ಶ್ರೀಮನ್ಮಧ್ವಾಚಾರ್ಯ ಮುನಿವರ್ಯ ಮಹಂನಮಾಮಿ~ ರಾಜೇಶ್ ಭಟ್ ಪಣಿಯಾಡಿ

ಆತ್ಮೀಯರೆ ತಮಗೆಲ್ಲ ತಿಳಿದಿರುವಂತೆ 15ನೇ ತಾರೀಖು ಶುಕ್ರವಾರ ಆಚಾರ್ಯ ಮಧ್ವರು ಭೂಮಿಯಲ್ಲಿ ಅವತರಿಸಿದ ಒಂದು ಸಂತಸದ ಪರ್ವದಿನ. 12 ವರ್ಷಗಳ ಕಾಲ ಶ್ರೀಮದನಂತೇಶ್ವರ ಸ್ವಾಮಿಯ    ಸತತ ದರ್ಶನ ಉಪಾಸನೆಯ ಫಲವಾಗಿ ಮಧ್ಯಗೇಹ ಭಟ್ಟ ಯಾನೆ ನಡಿಲ್ಲಾಯ ದಂಪತಿಗಳಿಗೆ ಒಂದು ಗಂಡುಮಗು ಜನ್ಮಿಸಿ ಮನೆತುಂಬಿತು. ಆ ಮಗು ತನ್ನ ಚಿಕ್ಕಪ್ರಾಯದಲ್ಲೇ ಅನೇಕ ಪವಾಡಗಳನ್ನು ಪ್ರದರ್ಶಿಸಿದ ವಿಷಯ ತಿಳಿಯದವರಿಲ್ಲ.

ಹುಣಸೆ ಬೀಜದಿಂದ ತಂದೆಯ ಸಾಲ ತೀರಿಸಿದ, ಎತ್ತಿನ ಬಾಲ ಹಿಡಿದು ಊರು ಸುತ್ತಿದಂತಹ ಕಥೆಗಳು ಹಲವಾರು. ಹಾಗಾಗಿ ಜ್ಞಾನಕೋಶವಾದ ಇವರು ತನ್ನ ತಂದೆಯನ್ನೇ, ಗುರುವನ್ನೇ, ಹಲವಾರು ಶ್ರೇಷ್ಟ ವಿದ್ವಾಂಸರನ್ನೇ ವಾದದಲ್ಲಿ ಸೋಲಿಸಿದವರು.

ಇಂತಹ ಶ್ರೇಷ್ಟ ಆಚಾರ್ಯ ಮಹಾಪುರುಷ ಜಟ್ಟಿಯು, ಶಿಲ್ಪಿ ಯೂ, ಒಳ್ಳೆಯ ವೀಣಾ ವಾದಕನೂ, ಸಂಗೀತಗಾರನೂ ಆಗಿದ್ದು ಸಕಲಕಲಾವಲ್ಲಭನಾಗಿದ್ದ ಇವರು ಹಿಂದಿನ ತ್ರೇತಾಯುಗದಲ್ಲಿ ಹನುಮಂತನ ಅವತಾರ ತಳೆದಿದ್ದು ದ್ವಾಪರದಲ್ಲಿ ಮಧ್ಯಮ ಪಾಂಡವ ಭೀಮನಾಗಿ ಮೆರೆದಿದ್ದು ಈ ದೇವಾಂಶ ಸಂಭೂತ ಕಲಿಯುಗದಲ್ಲಿ ತಮ್ಮ ಮೂರನೇ ಅವತಾರ ರೂಪ ಆಚಾರ್ಯ ಮಧ್ವರಾಗಿ ನಮ್ಮ ಉಡುಪಿಯ ಸಮೀಪದ ಕುಂಜಾರುಗಿರಿಯ ಪಾಜಕದಲ್ಲಿ ಜನ್ಮ ತಳೆದಿರುವುದು ನಮ್ಮೂರಿನ ಜನಕ್ಕೆ ಅತ್ಯಂತ ಹೆಮ್ಮೆಯ ವಿಷಯ.

ಈ ಮಹಾತ್ಮರು ದ್ವೈತ ಸಿದ್ಧಾಂತದ ಮೂಲ ಪ್ರತಿಪಾದಕರಾಗಿದ್ದು ದೇವರನ್ನು ಕಾಣುವ ಸುಲಭ ವಿಧಾನ ವನ್ನು ಈ ಲೋಕಕ್ಕೆ – ಈ ಜಗತ್ತಿಗೆ ನೀಡಿ ನಮ್ಮೆಲ್ಲರನ್ನುಪಾವನರಾಗಿಸಿದರು. ಮೂರು ಲೋಕದ ಒಡೆಯ ಕಡಗೋಲು ಹಾಗೂ ಅದರ ನೇಣನ್ನು ಹಿಡಿದ ಶ್ರೀಕೃಷ್ಣನ ವಿಗ್ರಹವನ್ನು ಉಡುಪಿಯಲ್ಲಿ ನೆಲೆಗೊಳಿಸಿ ಅವನ ಪೂಜೆಗೆ ಅಷ್ಟ ಮಠಗಳನ್ನು ಸ್ಥಾಪಿಸಿದ ಗುರು ಶ್ರೇಷ್ಟ ಶ್ರೀಮದಾಚಾರ್ಯರು.

ಜೀರ್ಣೋದ್ಧಾರ ಗೊಳ್ಳುತ್ತಿರುವ ಪಣಿಯಾಡಿ ದೇವಳದ ಅಷ್ಟಮಂಗಲದ ಪ್ರಶ್ನೆಯಲ್ಲಿ ತಿಳಿದು ಬಂದ ವಿಚಾರದಂತೆ ಶೀಮದಾನಂದತೀರ್ಥಮುನಿವರ್ಯರು ನಮ್ಮ ಪಣಿಯಾಡಿ ಪುರದಲ್ಲಿ ವಿರಾಜಿತನಾಗಿರುವ ಅನಂತ ಪದ್ಮನಾಭನ ದಿವ್ಯ ಸನ್ನಿಧಿ ಗೂ ಭೇಟಿ ನೀಡಿ ಈ ಸ್ಥಳದಲ್ಲೊಂದು ಗ್ರಂಥ ರಚನೆ ಮಾಡಿದ ಐತಿಹ್ಯ ತಿಳಿದು ಬಂದಿದೆ.

ಅಷ್ಟೇ ಅಲ್ಲದೆ ಅವರ ಪೂರ್ವಾಶ್ರಮದ ತಮ್ಮ ಹಾಗೂ ಶಿಷ್ಯ ವಿಷ್ಣು ತೀರ್ಥರು ಕೂಡ ಇಲ್ಲಿಗೆ ಆಗಮಿಸಿ ಧ್ಯಾನ ಮಾಡುತ್ತಿದ್ದ ವಿಷಯ ಮಧ್ವ ವಿಜಯದಲ್ಲಿ ಉಲ್ಲೇಖವಾಗಿದೆಯಂತೆ. ಒಟ್ಟಾರೆ ಇಂತಹ ಮಹಾನ್ ಮಹಿಮ ಶ್ರೀಮನ್ಮಧ್ವಾಚಾರ್ಯರು ಈ ಭೂಮಿಯಲ್ಲಿ ಈ ನಮ್ಮ ನೆಲದಲ್ಲಿ ಅವತರಿಸಿದ ಸಂಭ್ರಮದ ದಿನವನ್ನು ನಮ್ಮ ಈ ಶೇಷಾಸನ ಲಕ್ಷ್ಮೀಅನಂತ ಪದ್ಮನಾಭನ ಸನ್ನಿಧಿಯಲ್ಲಿ ಆಚರಿಸಲು ನಿರ್ಧರಿಸಿದ್ದು ಪುತ್ತಿಗೆ ಶ್ರೀಮಠದ ಪರಮ ಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಅನುಜ್ಞೆ ಹಾಗೂ ಪ್ರೋತ್ಸಾಹದ ನೆಲೆಯಲ್ಲಿ ಹಾಗೂ ಪಣಿಯಾಡಿ ಅನಂತ ವಿಪ್ರ ಬಳಗದ ಸಹಕಾರದ ಜೊತೆಗೆ ಶುಕ್ರವಾರ ಬಹಳ ವಿಜ್ರಂಭಣೆಯಿಂದ ಮಧ್ವಜಯಂತಿಯನ್ನು ಆಚರಿಸಲಾಯಿತು.

ಆ ದಿನ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿ ತಾವು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿ ಶ್ರೀಮದಾ ಚಾರ್ಯರ ಪರಮ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಮ್ರ ವಿನಂತಿ. ದಿನಾಂಕ 15 ಶುಕ್ರವಾರದ ಮುಂಜಾನೆ 9-11 ರ ವರೆಗೆ ವಾಯುಸ್ತುತಿ ಪಾರಾಯಣ ನಡೆಯಿತು. ಜೊತೆಗೆ ಋತ್ವಿಜರಿಂದ ಪುನಃ ಶ್ಚರಣೆ ಹೋಮ ಸಂಪನ್ನಗೊಂಡಿತು. ಮಧ್ವವಿಜಯ ಹಾಗೂ ಪವಮಾನ ಸೂಕ್ತ ಪಾರಾಯಣ ವನ್ನೂ ಆಚಾರ್ಯ ಶ್ರೇಷ್ಟರು ನಡೆಸಿಕೊಟ್ಟರು.

ತದನಂತರ 11.30ಕ್ಕೆ ವೇದ ಮೂರ್ತಿ ಹಾಗೂ ಶ್ರೇಷ್ಟ ವಿದ್ವಾಂಸರಾದ ಶ್ರೀ ರಾಮನಾಥ ಆಚಾರ್ಯರು ಆಚಾರ್ಯ ಮಧ್ವರ ಜೀವನ ತತ್ವಗಳ ಬಗ್ಗೆ ಹಾಗೂ ಭಗವಂತನ ಚಿಂತನೆಗಳಿಂದ ಆನಂದ ಪಡೆಯುವ ಬಗೆಯ ಬಗ್ಗೆ ಪ್ರವಚನ ಗೈದು ಸುಮಾರು ಒಂದು ಒಂದುವರೆ ಗಂಟೆಗಳ ಕಾಲ ಬಹಳಷ್ಟು ವಿಷಯಗಳ ಬಗ್ಗೆ ಚಿಂತನೆ ಮಂಥನೆ ನಡೆಸಿಕೊಟ್ಟರು.

ಅವರು ಮಧ್ವಾಚಾರ್ಯರ ಬಗ್ಗೆ ಮಾತನಾಡುತ್ತಾ ಅಚ್ಯುತ ಪ್ರೇಕ್ಷಾ ಚಾರ್ಯರು : ಒಬ್ಬ ಮನುಷ್ಯಒಳ್ಳೆಯ ಹೆಂಡತಿ ಮಕ್ಕಳನ್ನು ಪಡೆಯುವುದು ಒಬ್ಬ ಗುರು ಒಳ್ಳೆಯ ಶಿಷ್ಯನನ್ನು ಪಡೆಯುವುದು ಕೂಡ ಪೂರ್ವಜನ್ಮ ಸುಕ್ರುತ ಅದಕ್ಕಿಂತ ಆನಂದ ಬೇರೊಂದಿಲ್ಲ ಎನ್ನುತ್ತಾರೆ. ಹಾಗೆಯೇ ಕರ್ಮ ಯಜ್ಞ, ಜ್ಞಾನಯಜ್ಞ ಹೀಗೆ ಯಜ್ಞಗಳ ವಿಧ ಆಚರಣೆಗಳ ಬಗ್ಗೆ ಮಾಹಿತಿ ನೀಡಿದರು. ಹರಿಯೇ ಸರ್ವೋತ್ತಮ ಎಂಬ ಆಚಾರ್ಯ ಮಧ್ವರ ತತ್ವಗಳನ್ನು ನೆನಪಿಸಿದರು.

ಹೋಮ ಹವನದ ಪೂರ್ಣಾಹುತಿ ಹಾಗೂ ಮಂಗಳಾರತಿಯ ನಂತರ ಸ್ಥಳ ದೇವತೆ ಪುಷ್ಪಾಲಂಕೃತ ಶ್ರೀ ಶೇಷಾಸನ ಅನಂತ ಪದ್ಧನಾಭ ದೇವರಿಗೆ ಮಹಾಮಂಗಳಾರತಿ, ಅನ್ನಸಂತರ್ಪಣೆ ನೆರವೇರಿತು. ನಮ್ಮ ಜನರಲ್ಲಿ ದ್ವೈತ ಸಿದ್ಧಾಂತದ ಅರಿವು ಮೂಡಿಸುವ ನಿಟ್ಟಿನಲ್ಲಿ ತಾವೇ ಮುಂದೆ ನಿಂತು ಆಸಕ್ತಿ ತೋರಿಸಿ ಈ ಕಾರ್ಯಕ್ರಮಗಳ ಸಂಪೂರ್ಣ ವೆಚ್ಚದ ಜವಾಬ್ದಾರಿಯನ್ನೂ ಹೊತ್ತು ಅಬುದಾಬಿಯಲ್ಲಿ ನೆಲೆಸಿರುವ ಅಲ್ಲಿ ಒಂದು ಉನ್ನತ ಹುದ್ದೆಯಲ್ಲಿದ್ದುಕೊಂಡೇ ಆಧ್ಯಾತ್ಮದ ಬಗ್ಗೆ ಒಲವು ಇಟ್ಟುಕೊಂಡು ಹೆಚ್ಚಿನ ವಿಷಯಗಳ ಬಗ್ಗೆ ಸಾಧನೆ ಗೈದು ಝಾಮ್ ಆ್ಯಪ್ ಇತ್ಯಾದಿಗಳ ಮೂಲಕವೂ ತಿಂಗಳಿಗೊಂದು ಎರಡು ವೇದ ಪ್ರವಚನ ಗಳನ್ನು ನಡೆಸಿಕೊಡುತ್ತಿರುವ ಆಚಾರ್ಯ ತತ್ವಗಳಿಗೆ ಮಾರುಹೋಗಿರುವ ಶ್ರೀಮತಿ ಮತ್ತು ಶ್ರೀ ವಿಜಯ ಹಾಗೂ ಮುರಳೀಕೃಷ್ಣ ತಂತ್ರಿ ದಂಪತಿಗಳು ಭರಿಸಿರುವುದು ಬಹಳ ಸಂತಸದ ವಿಷಯ.

ಆಚಾರ್ಯ ಮಧ್ವರ ತತ್ವಗಳು ನಮ್ಮ ನೆಲದಲ್ಲಿ ಇನ್ನಷ್ಟು ಬೆಳಕನ್ನು ಕಂಡು ನಮ್ಮೆಲ್ಲರ ಜೀವನಕ್ಕೂ ಅವರ ತತ್ವಗಳು ದಾರಿದೀಪವಾಗಲಿ.

 
 
 
 
 
 
 
 
 
 
 

Leave a Reply