ಕೃಷ್ಣಾವತಾರ ಕೇವಲ ಧರ್ಮ ಸಂಸ್ಥಾಪನೆಗೆ ಮಾತ್ರವಲ್ಲ, ಪರಿಸರ ಸಂರರಕ್ಷಣೆಗೂ ಮಹತ್ವ ನೀಡಿದೆ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ

ಮೈಸೂರು: ಕೃಷ್ಣಾವತಾರ ಕೇವಲ ಧರ್ಮ ಸಂಸ್ಥಾಪನೆಗೆ ಮಾತ್ರವಲ್ಲ, ಪರಿಸರ ಸಂರರಕ್ಷಣೆಗೂ ಮಹತ್ವ ನೀಡಿದೆ ಎಂದು ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಹೇಳಿದರು.  ಉಡುಪಿ ಭಂಡಾರಕೇರಿ ಮಠ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಶ್ರೀವೇದವ್ಯಾಸರ ರಾಷ್ಟ್ರೀಯ ಜಯಂತಿ, ಶ್ರೀವಿದ್ಯಾಮಾನ್ಯತೀರ್ಥರ ಆರಾಧನೋತ್ಸವ ಸಮಾರೋಪದಲ್ಲಿ ` ಇತಿಹಾಸ ಮತ್ತು ಪುರಾಣಗಳಲ್ಲಿ ಕೃಷ್ಣನ ಪಾತ್ರ ಚಿಂತನೆ’ ಕುರಿತ ವಿಚಾರಗೋಷ್ಠಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಕೃಷ್ಣ ಅನೇಕ ಬಾಲ ಲೀಲೆಗಳನ್ನು ತೋರಿದ್ದಾನೆ. ದುಷ್ಟರ ಸಂಹಾರವನ್ನೂ ಮಾಡುವ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆದಿದ್ದಾನೆ. ಚತುರ ಬುದ್ಧಿಮತ್ತೆ ಯಿಂದ ರಾಜಕೀಯ ತಂತ್ರಗಳನ್ನು ತೋರಿಸಿದ್ದಾನೆ. ಚಾಣಾಕ್ಷತನದಿಂದ ಕುರುಕ್ಷೇತ್ರ ಯುದ್ಧ ನಿರ್ವಹಿಸಿದ್ದಾನೆ. ಇಷ್ಟು ಮಾತ್ರವಲ್ಲ, ಆತನಲ್ಲಿ ವಿಶೇಷವಾದ ಪರಿಸರ ಕಾಳಜಿ ಇರುವುದನ್ನೂ ನಾವು ಗಮನಿಸಬೇಕು. ಇದು ಇಂದಿನ ಅಗತ್ಯವೂ ಹೌದು ಎಂದು ಅವರು ಹೇಳಿದರು.
ಪರಿಸರ ಸಂರಕ್ಷಣೆಯ ಕೂಗು ಇಂದು ಜಾಗತಿಕ ಮಟ್ಟದಲ್ಲಿ ಕೇಳಿಬರುತ್ತಿದೆ. ಇದು ದ್ವಾಪರ ಯುಗದಲ್ಲೂ ಇತ್ತು.  ಎರಡು ಬಾರಿ ಅರಣ್ಯವು ಕಾಡ್ಗಿಚ್ಚಿನಿಂದ ನಾಶವಾಗುವ ಹಂತದಲ್ಲಿದ್ದಾಗ ಕಾಡ್ಗಿಚ್ಚನ್ನು ಪಾನ ಮಾಡಿ ಅರಣ್ಯಸಂರಕ್ಷಣೆಯನ್ನು ಮಾಡಿದ್ದಾನೆ. ಅದೇ ರೀತಿ ವಿಷವೃಕ್ಷದ  ರೂಪದಲ್ಲಿರುವ ಅಸುರರನ್ನು ಸಂಹರಿಸುವ ಮೂಲಕ ವಿಷವೃಕ್ಷದ  ಗಾಳಿಯಿಂದ ಪರಿಸರವನ್ನು ಕೂಡ ಕಾಪಾಡಿದ್ದಾನೆ.
ಗೋವರ್ಧನ ಪರ್ವತವು ಬೆಂಕಿಯಿ೦ದ ಆವೃತ್ತವಾದಾಗ ನೀರನ್ನು ಚಿಮ್ಮಿಸಿ ಕೃಷ್ಣ ಬೆಟ್ಟವನ್ನು ಸಂರಕ್ಷಿಸಿದ. ಯಮುನಾ ನದಿಯು ಕಾಳಿಂಗನ ವಿಷದಿಂದ ಪೂರಿತವಾದಾಗ ಕಾಳಿಂಗನನ್ನು ಮರ್ದನ ಮಾಡುವ ಮೂಲಕ ಕೃಷ್ಣ ನದಿ ಸಂರಕ್ಷಣೆ ಮಾಡಿದ. ನಾಯಕನಾದವನು ನೆಲ- ಜಲಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಸಾರಿದ. ಈ ಮೂಲಕ ಪರಿಸರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವೆಂದು ತಿಳಿ ಹೇಳಿದ. ನದಿ, ಬೆಟ್ಟ, ಗುಡ್ಡ, ಅರಣ್ಯ, ಗಾಳಿ, ಆಕಾಶ- ಹೀಗೆ ಎಲ್ಲದರ ಪಾವಿತ್ರ್ಯ ಕಾಪಾಡುವ ಮೂಲಕ ಆತ ಜಗತ್ತಿಗೆ ನಿಸರ್ಗ ಪಾಠ ಹೇಳಿದ್ದಾನೆ. ಹಾಗಾಗಿ ಕೃಷ್ಣನೇ ವಿಶ್ವದ ಮೊದಲ ಪರಿಸರವಾದಿ ಎಂದು ಅವರು ಬಣ್ಣಿಸಿದರು.
ವೇದವ್ಯಾಸರ ಜಯಂತಿ ಮತ್ತು ಪರಮ ಗುರುಗಳಾದ ಶ್ರೀ ವಿದ್ಯಾಮಾನ್ಯತೀರ್ಥರ ಆರಾಧನೆಯ ಪರ್ವಕಾಲದಲ್ಲಿ ನಾವೆಲ್ಲರೂ ನಮ್ಮ ನಮ್ಮ ಪರಿಧಿಯಲ್ಲಿ ನಿಸರ್ಗ ಸ್ನೇಹಿ ಚಟುವಟಿಕೆಗಳನ್ನು ಮಾಡಬೇಕು. ನಮ್ಮ ಪರಿಸರ ಶುದ್ಧವಾಗಿದ್ದರೆ ದೇಶ ಸ್ವಚ್ಛವಾಗಿರುತ್ತದೆ ಎಂಬುದನ್ನು ಮರೆಯಬಾರದು. ವಿಶೇಷವಾಗಿ ಮಕ್ಕಳಲ್ಲಿ ಪರಿಸರದ ಅರಿವು ಮೂಡಿಸಲು ಹಿರಿಯರು ಸಂಕಲ್ಪ ಮಾಡಬೇಕು. ಆಗ ಮಾತ್ರ ಪೂಜೆ, ಆರಾಧನೆ, ಜಯಂತಿಗಳಿಗೆ ಪೂರ್ಣ ಅರ್ಥ ಬರುತ್ತದೆ. ಪೂರ್ಣಪ್ರಜ್ಞರಾದ ಶ್ರೀ ಮಧ್ವರ ಸಿದ್ಧಾಂತ ಅನುಸರಣೆ ಮಾಡುವ ಎಲ್ಲರೂ ನಿತ್ಯ ಪರಿಸರ ಕಾಳಜಿ ತೋರುವ ಕಾರ್ಯಕರ್ತರಾಗಬೇಕು ಎಂದು ಸ್ವಾಮೀಜಿ ಕರೆ ನೀಡಿದರು.
ಬೆಂಗಳೂರಿನ ಶ್ರೀ ಪೂರ್ಣಪ್ರಜ್ಞ ಸಂಶೋಧನಾ ಮಂದಿರದ ನಿರ್ದೇಶಕ ಮತ್ತು ಹಿರಿಯ ವಿದ್ವಾಂಸ ಡಾ. ನಾಗಸಂಪಿಗೆ ಆನಂದತೀರ್ಥಾಚಾರ್ಯ ಉಪನ್ಯಾಸ ನೀಡಿ, ಭಗವಾನ್ ಶ್ರೀಕೃಷ್ಣ  ಭೂಭಾರ ಹರಣ ಮಾಡಿದ್ದಾನೆ. ಇದೇ ಸಂದರ್ಭ ಮರ, ಗಿಡ, ಬಳ್ಳಿಗಳನ್ನೂ ಮಕ್ಕಳಂತೆ ಪ್ರೀತಿಸಿದ್ದಾನೆ. ನಿಸರ್ಗಕ್ಕೆ ಹತ್ತಿರವಾದ ಪಾತ್ರ ಅವನದು. ಹಾಗಾಗಿ ನವಿಲುಗರಿ, ಬಿದಿರಿನ ಕೊಳಲುಗಳೇ ಅವನಿಗೆ ಪ್ರಿಯವಾಗಿದ್ದವು. ಗೋವುಗಳ ಸಂರಕ್ಷಣೆ, ಗೋಪಾಲಕರೊಂದಿಗೆ ಅನನ್ಯ ಪ್ರೀತಿ ಇಟ್ಟುಕೊಂಡ ಆತನ ಜೀವನ ಸಂದೇಶ ಇಂದಿಗೂ ಮಾದರಿ ಎಂದರು.
ಇವತ್ತಿನ ಸಂದರ್ಭದಲ್ಲಿ ಅನೇಕರು ಮಕ್ಕಳಿಲ್ಲ ಎಂದು ಕೊರಗುತ್ತಾರೆ. ಒಂದು ಮರ ನೆಡುವುದರಿಂದ ೧೦ ಮಕ್ಕಳನ್ನು ಬೆಳೆಸಿದ ಪುಣ್ಯ ಬರುತ್ತದೆ ಎಂದು ಶಾಸ್ತçಗಳೇ ಸಾರಿವೆ. ಇದನ್ನು ಅರಿತು ನಡೆಯೋಣ ಎಂದರು. ನ೦ತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸುವಿದ್ಯಾ ಮತ್ತು ಶ್ರೀಲಕ್ಷ್ಮೀ ಯದುನಂದನ ಭರತನಾಟ್ಯ ಪ್ರದರ್ಶನ  ಗಮನ ಸೆಳೆಯಿತು.
 
 
 
 
 
 
 
 
 
 
 

Leave a Reply