Janardhan Kodavoor/ Team KaravaliXpress
26 C
Udupi
Thursday, April 22, 2021

ಮಹಿಳಾ ದಿನಾಚರಣೆ ನಮಗೆ ನಿತ್ಯವಾಗಲಿ~ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ, ಆನೇಕಲ್.

ತಾಯಿಯಾಗಿ, ಸಹೋದರಿಯಾಗಿ, ಪತ್ನಿಯಾಗಿ, ಮಗಳಾಗಿ, ಅತ್ತಿಗೆ, ನಾದಿನಿಯಾಗಿ ನಮ್ಮೊಡನೆ ಹಾಸುಹೊಕ್ಕಾಗಿ ಜೀವನ ನಡೆಸುವ ಮಹಿಳೆಗೆ ನಿತ್ಯ ಗೌರವ ನೀಡುವ ಸಂಸ್ಕೃತಿ ನಮ್ಮದು. ಕೇವಲ ವರ್ಷದಲ್ಲಿ ಒಂದು ದಿನ ಮಾತ್ರ ವಿಶ್ವ ಮಹಿಳಾ ದಿನಾಚರಣೆ ನೆಪದಲ್ಲಿ ಜೈ ಎನ್ನುವುದ ಕ್ಕಿಂತ ಆಕೆಗೆ ನಿತ್ಯ ಗೌರವ ನೀಡೋಣ ಎನ್ನುವುದು ನನ್ನ ಭಿನ್ನಹ.

ತಾಯಿ ನವಮಾಸ ಒಡಲಲ್ಲಿ ಮಗುವನ್ನು ಹೊತ್ತು, ಅದು ಒದೆಯುವ ಪೆಟ್ಟನ್ನು ತಿಂದು ನವಿರಾದ ಅನುಭೂತಿ ಅನುಭವಿ ಸುತ್ತಾಳೆ. ಹೆರುವಾಗ ನರಕಯಾತನೆ ಅನುಭವಿಸಿದರೂ ಮಗುವನ್ನು ಕಂಡಾಕ್ಷಣ, ಜಗತ್ತೇ ತನ್ನ ಕಾಲ ಬುಡದಲ್ಲಿದೆ ಎಂದು ಸಂಭ್ರಮಿಸುತ್ತಾಳೆ. ಮುದ್ದಾಗಿ ಬೆಳೆಯುವ ಮಗು ತನ್ನ ಪುಟ್ಟ ಕಾಲಿನಿಂದ ಎದೆಗೆ ಒದ್ದಾಗ ಅಯ್ಯೋ ನನ್ನ ಕಂದಾ ಎಂದು ಬಿಗಿದಪ್ಪಿ ಮುದ್ದಾಡು ತ್ತಾಳೆ. ಬೆಳೆದ ಮಗು ಹೊಸ್ತಿಲು ದಾಟುವಾಗ ಆಕೆಯ ಕಣ್ಣಲ್ಲಿ ಅದೇನು ಸಂಭ್ರಮ, ಅದೆಂತಹ ಸಂತೋಷ ಇಂತಹ ತಾಯಿಗೆ ಒಂದು ದಿನದ ಸಂಭ್ರಮ ಸಾಕೇ.

ಎಂದಿಗೂ ತನ್ನ ಮೈಮೇಲೆ ಹತ್ತು ತೊಲ ಬಂಗಾರ ಕಾಣದ ತಾಯಿ, ನೂರಾರು ತೊಲ ತೂಕದ ಮಗುವನ್ನು ನನ್ನ ರನ್ನ, ನನ್ನ ಚಿನ್ನ ಎಂದು ತನ್ನ ಮಗು ಬಂಗಾರವೇ ಎಂದು ಅಪ್ಪಿ ಮುದ್ದಾಡು ತ್ತಾಳೆ. (ಬಂಗಾರದ ಮಾಂಗಲ್ಯವನ್ನು ಹೊರತು ಪಡಿಸಿ ಇಂದಿಗೂ ಎಷ್ಟೋ ಮಂದಿ ಚಿನ್ನವೇ ನೋಡಿಲ್ಲ. ಅಂತಹ ಬಡತನದ ಬೇಗೆಯಲ್ಲಿರುವ ತಾಯಂದಿರಿಗೆ ಮಕ್ಕಳೇ ಬಂಗಾರ).

ಮನೆಯಿಂದಾಚೆ ಆಡಲು ಹೋದ ಮಗು ಮನೆಗೆ ಬರುವವರೆಗೂ ಹಸಿವಿದ್ದರೂ ಬರಿ ಒಡಲಲ್ಲಿ ಕಾದು ನಿಲ್ಲುವ ತಾಯಿ, ಮಗುವಿಗೆ ತಿನ್ನಿಸಿ ನಂತರ ಇರುವುದರಲ್ಲೇ ಒಡಲು ತುಂಬಿಸಿಕೊಳ್ಳುತ್ತಾಳೆ ಇಂತಹ ಮಮತಾ ಮಯಿ ಯ ಸಂಭ್ರಮ ಒಂದು ದಿನಕ್ಕೆ ಸೀಮಿತಗೊಳ್ಳ ಬಾರದು.

ಬೆಳೆದ ಮಗು ಶಾಲೆಗೆ ಹೋಗಿ ಬರುವ ತನಕ ದಾರಿಯನ್ನು ಎದುರು ನೋಡುತ್ತಾಳೆ. ನನ ಕಂದನಿಗೆ ಯಾವುದೇ ಆಪತ್ತು ವಿಪತ್ತು ಬಾರದಿರಲೆಂದು ಕಂಡ ಕಂಡ ದೇವರಿಗೆಲ್ಲ ಹರಕೆ ಹೊರುತ್ತಾಳೆ. ತನ್ನೆತ್ತರ ಬೆಳೆದು ನಿಂತ ಮಗನಿಗೆ ಮದುವೆ ಮಾಡುವಾಗ, ಬರುವ ಸೊಸೆ ಎಂತಹವಳೋ ಎಂಬ ಕಿಂಚಿತ್ತು ಅಳುಕಿಲ್ಲದೆ ಮದುವೆಗೆ ಅಣಿ ಮಾಡುತ್ತಾಳೆ. ಕನ್ಯಾ ಸ್ವೀಕಾರ ಸಮಯದಲ್ಲಿ ತನ್ನೆಲ್ಲಾ ನೋವು ಮರೆತು ಸೊಸೆಯನ್ನು ಮನೆದುಂಬಿಸಿಕೊಳ್ಳುತ್ತಾಳೆ.

ಅತ್ತೆ ಸೊಸೆಗೆ ಅಣಿಯದೆ ಹೋದಾಗ, ಪತ್ನಿಯ ಮಾತು ಮೀರಲಾರದೆ ಅನಾಥಾಶ್ರಮಕ್ಕೆ ಮಗ ತಂದು ಬಿಟ್ಟಾಗಲೂ ಒಡಲಲ್ಲಿ ನೋವಿನ ಬೆಂಕಿ ತುಂಬಿಕೊಂಡಿದ್ದರೂ ಮಗನೇ ಸುಖವಾಗಿರು ಎಂದು ಹಾರೈಸುವ ಅಮ್ಮನ ಆರೈಕೆ (ಮಕ್ಕಳಿಂದ) ನಿರಂತರವಾಗಬೇಕು.

ಹೆತ್ತ ತಾಯಿಯ ಋಣ ತೀರಿಸಲು ನಮ್ಮ ದೇಹದ ಚರ್ಮವನ್ನು ಸುಲಿದು, ಅದರಿಂದ ಪಾದುಕೆ ತಯಾರಿಸಿ ತಾಯಿಯ ಪಾದಕ್ಕೆ ಸಮರ್ಪಣೆ ಮಾಡಿದರೂ ಆಕೆಯ ಹೆರಿಗೆ ನೋವಿಗೆ ಸಮವಲ್ಲ ಎನ್ನುತ್ತಾರೆ ಹಿರಿಯರು. ಅಂತಹ ತಾಯಿ ಜೀವಂತವಿದ್ದರೆ ನಿತ್ಯ ನಿರಂತರ ನಮಿ ಸೋಣ, ಇಲ್ಲದಿದ್ದರೆ ನಿತ್ಯ ನಿರಂತರ ಸ್ಮರಿ ಸೋಣ.

ಇನ್ನೂ ಕಾರ್ಯೇಷು ದಾಸಿ, ಕರಣೇಷು ಮಂತ್ರಿ, ಭೋಜ್ಯೇಷು ಮಾತಾ, ಭೋಗೇಷು ಲಕ್ಷ್ಮೀ, ಶಯನೇಷು ರಂಭಾ, ಕ್ಷಮಯಾಧರಿತ್ರಿ, ಸತ್ಕರ್ಮಯುಕ್ತ ಕುಲಧರ್ಮ ಪತ್ನಿ ಎನ್ನುವಂತೆ ಸಪ್ತಪದಿ ತುಳಿದ ಸತಿ ಪತಿಗೆ ಜತೆಯಾಗುತ್ತಾಳೆ. ಗಂಡನ ಎಲ್ಲ ಕೆಲಸಗಳಲ್ಲಿ ಭಾಗಿಯಾಗಿ ಆತನ ಆಗು ಹೋಗು ಗಮನಿಸುವ ಮೂಲಕ ದಾಸಿಯಾಗುತ್ತಾಳೆ. ಪತಿಗೆ ಕೇವಲ ಪತ್ನಿಯಾಗದೆ ಸುಗಮ ಜೀವನಕ್ಕೆ ಸೂಕ್ತ ಸಲಹೆ ನೀಡುವ ನುರಿತ ಮಂತ್ರಿಯಾಗುತ್ತಾಳೆ.

ಊಟ ಬಡಿಸುವುದರಲ್ಲಿ ಹಸಿದ ಒಡಲನ್ನು ಗಮನಿಸಿ ಇನ್ನಿಷ್ಟು ತಿನ್ನಿ, ಮತ್ತಷ್ಟು ತಿನ್ನಿ ಎನ್ನುತ್ತಾ ಆರೋಗ್ಯಕರ ಆಹಾರ ಬಡಿಸುವ ಹೆತ್ತ ತಾಯಿಯಂತಾಗುತ್ತಾಳೆ. ಆಯಾಸಗೊಂಡ, ಇಲ್ಲವೇ ನೊಂದ ಪತಿಯನ್ನು ರಮೆಯಂತೆ ರಮಿಸುವ ಲಕ್ಷ್ಮಿಯಾಗುತ್ತಾಳೆ. ಮಲಗುವಾಗ ಅರಸಿಕತೆಯನ್ನು ದೂರಮಾಡಿ ರಸಿಕತೆಯನ್ನು ತುಂಬಿ ನವೋಲ್ಲಾಸ ತುಂಬುವ ರಂಭೆ ಯಾಗುತ್ತಾಳೆ. ಎಷ್ಟು ಬಾರಿ ಒದ್ದರೂ ಭೂಮಿ ಹೇಗೆ ಪ್ರತಿ ಹೇಳುವುದಿಲ್ಲವೋ ಹಾಗೆ ತನ್ನ ಪತಿ ಮಾಡುವ ತಪ್ಪುಗಳನ್ನು ಕ್ಷಮಿಸುವ ಧರಿತ್ರಿ ಯಾಗುತ್ತಾಳೆ. ಇಂತಹ ಗುಣವುಳ್ಳ ಮಹಿಳೆಗೆ ಪತಿಯಾದವನು ಕೇವಲ ಒಂದು ದಿನ ಬಹುಪರಾಕ್ ಹೇಳದೆ, ನಿತ್ಯ ನೂತನ ಎನ್ನುವಂತೆ ಪ್ರೀತಿಯಿಂದ ರಮಿಸಬೇಕಲ್ಲವೇ.
( ಇದಕ್ಕೆ ಅಪವಾದಗಳು ಇವೆ).

ಇದಲ್ಲದೆ ಅಕ್ಕನಾಗಿ ಕೆಲವೊಮ್ಮೆ ತಾಯಿಯ ಸ್ಥಾನದಲ್ಲಿ ನಿಂತು ಪ್ರೀತಿ ತೋರಿಸಿ ಸೆರಗಲ್ಲಿ ತಮ್ಮನ ಕಣ್ಣೀರು ಒರೆಸುತ್ತಾಳೆ.ತಂಗಿಯಾಗಿ ಕಾಡಿ ಬೇಡಿ ಬೇಕಾದ ವಸ್ತುವನ್ನು ಅಣ್ಣನಿಂದ ಪಡೆದು ಆನಂದ ನೀಡಿ ಮನಕೆ ತಂಪೆರೆ ಯುತ್ತಾಳೆ. ಕುಟುಂಬದ ಗೌರವ ಉಳಿಸುವ ಅತ್ತಿಗೆಯಾಗಿ, ನಾದಿನಿಯಾಗಿ ನಮ್ಮನ್ನ ಸಲಹುತ್ತಾಳೆ. ಇಂತಹ ಮಹಿಳೆಗೆ ಗೌರವ ನೀಡಲು ಒಂದು ದಿನ ಮಾತ್ರ ಸೀಮಿತಗೊಳಿ ಸಬಾರದು.

ಬದಲಿಗೆ ಹೆಣ್ಣಿನ ಶೋಷಣೆ ಹಾಗೂ ಆಕೆಯ ಮೇಲಿನ ದೌರ್ಜನ್ಯವನ್ನು ಪುರುಷರು ನಿಲ್ಲಿಸಿದರೆ ಅದೇ ಮಹಿಳೆಗೆ ನೀಡುವ ಗೌರವ. ಬಾಲ್ಯದಲ್ಲಿ ಮುದ್ದಾಡಿ ಹೆತ್ತು ಹೊತ್ತು ಸಾಕಿದ ತಾಯಿಯನ್ನು ಮುದಿತನದ ವೇಳೆ ಅನಾಥಾಶ್ರಮದತ್ತ ಅಟ್ಟುವು ದನ್ನು ತಡೆಯಬೇಕು. ಈ ವಿಚಾರವಾಗಿ ತಾಯಿಯ ಘನತೆಯನ್ನು ಬಾಲ್ಯಾವಸ್ಥೆಯಲ್ಲೇ ಮಕ್ಕಳಿಗೆ ತಿಳಿ ಹೇಳುವ ಕೆಲಸ ವನ್ನು ಮಾಡುವ ಮೂಲಕ ಸಮಾಜ ಮಹಿಳೆಯ ಘನತೆ ಹೆಚ್ಚಿಸಬೇಕು.

ಪ್ರಮುಖವಾಗಿ ಸೊಸೆಯಾಗಿ ಬರುವ ಹೆಣ್ಣು ತಾನೂ ಮುಂದೆ ಮುದುಕಿಯಾಗುತ್ತೇನೆ, ಆಗ ನನ್ನ ಮಗ ನನ್ನನ್ನು ಅನಾಥಾ ಶ್ರಮಕ್ಕೆ ಸೇರಿಸಬಹುದು ಎಂಬುದನ್ನು ಮನಗಾಣಬೇಕು. ಅತ್ತೆಯನ್ನು ಅತ್ತೆಯೆಂದು ಭಾವಿಸದೆ ತಾಯಿ ಯಂತೆ ಭಾವಿಸಿದರೆ ಸಾಕು, ಅದೇ ಮಹಿಳೆ ಮಹಿಳೆಗೆ ನೀಡುವ ಗೌರವ. ಇಷ್ಟಾದರೆ ದಿನಾಚರಣೆಯ ಅಗತ್ಯವೇ ಬಾರದು ಬದಲಿಗೆ, ಸಮಾಜ ದಲ್ಲಿ ಮಹಿಳೆಯ ಗೌರವ ತಾನಾಗಿ ತಾನೇ ಹೆಚ್ಚುತ್ತದೆ.

ಕೇವಲ ಒಂದು ಕಾರ್ಯಕ್ರಮ ನಡೆಸಿ ಮಹಿಳೆಯನ್ನು ಹೊಗಳಿ ಅಟ್ಟಕ್ಕೇರಿಸಿದರೆ ಸಾಲದು. ಆಕೆಯ ಗೌರವಕ್ಕೆ ಚ್ಯುತಿ ಬಾರದಂತೆ ನಿತ್ಯ ನಾವು ನಡೆಯಬೇಕು. ಮಹಿಳೆಯೊಬ್ಬಳು ಕಲಿತರೆ ಶಾಲೆ ಯೊಂದು ತೆರೆದಂತೆ ಎಂಬ ನಾಣ್ನುಡಿಯಿದೆ. ಸದ್ಗುಣ ಶೀಲ ಸಂಪನ್ನ ಮಹಿಳೆ ಸಮಾಜದ ಆಸ್ತಿ. ಇಂತಹ ಲಕ್ಷೋಪ ಲಕ್ಷ ಸಹನಾಶೀಲ, ಸುಗುಣ ಸಂಪನ್ನ ಮಹಿಳೆ ಯರನ್ನು ಸಮಾಜಕ್ಕೆ ಕೊಡುಗೆ ಯಾಗಿ ನೀಡಲು ಪುರುಷರ ಜತೆ ಮಹಿಳೆಯರೂ ಈ ದಿಸೆಯಲ್ಲಿ ಹೆಜ್ಜೆ ಹಾಕಬೇಕು.

ತಾಯಿ, ಪತ್ನಿ, ಮಗಳು, ಅಕ್ಕ, ಅತ್ತಿಗೆ, ತಂಗಿ, ನಾದಿನಿಯಾಗಿ ನಮ್ಮನ್ನು ನಿರಂತರ ಸಲಹುವ ಭರತಕುಲ ಸ್ತ್ರೀ ನಿನಗಿದೋ ನಿರಂತರ ನಮ್ಮ ನಮನ..

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಮಟ್ಟು ದೇವಳದಲ್ಲಿ ರಾಘವನ ಜನನ

ಪಲಿಮಾರು ಮಠ ಪರಂಪರೆಯ ರಾಮ ನವಮಿಯ ಆಚರಣಾ *ಇತಿಹಾಸದಲ್ಲೇ ಮೊದಲ ಬಾರಿಗೆ* ಮಟ್ಟು ದೇವಳದಲ್ಲಿ ಯತಿದ್ವಯರ ಆಶೀರ್ವಾದದೊಂದಿಗೆ *ಶ್ರೀರಾಮ ದೇವರ ರಥೋತ್ಸವ* ಬಹು ವಿಜ್ರಂಭಣೆಯಿಂದ ಜರುಗಿತು. ಈ ಪರ್ವ ಕಾಲದಲ್ಲಿ *ದೇವಳದ ಹಸುವು ಗಂಡು...

​ ​ಜಿಲ್ಲೆಯಲ್ಲಿ ಹೆಚ್ಚು ಕೋವಿಡ್ ಟೆಸ್ಟ್ ನೆಡೆಸಿ, ಸೋಂಕಿತರಿಗೆ ಕೂಡಲೇ ಚಿಕಿತ್ಸೆ ನೀಡಿ :​ ಉಸ್ತುವಾರಿ ಸಚಿವ ಬೊಮ್ಮಾಯಿ

ಉಡುಪಿ​: ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ​ಪರೀಕ್ಷೆಗಳನ್ನು ನೆಡೆಸಿ, ತ್ವರಿತವಾಗಿ​ ಸೋಂಕಿತರನ್ನು ಪತ್ತೆ ಹಚ್ಚಿ, ಕೂಡಲೇ ಅವರಿಗೆ ಚಿಕಿತ್ಸೆ ಆರಂಬಿಸುವುದರ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆ​ ಹರಡುವುದನ್ನು ನಿಯಂತ್ರಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು , ನಿಲರ್ಕ್ಷಿಸದರೆ...

ಉಡುಪಿ: ಶಿರೂರು ಮಠಕ್ಕೆ ನೂತನ ಪೀಠಾಧಿಪತಿ ನೇಮಕ ವಿಚಾರ: ಶ್ರೀ ಲಕ್ಷ್ಮಿವರ ತೀರ್ಥರ ಪೂರ್ವಾಶ್ರಮ ಸಹೋದರರಿಂದಲೇ ಆಕ್ಷೇಪ!

ಉಡುಪಿ: ಉಡುಪಿ ಶಿರೂರು ಮಠಕ್ಕೆ ನೂತನ ಪೀಠಾಧಿಪತಿ ನೇಮಕಕ್ಕೆ ಸಹೋದರನಿಂದಲೇ ಆಕ್ಷೇಪ ವ್ಯಕ್ತವಾಗಿದೆ. ರಾಮನವಮಿಯಂದು ನೂತನ ಪೀಠಾಧಿಪತಿ ನೇಮಕ ದ್ವಂದ್ವ ಮಠವಾದ ಸೋದೆ ಮಠಾಧೀಶ ರಿಂದ ಘೋಷಣೆಯಾಗಿದ್ದು ಇದಕ್ಕೆ ಶ್ರೀ ಲಕ್ಷ್ಮಿವರ ತೀರ್ಥರ...

ವಾರಾಂತ್ಯದಲ್ಲಿ ಈಗಾಗಲೇ ನಿಗದಿಪಡಿಸಿದ್ದ ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಅವಕಾಶ ನೀಡಬೇಕು – ರಘುಪತಿ ಭಟ್ ಆಗ್ರಹ

ಉಡುಪಿ: ರಾಜ್ಯದಲ್ಲಿ ವಾರಾಂತ್ಯ ಸಂಪೂರ್ಣ ಕರ್ಫ್ಯೂ ಜಾರಿಗೊಳಿಸಿದ ದಿನ ಈಗಾಗಲೇ ನಿಗದಿಪಡಿಸಿದ್ದ ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಜನ ನಿಗದಿಪಡಿಸಿದ ದಿನದಂದೆ ಅವಕಾಶ ಕಲ್ಪಿಸುವಂತೆ ಶಾಸಕ ರಘುಪತಿ ಭಟ್ ಆಗ್ರಹ ವ್ಯಕ್ತಪಡಿಸಿದ್ದಾರೆ. ಕೋವಿಡ್ - 19...

ಶೀರೂರು ಮಠಕ್ಕೆ ನೂತನ ಉತ್ತರಾಧಿಕಾರಿ​ಯಾಗಿ ​ಅನಿರುದ್ದ ಸರಳತ್ತಾಯ​ ​ಆಯ್ಕೆ

ಉಡುಪಿ: 16ವರ್ಷ ವಯಸ್ಸಿನ ಅನಿರುದ್ದ ​​​​ಸರಳತ್ತಾಯ​ ​ಎಂಬವರನ್ನು ಉಡುಪಿ ಅಷ್ಠ ಮಠಗಳಲ್ಲೊಂದಾದ ಶಿರೂರು ಮಠದ 31 ನೇಯ ಪೀಠಾಧಿಪತಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಸೋದೆ ಮಠದ ​ಶ್ರೀಶ್ರೀ  ವಿಶ್ವವಲ್ಲಭತೀರ್ಥ ಸ್ವಾಮೀಜಿ ಹೇಳಿದರು.ಅವರು ಮಂಗಳವಾರ ಹಿರಿಯಡ್ಕ ಬಳಿಯ...
error: Content is protected !!