ಉಳುವವ ಹೊಲದೊಡೆಯನಾದ~ ಕೆ .ಎಲ್. ಕುಂಡಂತಾಯ

(ಕರ್ನಾಟಕದಲ್ಲಿ ಅಂದಿನ ಭೂಸುಧಾರಣಾ ಕಾಯಿದೆ ಬಂದ ಬಳಿಕ ಉಡುಪಿ -ದ.ಕ. ಜಿಲ್ಲೆಗಳಲ್ಲಿ ನಡೆದುದು.)ಉಳುವವ ಹೊಲ ದೊಡೆಯನಾದ, ಆದರೆ ನಿರೀಕ್ಷೆಯಷ್ಟು ಫಲಕೊಡಲಿಲ್ಲ ಕಾಯಿದೆ. ಹಿಂದಿನ ಭೂಸುಧಾರಣಾ ಕಾಯಿದೆಯ ಪರಿಣಾಮ ಕಾಣಲು ನೀವೊಮ್ಮೆ ಉಡುಪಿ – ದಕ್ಷಿಣಕನ್ನಡ ಜಿಲ್ಲೆಗೆ ಬನ್ನಿ.

ಕಾಯಿದೆ ಮೂಲಕ ಅಧಿಭೋಗದ ಹಕ್ಕು ದೊರೆತ ಕೃಷಿ ಭೂಮಿಗಳು: ‌‌• ಹಡೀಲು (ಕೃಷಿ ನಡಯದೆ ಬಂಜರು) ಬಿದ್ದಿವೆ.  • ಹೆಚ್ಚಿನ ಭೂಮಿಗಳು ಮಾರಾಟವಾಗಿವೆ. •ರಸ್ತೆ ಬದಿಯಲ್ಲಿರುವ ಗದ್ದೆಗಳಿಗೆ ಮಣ್ಣು ತುಂಬಿಸಿ ಕಟ್ಟಡ ಕಟ್ಟಲಾಗುತ್ತಿದೆ .•ಮೂರು ಬೆಳೆ ಬೆಳೆಯ ಬಲ್ಲ ಫಲವತ್ತಾದ ಗದ್ದೆಗಳು. ನೀರಿನ ಸಹಜ ಸೌಲಭ್ಯವಿರುವ ಗದ್ದೆಗಳ ಸ್ಥಿತಿ ಒಮ್ಮೆ ನೋಡಿ. ಹುಲ್ಲು, ಕಳೆಗಿಡ, ಮುಟ್ಟಿದರೆ ಮುನಿ ಯಂತಹ ಮುಳ್ಳು ಬೆಳೆದು ನಿಂತಿವೆ. • ಗ್ತಾಮಾಂತರಗಳಲ್ಲಿ ಬಯಲಿನ ನಡುವೆ ಅಥವಾ ಬದಿಯಲ್ಲಿ ಸಣ್ಣ ತೊರೆಗಳು , ನದಿಗಳು , ದೊಡ್ಡ ನದಿಗಳ ಉಪತೊರೆಗಳು ಹರಿಯುತ್ತಿರುತ್ತವೆ . ಈ ನದಿಗಳಿಗೆ – ತೊರೆಗಳಿಗೆ ಅಡ್ಡ ‘ಕಟ್ಟ’ ಕಟ್ಟಿ ಇದರಿಂದ ಹರಿಯುವ ನೀರಿ ನಿಂದ ಎರಡನೇಯ ಬೆಳೆಯನ್ನು ಸುಲಭವಾಗಿ ಮಾಡುತ್ತಿದ್ದರು ನಮ್ಮ ಹಿರಿಯರು.  

ಇದರಿಂದ ಪರಿಸರದ ಬಾವಿಗಳಲ್ಲಿ ಬೇಸಗೆಯ ಕಾಲಕ್ಕೆ ನೀರಿನ ಬರವೇ ಇರುತ್ತಿರಲಿಲ್ಲ .ಆರೀತಿಯಲ್ಲಿ ಸಹಜವಾಗಿ ಪರಿಸರದಲ್ಲಿ ಅಂತರ್ಜಲ‌ ವೃದ್ಧಿಯಾಗುತ್ತಿತ್ತು. ರೈತ ಕಷ್ಟಪಟ್ಟು ಪ್ರತಿವರ್ಷ ತೊರೆಗಳಲ್ಲಿ ಹರಿಯುತ್ತಿದ್ದ ನೀರಿಗೆ ಅಡ್ಡನೆ ಕಟ್ಟವನ್ನು‌ ಕಟ್ಟುತ್ತಿದ್ದು ಆ ನೀರಿನ ಫಲಾನುಭವಿಗಳೆಲ್ಲ ಸೇರಲೇ ಬೇಕಿತ್ತು. ಬೇಸಾಯದ ಸಹಕಾರ – ಸೌಹಾರ್ದ ಪದ್ಧತಿಯಂತೆ ಈ‌ ಕಾಯಕ ನಡೆಯುತ್ತಿತ್ತು. ಕೆಲವು ಕಟ್ಟಗಳು ಊರಿನ ದೇವರ ಹೆಸರಿನಲ್ಲಿ – ಬೂತಗಳ ಹೆಸರಿನಲ್ಲಿರುತ್ತಿದ್ದುವು. ಕಟ್ಟ ದೃಢವಾಗಿ ನಿಲ್ಲಲು ಊರ ದೈವ – ದೇವರಿಗೆ ಮಾಮೂಲು ಹರಕೆಗಳನ್ಮು ಹೇಳಲಾಗುತ್ತಿತ್ತು .

ಬಳಿಕ ನಿರ್ದಿಷ್ಟ ದಿನದಂದು ಹರಕೆ ಸಲ್ಲಿಸಲಾಗುತ್ತಿತ್ತು (ಪಡುಬಿದ್ರಿಯ ಕಟ್ಟದಪ್ಪ, ಬೇರೆ ಊರುಗಳಲ್ಲಿ ದೇವರಿಗೆ, ದೈವಗಳಿಗೆ ಹೂವಿನಪೂಜೆ ಮುಂತಾದ ಹರಕೆ ಸಮರ್ಪಿಸಲಾಗುತ್ತಿತ್ತು). ಆದರೆ ಸರಕಾರದ ಕಿರುನೀರಾವರಿ ಯೋಜನೆಯ ವತಿಯಲ್ಲಿ ಸಣ್ಣ ಅಣೆಕಟ್ಡು(ಕಿಂಡಿ ಅಣೆಕಟ್ಟು)ಗಳನ್ನು ಕಟ್ಟುತ್ತಾರೆ, ಇದಕ್ಕೆ ಹಲಗೆ ಹಾಕಿದರೆ ಅಣೆಕಟ್ಟು ಅಥವಾ ‘ಕಟ್ಟ’ ಸಿದ್ಧ. ಹರಿದು ಹೋಗುವ ನೀರಿಗೆ ತಡೆಯಾಗಿ ನೀರು ಶೇಖರಣೆಯಾಗುತ್ತದೆ . ಈ ನೀರನ್ನು ಗದ್ದೆಯಿಂದ ಗದ್ದೆಗೆ ಹಾಯಿಸಿ ಬೆಳೆ ಬೆಳೆಯ ಬಹುದು, ಆದರೆ ಈಗ ಸರಕಾರವು ಗ್ರಾಮಪಂಚಾಯತ್ ಮೂಲಕ ಒದಗಿಸಿದ ಅಣೆಕಟ್ಟುಗಳು ಬಹುತೇಕ ಉಪಯೋಗವಾಗುವುದೇ ಇಲ್ಲ.

ಅಲ್ಲೊಂದು ಇಲ್ಲೊಂದು ಒಂದಷ್ಟು ಗದ್ದೆಗಳಿಗೆ ಉಪಯೋಗವಾಗತ್ತಿರಬಹುದು .‌ ಇದು ನಾವು ಕೃಷಿಭೂಮಿಗಳಲ್ಲಿ ಬೆಳೆಬೆಳೆಯುವ ವಿಧಾನ . ಅಂದರೆ ಒಂದು ವಿಶಾಲವಾದ ಬಯಲಿನಲ್ಲಿ ಅಲ್ಲಲ್ಲಿ ನಾಲ್ಕೈದು ಗದ್ದೆಗಳು ನಾಟಿಯಾಗಿ ,ಉಳಿದವುಗಳು ಹುಲ್ಲು ,ಕಳೆಗಿಡಗಳಿಂದ ತುಂಬಿರುವುದನ್ನು ಕಾಣುತ್ತೇವೆ . ಇದು ಭೂಸುಧಾರಣಾ ಕಾಯಿದೆಯ ಫಲಶ್ರುತಿ. ಯಾವುದೋ ಒಂದು ಕ್ಷೇತ್ರ ಕಾರ್ಯ ನಿಮಿತ್ತ ಬಯಲಿನ ನಡುವೆ ಹುಣಿಯಲ್ಲಿ ನಡೆದು ಹೋಗುವ ಸಂದರ್ಭ ಬಂತು .ಆಗ ನಾನು ಗಮನಿಸಿದ್ದು ಗದ್ದೆಗಳಲ್ಲಿ ನೀರು ತುಂಬಿದೆ, ಆದರೆ ಬೆಳೆ ಬೆಳೆದಿಲ್ಲ . ಯಾಕೆಂದು ಕೇಳಿದಾಗ ಅಣೆಕಟ್ಟು ಕಾರಣವಾಗಿ ಗದ್ದೆಗಳಿಗೆ ನೀರು ಹರಿಯುತ್ತದೆ , ಆದರೆ ಬೆಳೆ ಬೆಳೆಯುವವರಿಲ್ಲ . ಮತ್ತೊಂದು ಊರಿನಲ್ಲಿ ನೀರಿನ ಸೌಲಭ್ಯವಿದ್ದೂ ಬೆಳೆಬೆಳೆದಿಲ್ಲ ಏಕೆ ಎಂಬ ಪ್ರಶ್ನೆ ಕೇಳುತ್ತಾರೆ ಎಂದೇ ಆ ಊರಿನಲ್ಲಿ ಸಕಾಲದಲ್ಲಿ ಅಣೆಕಟ್ಟಿಗೆ ಹಲಗೆ ಹಾಕುವುದೇ ಇಲ್ಲ. ಹಲಗೆ ಹಾಕಿದರೆ ತಾನೆ ನೀರು ಹರಿದು ಗದ್ದೆಗೆ ಬರುವುದು. ನೀರು ತೊರೆಯಲ್ಲಿಯೇ ಸರಾಗವಾಗಿ ಹರಿದು ಹೋದರೆ ಯಾರು ಕೇಳುತ್ತಾರೆ ? ಅಂದರೆ ಕೃಷಿ – ಬೇಸಾಯ ಅಷ್ಟು ಅವಗಣಿಸಲ್ಪಟ್ಟಿದೆ. ಆದರೆ ಬಹಳ ಶ್ರದ್ಧೆಯಿಂದ ಕೃಷಿಕಾಯಕ ದಲ್ಲಿ ತೊಡಗುವವರಿದ್ದಾರೆ, ಅವರ ಸಂಖ್ಯೆ ವಿರಳ.

ಕೃಷಿ ಲಾಭದಾಯಕವಲ್ಲ, ಅವಿಭಕ್ತ ಕುಟುಂಬ ವಿಭಕ್ತ ಕುಟುಂಬಗಳಾಗಿವೆ. ಕಾರ್ಮಿಕರಲ್ಲ. ಒಪ್ಪ ಬಹುದು ಆದರೆ ಹಡೀಲು ಭೂಮಿಗೆ ಉತ್ತರವಿಲ್ಲ‌, ಕಾಯಿದೆಗೆ ಅರ್ಥವಿಲ್ಲದಾಗಿದೆ.ಇವತ್ತಿಗೂ ಬೆಳೆ ಬೆಳೆಯುವುದು ಪ್ರತಿಷ್ಠೆ ಎಂದು ಗೌರವದಿಂದ ಬೆಳೆ ಬೆಳೆಯುವವರಿದ್ದಾರೆ, ಅವರು ಕೃಷಿ ಕಾಯಕವನ್ನು ನಿಲ್ಲಿಸಲೇ ಇಲ್ಲ .

• ಕಾಯಿದೆಯ ಮೂಲಕ ದೊರೆತ ಕೃಷಿ ಭೂಮಿಗಳ ಮಾರಾಟ ಈಗಾಗಲೇ ಆರಂಭವಾಗಿ ವರ್ಷ ಕೆಲವು ಕಳೆಯಿತು. ಭೂ ಸುಧಾರಣಾ ಕಾಯಿದೆಯಂತೆ ಡಿಕ್ಲರೇಶನ್ ಕೊಟ್ಟು ಟ್ರಿಬ್ಯೂನಲ್ ಗಳಲ್ಲಿ ಅಧಿಭೋಗದ ಹಕ್ಕನ್ನು ಕೊಡುವಾಗ ಕುಟುಂಬದ ಪರವಾಗಿ ಎಂದು ತೀರ್ಪು ನೀಡಿರುವ ಭೂಮಿಗಳು ಮಾರಾಟಕ್ಕೆ ಕಷ್ಟವಾಗುತ್ತದೆ. ಆದರೆ ಒಬ್ಬ ವ್ಯಕ್ತಿಯ ಹೆಸರಲ್ಲಿ ತೀರ್ಪು ಇದ್ದಾಗ ಭೂಮಿ ಮಾರಾಟ ಸುಲಭ. ಒಟ್ಟಿನಲ್ಲಿ ಶೇ.ಕ್ಕೆ ನೂರಕ್ಕೆ 60% ಭೂಸುಧಾರಣಾ ಕಾನೂನು ರೈತನಿಗೆ ಮತ್ತು ಕೃಷಿಗೆ ಕರಾವಳಿ ಜಿಲ್ಲೆಗಳಲ್ಲಿ ಪೂರಕವಾಗಲೇ ಇಲ್ಲ. 

ಒಮ್ಮೆ ಉಡುಪಿಯಿಂದ ಮಂಗಳೂರಿಗೆ ಹೆದ್ದಾರಿಗುಂಟ ಸಾಗಿದರೆ ದೇವರಾಜ ಅರಸರ ಕನಸು “ಉಳುವವನೆ ಹೊಲದೊಡೆಯ” ಹೇಗೆ ನನಸಾಗಿದೆ ಎಷ್ಟು ಕೃಷಿ ಭೂಮಿ ಹಡೀಲು ಬಿದ್ದಿವೆ, ಎಷ್ಟು ಫಲವತ್ತಾದ ಗದ್ದೆಗಳು ಅನ್ಯ ಕಾರ್ಯ ನಿಮಿತ್ತ ಬಳಕೆಯಾಗುತ್ತಿವೆ ಎಂದು ತಿಳಿಯುತ್ತದೆ. ಉಭಯ ಜಿಲ್ಲೆಗಳಲ್ಲಿ ರಸ್ತೆ ಸಂಪರ್ಕವಿರುವಲ್ಲಿ ಸಂಚರಿಸಿ, ಕೃಷಿ ಭೂಮಿ ಹೇಗೆ ಪರಿವರ್ತನೆಯಾಗಿದೆ ಎಂದು ಮನಗಾಣ ಬಹುದು. ‌‌‌‌ “ಈ ರೀತಿ ಕೃಷಿ ಅವಗಣಿಸಲ್ಪಡ ಬೇಕಿದ್ದರೆ ಕಾರಣ ಕೃಷಿ ಲಾಭದಾಯಕವಾಗಿಲ್ಲ, ಕಾರ್ಮಿಕರ ಸಮಸ್ಯೆ ಮುಂತಾದ ಸಾರ್ವತ್ರಿಕ, ಸಿದ್ಧ ಉತ್ತರಗಳಿವೆ ”

ಆದರೆ ಈ ವರ್ಷ ಪರಿಸ್ಥಿತಿ ಸ್ವಲ್ಪ ಬದಲಾಗಿದೆ ಕೃಷಿ ಕಾಯಕ ಹೆಚ್ಚಿದಂತೆ ಕಾಣುತ್ತದೆ. ಫಲವತ್ತಾದ ಗದ್ದೆಗಳಲ್ಲಿ ಉಳುವ ಯಂತ್ರಗಳು ಓಡಾಡಿವೆ. ಹಲವು ವರ್ಷಗಳ ಬಳಿಕ‌ ಪೂರ್ಣ ಪ್ರಮಾಣದಲ್ಲಿ ಬೇಸಾಯ ಆರಂಭವಾಗಿದೆ. ಈ ಪ್ರಮಾಣ ಇನ್ನೂ ಹೆಚ್ಚಾಗಲಿ. ಮತ್ತೆ ಮಣ್ಣು ಆಕರ್ಷಿಸಲಿ . “ಪೃಥ್ವೀ ಗಂಧವತೀ” ತಾನೆ ? ಈ ಗಂಧ ಮಣ್ಣಿನ ಮಕ್ಕಳನ್ನು ಆಕರ್ಷಿಸಲಿ.

 
 
 
 
 
 
 
 
 
 
 

Leave a Reply