿನ್ನ ಪ್ರೀತಿಗೆ ಬೆಲೆ ಕಟ್ಟಲಾರೆ… ನಿನ್ನ ವಾತ್ಸಲ್ಯದ ಋಣ ತೀರಿಸಲಾರೆ..

ನಿನ್ನ ಅಕ್ಕರೆಯ ನೆನಪಿನ ಮಳೆಯಲ್ಲಿ ಮಾತು‌ ಮೂಕವಾಗಿದೆ…
ನಿನ್ನ ಸವಿ ಒಡನಾಟದ ನೆನಪಿನ ಧಾರೆಯಲಿ ಮನಸ್ಸು ಭಾರವಾಗಿದೆ …

ಇಂದಿಗೂ ಅಮ್ಮನ ಒಡನಾಟ ಭಾಗ್ಯವಿರುವ ಮಕ್ಕಳಿಗೆ ವಿಶ್ವ ಅಮ್ಮಂದಿರ ದಿನದ ಶುಭಾಶಯಗಳು ಅಂತೆಯೇ ಅಮ್ಮನ ಒಡನಾಟ ವಂಚಿತ ಮಕ್ಕಳಿಗೆ ಅಮ್ಮನ ಸಾಮೀಪ್ಯದ ಸವಿ ನೆನಪಿನ ಶುಭ ಹಾರೈಕೆಗಳು..
~ ಪೂರ್ಣಿಮಾ ಜನಾರ್ದನ್ ಕೊಡವೂರು

 
 
 
 
 
 
 
 
 
 
 

Leave a Reply