Janardhan Kodavoor/ Team KaravaliXpress
31.6 C
Udupi
Saturday, December 3, 2022
Sathyanatha Stores Brahmavara

ಮತ್ತೆ ಬಂದಿದೆ ಗಣೇಶ ಚೌತಿ

ಪ್ರಪಂಚದ ಜನರ ನೆಮ್ಮದಿ ಕೆಡಿಸಿದ ಕೋವಿಡ್ ನಮ್ಮ ಹಬ್ಬ ಹರಿದಿನಗಳ ಸಡಗರವನ್ನು‌ ಕೂಡಾ ಕಸಿದುಕೊಂಡಿದೆ. ವರುಷಕ್ಕೊಮ್ಮೆ ಭಕ್ತಿ ಭಾವದಿಂದ ಸಾರ್ವತ್ರಿಕವಾಗಿ ಆಚರಿಸುವ ಸಾರ್ವಜನಿಕ ಗಣೇಶೋತ್ಸವವೆಂದೇ ಪ್ರಸಿದ್ಧ ವಾದ ಗಣೇಶನ ಪೂಜೆ ಇಂದು ಆಡಂಬರದ ಭವ್ಯ ವೇದಿಕೆಯಿಂದ ಮನೆಯಂಗಣದ ಸರಳ ಮಂಟಪಕ್ಕೆ ತೃಪ್ತಿ ಪಡುವಂತಹ ವಾತಾವರಣ ನಿರ್ಮಾಣವಾಗಿದೆ. ಲೋಕಮಾನ್ಯ ಬಾಲಗಂಗಾಧರ ತಿಲಕರು ಅಂದು ಜನರಲ್ಲಿ ಐಕ್ಯತೆಯ ಭಾವ ಬೆಳೆಯಲೆಂದು ಹುಟ್ಟು ಹಾಕಿದ ಸಾರ್ವಜನಿಕ ಗಣೇಶೋತ್ಸವದ ವಿರಾಟ್ ರೂಪ ಅಂದಿನಿಂದ ಇಂದಿನವರೆಗೂ ಪ್ರಸ್ತುತ.

ಗಲ್ಲಿ ಗಲ್ಲಿಗಳಲ್ಲಿ ಗಣಪತಿಯ ಆರಾಧನೆ , ವಿವಿಧ ರೂಪಗಳಲ್ಲಿ ಗಣೇಶನ ಔಪಾಸನೆ, ಮನೆ ಮನೆಗಳಲ್ಲಿ ಪ್ರಥಮ ಪೂಜಿತನ ಪೂಜೆ , ದೇವಸ್ಥಾನಗಳಲ್ಲಿ ವಿಘ್ನನಿವಾರಕನ ಉತ್ಸವ ಇವೆಲ್ಲ ತೀರಾ ಸಾಮಾನ್ಯ ಎಂಬಂತೆ ಇಷ್ಟರವರೆಗೂ ನಡೆದು ಬಂದ ರೀತಿ ಅದ್ಭುತ. ಆಬಾಲ ವೃದ್ಧರಾದಿಯಾಗಿ ,ಬಡವ ಬಲ್ಲಿದನೆಂಬ ಬೇಧವಿಲ್ಲದೆ ಜಾತಿಮತ ಧರ್ಮಗಳ ಎಲ್ಲೆಯನ್ನು ಮೀರಿದ ದೇವ ಗಣಪತಿ. ಸಾರ್ವಜನಿಕ ಗಣೇಶೋತ್ಸವದ ಅಧ್ಯಕ್ಷರಾಗಿ ಅನ್ಯ ಧರ್ಮದ ಭಕ್ತರು ಸುಲಲಿತವಾಗಿ ಗಣೇಶನ ಹಬ್ಬವನ್ನು ಆಚರಿಸಿದ ಉದಾಹರಣೆ ಅನೇಕ. ಒಂದು ರೀತಿಯಲ್ಲಿ ಗಣಪ ಎಲ್ಲರ ಪ್ರೀತಿಯ ಆರಾಧ್ಯದೇವ. ಸಕಲ ವಿಘ್ನಗಳನ್ನು ನಿವಾರಿಸಿ ,ಪ್ರಥಮ ವಂದಿತನಾಗಿ,ಆದಿ ಪೂಜಿತನಾಗಿ ಮೆರೆವ ನಮ್ಮ ಗಣಪನ ಹಬ್ಬ ಈ ವರುಷ ಸ್ವಲ್ಪ ಕಳೆಗುಂದಿದ್ದು ಅಲ್ಲಗಳೆಯುವಂತಿಲ್ಲ.

ಆದರೆ ಆಡಂಬರದ ಆಚರಣೆಗೆ ಕಡಿವಾಣ ಬಿದ್ದರೂ ಭಕ್ತಿಯ ಚೌತಿಯ ಆಚರಣೆಗೆ ಚ್ಯುತಿ ಬಂದಿಲ್ಲ. ಮನೆ ಮನೆಗಳಲ್ಲಿ‌ ಮನೆಮಂದಿಯ ಇಷ್ಟದ ಪುಟ್ಟ ಪುಟ್ಟ ಗಣಪ‌ ಪ್ರತಿಷ್ಟಾಪನೆ ಆಗಿದ್ದಾನೆ. ವಿವಿಧ ರೂಪಗಳಲ್ಲಿ ಅವನನ್ನು ಪೂಜಿಸುವ ಅವನ ಭಕ್ತರು ಇದೀಗ ಪರಿಸರ ಸ್ನೇಹಿ ಗಣಪನ ಪೂಜೆಗೆ ಸನ್ನದ್ಧರಾಗಿದ್ದಾರೆ. ಗಣಪ ಪ್ರಕೃತಿ ಮಾತೆಯ ಪುತ್ರ.ಅವನನ್ನು ರೂಪಿಸುವ ಮಣ್ಣು ಪ್ರಕೃತಿ. ಪೂಜೆಯ ನಂತರ ಅವನನ್ನು ವಿಸರ್ಜಿ ಸುವುದೂ ಪ್ರಕೃತಿ ಮಾತೆಯ ಮಡಿಲಲ್ಲಿ‌. ಇದೀಗಂತೂ ಪ್ರಕೃತಿ ಪ್ರೇಮಿಗಳು ಮಣ್ಣಿನಲ್ಲಿ ಸುಲಭವಾಗಿ ಕರಗುವ, ನೀರಿನಲ್ಲಿ ಅತಿ ಬೇಗನೆ ಲೀನವಾಗುವ ಗಣಪತಿಯ ವಿಗ್ರಹಗಳನ್ನು ರಚಿಸಿ ಅದನ್ನು ಪೂಜಿಸುವುದಷ್ಟೇ ಅಲ್ಲದೆ ಒಂದಷ್ಟು ಬೀಜದುಂಡೆಗಳನ್ನು ವಿಗ್ರಹದೊಳಗೆ ಹುದುಗಿ ಸಿಟ್ಟು ಹೊಸ ಹೊಸ ಸಸಿಗಳಿಗೆ ಜೀವ ನೀಡುವ ಕಾಯಕದಲ್ಲಿ ನಿರತರಾಗಿದ್ದಾರೆ.

ಮನೆಯಲ್ಲೇ ಭಕ್ತಿ‌ಭಾವದಿಂದ ಪೂಜಿಸಲ್ಪಡುವ ಗಣೇಶನಿಗೆ ಮನೆ ಮಂದಿ ಸೇರಿ ವಿಧ ವಿಧ ಭಕ್ಷ್ಯ ಭೋಜ್ಯಗಳನ್ನು ನೈವೇದ್ಯ ಮಾಡಿ, ಪ್ರಾರ್ಥನೆ, ಭಜನೆ,ಪೂಜೆಯ ಮೂಲಕ ಸರಳ ಚೌತಿಯ ಆಚರಣೆ ಈ ವರುಷದ ವಿಶೇಷ. ಹೆಚ್ಚು ಜನ ಸೇರಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಗೌಜಿ ಗಲಾಟೆಯಿಂದ ದೂರವಾದ, ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವವಿಲ್ಲದ,ಅಬ್ಬರದ ಪ್ರಚಾರವಿಲ್ಲದ ಈ ವರುಷದ ಚೌತಿ ಮೇಲ್ನೋಟಕ್ಕೆ ಬಲು ಸರಳವೆನಿಸಿದರೂ,ಮನೆ ಮನೆಗಳಲ್ಲಿ ತಕ್ಕ‌ಮಟ್ಟಿಗೆ ಮನೆಮಂದಿಯ ಕಲಾತ್ಮಕ ಕೈ ಚಳಕದಿಂದ ಅಲಂಕಾರಗೊಂಡು ಭಕ್ತಿ ಪೂರ್ವಕವಾಗಿ ಅತ್ಯಗತ್ಯ ಧಾರ್ಮಿಕ ವಿಧಿ ವಿಧಾನಗಳಿಂದ, ಮನೆ ಮಂದಿಯ ಒಟ್ಟು ಸೇರುವಿಕೆಯಿಂದ,ಅವನ ನೈವೇದ್ಯಕ್ಕೆಂದು ತಯಾರಿಸಿದ ಭಕ್ಷ ಭೋಜ್ಯಗಳೊಂದಿಗೆ ಎಲ್ಲರೂ ಒಟ್ಟು ಸೇರಿ ಅವನ ಪೂಜೆಯನ್ನು ಮಾಡುವ ಚೆಂದ ನೋಡಿಯೇ ಸವಿಯಬೇಕು.

ಆಡಂಬರವಿಲ್ಲದಿದ್ದರೂ ಅವನ ಮೇಲಿನ ಭಕ್ತಿ, ಅವನ ಮೇಲಿನ ಪ್ರೀತಿಗೆ ಒಂದಿನಿತೂ ಕೊರತೆಯಿಲ್ಲ. ಇಷ್ಟ ಸಿದ್ಧಿ ವಿನಾಯಕ ನಮ್ಮೆಲ್ಲರ ಇಷ್ಟಾರ್ಥಗಳನ್ನು ಈಡೇರಿಸಲಿ. ವಿಘ್ನೇಶ್ವರನ ಅನುಗ್ರಹದಿಂದ ಸ್ವಲ್ಪ ದಿನಗಳಲ್ಲೇ ಕೋವಿಡ್ ಎಂಬ ವಿಘ್ನ ದೇಶ ಬಿಟ್ಟು ತೊಲಗಲಿ. ಮುಂದಿನ ವರುಷ ಸಾರ್ವಜನಿಕ ಗಣೇಶೋತ್ಸವದ ವೈಭವ , ಸಂಭ್ರಮ ಮತ್ತೊಮ್ಮೆ ಮರುಕಳಿಸಲಿ. ಪರಿಸರ ಸ್ನೇಹಿ ಗಣಪನ ಆಚರಣೆ ವಿಶ್ವ ವ್ಯಾಪಿ ಯಾಗಲಿ ಎಂಬ ಆಶಯದೊಂದಿಗೆ ಸರ್ವರಿಗೂ ಗಣೇಶ ಹಬ್ಬದ ಶುಭಾಶಯಗಳು.

 

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!