ಮುದ್ದುಕೃಷ್ಣನ ಗೌರೀ ~ ಪಿ.ಲಾತವ್ಯ ಆಚಾರ್ಯ, ಉಡುಪಿ.

ಮುದ್ದುಕೃಷ್ಣನ ಐದನೇ ವರ್ಷದ ಹುಟ್ಟುಹಬ್ಬವನ್ನು ಬಹುವೈಭವದಿಂದ ಆಚರಿಸಬೇಕೆಂದು ನಂದಗೋಪ ನಿರ್ಧರಿ ಸಿದ್ದ. ಇಡೀ ನಂದಗೋಕುಲವೇ ತಳಿರು ತೋರಣಗಳಿಂದ ಬಣ್ಣಬಣ್ಣದ ಹೂಗಳಿಂದ ಶ್ರಂಗಾರಗೊಂಡಿತ್ತು. ಮರು ದಿನ ಜರಗಲಿದ್ದ ಕೃಷ್ಣನ ಹಬ್ಬಕ್ಕೆಊರಿಗೆ ಊರೇ ಜಗಮಗವೆಂದು ಮಿಂಚುತ್ತಿತ್ತು. ಗೋಪಾಲಕರಿಗಂತೂ ಖುಷಿಯೇ ಖುಷಿ. ಹಬ್ಬದ ಸಿದ್ಧತೆಯಲ್ಲಿ ಪೂರ್ಣ ತಲ್ಲೀನರಾಗಿದ್ದರು. ನಂದಗೋಪನು ಗೋಪಾಲಕರಿಗಾಗಿ ವಿಶೇಷ ಸ್ಪರ್ಧೆ ಆಯೋಜಿಸಿದ್ದ. ಸ್ಪರ್ಧೆ ಏನೆಂದರೆ ತಮ್ಮ ಆಕಳುಗಳನ್ನು ಸುಂದರವಾಗಿ ಸಿಂಗರಿಸುವವರಿಗೆ ವಿಶೇಷ ಬಹುಮಾನ ಸಮ್ಮಾನ ಎಲ್ಲವೂ ನಿಗದಿಯಾಗಿತ್ತು. ನಂದಗೋಕುಲ ಸಮೀಪವಿರುವ ಹಳ್ಳಿಗಳಿಗೆಲ್ಲಾ ಆಹ್ವಾನ ತಲುಪಿತ್ತು.ನಂದಗೋಕುಲದ ಪಕ್ಕದಲ್ಲೇ ರಾಜಪುರ ಎಂಬ ಹಳ್ಳಿಯಲ್ಲಿ ಗೋಪಾಲಕರ ದೊಡ್ಡ ಪಂಗಡವೇ ಇತ್ತು. ಅಲ್ಲೂ ಕೂಡಾ ನೂರಾರು ಸುಂದರವಾದ ದನ ಕರುಗಳು ಇದ್ದವು. ಬೆಳ್ಳಿ ಎಂಬ ದನಕ್ಕೆ ಕೆಲವು ತಿಂಗಳ ಹಿಂದೆ ಚೆಂದದ ಪುಟ್ಟ ಕರುವೊಂದು ಜನಿಸಿತ್ತು. ನಸು ಕೆಂಪು ಬಣ್ಣದ ಈ ಕರುವಿನ ಹೆಸರು ಗೌರೀ. ಈ ಗೌರಿಯು ಅನೇಕ ಭಾರೀ ಮೇಯುತ್ತಾ ಕೃಷ್ಣನ ಮನೆಯ ಮುಂಭಾಗಕ್ಕೆ ಬಂದಿತ್ತು. ಬಾಲಕೃಷ್ಣನು ಈ ಗೌರಿಯನ್ನು ನೋಡುತ್ತಿದ್ದಂತೆ ಓಡೋಡಿ ಬಂದು ಮುದ್ದಾಡುತ್ತಿದ್ದ. ಗೌರೀ ಅಂದರೆ ಕೃಷ್ಣನಿಗೆ ಅಷ್ಟೊಂದು ಪ್ರೀತಿ.ಗೌರಿಯೂ ಕೂಡಾ ಕೃಷ್ಣನನ್ನು ಕಂಡಕೂಡಲೇ ಬಾಲ ಏರಿಸಿ ಕುಣಿದು ಕುಪ್ಪಳಿಸುತ್ತಿತ್ತು. ದೂರ ಓಡಿ ಸಾಗಿ ಒಂದೆ ರಡು ಸುತ್ತುಹಾಕಿ ಮತ್ತೆ ಕೃಷ್ಣನ ಬಳಿ ಬರುತ್ತಿತ್ತು. ತನ್ನ ಮೊಗದಿಂದ ಕೃಷ್ಣನ ಬೆನ್ನನ್ನು ನೇವರಿಸುತ್ತಿತ್ತು. ಈ ಗೌರಿಯೂ ಕೂಡಾ ಕೃಷ್ಣನ ಹುಟ್ಟುಹಬ್ಬಕ್ಕೆ ಆಗಮಿಸಲು ಸಿದ್ದಳಾಗಿದ್ದಳು. ಕೃಷ್ಣನ  ಹುಟ್ಟು ಹಬ್ಬದಂದು ಪ್ರಾತಃ ಕಾಲದಲ್ಲೇ ಗೋಪಾಲಕರೆಲ್ಲ ಎದ್ದು ಕೃಷ್ಣನ ಮನೆಗೆ ತೆರಳಲು ಹಾಗೆಯೇ ಅಲ್ಲಿ ನಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಿದ್ಧತೆ ನಡೆಸುತ್ತಿದ್ದರು.

ಎಲ್ಲಾ ಆಕಳುಗಳನ್ನು ಯಮುನಾ ನದಿಗೆ ಕರೆದುಕೊಂಡು ಹೋಗಿ ಅವುಗಳ ಮುಖ, ಮೈ, ಕೈ, ಕಾಲುಗಳನ್ನೆಲ್ಲಾ ತಿಕ್ಕಿ ತೊಳೆದು ಸ್ನಾನ ಮಾಡಿಸಿ ಕತ್ತಿಗೆ ಗೆಜ್ಜೆಕಟ್ಟಿ ಬೆನ್ನಿಗೆ ಬಣ್ಣದ ಬಟ್ಟೆಯನ್ನು ತೊಡಿಸಿ ತಾವೂ ಕೂಡಾ ಜುಬ್ಬ, ಪಂಚೆ, ಮುಂಡಾಸು ಧರಿಸಿ ಕೃಷ್ಣನ ಮನೆಯತ್ತ ದನಕರು ಗಳೊಂದಿಗೆ ಹೊರಟರು.ರಾಜಪುರದ ಗೋಪಾಲಕರೆಲ್ಲರೂ ಸೇರಿ ಕೃಷ್ಣನಿಗೆ ಇಷ್ಟವೆನಿಸಿದ ಕುಂಟಲಹಣ್ಣು, ಪೇರಳೆಹಣ್ಣು,ನೇರಳೆ ಹಣ್ಣು ಸೇರಿದಂತೆ ಬಗೆ ಬಗೆಯ ಹಣ್ಣುಗಳನ್ನೆಲ್ಲಾ ಹಿಂದಿನ ದಿನ ಸಂಜೆಯೇ ಕೊಯ್ದು ತಾವರೆಹೂವಿನ ದೊಡ್ಡದೊಡ್ಡ ಎಲೆಗಳಲ್ಲಿ ಸುರಿದು ಮಡಚಿ ಹಿಡಿದುಕೊಂಡಿದ್ದರು. ಅಂದು ಮುಂಜಾನೆ ಇನ್ನೂ ಸೂರ್ಯೋದಯ ಆಗಿರಲಿಲ್ಲ. ಕತ್ತಲೆ ಇನ್ನೂ ಪೂರಾ ಸರಿದಿರಲ್ಲಿಲ್ಲ.ಗೌರಿಯೂ ಕೂಡಾ ತನ್ನ ತಾಯಿಬೆಳ್ಳಿ ಮತ್ತು ಇತರ ನೂರಾರು ಆಕಳುಗಳ ಜೊತೆಸೇರಿ ಯಮುನಾ ನದಿಯ ತಟದಲ್ಲಿ ಸ್ನಾನಕ್ಕಿಳಿಯಿತು. ಅದೇ ಸಮಯದಲ್ಲಿ ಜೋರಾದ ಮಳೆ,ಗಾಳಿ ಆರಂಭವಾಯಿತು.ಗೋಪಾಲಕನೊಬ್ಬ ಪುಟ್ಟಗೌರಿಯನ್ನು ನದಿಯಲ್ಲಿ ಇರಿಸಿ ಅದರ ಮೈಕೈ ತೊಳೆಯುತ್ತಿದ್ದ. ದುರದೃಷ್ಟವಶಾತ್ ಮಳೆಗಾಳಿಯ ರಭಸಕ್ಕೆ ನದಿಯಲ್ಲಿ ಅನಿರೀಕ್ಷಿತವಾಗಿ ಪ್ರವಾಹ ಉಂಟಾಯಿತು. ಕಣ್ಣರೆಪ್ಪೆ ಮಿಟುಕಿಸುವಷ್ಟರಲ್ಲಿ ನೀರಿನ ವೇಗ ದುಪ್ಪಟ್ಟಾಗಿ ಗೋಪಾಲಕನ ಕೈಲಿದ್ದ ಪುಟ್ಟಗೌರಿಯು ನದಿಯ ಸುಳಿಯಲ್ಲಿ ಸಿಕ್ಕಿ ಪ್ರವಾಹದಲ್ಲಿ ಸಾಗಿಯೇ ಬಿಟ್ಟಿತು. ಇತರೇದನಗಳು ಅಂಬಾ ಎಂದು ಬೊಬ್ಬಿಡುತ್ತಿದ್ದವು.

ಒಂದಿಬ್ಬರು ಗೋಪಾಲಕರು ನದಿಗೆ ಹಾರಿ ಗೌರಿಯನ್ನು ಉಳಿಸಲು ಪ್ರಯತ್ನಿಸಿದರೂ ವಿಫಲವಾಯಿತು. ನೀರಿನ ಆರ್ಭಟಕ್ಕೆ ಬೆಚ್ಚಿಬಿದ್ದ ಗೋಪಾಲ ಕರು ನದಿಯಲ್ಲಿದ್ದ ಉಳಿದ ಎಲ್ಲಾ ಆಕಳುಗಳನ್ನು ಮೇಲಕ್ಕೆ ಕರೆದುತಂದರು. ಗೌರಿಯನ್ನು ಕಳಕೊಂಡ ಗೋಪಾಲ ಕರು ದುಃಖದಲ್ಲಿ ಮುಳುಗಿ ಹೋಗಿದ್ದರು. ತನ್ನ ಕಂದನನ್ನು ಕಣ್ಣೆದುರಲ್ಲೇ ಕಳಕೊಂಡ ಗೌರಿಯ ತಾಯಿ ಬೆಳ್ಳಿಯು ಕಣ್ಣೀರಿಡುತ್ತಿತ್ತು.

ರಾಜಪುರದ ಗೋಪಾಲಕರ ಸಮೂಹ ಶೋಕದಲ್ಲಿ ಸಿಲುಕಿತ್ತು.ಕೃಷ್ಣನಿಗೆ ಉಡುಗೊರೆಯಾಗಿ ನೀಡಲು ತಂದಿದ್ದ ಹಣ್ಣುಗಳೆಲ್ಲ ಮಳೆ ಗಾಳಿಯ ರಭಸಕ್ಕೆ ಚೆಲ್ಲಾಪಿಲ್ಲಿಯಾಗಿ ಚದುರಿ ಹೋಗಿದ್ದವು. ಅವರ ಯೋಜನೆಗಳೆಲ್ಲವೂ ಕೈಕೊಟ್ಟಿತ್ತು. ಗೋಪಾಲಕರ ಗುಂಪಿನ ಹಿರಿಯರೊಬ್ಬರ ಸೂಚನೆಯಂತೆ ಏನೇ ಇರಲಿ ಕೃಷ್ಣನ ಹುಟ್ಟುಹಬ್ಬಕ್ಕೆ ತೆರಳಿ ಶುಭಾಶಯ ಹೇಳಿ ಬರೋಣ ಎಂದು ಸಾಮೂಹಿಕವಾಗಿ ನಿರ್ಧರಿಸಿದರು.

ಬೆಳಿಗ್ಗೆ ಒಂಬತ್ತು ಘಂಟೆಗೆ ರಾಜಪುರದ ಗೋಪಾಲಕರು ತಮ್ಮ ಆಕಳುಗಳ ಜೊತೆಗೆ ನಂದಗೋಕುಲದಲ್ಲಿರುವ ಕೃಷ್ಣನ ಮನೆ ತಲುಪಿದರು. ಅಷ್ಟು ಹೊತ್ತಿಗಾಗಲೇ ಊರ ಪರವೂರ ಸಾವಿರಾರು ಮಂದಿ ಬಂದು ಬೆಳಗ್ಗಿನ ಉಪಾಹಾರದಲ್ಲಿ ನಿರತರಾಗಿದ್ದರು. ಎಣಿಕೆಗೂ ಮೀರಿ ಆಕಳುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಬಂದಿದ್ದವು.

ರಾಜಪುರದ ಗೋಪಾಲಕರು ಬರುತ್ತಿದ್ದಂತೆ ಯಶೋದಾ ಮಾತೆಗೆ ತುಂಬಾ ಸಂತೋಷ ವಾಯಿತು. ಆಕೆಯ ಕಣ್ಣುಗಳು ಪುಟ್ಟಗೌರಿಯನ್ನು ಹುಡುಕುತ್ತಿತ್ತು. ತಾನೇ ಎಲ್ಲಾ ಗೋಪಾಲಕರನ್ನು ಅವರ ಕುಟುಂಬವನ್ನು ಎದುರು ಗೊಂಡು ಉಪಾಹಾರದ ಸಭಾಂಗಣಕ್ಕೆ ಕರೆದು ಕೊಂಡುಹೋದಳು.ರಾಜಪುರದ ದನಕರುಗಳು ಸ್ಪರ್ಧೆಯ ಅಂಗಣಕ್ಕೆ ತೆರಳಿದವು.

ಯಶೋದಾ ಮಾತೆಯು ಪ್ರತಿಯೊಬ್ಬರ ಯೋಗ ಕ್ಷೇಮವನ್ನು ವಿಚಾರಿಸುತ್ತಾ ರಾಜಪುರದ ಗೋಪಾಲಕರೊಡನೆ “ನಮ್ಮ ಗೌರಿ ಹೇಗಿದ್ದಾಳೆ” ಎಂದು ಕೇಳುತ್ತಿದ್ದಂತೆ ಗೋಪಾಲಕರಿಗೆ ದುಃಖವಾದರೂ ತೋರ್ಪಡಿಸದೆ “ಇಲ್ಲೇ ಎಲ್ಲೋ ಇದ್ದಾಳೆ” ಎಂದು ಹಾರಿಕೆಯ ಉತ್ತರ ನೀಡಿದರು.ಆದರೆ ಅಲ್ಲಿ ಆಗಮಿಸಿದ್ದ ಸಾವಿರಾರು ಮಂದಿ ಗೋಪಾಲಕರಿಗೆ, ಅತಿಥಿಗಳಿಗೆ ಗೌರಿ ನೀರಲ್ಲಿ ಮುಳುಗಿದ ಸುದ್ದಿಯು ಆಗಲೇ ತಿಳಿದಿತ್ತು.

ಆಗಮಿಸಿದ ಅತಿಥಿಗಳೆಲ್ಲರೂ ಕೃಷ್ಣನು ಎಲ್ಲಿದ್ದಾನೆ ಎಂದು ಯಶೋದೆಯನ್ನು ಕೇಳಿದರು.”ಆತ ತನ್ನ ಅಣ್ಣ ಮತ್ತು ತಂದೆಯೊಡನೆ ಇಂದಿನ ಸ್ಪರ್ಧಾ ವಿಜೇತರನ್ನು ಆಯ್ಕೆಮಾಡಲು ಇಲ್ಲೇ ತೋಟಕ್ಕೆ ತೆರಳಿದ್ದಾನೆ. ಸ್ವಲ್ಪ ಹೊತ್ತಲ್ಲೇ ಬಂದು ಬಿಡ್ತಾನೆ” ಎಂದು ಹೇಳಿ ಮಾತೆಯು ಮುಂದೆ ಸಾಗಿದಳು. ಯಾವ ಹಸು ಕರುವನ್ನು ಕೃಷ್ಣ ಇಷ್ಟಪಟ್ಟು ಆಯ್ಕೆಮಾಡಿ ಬಹುಮಾನ ನೀಡುತ್ತಾನೆ ಅನ್ನೋದು ಎಲ್ಲಾ ಗೋಪಾಲಕರಿಗೆ ಕಾತರದ ವಿಷಯವಾಗಿತ್ತು.

ಸ್ವಲ್ಪ ಹೊತ್ತು ಕಳೆದಿರಬಹುದು. “ಬಾಲಕೃಷ್ಣನು ಸ್ಪರ್ಧೆಯಲ್ಲಿ ವಿಜಯಗಳಿಸಿದ ಹಸು ಮತ್ತು ಕರುವಿನ ಜೊತೆಗೂಡಿ ಬರುತ್ತಿದ್ದಾನೆ” ಎಂದು ಜನ ಕೂಗಿ ಕೊಳ್ಳಲಾರಂಭಿಸಿದರು. ಪುಟ್ಟಕೃಷ್ಣನು ತನ್ನ ಸಹೋದರ ಬಲರಾಮ ಮತ್ತು ತಂದೆ ನಂದಗೋಪನ ಜೊತೆಸೇರಿ ಜನಸಾಗರದ ಮುಂದೆ ಪ್ರತ್ಯಕ್ಷನಾದ.

ರಾಜಪುರದ ಮಂದಿ ತಮ್ಮ ಕಣ್ಮುಂದೆ ಕಾಣುವ ದೃಶ್ಯ ನೋಡಿ ಸ್ಥಂಭಿಭೂತರಾದರು.ಆ ಊರಿನ ಹೆಂಗಳೆ ಯರಂತೂ ದುಃಖ ತಡೆಯಲಾರದೆ ಅತ್ತೇ ಬಿಟ್ಟರು. ನಂಬಲು ಸಾಧ್ಯವೇ ಇಲ್ಲದ ಘಟನೆ ಅಲ್ಲಿ ಸೃಷ್ಟಿಯಾಗಿತ್ತು.

ಅದೇನೆಂದರೆ.. ಪುಟ್ಟಕೃಷ್ಣನು ಪುಟ್ಟ ಕರುವಿನ ಮೇಲೆ ಕೂತಿದ್ದ. ಆ ಕರು ಬೇರಾವುದೂ ಅಲ್ಲ.ಅಂದು ಬೆಳಿಗ್ಗೆ ಯಮುನಾ ನದಿಯ ಪ್ರವಾಹದಲ್ಲಿ ರಾಜಪುರದ ಗೋಪಾಲಕರ ಕಣ್ಮುಂದೆಯೇ ನದಿಯಲ್ಲಿ ಮುಳುಗಿ ಹೋಗಿದ್ದ ಗೌರಿಯ ಮೇಲೆ ಬಾಲಕೃಷ್ಣನು ಕುಳಿತು ಹಣ್ಣನ್ನು ತಿನ್ನುತ್ತಾ ತನ್ನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದ. ಇನ್ನೂ ಆಶ್ಚರ್ಯ ವೆಂದರೆ ಗೋಪಾಲಕರು ತಾವರೆ ಎಲೆಗಳಿಂದ ಸುತ್ತಿ ತಂದಿದ್ದ ಹಣ್ಣುಗಳು ಮಳೆಯ ಹೊಡೆತಕ್ಕೆ ಮಣ್ಣು ಪಾಲಾಗಿತ್ತಲ್ಲವೇ.

ಹೌದು.. ತಾವರೆಎಲೆಯಲ್ಲಿ ಸುತ್ತಿ ಮಣ್ಣುಪಾಲಾಗಿದ್ದ ಬಗೆಬಗೆಯ ಆ ಹಣ್ಣುಗಳನ್ನು ಬಲರಾಮನು ಕೃಷ್ಣನಿಗೆ ತಿನಿ ಸುತ್ತಿದ್ದ. ರಾಜಪುರದ ಗೋಪಾಲಕರನ್ನು ನೋಡಿದ ಪುಟ್ಟಕೃಷ್ಣನು ಅವರನ್ನು ತನ್ನ ಬಳಿ ಕರೆದು ಅವರಿಗೂ ಹಣ್ಣು ತಿನ್ನಿಸಿದ.

ಗೌರಿ ಮತ್ತು ಅದರ ತಾಯಿ ಬೆಳ್ಳಿಯು ಸಂತಸದಲ್ಲಿ ಅಂಬಾ ಅಂಬಾ ಎಂದು ತನ್ನವರನ್ನು ಕೂಗಿ ಕರೆದು ಕುಣಿ ಯುತ್ತಿತ್ತು. ಅಲ್ಲಿಸೇರಿದ್ದ ಸಾವಿರಾರು ಮಂದಿ ಗೋಪಾಲಕರು ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಎಂಬ ಎರಡು ಅಕ್ಷರದ ಕೃಷ್ಣನಾಮಾಮೃತವೆಂಬ ಮುಕ್ತಿಯ ಮಂತ್ರದಲ್ಲಿ ಭಕ್ತಿಪರವಶರಾಗಿದ್ದರು.


ಮಧ್ಯಾಹ್ನ, ಸಂಜೆ, ರಾತ್ರಿ ಕಳೆದು ಮರುದಿನ ಮುಂಜಾನೆಯ ತನಕ ಕೃಷ್ಣನ ಹುಟ್ಟುಹಬ್ಬ ಸಾಗುತ್ತಲೇ ಇತ್ತು. ಗೌಜಿಯ ಊಟ ತಿಂಡಿ ಬಟ್ಟೆ ಬರೆಗಳು ಉಡುಗೊರೆಗಳು ಎಲ್ಲವೂ ಗೋಪಾಲಕರಿಗೆ, ಅತಿಥಿ ಅಭ್ಯಾಗತರಿಗೆ ಸಂದರೂ ಕೃಷ್ಣ ನನ್ನು ಬಿಟ್ಟಿರಲು ಯಾರೂ ಸಿದ್ಧರಿರಲಿಲ್ಲ.

ಆಕಳುಗಳಂತೂ ಕೃಷ್ಣನಕೊಳಲನಾದಕ್ಕೆ ಮನಸೋತು ಕೃಷ್ಣನ ಬಳಿ ಯಲ್ಲೇ ಸುತ್ತು ಹೊಡೆಯುತ್ತಿದ್ದವು. ಗೌರಿಯ ಬೆನ್ನಮೇಲೆ ಒರಗಿದ್ದ ಪಿಳ್ಳಂಗೋವಿಯು ಅವಿರತವಾಗಿ ಗಾನಸುಧೆ ಹರಿಸುತ್ತಿದ್ದ. ಗೌರಿಯು ಕಣ್ಣಗಲಿಸಿ ಕಿವಿಯೆರ ಡನ್ನೂ ಬೀಸಣಿಗೆಯಂತೆ ಮೆಲ್ಲನೆ ಬೀಸುತ್ತಾ ಸಾಮಗಾನ ಪ್ರಿಯನ ಗಾನದೊಳಗೆ ಮುಳುಗಿ ಹೋಗಿತ್ತು.

ಕ್ಷಣಕ್ಷಣವೂ ಭಕ್ತರನ್ನು ಭಕ್ತಿಯ ಕಡಲಲ್ಲಿ ಕರೆದೊಯ್ಯುವ ಮುದ್ದುಕೃಷ್ಣನ ಗೌರಿಯ ಈ ಕಥೆಯನ್ನು ನಮ್ಮ ಬಾಲ್ಯದಲ್ಲಿ ನಮ್ಮಮಠದ ಯಮುನಕ್ಕ ಹಲವು ಭಾರಿ ಹೇಳಿದ್ದರು. ಮಠದಲ್ಲಿ ದೇವರಿಗೆ ಹೂವನ್ನು ನೇಯುವುದು, ದೇವರ ಪಾತ್ರೆ ಸ್ವಚ್ಚಗೊಳಿಸುವುದು ಮುಂತಾದ ಸೇವೆಗಳನ್ನು ಸಲ್ಲಿಸುತ್ತಿದ್ದ ಯಮುನ ಕ್ಕನ ಬತ್ತಳಿಕೆಯಲ್ಲಿ ಯಾವುದಾದ ರೊಂದು ನೀತಿಕಥೆಯು ಸದಾ ಸಿದ್ದವಾಗಿರುತ್ತಿತ್ತು. ಮೂಲ ಭಾಗವತದ ಕೃತಿಯಲ್ಲಿ ಈ ವಿಚಾರದ ಉಲ್ಲೇಖ ಇಲ್ಲ ದಿದ್ದರೂ ಕೂಡಾ ಯಾವುದೋ ಸನಾತನ ಕೃತಿ ಅಥವಾ ಮೌಖಿಕ ಪರಂಪರೆಯಲ್ಲಿ ಈ ಕಥೆ ಮೂಡಿ ಬಂದಿರ ಬೇಕು. 

ಏನೇ ಇರಲಿ ಕೃಷ್ಣನ ಪ್ರೀತಿಯ ಆಳ ಮತ್ತು ಮೌಲ್ಯವನ್ನು ತಿಳಿಸುವ, ಕೃಷ್ಣಭಕ್ತಿಯನ್ನು ಇಮ್ಮಡಿಗೊಳಿಸುವ ಈ ಕಥೆಯನ್ನು ಕೃಷ್ಣ ಜಯಂತಿಯ ಪರ್ವ ಕಾಲದಲ್ಲಿ ಶ್ರೀಕೃಷ್ಣನ ಪಾದಕಮಲಗಳಿಗೆ ಅರ್ಪಿಸುತ್ತಿದ್ದೇನೆ. ಸರ್ವರಿಗೂ ಶ್ರೀಕೃಷ್ಣನ ಪಾದದೊಲುಮೆಯು ಕರುಣವಾಗಲೆಂದು ಪ್ರಾರ್ಥಿಸಿ ಈ ಕೃತಿಯನ್ನು ನಮ್ಮ ಬಂಧು ಬಳಗಕ್ಕೆ ಹಂಚಿ ಜಗದ್ರಕ್ಷಕನ ಲೀಲೆಯನ್ನು ಜಗತ್ತಿನಾದ್ಯಂತ ತಲುಪಿಸೋಣ.
II ಜೈ ಶ್ರೀ ಕೃಷ್ಣ II

 
 
 
 
 
 
 
 
 
 
 

Leave a Reply