ಹೊತ್ತಗೆ ಸಂತ ಕು.ಗೋ. ರವರಿಗೆ~ ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ-2022

ಬಿಚ್ಚು ಮಾತಿನ, ಸಾಹಿತ್ಯ ಕಿಚ್ಚಿನ, ಸ್ವಚ್ಛ ಮನದ ನಮ್ಮೆಲ್ಲರ ಅಚ್ಚುಮೆಚ್ಚಿನ ಪುಸ್ತಕ ಸಂಸ್ಕೃತಿ ಪರಿವ್ರಾಜಕ ” ಹೊತ್ತಗೆ ಸಂತ” ಕು.ಗೋ. ಎಂದೇ ಜನ ಮಾನಸದಲ್ಲಿ ಹೆಚ್ಚು ಪರಿಚಿತರಾದ ಹೆರ್ಗ ಗೋಪಾಲ ಭಟ್ ಎಂಬ ಅದಮ್ಯ ಉತ್ಸಾಹದ ,ಅಷ್ಟ ದಶಕಗಳ ಹರೆಯದ ಹಿರಿಯ ಚೇತನ ಈ ವರ್ಷದ ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು ಪುಸ್ತಕ ಪ್ರೇಮಿಗಳಿಗೆ ಸಂತಸ ಸಂಭ್ರಮ ತಂದಿದೆ .

ಉಡುಪಿ ಇಂದ್ರಾಳಿಯ ಹಯಗ್ರೀವ ನಗರದ ವಾಗ್ದೇವಿಯಲ್ಲಿ ವಾಸವಾಗಿರುವ ತಾಯಿ ಶಾರದೆಯ ವರಪುತ್ರ ಕು.ಗೋ ರವರ ಪುಸ್ತಕ ಆಸಕ್ತಿ ಚಳಿಗೆ ಮುದುಡುವುದಿಲ್ಲ , ಮಳೆಗೆ ಬೆದರುವುದಿಲ್ಲ , ಬಿಸಿಲಿಗೆ ಒಣಗುವುದಿಲ್ಲ .

ಇವರು ಸಾಹಿತ್ಯಾಸಕ್ತರಿಗೆ ನಿತ್ಯ ನಿರಂತರ ಸ್ಪೂರ್ತಿಸೆಲೆ. ಹಿರಿಯ ಕಿರಿಯ ಬರಹಗಾರರಿಗೆ ನೀಡುವ ಪ್ರೋತ್ಸಾಹ ದಲ್ಲಿ ಇವರಲ್ಲಿ ಎಂದಿಗೂ ತಾರತಮ್ಯವಿಲ್ಲ. ಇವರದು ನಿರ್ಲಿಪ್ತ ನಿಸ್ವಾರ್ಥ ಸಾಹಿತ್ಯ ಸೇವೆ. ಇತರರ ಮುಖ ಸ್ತುತಿಗೆ ಹಿಗ್ಗದ ,ಪರರ ನಿಂದನೆಗೆ ಕುಗ್ಗದ ನಿಡುಗಾಲ ನಿರಂತರ ಸಾಹಿತ್ಯ ಪ್ರೀತಿ ಇವರದು. ಸಾಹಿತ್ಯಾಸಕ್ತರು ಸಾಹಿತ್ಯದತ್ತ ಕಣ್ಣಾಡಿಸಿದರೆ ಅದುವೆ ಇವರಿಗೆ ಸಂಭಾವನೆ.

ಇವರ ಮಾತಿನಿಂದ ಪ್ರೇರಣೆಗೊಂಡು ಇನ್ನೊಂದಿಷ್ಟು ಸಾಹಿತ್ಯ ಕೃಷಿ ಮಾಡಿದರೆ ಅದುವೆ ಇವರಿಗೆ ಸತ್ಕಾರ. ತಾವು ಪುಸ್ತಕ ಓದುವುದರೊಂದಿಗೆ ಇತರರು ಓದುವಂತೆ ಮಾಡಿದರೆ ಅದುವೆ ಇವರಿಗೆ ಪ್ರಶಸ್ತಿ ಪತ್ರ . ಹೌದು ಪುಸ್ತಕ – ಬರಹ- ಓದು ಇದುವೇ ಇವರ ಬಾಳಿನ ರೀತಿ ರಿವಾಜು.

ಬಗಲಲೊಂದು ಜೋಳಿಗೆ, ಜೋಳಿಗೆ ತುಂಬಾ ಪುಸ್ತಕವೆಂಬ ಖುಷಿ. ಈ ಖುಷಿಯನ್ನು ದಾರಿಯಲ್ಲಿ ಸಿಕ್ಕಿದವರಿಗೂ ಹಂಚುತ್ತ ಪ್ರತಿಯಾಗಿ ಏನನ್ನೂ ಅಪೇಕ್ಷಿಸದೆ ಅದರಲ್ಲೇ ಬದುಕಿನ ಸಾರ್ಥಕತೆ ಕಂಡುಕೊಂಡಿರುವ ಈ ಕು.ಗೋ ರವರು ಬೊಚ್ಚು ಬಾಯಿಯ ತುಂಬ ನಗೆಯರಳಿಸಿ ಗೋಜಲು‌ಗೋಜಲಾಗಿ ಮಾತನಾಡುವ ಮಗುಮನದ ಆರಡಿ ಎತ್ತರದ , ಬಾಗಿದ ದೇಹದ ಸರಳ ವ್ಯಕ್ತಿ‌ .

ಆತ್ಮೀಯ ಮಾತುಗಳಲ್ಲಿ ಸರಳ ಶಬ್ಧಗಳಲ್ಲಿ ಇತರರನ್ನು ಪ್ರಶಂಸಿಸುತ್ತಾ ,ಅಲ್ಪ ಸ್ವಲ್ಪ ಪರಿಚಯದ ಯಾರೇ ಆಗಿರಲಿ ಅವರ ಪುಟ್ಟ ಕಾರ್ಯಗಳನ್ನು ಗುರುತಿಸಿ , ಸ್ಪಂದಿಸಿ ಗೌರವಿಸುವ ಪರಿ ಒಂದು ಅಚ್ಚರಿ. ದಿನಪತ್ರಿಕೆಯಲ್ಲಿ ತನ್ನ ಪರಿಚಯದವರ ಮುಖ ಇಲ್ಲವೇ ಹೆಸರು ಕಂಡಾಗೆಲ್ಲಾ ಅವರಿಗೆ ಕರೆ ಮಾಡಿ ಇಲ್ಲವೇ ಸಂದೇಶ ಕಳುಹಿಸಿ ಸಂಭ್ರಮಿಸುವುದು ಸೋಜಿಗವೇ ಸರಿ. ಇವತ್ತಿನ ದಿನಗಳಲ್ಲಿ ಒಬ್ಬ ವ್ಯಕ್ತಿ ಇನ್ನೊಬ್ಬರ ಕುರಿತಾಗಿ ಹಂಬಲಿಸುವುದು, ಮತ್ತೊಬ್ಬರ ಏಳಿಗೆಗೆ ಶ್ರಮಿಸುವುದು ಸುಲಭದ ಮಾತಲ್ಲ .ಇಂತಹ ಮನಸ್ಥಿತಿ ಕೂಗೋ ರಂತಹ ವಿಶಿಷ್ಟ ವ್ಯಕ್ತಿಗಳಿಗೆ ಮಾತ್ರ ಸಾಧ್ಯ.

ದಿ. ಅನಂತಪದ್ಮನಾಭ ಭಟ್ ಹಾಗೂ ದಿ‌.ವಾಗ್ದೇವಿ ದಂಪತಿಗಳ ಪುತ್ರನಾಗಿ , ಆರು ಹೆಣ್ಣು ಹಾಗೂ ಐದು ಗಂಡು ಮಕ್ಕಳ ತುಂಬು ಸಂಸಾರದಲ್ಲಿ ಹುಟ್ಟಿ ಬೆಳೆದ ಈ ಕಲಾ ಕುಸುಮ ಹೆರ್ಗದ ಪ್ರತಿಷ್ಠಿತ ಭಟ್ಟರ ಮನೆತನದಲ್ಲಿ ಅರಳಿದ ಪ್ರತಿಭೆ. ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯ ಮಟ್ಟದಲ್ಲಿ ಮೂವತ್ತೇಳನೇ ರಾಂಕ್ ವಿಜೇತ ಇವರು ಬಿ ಎ ಪದವೀಧರನಾದ ಬಳಿಕ ಜೀವ ವಿಮಾ ಸಂಸ್ಥೆ ಎಲ್ ಐ ಸಿ ಯಲ್ಲಿ ಸಹಾಯಕ ಅಧಿಕಾರಿ ಹುದ್ದೆಯೊಂದಿಗೆ ವೃತ್ತಿ ಜೀವನದ ಆರಂಭಿಸಿ ಚಿಕ್ಕಮಗಳೂರು, ಮಡಿಕೇರಿ, ಉಡುಪಿ ಹೀಗೆ ಹಲವು ಕಡೆಗಳಲ್ಲಿ ವಿಭಾಗದ ಮುಖ್ಯಸ್ಥರಾಗಿ ಉದ್ಯೋಗ ಪರ್ವ.

1963 ರಲ್ಲಿ ಶುಭಾವತಿ ಎಂಬ ಪ್ರತಿಭಾ ಸಂಪನ್ನೆಯೊಂದಿಗೆ ವಿವಾಹ ಬಂಧನ. ಮೂವತ್ತೆರಡು ವರ್ಷಗಳ ಸುದೀರ್ಘ ದಾಂಪತ್ಯ ಜೀವನದಲ್ಲಿ ಅರಳಿದ ಆತ್ಮಭೂತಿ, ವಿಷ್ಣು ,ಆಶಾ ಎಂಬ ಮೂರು ಪುಷ್ಪಗಳು ಇವರ ಜೀವನ ಪಥದ ಪಯಣಿಗರು . ಸಾಫ್ಟ್ ವೇರ್ ಉದ್ಯೋಗದಲ್ಲಿ ಅಮೆರಿಕದಲ್ಲಿ ವಾಸವಾಗಿರುವ ಮಗ ಆತ್ಮ ಭೂತಿಯ ಸಂಸಾರ, ವಾಗ್ದೇವಿ ಮನೆಯಲ್ಲಿ ಕಿರಿಯ ಮಗ ಗೋವುಗಳ ಆರಾಧಕ ವಿಷ್ಣು , ಲಿಟಲ್ ರಾಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಧ್ಯಾಪನ ವೃತ್ತಿಯಲ್ಲಿ ನಿರತ ಮಗಳು ಆಶಾ ,ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮುದ್ದು ಮೊಮ್ಮಗಳು ಪ್ರತೀಕ್ಷ ಹಾಗೂ ಅಧ್ಯಯನ ನಿರತ ಮೊಮ್ಮಗ ಸಂತೃಪ್ತ.

ಈ ಒಂದು ಸಂಸಾರ ಬಂಧನದೊಳಗಿ‌ನ ಇವರ ಜೀವನ ಕ್ರಮದಲ್ಲಿ ಪುಸ್ತಕಗಳಿಗೆ ಒಂದು ವಿಶೇಷ ಸ್ಥಾನಮಾನ . ಕು‌.ಗೋ ರವರು ಕೇವಲ ಪುಸ್ತಕ ಸಂಸ್ಕೃತಿಯ ಪರಿವ್ರಾಜಕರು ಮಾತ್ರವಲ್ಲ, ಅವರೊಳಗೊಬ್ಬ ಕವಿ ಇದ್ದಾನೆ, ಸಾಹಿತಿ ಇದ್ದಾನೆ, ವಿಮರ್ಶಕನಿದ್ದಾನೆ , ಹಾಸ್ಯದೋಕುಳಿ ಹರಿಸುವ ನಗೆಗಾರನಿದ್ದಾನೆ, ಪ್ರಬಂಧ ಪ್ರಹಸನದ ಮೂಲಕ ಸಂವಹನ ನಡೆಸುವ ವಿನೋದ ಬರಹಗಾರನಿದ್ದಾನೆ.

ಇವರ ಬರವಣಿಗೆಯ ಬತ್ತಳಿಕೆಯಿಂದ ಹೊರಹೊಮ್ಮಿದ ಬರಹಗಳೆಲ್ಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ ತಲುಪಿದೆ . ಇವರು “ಅಕ್ಕನ ಮದುವೆ” ಯನ್ನು ಭರ್ಜರಿಯಾಗಿ ಮುಗಿಸಿ ” ಶನಿ ಹಿಡಿದವನನ್ನು” ಸಂತೈಸಿ, “ಎತ್ತಣಿಂದೆತ್ತ ” ಮನಸ್ಥಿತಿಯವರನ್ನು ತಹ ಬದಿಗೆ ತಂದು ” ತೇಲ್ ನೋಟ ” ದಿಂದ ಎಲ್ಲರಲ್ಲೂ ಹಾಸ್ಯ ರಸಧಾರೆ ಹರಿಸಿ ” ಪಟ ಪಟ ಪಟಾಕಿ” ಯ ಮೂಲಕ ಜನರ ಮನದಲ್ಲಿ ನಗುವಿನ ಮಾಲೆ ಪಟಾಕಿ ಹಚ್ಚಿ ತನ್ನ ಹಲ್ಲಿಲ್ಲದ ಬಾಯನ್ನಗಲಿಸಿ ನಗುವ ಈ ಅಪರೂಪದ, ಪರರ ಕಾಳಜಿಯ ಅಜಾತಶತ್ರುವಿನ ಒಡನಾಟ ಗಳಿಸಿದವರು, ಒಡಲ ಆಶೀರ್ವಾದ ಪಡೆದವರು ,ಮಮತೆಯ ಮಳೆಯಲ್ಲಿ ಮಿಂದವರೇ ಭಾಗ್ಯವಂತರು.\

ವೃತ್ತಿಯಿಂದ ನಿವೃತ್ತರಾದ ಬಳಿಕ ಪ್ರವೃತ್ತಿಯಾಗಿ ಸುಹಾಸ ಎಂಬ ಹಾಸ್ಯ ಪ್ರಿಯರ ಮತ್ತು ಲೇಖಕರ ಸಂಘದ ಕಾರ್ಯದರ್ಶಿಯಾಗಿ ಇನ್ನೊಂದಿಷ್ಟು ಸೇವಾ ಸಾಹಿತ್ಯ ಸೇವಾ ಕೈಕಂರ್ಯ ಇವರ ನೆಚ್ಚಿನ ಹವ್ಯಾಸ. ಹತ್ತು ಹಲವು ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸಿ , ವಿಶಿಷ್ಟ ಬರಹಗಾರರನ್ನು ಅತಿಥಿಗಳಾಗಿ ಆಹ್ವಾನಿಸಿ, ಪುಸ್ತಕ ಪ್ರೇಮಿಗಳನ್ನು ಒಟ್ಟುಗೂಡಿಸಿ ಆ ಮೂಲಕ ಕನ್ನಡಾಂಬೆಯ ಸೇವೆಯನ್ನು ಮಾಡುತ್ತಿರುವ ಕು. ಗೋ ರಂತವರು ಕಿರಿಯ ಬರಹಗಾರರಿಗೆ ನೀಡುವ ಪ್ರೋತ್ಸಾಹ, ಮಾರ್ಗದರ್ಶನ ವರ್ಣಿಸಲಸಾಧ್ಯ.

ಹಲವಾರು ಎಳೆಯ ಬರಹಗಾರರು ತಮ್ಮ ಸಾಹಿತ್ಯ ಜೀವನದಲ್ಲಿ ಅವರನ್ನು ತಮ್ಮ ಸಾಹಿತ್ಯ ಜೀವನದ ಗುರುಗಳೆಂದು ಪೂಜಿಸುವ, ಗೌರವಿಸುವ ಬರಹಗಾರರ ಒಂದು ದೊಡ್ಡ ಸಮೂಹವೇ ಇದೆ. ಅದೇ ಅವರ ಆಸ್ತಿ. ಅದೇ ಅವರ ಖುಷಿ. ಪುಸ್ತಕ ಪ್ರೀತಿಯಲ್ಲಿ ಸಂತೋಷ, ನೆಮ್ಮದಿ, ಸಂತೃಪ್ತಿ ಕಾಣುವ ನಮ್ಮ ಮಧ್ಯೆ ಇರುವ ವಿಶಿಷ್ಟ ಜೀವ ಚೈತನ್ಯ ಕು.ಗೋ ವರು. ಅವರ ಪುಸ್ತಕ ಪ್ರೀತಿಯನ್ನು ಗೌರವಿಸುತ್ತಾ, ಕಿರಿಯರಿಗೆ ಅವರು ನೀಡುತ್ತಿರುವ ಪ್ರೋತ್ಸಾಹಕ್ಕೆ ತಲೆಬಾಗುತ್ತಾ, ಹಿರಿಯ ಬರಹಗಾರರನ್ನು ಆದರಿಸುವ ರೀತಿಗೆ ಬೆರಗಾಗುತ್ತಾ , ಕನ್ನಡ ಸರಸ್ವತ ಲೋಕಕ್ಕೆ ಅಮೂಲ್ಯ ಸಪ್ತ ಕೃತಿಗಳನ್ನು ನೀಡಿದ್ದಕ್ಕೆ ನಮಿಸುತ್ತಾ, ಜೀವನ ಅನುಭವದಿಂದ ಮಿಂದೆದ್ದಿರುವ ಕು.ಗೋ. ಕವಿನಾಮದ ಹೆರ್ಗ ಗೋಪಾಲ ಭಟ್ ಎಂಬ ಮಹಾನ್ ಶಕ್ತಿಗೆ ,ಅಜಾತ ಶತ್ರುವಿಗೆ ,ನಮ್ಮ ನಿಮ್ಮೆಲ್ಲರ ಮಧ್ಯೆ ಇರುವ “ಹೊತ್ತಗೆ ಸಂತ ” ನಿಗೆ ನವೆಂಬರ್ ಒಂದರಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆ ವತಿಯಿಂದ ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ-2022 ನೀಡಲು ಹೆಮ್ಮೆ ಅನಿಸುತ್ತಿದೆ.

ಬನ್ನಿ ಈ ಅಕ್ಷರ ಜಾತ್ರೆಯಲ್ಲಿ ಪಾಲ್ಗೊಳ್ಳಿ… ಜಾತ್ರೆಯ ಶೋಭೆ ಹೆಚ್ಚಿಸಿ.
ಪೂರ್ಣಿಮಾ ಜನಾರ್ದನ ಕೊಡವೂರು

ಸಂಚಾಲಕಿ, ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ ಸಮಿತಿ.

 
 
 
 
 
 
 
 
 
 
 

Leave a Reply