ಬಲು ವಿಶಿಷ್ಟ ಚಾತುಮಾ೯ಸ್ಯ ಕಾಲದ ರೆಸಿಪಿ~ ಪಿ.ಲಾತವ್ಯ ಆಚಾಯ೯, ಉಡುಪಿ

ಜಾಗತೀಕರಣದ ಪ್ರಭಾವವೋ ಏನೋ.. ಕಳೆದ ಎರಡು ದಶಕಗಳಲ್ಲಿ ನಾವು ನಿತ್ಯ ಸೇವಿಸುವ ಆಹಾರ ಊಟ ತಿಂಡಿ ತೀರ್ಥಗಳಲ್ಲಿ ಬಹಳಷ್ಟು ಬದಲಾವಣೆಗಳು ಆಗಿವೆ. ನಾಡಿನ ಪ್ರಮುಖ ಪಟ್ಟಣಗಳಲ್ಲಂತೂ ದೇಶ ವಿದೇಶದ ವಿಶಿಷ್ಟ ಖಾದ್ಯಗಳನ್ನು ಸಿದ್ಧಪಡಿಸುವ ಹೋಟೆಲು,ಚಾಟ್ ಸೆಂಟರುಗಳು ದೇಶೀಯರ ಹಸಿವಿಗೆ ಹೊಸ ಟಚ್ ನೀಡುತ್ತಿದೆ.
ಇವುಗಳ ಪ್ರಭಾವದಿಂದಾಗಿ ನಗರವಾಸಿಗಳ ಅನೇಕ ಮನೆಗಳಲ್ಲಿ ದೈನಂದಿನ ಊಟ ತಿಂಡಿಗೂ ನೂಡಲ್ಸ್,ಸ್ಯಾಂಡ್ವಿಚ್,ಬರ್ಗರ್,ಮಾಕ್ರೊನಿಯಂತಹ ಏನಾದರೊಂದು ವಿದೇಶಿ ಖಾದ್ಯ ಬೇಕೇ ಬೇಕು.. ಅಷ್ಟರ ಮಟ್ಟಿಗೆ ವಿದೇಶಿ ತಿಂಡಿಗಳ ಸುವಾಸನೆ ನಮ್ಮವರನ್ನು ಕಾಡುತ್ತಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ದೇಹದ ಫಿಟ್ನೆಸ್ ಮತ್ತು ಸೌಂದರ್ಯ ವರ್ಧನೆಯ ಟ್ರೆಂಡ್ ಹುಟ್ಟಿಕೊಂಡಿದ್ದು ಇವು ಮಕ್ಕಳಿಂದ ಮುದುಕರವರೆಗೆ ಲಿಂಗ ಭೇದವಿಲ್ಲದೆ ಎಲ್ಲೆಡೆ ಹರಡುತ್ತಿದೆ.
ಈ ಟ್ರೆಂಡಿಗೆ ವೀಗನ್, ಕೀಟೋ,ಪ್ರಿಟಿಕಿನ್ ಡಯಟ್,ಅಟ್ಕಿಂಸ್ ಡಯಟ್. ಹೀಗೆ ಹತ್ತು ಹಲವು ಬಗೆಯ ವಿನೂತನ ಆಹಾರ ಪದ್ಧತಿಗಳು ಸಾಥ್ ನೀಡುತ್ತಿವೆ.
ವಿವಿಧತೆ ವೈವಿಧ್ಯತೆಯ ತವರೂರಾದ ಭಾರತದಲ್ಲಿ ಇತ್ತೀಚಿನ ವರುಷಗಳಲ್ಲಂತೂ ನೂರಾರು ಬಗೆಯ ವಿದೇಶಿ ತಿಂಡಿ ತಿನಿಸುಗಳು ಸಣ್ಣ ಸಣ್ಣ ಪಟ್ಟಣಗಳಲ್ಲೂ ಜಂಡಾ ಊರಿ ಬಿಟ್ಟಿವೆ.
ಆದರೆ ಒಂದಂತೂ ಸತ್ಯ..
ಕ್ಷಣ ಕ್ಷಣಕ್ಕೂ ಬದಲಾಗುವ ಈ ಹೊಸ ಹೊಸ ಅವತಾರದ ವಿದೇಶಿ ಆಹಾರ ಪದ್ಧತಿಗಳು ನಮ್ಮ ದೇಶದ ಸಾಂಪ್ರದಾಯಿಕ ಹಾಗೂ ಶಾಸ್ತ್ರೋಕ್ತವಾದ ಆಹಾರ ಕ್ರಮಕ್ಕೆ ಎಂದಿಗೂ ಸಾಟಿಯಾಗದು.
ಅದರಲ್ಲೂ ಚಾತುರ್ಮಾಸ್ಯ ವೃತ ಕಾಲದ ಆಹಾರ ಪದ್ಧತಿಗಳಂತೂ “ವಿಶ್ವ ವಿನೂತನ..ಅನ್ಯತ್ರ ಅಲಭ್ಯ”ಎಂದರೆ ಖಂಡಿತಾ ತಪ್ಪಾಗಲಾರದು.
ಹಾಗಾದರೆ ವೃತಕಾಲದ ವೈಶಿಷ್ಟ್ಯತೆ ಮತ್ತು ಅಡುಗೆಯತ್ತ ಒಮ್ಮೆ ಕಣ್ಣು ಹಾಯಿಸೋಣವೇ..
ಹಲವಾರು ಶತಮಾನಗಳಿಂದ ಹರಿದುಬಂದ ವೈದಿಕ ಪರಂಪರೆಯ ಈ ವೃತಾಚರಣೆಗಳಲ್ಲಿ ಮತ್ತು ಆಹಾರ ಪದ್ಧತಿಗಳಲ್ಲಿ ಕಠಿಣತೆ ಹಾಗೂ ಮಡಿವಂತಿಕೆಯ ಒತ್ತಡವಿದ್ದರೂ ಪ್ರಕೃತಿ ಹಾಗೂ ಮನುಕುಲದ ಸವಾ೯ಂಗೀಣ ಪ್ರಗತಿಗೆ ದಿಗ್ದಶ೯ನ ನೀಡುವ ಅಪೂವ೯ ಹಿನ್ನಲೆಗಳನ್ನು ಈ ಆಚರಣೆಗಳು ಒಳಗೊಂಡಿವೆ.
ಈ ತೆರನಾದ ವಿನೂತನ ಆಚರಣೆಗಳಿಗೆ ಕೆಲಮಾಸಗಳಲ್ಲಿ ವಿಶೇಷ ಮಹತ್ವವಿದೆ. ಇವುಗಳಲ್ಲಿ ಆಷಾಡ ಶುಕ್ಲ ಏಕಾದಶಿಯಿಂದ ಕಾತಿ೯ಕ ಮಾಸದ ಹುಣ್ಣಿಮೆಯವರೆಗೆ ಜರಗುವ(ಸುಮಾರು ಜೂನ್ ಮೊದಲ ವಾರದಿಂದ ಅಕ್ಟೋಬರ್ ವರೆಗೆ)ಚಾತುಮಾ೯ಸ್ಯದ ಕಾಲದ ವೃತಾಚರಣೆಗಳಿಗೆ ಶ್ರೀವರಾಹ ದೇವರ ವಿಶೇಷ ಅನುಗ್ರಹ ಮತ್ತು ದುಪ್ಪಟ್ಟು ಪುಣ್ಯಫಲ ಪ್ರಾಪ್ತಿಯಾಗುವುದೆಂಬ ವಚನವಿರುವ ಕಾರಣ ದೇಶಾದ್ಯಂತ ಸಾವಿರಾರು ಭಕ್ತಾಧಿಗಳು ಈ ಪುಣ್ಯಕಾಲದಲ್ಲಿ ಹೆಚ್ಚಿನ ವೃತಾಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ.
ಅಲ್ಲದೆ ನಾಲ್ಕೂ ವಣ೯ದವರು ಹಾಗೆಯೇ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಮತ್ತು ಸನ್ಯಾಸಿ ಗಳೂ ಕೂಡಾ ಈ ವೃತ ನಿಯಮಗಳನ್ನು ಕಡ್ಡಾಯವಾಗಿ ಪರಿಪಾಲಿಸಬೇಕೆಂಬ ವಿಚಾರವನ್ನು ಶಾಸ್ತ್ರ ಗ್ರಂಥಗಳು ತಿಳಿಸುತ್ತವೆ.
ಬಹುವಿಧದ ವೃತ ನಿಯಮಗಳಲ್ಲಿ ಪರಾಕವೃತ,ಷಷ್ಟಕಾಲ ವೃತ,ಧಾರಣ ಪಾರಣ ವೃತ,ಲಕ್ಷ ಬತ್ತೀ ವೃತ, ಬೀಷ್ಮ ಪಂಚಕ, ಲಕ್ಷನಮಸ್ಕಾರ , ಲಕ್ಷಪ್ರದಕ್ಷಿಣಿ, ತುಳಸಿ ಹಾಗೂ ಗೋಪ್ರದಕ್ಷಿಣಿ, ಗೋದಾನ ಅಲ್ಲದೇ ಆಹಾರ ಸೇವೆಗೆ ಸಂಬಂಧಿಸಿದ ೪ ವೃತಗಳಾದ ಶಾಕವೃತ, ದಧೀವೃತ,ಕ್ಷೀರವೃತ ಕೊನೆಯದಾಗಿ ದ್ವಿದಳ ವೃತ ಇವು ಅತ್ಯಂತ ಪ್ರಮುಖ ವೃತಗಳೆಂದೆನಿಸಿವೆ. ಇವುಗಳಲ್ಲಿ ಆಹಾರ ವೈವಿಧ್ಯತೆಗೆ ಸಂಬಂಧಿಸಿದ 4 ವೃತಗಳು ತೀರಾ ವಿಭಿನ್ನ.
ಈ 4 ಮಾಸಗಳಲ್ಲಿ ಶಾಸ್ತ್ರ ಗ್ರಂಥಗಳಲ್ಲಿ ಉಲ್ಲೇಖಿಸಿದ ಆಹಾರಗಳನ್ನು ಮಾತ್ರ ಸ್ವೀಕರಿಸಿ ಉಳಿದೆಲ್ಲವನ್ನೂ ಸಂಪೂಣ೯ ತ್ಯಜಿಸಿ 4 ತಿಂಗಳುಗಳ ಕಾಲ ಆಹಾರ ಪದ್ಧತಿಯನ್ನೇ ಬದಲಿಸಿಕೊಂಡು ಶಾಸ್ತ್ರೋಕ್ತವಾಗಿ ಬಗೆ ಬಗೆಯ ವೃತಾಚರಣೆಯಲ್ಲಿ ತೊಡಗುವ ಪರಿ ವಿನೂತನ.
ಈ ವೃತಗಳಲ್ಲಿ ಮೊದಲ ವೃತ ಶಾಕವೃತಆಷಾಡ ಶುಕ್ಲದ್ವಾದಶಿಯಿಂದ ಶ್ರಾವಣ ಶುಕ್ಲದಶಮಿ ಯವರೆಗೆ ಶಾಕವೃತವು ಜರಗುವುದು. ಶಾಕವೃತವೆಂದರೆ ಕೇವಲ ತರಕಾರಿಗಳನ್ನು ಮಾತ್ರ ತ್ಯಜಿಸುವುದಲ್ಲ. ಗಿಡಕ್ಕೆ ಸಂಬಂಧಿಸಿದ ಮೂಲ, ಪತ್ರ, ಮೊಳಕೆಗಿಡದ ಅಗ್ರಭಾಗ, ಹಣ್ಣುಗಳು, ಕಾಂಡ, ಬೇರು, ದಂಟು, ಹೂವು, ತೊಗಟೆ, ಸಿಪ್ಪೆ, ಮೊಗ್ಗು , ಚಿಗುರು, ಎಲೆ ಸೊಪ್ಪುಗಳು,
ಕೀರೆಸೊಪ್ಪು, ಮೆಂತೇ ಸೊಪ್ಪು, ದಂಟಿನ ಸೊಪ್ಪು, ಪಾಲಕ್ ಸೊಪ್ಪು, ಕರಿಬೇವು, ಕೊತ್ತಂಬರಿ ಇದಾವುದನ್ನೂ ಸೇವಿಸುವಂತಿಲ್ಲ.
ಹಣ್ಣುಗಳಲ್ಲಿ ಮಾವಿನ ಹಣ್ಣಿಗೆ ಮಾತ್ರ ವಿನಾಯಿತಿ. ಹಾಗಾದರೆ ಸ್ವೀಕರಿಸಬಹುದಾದ್ದದ್ದು: ಉದ್ದು, ಹೆಸರುಬೇಳೆ, ಬ್ರಾಹ್ಮೀ, ಜೀರಿಗೆ, ಹಾಲು, ಮೊಸರು, ತುಪ್ಪ , ಜೇನು,  ಇಂಗು, ಸಾಸಿವೆ, ತೆಂಗಿನಕಾಯಿ ಮಾತ್ರ. ಇವಿಷ್ಟರಲ್ಲೇ ಆಹಾರಗಳನ್ನು ಸಿದ್ಧಪಡಿಸುವ ಅನಿವಾಯ೯ತೆ ಈ ವೃತಕಾಲದಲ್ಲಿರುತ್ತದೆ.
ಸಿದ್ಧಪಡಿಸುವ ಖಾದ್ಯಗಳು :ಅರಳಿನ ಚಿತ್ರಾನ್ನ, ಒಳ್ಳೆಮೆಣಸಿನ ಸಾರು, ಹೆಸರು ಬೇಳೆ ಕಾಳಿನ ಸಾಂಬಾರ್, ಮಾವಿನ ಹಣ್ಣಿನ ಮೆಣಸ್ ಕಾಯಿ, ತಿಮರೇ ತಂಬುಳಿ, ತಿಮರೇ ಬಜ್ಜೀ, ಪೊನ್ನಂಗಣೀ ಆಜತ್ನ, ಪಾಪಟೆಕಾಯಿ ಕೊಡೆಕೆನ, ಹಾಲು ಮತ್ತುಮೈದಾದಿಂದ ತಯಾರಿಸಿದ ಹಾಲುಬಾಯ್,ಅರಳಿನ ಗಟ್ಟಿಬಜೆ, ಅಕ್ಕಿಹಿಟ್ಟಿನ ಅತ್ರಾಸ ಇವು ಶಾಕವೃತದ ಪ್ರಮುಖ ಖಾದ್ಯಗಳು.  ಒಗ್ಗರಣೆ :ಸಾಸಿವೆ,ಜೀರಿಗೆ, ಒಳ್ಳೇ ಮೆಣಸು,ತೆಂಗಿನೆಣ್ಣೆ ಅಥವಾ ತುಪ್ಪ,
ದಧೀವೃತ : ಶ್ರಾವಣ ಶುಕ್ಲ ದ್ವಾದಶಿಯಿಂದ ಭಾದ್ರಪದಶುಕ್ಲ ದಶಮೀವರೆಗೆ ದಧೀವೃತ ಆರ್ಥಾತ್
ಮೊಸರಿನ ಸೇವನೆಯು 1 ತಿಂಗಳುಗಳ ಕಾಲ ಸಂಪೂರ್ಣ ನಿಷಿದ್ಧ. ದಧೀ ವೃತದ ಸಂದರ್ಭದಲ್ಲಿ ಮೊಸರಿನ ನೈವೇದ್ಯವೂ ಇಲ್ಲ. ಭಕ್ತಾಧಿಗಳೂ ಕೂಡಾ ಮೊಸರನ್ನು ಸ್ವೀಕರಿಸುವಂತಿಲ್ಲ.
ಕ್ಷೀರ ವೃತ : ಭಾದ್ರಪದಶುಕ್ಲ ದ್ವಾದಶಿಯಿಂದ ಆಶ್ವಯುಜ ಶುಕ್ಲ ದಶಮಿಯವರೆಗೆ ಕ್ಷೀರವನ್ನು ಭಗವಂತನಿಗೆ ನಿವೇದಿಸುವುದಕ್ಕಾಗುವುದಿಲ್ಲ. ಭಕ್ತಾಧಿಗಳಿಗೂ ಇವು ನಿಷಿದ್ಧ.ಹಾಲಿನಿಂದ ತಯಾರಿಸಿದ ಯಾವುದೇ ಖಾದ್ಯ ಅಥವಾ ಪಾನೀಯಗಳ ಸೇವನೆ ನಿಷಿದ್ಧ. ಹಾಲನ್ನೇ ಅವಲಂಬಿಸಿಕೊಂಡಿರುವವರು ಮಜ್ಜಿಗೆ ಅಥವಾ ಮೊಸರನ್ನು ಸ್ವೀಕರಿಸಬಹುದು. ಪಾಯಸಗಳಿಗೆ ತೆಂಗಿನ ಹಾಲನ್ನು ಸೇರಿಸಿ ಸಿದ್ಧಪಡಿಸಲಾಗುವುದು. 
ಪ್ರತಿದಿನವೂ ಮೊಸರನ್ನು ಕಡೆದು, ಪ್ರತ್ಯೇಕಿಸಿ, ಆಮಜ್ಜಿಗೆಗೆ ನೀರನ್ನು ಹಾಕಿ, ಶುಂಠಿ, ಕರಿಬೇವು, ಉಪ್ಪುಸೇರಿಸಿ ಬಳಸುವ ಕ್ರಮ ರೂಢಿಯಲ್ಲಿದೆ. ಮೊಸರಿನಿಂದ ಸಿದ್ಧ ಪಡಿಸಿದ ಯಾವುದೇ ತಿಂಡಿ ತಿನಿಸುಗಳನ್ನು ಕೂಡಾ ಸ್ವೀಕರಿಸುವಂತಿಲ್ಲ.
ಬಹುಬೀಜ ಮತ್ತು ದ್ವಿದಳವೃತ : ಆಶ್ವಯುಜ ದ್ವಾದಶಿಯಿಂದ ಕಾರ್ತಿಕ ಶುಕ್ಲ ದಶಮಿಯವರೆಗೆ ಬಹುಬೀಜ ಹಾಗೂ ದ್ವಿದಳ ವೃತ ಜರಗುವುದು. ಹಣ್ಣು,ಕಾಯಿ,ತರಕಾರಿಗಳು ನಿಷಿದ್ಧ. ಧಾನ್ಯ ದೊಳಗೆ ಎರಡು ದಳಗಳಿರುವ ಅಥವಾ ಎರಡಕ್ಕಿಂತ ಹೆಚ್ಚು ಬೀಜಗಳಿದ್ದರೆ ಅಂತಹವು ಈ ವೃತದಲ್ಲಿ ನಿಷಿದ್ಧವಾಗಿರುತ್ತದೆ.
ಉದ್ದು, ಹೆಸರು, ಕಡಲೇ, ಮಸೂರ, ಹುರುಳಿ, ಸಾಸಿವೆ, ಮೆಂತೆ, ಅವರೆ, ತೊಗರಿ, ಅಳಸಂಡೆ,ಹುಣಸೇ ಕಾಯಿಯಂತಹ ಯಾವುದೇ ದ್ವಿದಳ ಅಥವಾ ಬಹುಬೀಜ ದವಸಧಾನ್ಯಗಳನ್ನು ಬಳಸುವಂತಿಲ್ಲ. ಒಗ್ಗರಣೆ : ಜೀರಿಗೆ,ಒಳ್ಳೆಮೆಣಸು, ಎಣ್ಣೆ ಅಥವಾ ತುಪ್ಪ. ಸ್ವೀಕಾರಾರ್ಹ ಹಣ್ಣೆಂದರೆ : ಬಾಳೇಹಣ್ಣು ಮತ್ತು ಮಾವಿನಹಣ್ಣು ಹೊರತು ಉಳಿದೆಲ್ಲಾ ಹಣ್ಣುಗಳು ನಿಷಿದ್ಧ.
ತರಕಾರಿಗಳಲ್ಲಿ ಬಾಳೇಕಾಯಿ, ಸುವರ್ಣಗೆಡ್ಡೇ, ಗೆಣಸು, ಸಾಮೇಗಡ್ಡೇ, ಹಸಿಶುಂಠಿ ಇವನ್ನು ಮಾತ್ರ ಬಳಸಬಹುದು.
ತೀರ್ಥಕ್ಕೆ ಏಲಕ್ಕಿಯನ್ನು ಉಪಯೋಗಿಸುವಂತಿಲ್ಲ. ಭೋಜನಕ್ಕೆ ಗೆಣಸಿನ ಪಲ್ಯ, ಕರಿಮೆಣಸಿನ ಒಗ್ಗರಣೆಯಿಂದ ತಯಾರು ಮಾಡಿದ ಸಾರ್‌ಗೆ ಮಾವು ಹಾಗೂ ಜೀರಿಗೆ ಹುಡಿಯನ್ನು
ಸೇರಿಸಲಾಗು ವುದು. ಸುವರ್ಣಗಡ್ಡೆಯ ಪಲ್ಯ ಮತ್ತು ಸಾಂಬಾರ್, ಬಾಳೆದಿಂಡಿನ ತಿರುಳಿನ ಚಟ್ನಿ ಮತ್ತು ಪಲ್ಯ, ಅರ್ಕಬಾಳೆಯ ಕಾಯಿಹುಳಿ, ಮಾವಿನಕಾಯಿಯ ಗೊಜ್ಜು,ಬಾಳೆಯಬೊಂಬೆ (ದಿಂಡು) ಶುಂಠಿ, ಹಾಗೂ ಮೊಸರಿನಿಂದ ಸಿದ್ಧಪಡಿಸಿದ ಉಪ್ಪಿನಕಾಯಿ, ಸಾಂಬ್ರಾಣಿಯ ಹುಳಿ, ಪಲ್ಯ ಹಾಗೂ ಕೊಡೆಕೆನ (ಮಜ್ಜಿಗೆ ಹುಳಿ) ಸಜ್ಜಿಗೆಲಾಡು, ಸಜ್ಜಿಗೆಹೋಳಿಗೆ, ಕಾಯಿಹೋಳಿಗೆ ಹಾಲುಪಾಯಸಗಳು ಈ ವೃತಕಾಲದ ಪ್ರಮುಖ ಖಾದ್ಯಗಳು.
ವಿನೂತನ ಎಂದೆನಿಸಿರುವ ವೃತಕಾಲದ ಆಹಾರ ಕ್ರಮಗಳು ಕೊನೆಗೊಂಡಾಗ ಉಸ್ಸಪ್ಪ ಎಂದು ನಿಟ್ಟುಸಿರು ಬಿಡುವ ಮಂದಿಯೂ ಇದ್ದಾರೆ. ಆದರೆ ಕಾಲಚಕ್ರದ ನಿಯಾಮಾನುಸಾರವಾಗಿ
ಭೌಗೋಳಿಕ ಸನ್ನಿವೇಶಗಳು ಬದಲಾದಾಗ ಪ್ರಾಕೃತಿಕ ಅಸಮತೋಲನೆ ಉಂಟಾಗಿ ಪಶು,ಪಕ್ಷಿ, ಮನುಷ್ಯರ ಜೈವಿಕ ಕ್ರಿಯೆಗಳಲ್ಲಿ ವ್ಯತ್ಯಯ ಸಂಭವಿಸುತ್ತದೆ. ಇಂತಹ ಏರಿಳಿತಗಳು ಹೆಚ್ಚಾಗಿ ಸಂಭವಿಸುತ್ತಿರುವುದು ಮಳೆಗಾಲದಲ್ಲೇ.
ಈ ಸಂದರ್ಭದಲ್ಲೇ ಕ್ರಿಮಿಕೀಟಗಳು, ವಿಧವಿಧವಾದ ಹುಳ ಹುಪ್ಪಟೆಗಳು ಸೋಂಕನ್ನು ಕಾಯಿಲೆ ಗಳನ್ನು ಸೃಷ್ಟಿಸುತ್ತವೆ. ವಾತವರಣದ ವ್ಯವಸ್ಥೆ ಅಸ್ಪಷ್ಟವಾಗಿರುತ್ತೆ. ಈ ಉದ್ದೇಶದಿಂದಲೇ ಮನುಷ್ಯ ದೇಹದ ಆಂತರಿಕ ಹಾಗೂ ಬಾಹ್ಯಶುದ್ಧಿಗಾಗಿ ಜರಗುವ ತಪ್ತಮುದ್ರಧಾರಣೆಯೂ ಕೂಡಾ ಮಳೆಗಾಲದ ಆರಂಭದಲ್ಲೇ ಜರಗುತ್ತದೆ. ಸುದರ್ಶನ ಹೋಮದ ಅಗ್ನಿ ಜ್ವಾಲೆಗೆ ಸ್ಪರ್ಶಿತವಾದ,
ಮಂತ್ರಪೂರಿತವಾದ ಈ ಮುದ್ರೆಗಳು ಚರ್ಮಗಳ ಸೋಂಕನ್ನೂ ಕೂಡಾ ನಿವಾರಿಸುವಲ್ಲಿ ಸಂಜೀವಿನಿಯಾಗಿ ಕಾರ್ಯನಿರ್ವಹಿಸುತ್ತದೆ ಎಂಬುದು ತಜ್ಞರ ಅಭಿಮತ. 
ಆಟಿ ಅಮಾವಾಸ್ಯೆಯಂದು ಪ್ರಾತಃಕಾಲದಲ್ಲಿ ಖಾಲಿಹೊಟ್ಟೆಗೆ ಪಾಲಾಶವೃಕ್ಷದ ತೊಗಟೆಯ ಕಹಿ
ಕಷಾಯವನ್ನು ಸೇವಿಸುವ ಸಂಪ್ರದಾಯವೂ ಕೂಡಾ ಈ ಪರ್ವಕಾಲದಲ್ಲೇ ನಡೆಯುತ್ತದೆ.ಉದರ ಸಂಬಂಧಿ ವ್ಯಾಧಿಗಳಿಗೆ ಈ ಕಷಾಯವು ರಾಮಬಾಣ ಎಂಬುದನ್ನು ಆಯುರ್ವೇದ ಶಾ‌ಸ್ತ್ರಗಳು ನಿರೂಪಿಸುತ್ತವೆ. 
ಬಹುಶಃ ಇದನ್ನೆಲ್ಲಾ ಅರಿತೇ ನಮ್ಮ ಸನಾತನ ಪರಂಪರೆಯವರು ಈ 4 ತಿಂಗಳುಗಳ ಕಾಲವನ್ನು
ಹೆಚ್ಚಿನ ದೇವತಾ ಪ್ರಾರ್ಥನೆಗೆ ಹಾಗೂ ಇಂತಹ ಕಠಿಣ ವೃತಾಚರಣೆಗೆ ಮೀಸಲಿರಿಸಿರಬಹುದು. ಈ ಸಂದರ್ಭದಲ್ಲಿ ಹವಾಮಾನಗಳ ವೈಪರೀತ್ಯಗಳಿಂದ ದೈಹಿಕ, ಮಾನಸಿಕ ಸ್ವಾಸ್ಥ್ಯಕ್ಕೆ ತೊಡ ಕಾಗದಿರಲಿ ಎಂಬ ಚಿಂತನೆಯಿಂದ ಬಗೆಬಗೆಯ ಔಷಧೀಯ ಸಸ್ಯಗಳಿಂದ (ಪಾಲಾಶ, ತಿಮರೆ, ಪೊನ್ನಂಗಣಿ, ಪಾಪಟೆ, ಬಾಳೆದಿಂಡಿನ ತಿರುಳು, ಅರ್ಕ ಬಾಳೆ) ಸಿದ್ಧಪಡಿಸಿದ ಈ ವಿನೂತನ ರೀತ್ಯಾ ಆಹಾರ ಕ್ರಮವನ್ನು ಆಯೋಜಿಸಿರಬಹುದು ಎಂಬುದು ಅನೇಕ ವಿದ್ವಾಂಸರುಗಳ ಆಭಿಪ್ರಾಯ.
ಮೇಲ್ನೋಟಕ್ಕೆ ಈ ವೃತಾಚರಣೆಗಳು ಅತ್ಯಂತ ಕಠಿಣ,ತ್ರಾಸದಾಯಕವೆಂದೆನಿಸಿದರೂ ಈ ಆಚರಣೆಯಿಂದ ಸಂತೃಪ್ತರಾದ ಫಲಾನುಭವಿಗಳು ಲಕ್ಷಾಂತರ. ವೈಜ್ಞಾನಿಕವಾಗಿ ಈ ಕುರಿತು ಸಂಶೋಧನೆ ನಡೆದಲ್ಲಿ ಭಾರೀ ಮೌಲ್ಯದ ಉಪಯುಕ್ತ ಮಾಹಿತಿಗಳು ಬೆಳಕಿಗೆ ಬಂದಾವು.
ಏನೇಇರಲಿ ಭಗವಂತನ ವಿಶೇಷ ಅನುಗ್ರಹ, ಪ್ರೀತಿಗಾಗಿ ವೃತಾಚರಣೆಗಳನ್ನು ಕಡ್ಡಾಯವಾಗಿ ಆಚರಿಸಲೇಬೇಕೆಂಬ ನಿಯಮಗಳನ್ನು ರಚಿಸಿ ಮನುಕುಲದ ಹಾಗೂ ಪ್ರಕೃತಿಯ ಸರ್ವತ್ರ ಪ್ರಗತಿಯ ಚಿಂತನೆಯ ಸೂತ್ರವನ್ನು ಈ ಮೂಲಕ ಆಯೋಜಿಸಿದ ನಮ್ಮ ಸತ್ಪರಂಪರೆಗೆ ನಾವು
“ಶರಣು” ಎನ್ನಲೇಬೇಕು.  “ಶ್ರೀಕೃಷ್ಣಾರ್ಪಣಮಸ್ತು”
 
 
 
 
 
 
 
 
 

Leave a Reply