ಮಾನ್ಸೂನಿನಲ್ಲಿ ಮನ್ ಕಿ ಬಾತ್ ~ಮಲ್ಲಿಕಾ ಶ್ರೀಶ ಬಲ್ಲಾಳ್, ಕೊಡವೂರು

ತೊಂಬತ್ತರ ದಶಕದ ನೆನಪು, ಆಗಿನ್ನೂ ನನ್ನ ಶಾಲಾ ಜೀವನದ ಪ್ರಾರಂಭ. ನನ್ನ ಗೆಳತಿ ಯರೆಲ್ಲಾ ಶಾಲೆಗೆ ಸೇರಿದ್ದಾರೆಂದು ನಾನೂ ಕೂಡ ಬಾಲವಾಡಿಗೆ ಹೋಗುವ ವಯಸ್ಸಿನಲ್ಲಿ ಮನೆ ಯಲ್ಲಿ ಹಠಮಾಡಿ ಶಾಲೆಗೆ ದಾಖಲಾತಿ ಮಾಡಿಸಿ ಕೊಂಡಿದ್ದೆ.

ಅಣ್ಣನೊಂದಿಗೆ ಶಾಲೆಗೆ ಹೋಗುವ ಸಂಭ್ರಮ ಮೊದಲಿಗೆ ಇತ್ತಾದರೂ ಮಳೆಗಾಲದ ಆರಂಭ ಶಾಲೆಗೆ ಹೋಗುವ ಖುಷಿಯನ್ನು ಕಸಿಸು ಕೊಂಡಿತ್ತು. ಯಾಕಾದರೂ ಈ ಮಳೆಗಾಲದಲ್ಲಿ ಶಾಲೆ ಆರಂಭವಾಗುತ್ತೋ ಎಂದು ಮಳೆಗೆ ಶಪಿಸುತ್ತಾ ಶಾಲೆಗೆ ಹೋಗುತ್ತಿದ್ದೆ.

ಸ್ಲೇಟಿನಲ್ಲಿ ಹೋಂ ವರ್ಕ್ ಮಾಡಿಕೊಂಡು ಹೋಗುವ ಕಾಲ ಅದು. ಮಳೆ ನೀರು ತಾಗಿ ಬರೆದಿದ್ದು ಅಳಿಸಿ ಹೋಗಬಾರದೆಂದು ಪ್ಲಾಸ್ಟಿಕ್ ಕವರ್ ಮಾಡಿಕೊಂಡು ಹೋದರೂ ಯಾವು ದೋ ಮೂಲೆಯಿಂದ ಪ್ಲಾಸ್ಟಿಕ್ ಕವರ್ ಒಳಗೆ ನೀರು ಹೋಗಿ ಬರೆದಿದ್ದೆಲ್ಲಾ ಅಳಿಸಿ ಹೋಗಿ ಶಾಲೆಯಲ್ಲಿ ಟೀಚರ್ ಕೈಯಲ್ಲಿ ಬೈಸಿಕೊಳ್ಳ ಬೇಕಾದ ಸಂದರ್ಭ ಬಂದಾಗ ಮಳೆ ನನಗೆ ಆಜನ್ಮ ಶತ್ರುವಂತೆ ಗೋಚರಿಸಿತ್ತು.

ತೊಂಬತ್ತರ ದಶಕದಲ್ಲಿ ಮಳೆಗಾಲವೆಂದರೆ ಈಗಿನಂತೆ ದಿನಕ್ಕೊಂದು ಎರಡು ಮಳೆ ಬಂದು ಬಿಡುತ್ತಿರಲಿಲ್ಲ. ಒಮ್ಮೆ ಮಳೆ ಶುರುವಾದರೆ ಮೂರು-ನಾಲ್ಕು ದಿನ ಎಡಬಿಡದೇ ಸುರಿಯು ತ್ತಿತ್ತು. ಕೊಟ್ಟಿಗೆಯಲ್ಲಿನ ದನ ಕರುಗಳನ್ನೂ ಸಹ ವಾರಗಟ್ಟಲೆ ಹೊರಗೆ ಮೇಯಲು ಬಿಡುತ್ತಿರ ಲಿಲ್ಲ.

ಈಗಿನಂತೆ ಸಣ್ಣ-ಪುಟ್ಟ ಮಳೆಗೆಲ್ಲಾ ಶಾಲೆಗೆ ರಜೆ ಕೊಡುತ್ತಿರಲಿಲ್ಲ. ಹಾಗೇ ನೋಡಿದರೆ ಮಳೆಗೂ ಮಕ್ಕಳಿಗೂ ಅವಿನಾಭಾವ ಸಂಬಂಧವಿತ್ತು. ಏಕೆಂದರೆ ಸರಿಯಾಗಿ ಮಕ್ಕಳು ಮನೆಯಿಂದ ಶಾಲೆಗೆ ಹೊರಡುವ ಸಮಯ ಹಾಗೇ ಶಾಲೆಯಿಂದ ಮನೆಗೆ ಮರಳುವ ಸಮಯಕ್ಕೆ ಸರಿಯಾಗಿ ಮಳೆರಾಯ ತನ್ನ ಪ್ರತಾಪವನ್ನು ಮಕ್ಕಳ ಮೇಲೆ ತೋರಿಸುತ್ತಿದ್ದ. 

ಮಲೆನಾಡಿನಲ್ಲಿ ಹುಟ್ಟಿ ಬೆಳೆದ ನನಗೆ ಮಳೆಗಾಲ ವೇನೂ ಹೊಸತಾಗಿರಲಿಲ್ಲ. ಮಳೆರಾಯ ಧೋ.. ಎಂದು ಸುರಿದು ಸುರಿದು ದಣಿವಾರಿಸಿಕೊಳ್ಳುವ ಸಮಯದಲ್ಲಿ ನಮ್ಮದು ರೇಷ್ಮೆ ಹುಳುಗಳ ಹುಡುಕಾಟ ಆರಂಭವಾಗುತ್ತಿತ್ತು.

ಮಳೆಗಾಲದಲ್ಲಿ ಮಳೆ ನಿಂತ ಬಳಿಕ ಒಂದು ಬಗೆಯ ಕೆಂಪು ಹುಳ ರಸ್ತೆಯ ಮಧ್ಯೆ ನಮಗೆ ಕಾಣಸಿಗುತ್ತಿದ್ದವು.

ಅವುಗಳ ಮೇಲ್ಮೈ ರೇಷ್ಮೆಯಂತೆ ತುಂಬಾ ನುಣುಪಾಗಿರುತ್ತಿತ್ತು. ಅದಕ್ಕಾಗಿ ನಾವು ಅವುಗಳನ್ನು ರೇಷ್ಮೆ ಹುಳ ಎಂದೇ ಕರೆ ಯುತ್ತಿದ್ದೆವು. ಅವುಗಳು ಎಲ್ಲಿಂದ ಬರುತ್ತಿದ್ದ ವೋ ನಮಗಂತೂ ಗೊತ್ತಿರಲಿಲ್ಲ. ಚಿಕ್ಕವರಾದ ನಾವು ಅವುಗಳು ಆಕಾಶದಿಂದ ಉದುರು ತ್ತಿದ್ದವು ಎಂದೇ ನಂಬಿದ್ದೆವು. ಕೆಂಪು ಬಣ್ಣದ ಹುಳಗಳು ಸೂರ್ಯನ ನಾಲಿಗೆಯಿಂದ ಬರುತ್ತವೆ ಎಂದು ನನ್ನಣ್ಣ ಹೇಳಿದ್ದನ್ನು ನಾನು ಮುಗ್ಧವಾಗಿ ನಂಬಿದ್ದೆ.

ಆಶ್ಚರ್ಯವೆಂದರೆ ಮಳೆ ಶುರುವಾದ ಕೂಡಲೇ ಈ ಹುಳಗಳು ನಾಪತ್ತೆಯಾಗುತ್ತಿದ್ದವು. ಮತ್ತೆ ಮಳೆ ನಿಂತು ಸೂರ್ಯನ ಮುಖ ಮಂದವಾಗಿ ಕಾಣುತ್ತಿದ್ದ ಹಾಗೇ ಆ ಹುಳಗಳು ರಸ್ತೆಗಳಲ್ಲಿ ಹಾಜರಾಗು ತ್ತಿದ್ದವು. ವೆಲ್ವೆಟ್ ಬಟ್ಟೆಯಂತೆ ನಯವಾಗಿದ್ದ ಅದರ ಮೇಲ್ಮೈ ಕೆಂಪು ಬಣ್ಣದಲ್ಲಿ ಅತ್ಯಂತ ಸುಂದರ ವಾಗಿ ಕಾಣುತ್ತಿತ್ತು.

ನನಗಂತೂ ಆಗ ರೇಷ್ಮೆ ಬಟ್ಟೆ ಈ ಹುಳದಿಂದಲೇ ಮಾಡೋದೇನೋ ಎಂಬ ಅನುಮಾನ ಹುಟ್ಟಿ ಕೊಂಡಿತ್ತು. ಕೊನೆಗೂ ಆ ಹುಳಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲಾಗಲಿಲ್ಲ. ಮತ್ತೆ ನಾನು ಪ್ರಾಥಮಿಕ ಶಿಕ್ಷಣ ಮುಗಿಸಿ ಪ್ರೌಢಶಾಲೆಗೆ ಬಂದಾಗ ಜೀವಶಾಸ್ತçದಲ್ಲಿ ಅಷ್ಟೋ-ಇಷ್ಟೋ ಜೀವ ವೈವಿಧ್ಯದ ಬಗ್ಗೆ ಓದಿದ ನಂತರ ಮತ್ತೆ ಆಸೆಯಿಂದ ರೇಷ್ಮೆ ಹುಳುಗಳ ಹುಡುಕಾಟ ಆರಂಭಿಸಿದ್ದೆ.

ಆದರೆ ಆಸೆ ನಿರಾಸೆ ಮೂಡಿಸಿತು. ಕಾರಣ ನಾವು ಬೆಳೆದಂತೆ, ಬುದ್ಧಿ ಬೆಳೆದಂತೆ ಮಲೆ ನಾಡಿನಲ್ಲಿ ಆಗ ಬರುತ್ತಿದ್ದ ಹಾಗೇ ಮಳೆಯೂ ಬರುತ್ತಿರಲಿಲ್ಲ, ಮಳೆ ನಿಂತ ಮೇಲೆ ರೇಷ್ಮೆ ಹುಳವೂ ಕಾಣ ಸಿಗುತ್ತಿರಲಿಲ್ಲ. ಕೊನೆಗೆ ಆ ಪ್ರಭೇದದ ಹುಳಗಳನ್ನು ಮತ್ತೆ ನನ್ನ ಜೀವನದಲ್ಲಿ ನೋಡಲೂ ಸಿಗಲಿಲ್ಲ.

ಮಲೆನಾಡು ಪರಿಸರದಲ್ಲಿ ಮಳೆಗಾಲದ ಮಧ್ಯಭಾಗದಲ್ಲಿ ಅಂದರೆ ಸಾಮಾನ್ಯವಾಗಿ ಜುಲೈ ತಿಂಗಳಿನಲ್ಲಿ (ಮಳೆ ನಕ್ಷತ್ರಗಳಾದ ಆಶ್ಲೇಷಾ, ಮಖಾ ಮಳೆ ಬರುವ ಸಮಯ) ಜೋರಾಗಿ ಗಾಳಿ ಬೀಸುತ್ತಿತ್ತು. ಅದರೊಟ್ಟಿಗೆ ಮಳೆರಾಯನ ಆರ್ಭಟ. ಆಗ ಭೂಮಿ ಒಳಗಿನಿಂದ ಜಲ ಒಡೆಯುವ ಕಾಲ ಎಂದು ಹಿರಿಯರು ಹೇಳುತ್ತಿದ್ದರು.

ಅದಕ್ಕೆ ನಿದರ್ಶನವೆಂಬಂತೆ ರಸ್ತೆಯ ಮಧ್ಯೆ ( ಮಣ್ಣಿನ ರಸ್ತೆ), ದರೆಗಳ (ರಸ್ತೆಯ ಅಕ್ಕ-ಪಕ್ಕದ ಮಣ್ಣಿನ ದಿಬ್ಬ) ಒಳಗಿಂದ ನೀರಿನ ಸೆಲೆ ಚಿಮ್ಮುವುದನ್ನು ನೋಡಿ ನಮಗೆ ಆಗುತ್ತಿದ್ದ ಸಂತೋಷ ಅಷ್ಟಿಷ್ಟಲ್ಲ. ಮಲೆನಾಡು ಪ್ರದೇಶ ದಲ್ಲೇ ಸ್ವಂತ ಬಾವಿ ಇದ್ದವರು ಹೊರತುಪಡಿಸಿ, ಉಳಿದವರು ನೀರಿಗಾಗಿ ಪಡುವ ಪಾಡು ಕಂಡು ಈ ನೀರಿನ ಚಿಲುಮೆ ಇದ್ದಲ್ಲೇ ಬಾವಿ ತೋಡಿದರೆ ಹೇಗೆ ಎಂದು ಆಗ ಅನಿಸಿದ್ದನ್ನು ಈಗ ನೆನೆದರೆ ಎಂತಹ ಬಾಲಿಶ ಎಂದು ಈಗ ನನಗೇ ನಗು ಬರುತ್ತದೆ.

ಹೀಗೆ ರಸ್ತೆ ಮಧ್ಯೆ ಅಕ್ಕ-ಪಕ್ಕದ ಗುಡ್ಡಗಳಿಂದ ನೀರಿನ ಸಣ್ಣ ಝರಿ ಹರಿದು ಬಂದು ರಸ್ತೆ ಪಕ್ಕದ ಚರಂಡಿಗೆ ಸೇರುತ್ತಿದ್ದವು. ಆಗೆಲ್ಲಾ ನಾನು ಇಷ್ಟು ಶುಭ್ರವಾದ ನೀರು ಕೊಳಕು ಚರಂಡಿ ನೀರಿಗೆ ಸೇರುತ್ತಲ್ಲಾ ಎಂದು ಬೇಸರ ಪಟ್ಟಿದ್ದೂ ಇದೆ. ಹೀಗೆ ಮಳೆಗಾಲದ ಚರಂಡಿಗಳು ನಮಗೆ ನೈಲ್ ನದಿ, ಅಮೆಜಾನ್ ನದಿಗಳಂತೆ ಭಾಸವಾಗಿದ್ದವು.

ಶಾಲೆಗೆ ಹೋಗುವ ಸಮಯದಲ್ಲಿ ನನಗೆ ಮತ್ತು ನನ್ನಣ್ಣನಿಗೆ ಯಾವ ನೀರಿನ ಝರಿ ಯಾವ ಚರಂಡಿಗೆ ಹೋಗಿ ಸೇರುತ್ತದೆ ಎಂಬ ಕುತೂಹಲ ಭರಿತ ತನಿಖೆ ಆರಂಭವಾಗುತ್ತಿತ್ತು. ಶಾಲೆಗೆ ಹೋಗುವ ರಸ್ತೆಯ ಬಲಭಾಗದ ಚರಂಡಿಗೆ ಅಮೆಜಾನ್ ನದಿ ಎಂದೂ, ಎಡಭಾಗದ ಚರಂಡಿಗೆ ನೈಲ್ ನದಿ ಎಂದೂ ನಾವು ನಾಮಕರಣ ಮಾಡಿದ್ದೆವು.

ಏಕೆಂದರೆ ಬಲಭಾಗದ ಚರಂಡಿ ಅಗಲವಾಗಿದ್ದು, ರಸ್ತೆಯ ಎಲ್ಲಾ ಬಹುಪಾಲು ನೀರನ್ನು ತನ್ನೊಳಗೆ ಹರಿಯಿಸಿಕೊಂಡು ಭೋರ್ಗರೆಯುತ್ತಾ ಹರಿದು ಸ್ವಲ್ಪ ದೂರದಲ್ಲೇ ಒಂದು ಹಳ್ಳಕ್ಕೆ ಸೇರಿಸುತ್ತಿತ್ತು. ಇದರ ಭೋರ್ಗರೆತ ಪ್ರಪಂಚದ ಅತೀ ದೊಡ್ಡ ನದಿ ಅಮೆಜಾನ್ನ ಚಿತ್ರಣವನ್ನು ನಮ್ಮ ಕಣ್ಣ ಮುಂದೆ ತರಿಸುವಂತೆ ಕಾಣುತ್ತಿತ್ತು.

ಹಾಗೇ ಎಡಭಾಗದ ಚರಂಡಿ ಕಿರಿದಾಗಿದ್ದು, ಅಂಕು-ಡೊಂಕಿನಿಂದ ಕೂಡಿದ್ದು, ನೀರಿನ ಹರಿವನ್ನು ಕಿಲೋಮೀಟರ್ ಗಟ್ಟಲೆ ದೂರಕ್ಕೆ ಕೊಂಡೊಯ್ಯುತ್ತಿತ್ತು. ಅದಕ್ಕೆ ಇದು ನಮಗೆ ಜಗತ್ತಿನ ಅತ್ಯಂತ ಉದ್ದವಾದ ನದಿ ನೈಲ್‌ನದಿಯಂತೆ ನಮಗೆ ಭಾಸವಾಗಿತ್ತು.

ಶರಾವತಿ, ತುಂಗೆ-ಭದ್ರೆಯರ ಮಡಿಲಲ್ಲಿ ಹುಟ್ಟಿ, ಅದರ ನೀರನ್ನೇ ಕುಡಿದು ಬೆಳೆದ ನಮಗೆ ಚರಂಡಿ ನೀರು ಮಾತ್ರ ಅಮೆಜಾನ್ ನದಿ, ನೈಲ್ ನದಿಯಂತೆ ಏಕೆ ಭಾಸವಾಯಿತೋ ನಾಕಾಣೆ. ಬಹುಶಃ ಶಾಲೆಯ ಪಠ್ಯ ಪುಸ್ತಕದಲ್ಲಿದ್ದ ಪ್ರಪಂಚ ಪರಿಚಯದ ಹೊಸ ಅನುಭವವಿರಬಹುದು ಎಂದು ಈಗ ಅನಿಸುತ್ತಿದೆ.

ಹೀಗೆ ನಾವು ಪ್ರಕೃತಿಯ ವಿಸ್ಮಯಗಳನ್ನು ಅನುಭವಿಸುತ್ತಾ ನಮ್ಮ ಬಾಲ್ಯ ಜೀವನವನ್ನು ಕಳೆ ದಿದ್ದೆವು. ಬಹುಶಃ ಇಂದಿನ ಮಕ್ಕಳಿಗೆ ಇಂತಹ ಅನುಭವಗಳೆಲ್ಲಾ ಆಗಿರಲಿಕ್ಕಿಲ್ಲ. ಏಕೆಂದರೆ ಆಗಿನಂತೆ ಈಗ ಮಳೆಯೂ ಹೆಚ್ಚಾಗಿ ಸುರಿಯುವುದಿಲ್ಲ. ಮಳೆ ಬಂದರೂ ಚರಂಡಿ ವ್ಯವಸ್ಥೆ ಸರಿಯಾಗಿರದೇ ಕೃತಕ ಪ್ರವಾಹ ಸೃಷ್ಠಿಯಾಗುತ್ತದೆ.

ಮತ್ತೆ ಹೆಚ್ಚಿನ ಮಕ್ಕಳು ಶಾಲಾ ವಾಹನಗಳಲ್ಲೇ ಶಾಲೆಗೆ ಹೋಗುತ್ತಾರೆ. ಹಾಗಾಗಿ ಪ್ರಕೃತಿಯ ಸೊಬಗನ್ನು ಅನುಭವಿಸಲು ಅವಕಾಶವೇ ಇರುವುದಿಲ್ಲ. ಕಾಲ ಬದಲಾಯಿತೋ ಅಥವಾ ಮನುಷ್ಯ ಬದಲಾಗಿ ಕಾಲ ಬದಲಾಗುವಂತೆ ಮಾಡಿದನೋ ಎಂಬಂತೆ ಈಗಿನ ಮಳೆಯೂ ಕಾಲ-ಕಾಲಕ್ಕೆ ಬರದೇ ಅಕಾಲಿಕವಾಗಿ ಬರುತ್ತಿದೆ. ಇದಕ್ಕೆಲ್ಲಾ ನಾವು-ನೀವುಗಳೇ ನೇರ ಹೊಣೆ ಎಂಬುದು ಮಾತ್ರ ಸುಳ್ಳಲ್ಲ ಏನಂತೀರಾ..?

 
 
 
 
 
 
 
 
 

Leave a Reply