|ದೀಪಾವಳಿ| ‘ಸೊಡರ ಹಬ್ಬ’ಕ್ಕೆ ಸೊಬಗಿನ ‘ಸೋಬಾನೆ’~

ಓ… ಬಲೀಂದ್ರ ಮೂಜಿ ದಿನತ ಬಲಿಗೆತೊಂದು ’ಪೊಲಿ’ ಕೊರ್ಲ ಕೂ…
ಹೊಲಿ’ ಕೊಟ್ರು ಬಲಿ ತಕಂಡ್ರು ತಮ್ಮ ರಾಜ್ಯಕ್ಕೆ ತಾವೇ ಬಂದ್ರು ’ಹೊಲಿ’ಯೇ ಬಾ….
ಆ ಊರುದ ’ಪೊಲಿ’ ಕೊಂಡತ್ತ್‌ದ್ ಈ ಊರುದ ಕಲಿಕೊಂಡೋಲ ಹರಿಯೋ ಹರ…. 
ಹೀಗೆ ಉಡುಪಿ, ಕುಂದಾಪುರ, ಪುತ್ತೂರು – ಸುಳ್ಯ ಭಾಗಗಳಲ್ಲಿ ಬಲೀಂದ್ರ ಕರೆಹದ  ಒಂದು ಕ್ರಮ.
ಧನ, ಧಾನ್ಯ, ಪಶು ಸಂಪತ್ತು ’ಪೊಲಿ’ (ಸಮೃದ್ಧಿ)ಯಾಗಲಿ ಎಂಬ ಆಶಯದೊಂದಿಗೆ ಆಚರಿಸುವ ಸೊಡರ ಹಬ್ಬ ’ದೀಪಾವಳಿ’. ನರಕ ಚತುರ್ದಶಿಯ ದಿನ ಎಣ್ಣೆ ಹಚ್ಚಿ ಬಿಸಿ ನೀರ ಸ್ನಾನ. ಹಿಂದಿನ ದಿನ ಪಿತೃಗಳ ಸ್ಮರಣೆ, ಹಚ್ಚಿಡುವ ಯಮದೀಪ. ದೀಪಾವಳಿಯಂದು ಬಲೀಂದ್ರನ ಸ್ವಾಗತಕ್ಕೆ ಸಿದ್ಧತೆ. ಧಾನ್ಯದ ರಾಶಿ, ಮನೆ, ಹಟ್ಟಿ, ಗದ್ದೆಗಳಲ್ಲಿ ಬಲೀಂದ್ರನನ್ನು ಸ್ಮರಿಸಿ ದೀಪವಿರಿಸಿ ’ಹೊಲಿ’ ಹರಕೆಗೊಂಬ ಸಂಭ್ರಮ. 
 
ಗೋಪೂಜೆ, ಧನಲಕ್ಷ್ಮೀ ಪೂಜೆಗಳೊಂದಿಗೆ ಮೂರನೇ ದಿನ ದೀಪದ ಹಬ್ಬದ ಸಮಾರೋಪ. ನರಕಾಸುರನ ವಧೆ ಕೃಷ್ಣ-ಸತ್ಯಭಾಮೆಯರಿಂದ ಆಯಿತು. ಆಯಾಸದಿಂದ ಕೃಷ್ಣ ಎಣ್ಣೆ ಹಚ್ಚಿ ಬಿಸಿನೀರ ಸ್ನಾನ ಮಾಡಿದನೆಂಬ ಕಥೆ. ಬಲಿ ಚಕ್ರವರ್ತಿಯನ್ನು ವಾಮನಾವತಾರಿ ವಿಷ್ಣು ಪಾತಾಳಕ್ಕೆ ಮೆಟ್ಟಿದ ಎಂಬ ವಿವರಣೆಗಳು. ಈ ಇಬ್ಬರೂ ಭೂಮಿ ತಾಯಿಯ ಮಕ್ಕಳು ಎಂಬ ಒಡಂಬಡಿಕೆಗಳು ಸಮಗ್ರ ದೀಪಾವಳಿ ಆಚರಣೆಯ ವಿವಿಧ ಹಂತಗಳಲ್ಲಿ ಸ್ಪಷ್ಟವಾಗುತ್ತವೆ. ನರಕಾಸುರನೂ ಭೂಮಿದೇವಿಯ ಮಗ (ಭೌಮ), ಬಲೀಂದ್ರನೂ ಭೂಮಿಪುತ್ರನೆಂದೇ ಪ್ರಸಿದ್ಧನು. 
 
ಆವಾಹನೆ -ವಿಸರ್ಜನೆ : ’ಆವಾಹನೆ-ವಿಸರ್ಜನೆ’ ವಿಧಾನದ, ಪ್ರಾಪಂಚಿಕ-ಪಾರಮಾರ್ಥಿಕಗಳನ್ನು ಬೆಸೆಯುವ, ಸಾಮಾನ್ಯ-ಅಸಾಮಾನ್ಯ ಪರಿಕಲ್ಪನೆಯ, ಬಂದು ಹಿಂದಿರುಗುವ ’ಸಮೃದ್ಧಿ ದೇವತೆ’ ಬಲೀಂದ್ರನ ಆರಾಧನೆ ಅಥವಾ ಸ್ಮರಣೆ ದೀಪಾವಳಿ.  ಕೃಷಿ ಪ್ರಧಾನವಾಗಿದ್ದ ಆದಿಮ ಸಮಾಜ ಬೆಳೆದ ಬೆಳೆಯೇ ತಮ್ಮ ಸಂಪತ್ತು ಎಂದುಕೊಂಡಿದ್ದರೆ ಸಹಜವೆಂದೇ ಸ್ವೀಕರಿಸಬಹುದಾಗುತ್ತದೆ. ಕೃಷಿಗೆ ಪೂರಕ ನೀರು, ಪಶು, ಕೃಷಿ ಉಪಕರಣಗಳು ಪ್ರಧಾನ ಆಸ್ತಿಯಾಗಿ ಪರಿಗ್ರಹಿಸಿದ್ದರೆ ಆಶ್ಚರ್ಯವಲ್ಲ. ಧಾನ್ಯದಿಂದ ಜೀವ, ಅದರಿಂದಲೇ ಧನ, ಇದೇ ಸಂಪತ್ತು. ಈ ಸಂಪತ್ತೇ ಸಮೃದ್ಧಿ (’ಹೊಲಿ’ ಅಥವಾ ಪೊಲಿ)ಯಾಗಲಿ ಎಂಬುದೇ ದೀಪಾವಳಿಯ ಬೆಳಕಿನಲ್ಲಿ, ಸಿಡಿಯುವ ಸಿಡಿ ಮದ್ದುಗಳ ಶಬ್ದದಲ್ಲಿ, ತಿನ್ನುವ ತಿಂಡಿಯ ರುಚಿಯಲ್ಲಿ, ತೊಡುವ ಬಣ್ಣದ ಉಡುಪುಗಳ ವರ್ಣರಂಜಿತ ಪರಿಸರದಲ್ಲಿ ಹಾರೈಸಬೇಕಾದ ಅಂಶ. 
ಕೃಷಿಗೆ, ವಾಸಕ್ಕೆ ಭೂಮಿಯೇ ಆಸರೆ. ಭೂಮಿಯನ್ನು ಅವಲಂಬಿಸಿದ ಮನುಷ್ಯ  ಭೂಮಿಯ ಮೂಲಕ ಪ್ರಪಂಚವನ್ನು ಕಂಡ. ವಿಶ್ವವ್ಯಾಪಿಯಾಗಿರುವ ಚೈತನ್ಯವೊಂದರ ಇರುವಿಕೆಯನ್ನು ಸ್ಪಷ್ಟೀಕರಿಸಿಕೊಂಡ. ನೀರು, ಗಾಳಿ, ಬೆಂಕಿ, ಗಿಡಮರಬಳ್ಳಿ ತನ್ನ ಸುತ್ತಮುತ್ತಲ ಪರಿಸರದಿಂದ ಪ್ರಭಾವಿತನಾದ, ಇವು ಅನಿವಾರ್ಯವೆಂಬ ತಿಳಿವಳಿಕೆ ಬಂದಾಗ ಶರಣಾದ. ಇದೇ ಆರಾಧನೆ, ಆಚರಣೆಗೆ ಪ್ರೇರಣೆ ದೊರೆತ ಸ್ಥಿತಿ. 
 
ಭೂಮಿ, ಭೂಮಿ ಪುತ್ರನೆಂದೇ ಖ್ಯಾತನಾದ ಬಲೀಂದ್ರ, ಕೃಷಿಯ ಫಲಗಳಾದ ಧಾನ್ಯ, ಧನ, ಪಶುಸಂಪತ್ತಿನ ಪೂಜೆಯಾಗಿ ದೀಪಾವಳಿ ಜಾನಪದ-ಶಿಷ್ಟ ಸಂಸ್ಕೃತಿಗಳನ್ನು ಬೆಸೆಯುತ್ತದೆ. ಮೂಲದ ಆದಿಮ ಜೀವನ ಶೈಲಿಯ ಮುಂದುವರಿದ ಭಾಗವಾಗಿ ಶಿಷ್ಟ ಸಂಸ್ಕೃತಿ ಪಡಿಮೂಡುತ್ತದೆ. ಇದಕ್ಕೆ ’ಬಲೀಂದ್ರ’ ಒಂದು ನಿಖರ ಉದಾಹರಣೆ. ನಿರ್ಮಲ ಚಾರಿತ್ರ್ಯ, ಜನಪ್ರೀತಿ, ಆಚಾರ-ವಿಚಾರ-ಯಾಗ-ಯಜ್ಞ, ಧಾರ್ಮಿಕತೆ, ದಾನ-ಧರ್ಮಗಳಿಂದ ದೇಶವಾಳಿದ ಬಲೀಂದ್ರ ಮಹಾತ್ಯಾಗಿಯಾಗಿ ಜಾನಪದ ಕಥೆಗಳಲ್ಲಿ ಅನಾವರಣಗೊಳ್ಳುತ್ತಾನೆ. ಇಂದ್ರ ಮತ್ತು ಇಂದ್ರ ಪಕ್ಷಪಾತಿಯಾಗಿ ವಿಷ್ಣುವಿನ ಆಗಮನ ಕಥೆಗೆ ತಿರುವನ್ನು ಕೊಡುತ್ತದೆ. 
 
ಅವರ ನಡವಳಿಕೆ ಪ್ರಶ್ನಾರ್ಹವೇ ಆಗಿ ಉಳಿಯುತ್ತದೆ. ಮುಂದಿನ ಮನ್ವಂತರದ ಇಂದ್ರ ಪದವಿ, ಬಲೀಂದ್ರನ ಮನೆಬಾಗಿಲು ಕಾಯುವ ವಿವರಣೆ, ವ?ಕ್ಕೊಮ್ಮೆ ಬಂದು ಹೋಗುವ ಅವಕಾಶ ಗಳೊಂದಿಗೆ ವಾಮನಾವತಾರಿ ವಿಷ್ಣವಿನ ಪಾದದ ತುಳಿತದಲ್ಲಿ ಬಲೀಂದ್ರ ಪಾತಾಳ ಸೇರುತ್ತಾನೆ ಅಥವಾ ಭೂಗತನಾಗುತ್ತಾನೆ. ಭೂಮಿಯಲ್ಲಿ ವಿಲೀನನಾಗುತ್ತಾನೆ. ಆದುದರಿಂದಲೇ ಇರಬೇಕು ಭೂಮಿ ಧಾನ್ಯ ಸಮೃದ್ಧಿಯನ್ನು ಮನುಕುಲಕ್ಕೆ ನೀಡುವ ವೇಳೆ ಅಥವಾ ಭೂದೇವಿ ತನ್ನ‌ ಫಲವಂತಿಕೆಯನ್ನು ದೃಢೀಕರಿಸಿದಾಗ ಆಕೆಯ ಮಗನಾಗಿ ಬಲೀಂದ್ರನ ಆಗಮನ. 
ನಿತ್ಯೋತ್ಸವದ ನಾಡಗಿದ್ದ ಬಲೀಂದ್ರನ ಅಧಿಕಾರ ವ್ಯಾಪ್ತಿಗೆ ಆತ ಮರಳಿ ಬರುವಾಗ, ಬಂದು ಹೋಗುವಾಗ ನಾವು ಒಂದು ದಿನದ ಸಂಭ್ರಮವನ್ನು ಆಚರಿಸುತ್ತೇವೆ. ಏಕೆಂದರೆ ಅವನ ನಾಡಲ್ಲಿ ನಾವು ಇಂದಿಗೂ ಅದೇ ಧರ್ಮ ಮತ್ತು ಐಶ್ವರ್ಯವನ್ನು ಹೊಂದಿದ್ದೇವೆ ಎಂದು ತೋರ್ಪಡಿಸಲು ಎಷ್ಟೊಂದು ವಿಪರ್ಯಾಸ – ಸೋಗು ಅನ್ನಿಸುವುದಿಲ್ಲವೇ? 
ವಿವಿಧ ಪಾಠಾಂತರಗಳಲ್ಲಿ, ಬೇರೆ ಬೇರೆ ಕಲ್ಪನೆಗಳೊಂದಿಗೆ ಬಲೀಂದ್ರನನ್ನು ಕರೆಯುತ್ತೇವೆ, ಪೂಜಿಸುತ್ತೇವೆ, ಬೀಳ್ಕೊಡುತ್ತೇವೆ ಇಲ್ಲಿ ವೈವಿಧ್ಯ ಕಂಡರೂ ಮೂಲ ಆಶಯ ಮಾತ್ರ ಸಾಮಾನ್ಯವಾಗಿದೆ ಎಂಬುದು ಗಮನಾರ್ಹ. 
 
ಮನೆ ಅಂಗಳದಲ್ಲಿ ಬಲೀಂದ್ರನ ಚಿತ್ರ ಬಿಡಿಸಿ, ದೀಪ ಹಚ್ಚಿಟ್ಟು ಅವಲಕ್ಕಿ, ವೀಳ್ಯದೆಲೆ-ಅಡಿಕೆ ಸಮರ್ಪಿಸಿ ಪೂಜಿಸುವ ಅಥವಾ ಬಲೀಂದ್ರನ ನೆನಪಿನ ದೀಪಾವಳಿ ಆಚರಿಸುವ ಕ್ರಮವಿದೆ. ಇದರೊಂದಿಗೆ ಗದ್ದೆಗೆ ದೀಪ ಹಚ್ಚುವ, ದೈವಸ್ಥಾನಗಳಲ್ಲಿ ದೀಪ ಹಚ್ಚಿ ’ಪರ್ಬ ಮಲ್ಪುನ’ ಕ್ರಮವಿದೆ. ಕೃಷಿ ಉಪಕರಣ ಹಾಗೂ ಕೋಣ, ಎತ್ತು, ದನಗಳಿಗೂ ಸ್ನಾನ-ಪೂಜೆ ಇದೆ. 
 
ಉಡುಪಿ ಕೇಂದ್ರವಾಗಿ ಮಠಗಳಲ್ಲಿ ಹಾಗೂ  ಹಲವೆಡೆ ಬಲೀಂದ್ರನ ಸುಂದರ ಚಿತ್ರ ಬಿಡಿಸಿ, ವೈವಿಧ್ಯ ದೀಪಗಳನ್ನು ಬೆಳಗಿ ವೈಭವದಿಂದ ಪೂಜೆ ಸಲ್ಲಿಸುತ್ತಾರೆ. ಇಲ್ಲಿ ಬಲೀಂದ್ರನ ಚಿತ್ರದ ತಲೆಯ ಭಾಗದಲ್ಲಿ ಸುದರ್ಶನ(ವಿಷ್ಣುವಿನಸನ್ನಿಧಾನವಿರುವ ಸಾಲಿಗ್ರಾಮ)ವನ್ನಿಟ್ಟು ಪೂಜೆ ಮಾಡುವ ಸಂಪ್ರದಾಯವಿದೆ. ಇದು ವಾಮನಾವತಾರಿ ವಿಷ್ಣು  ಬಲಿಯ ತಲೆಯ ಮೇಲೆ ಕಾಲಿಟ್ಟು ಪಾತಾಳಕ್ಕೆ ತಳ್ಳಿದ ತ್ರಿವಿಕ್ರಮನಾಗಿ ಭೂವ್ಯೋಮ ವ್ಯಾಪಿಸಿದ ಕಥೆಯ ಸಂದರ್ಭವನ್ನು ನೆನಪಿಸುತ್ತದೆ. ಉಡುಪಿಯ ಶ್ರೀಕೃ ಮಠದಲ್ಲಿ ಬಲೀಂದ್ರನ ಚಿತ್ರ ಬರೆದು ವಿಶೇಷ  ಅನುಸಂಧಾನದೊಂದಿಗೆ ಪೂಜೆ ನಡೆಯುತ್ತದೆ.
 
ಮನತುಂಬಿದಾಗ ಮನೆತುಂಬ ದೀಪ,ಅಂಗಳದಲ್ಲಿ ಮತ್ತೆ‌ ದೀಪಗಳ ಸಾಲು ,ಪ್ರತಿ ಮನೆಯಿಂದ ಹೊಲ – ಗದ್ದೆಗಳಿಗೆ ದೀಪ ಪಸರಿಸಿದಾಗ ಊರಿಗೆ ಊರೇ ದೀಪಮಯ. ಇದೇ ದೀಪಾವಳಿ. ಇದುವೇ ಲಕ್ಷಾಂತರ ಸಂಖ್ಯೆಯಲ್ಲಿ ಉರಿಯುವ ದೀಪಗಳ ಲಕ್ಷದೀಪೋತ್ಸವ.ಕಾರ್ತಿಕ ಮಾಸ ಪೂರ್ತಿ ನಾಡಿನ ಗುಡಿ ,ದೇವಾಲಯ,ಭೂತ ಸ್ಥಾನಗಳಲ್ಲಿ  “ದೀಪೋತ್ಸವ”. ಮನೆ ಮುಂದಿನ ತುಳಸಿ ಕಟ್ಟೆಯಲ್ಲಿ ದೀಪಹಚ್ವಿ ಸಂಕೀರ್ತನೆ. ~ • ಕೆ.ಎಲ್.ಕುಂಡಂತಾಯ
 
 
 
 
 
 
 
 
 
 
 

Leave a Reply