ಮಿನುಗೆಲೆಯ ಶಕ್ತಿಯ ಬೆಳಕು​ ~ ​​ಕಿರಣ್ ಪೈ ಮಂಗಳೂರ್ಕರ​

ಶ್ರಾವಣದಲ್ಲಿ ಸಾಮಾನ್ಯವಾಗಿ ಮಲೆನಾಡು ಕರಾವಳಿಯ ಭಾಗಗಳಲ್ಲಿ ಮಳೆಯ ಆರ್ಭಟ ಒಂದು ಲೆಕ್ಕಕ್ಕೆ ಕಡಿಮೆ ಆಗುತ್ತದೆ, ಆದರೂ ಮಳೆ ಇರುತ್ತದೆ. ನನ್ನದು ದಕ್ಷಿಣ ಕನ್ನಡ, ನಗರದಿಂದ ಸ್ವಲ್ಪ ಹೊರಗೊದರೆ ಕಾಡು, ಪ್ರಕೃತಿ ತುಳುನಾಡಿನ ಸೌಂದರ್ಯ. ಇದು ಅವಾಗ ಅಂದರೆ ಸುಮಾರು 20 ವರ್ಷಗಳ ಹಿಂದೆ, ಈಗ ಬಿಡಿ, ಹೇಳಿ ಪ್ರಯೋಜನ ಇಲ್ಲ.. ಹೆಸರಿಗೆ ಇದ್ದಂತೆ ಪರಿಸರ ಹಾಗೂ ಅದರ ಸೊಬಗು.​ ​ಈ ನಡುವೆ ಪರಿಸರ ಪ್ರೇಮಿ,​ ​ಸಂಘಟನೆ ಗಳ ಪರಿಶ್ರಮ,​ ​ಹೋರಾಟದಿಂದ ಹಸಿರು ಉಳಿದುಕೊಂಡಿದೆ. ಈಗಂತೂ ಮಳೆಗಾಲದ ಜೂನ್ ಮಳೆ ನಾಪತ್ತೆ, ಚಳಿಗಾಲದಲ್ಲಿ ಚಳಿಯೇ ಇಲ್ಲದ ವಾತಾವರಣ .​ ​ಡಿಸೆಂಬರ್ ವರೆಗೆ ಮಳೆ.​.. ​ಆ ದಿನಗಳಲ್ಲಿ ಜೂನ್ ಒಂದು ಮಳೆ ಆರಂಭ ಡೌಟೇ ಇಲ್ಲ, ವ್ಯಾಲಿಡಿಟಿ ಸಪ್ಟೆಂಬರ್ ತನಕ ಫಿಕ್ಸ್ ಶೆಡ್ಯೂಲ್..
 
 
ಡೈರೆಕ್ಟ್ ವಿಷಯಕ್ಕೆ ಬರುವ,, ಶ್ರಾವಣದ ಸಮಯ ಅಜ್ಜಿ ಮನೆಯಲ್ಲಿ ಪೂಜೆ,ಮಳೆಗಾಲದ ರಾತ್ರಿ ತಂಗಾಳಿ, ಕಾರ್ಮೋಡವಿದ್ದರೂ ಮಳೆ ಇರಲಿಲ್ಲ, ಕರೆಂಟ್ ಇರುವುದೇ ಒಂದು ಭಾಗ್ಯ, ಕ್ಯಾಂಡಲ್ ಬೆಳಕಿನ ಆಸರೆಯಲ್ಲಿ ಪೂಜೆಯ ನಂತರ ಊಟ , ನೆರೆಹೊರೆಯ ಗೆಳೆಯರೊಂದಿಗೆ ಹರಟೆ, ಹೊರಗಡೆ ಕಪ್ಪೆ,​ ​ಕೀಟಗಳ ಆರ್ಕೇಷ್ಟ್ರಾ.​ ​ಆವಾಗ ಇದು ಸಾಮಾನ್ಯ, ಆದ್ರೆ ಈಗ ಅದ್ಭುತ ನೆನಪು ಕೊಡುತ್ತದೆ. ಮನೆಯ ಪಕ್ಕದಲ್ಲಿ ಸಣ್ಣ ಹೊಲ ಇರುವುದರಿಂದ ರಾತ್ರಿ ನನ್ನ ಏಕಾಗ್ರತೆ ಅಲ್ಲೇ ಜಾಸ್ತಿ, ಹಗಲಲ್ಲಿ ಕಂಡ ಹೊಲ ಕತ್ತಲಲ್ಲಿ ಸ್ವಲ್ಪ ಭಯ ಹುಟ್ಟಿಸುತ್ತಿತ್ತು, ಗಮ್ಮತ್ತಿನ ಸಂಗತಿ ಇರುವುದು ಕತ್ತಲಲ್ಲಿ ಯಾಕೆ? ​ ​ಗೊತ್ತಾ…. 
ಹಾರುವ ಬೆಳಕು, ಫ್ಲೈಯಿಂಗ್ ಲೈಟ್ಸ್ .. ಯಸ್….ರಾತ್ರಿ ಸಮಯ ಅಲ್ಲಿ ಹಾರುವ ಬೆಳಕು ಕಾಣುತ್ತಿತ್ತು. ಛೇ….ಯಾವುದೇ ಭೂತ, ದೆವ್ವ ಅಲ್ಲ ಮಾರಾಯ್ರೆ ಅದು ಮಿನುಗುವ ಹುಳ,​ ​ಮಿನುಗೆಲೆ,​ ​ಅಲಿಯಾಸ್ ಮಿಂಚು ಹುಳ, ಈ ಕಥೆಯ ನಾಯಕ/​ ​ನಾಯಕಿ.​ ​ಮಳೆ ನಿಂತಾಗ ಇವುಗಳ ಗುಂಪು ಒಂದು ರೀತಿಯ ಮಾಯಾಲೋಕವನ್ನೇ ಉಂಟು ಮಾಡುತ್ತಿತ್ತು. ಮೊದಲು ಒಂದು,ಎರಡು ಕಂಡು ಬರುವುದು, ನಂತರ ಹತ್ತು ಹಲವಾಗಿ ಹೊಲ ತುಂಬಾ ವ್ಯಾಪಿಸಿ, ಲೈಟಿಂಗ್ ಹಾಕಿದಂತೆ, ಈ ಪ್ರಕ್ರಿಯೆ ಕಂಡು ನಮ್ಮ ಬಳಗದ ಕೌತುಕದ ನೋಟ. ಒಂದೊಮ್ಮೆ ಈ ಮರ, ಮತ್ತೊಮ್ಮೆ ಬೇರೊಂದು ಕಡೆ ಹಾರಾಟ,​ ​ಅಷ್ಟರಲ್ಲಿ ಬೆಳಕಿನ ಸಭೆಗೆ ದೃಷ್ಟಿ ಬಿತ್ತೋ ಎಂಬಂತೆ ಹನಿ ಮಳೆ ಆರಂಭ, ಕ್ಷಣದಲ್ಲಿ ಬೆಳಕಿನಾಟ ಮುಕ್ತಾಯ, ಮತ್ತೆ ಕತ್ತಲು. ಅಚ್ಚರಿ.
 
 
ಕರಾವಳಿಯ ಹಳ್ಳಿಗಳಲ್ಲಿ ಒಂದು ನಂಬಿಕೆ ಇದೆ. ರಾತ್ರಿಯ ವೇಳೆ ಬೆಳುಕು ಬೀರುತ್ತಾ, ಗದ್ದೆ-ತೋಟಗಳಲ್ಲಿ, ಹಾರಾಡುವ ಮಿಂಚು ಹುಳಗಳಲ್ಲಿ ಕೆಲವು ಹುಳಗಳು ನಮ್ಮ ಪೂರ್ವಜರ ಆತ್ಮ ಆಗಿರಬಹುದೆಂದು, ಈ ನಡುವೆ ಕೆಲವು ಗೆಳೆಯರ ವಾರ್ನಿಂಗ್ ಏಯ್, ಇನ್ನು 2 ವಾರಗಳ ಬಳಿಕ ಮಹಾಲಯ (ಪಿತೃ ಪಕ್ಷ) ಅಲ್ವಾ​.. ​?​ ​ ಅಷ್ಟೇ ಸಾಕು ಸ್ವಲ್ಪ ಬೆವರಿದ ಅನುಭವ. ಆಕಸ್ಮಿಕವಾಗಿ ಮನೆಯೊಳಕ್ಕೆ ಹಾರುತ್ತಾ ಬರುವ ಮಿಂಚು ಹುಳ ಸದಾ ಕುತೂಹಲದ ಮೂಲ ಕೇಂದ್ರ. ಅದನ್ನು ಹಿಡಿದು, ತಬಿಳಿಯ ಬಟ್ಟೆಯೊಂದರಲ್ಲಿ ಕಟ್ಟಿ ಇಡುವುದು. ಆ ಮಿಂಚು ಹುಳ ಬೆಳಗಿನ ತನಕ ಆ ಬಟ್ಟೆಯ ಗಂಟಿನಲ್ಲೇ ಉಳಿದುಕೊಂಡಿದ್ದರೆ, ಅದು ನಾರ್ಮಲ್ ಮಿಂಚುಹುಳ. ಬೆಳಗಿನ ವೇಳೆಗೆ ಆ ಬಟ್ಟೆಯಿಂದ ಕಾಣೆಯಾದರೆ, ಅದು ನಮ್ಮ ಪೂರ್ವಜರ ಆತ್ಮ ಎಂಬ ಭಾವ – ಇದು ಆಧಾರ ರಹಿತ ಅಲ್ಲಿದ್ದ ಕಲ್ಪನಾ ನಂಬಿಕೆ, ಅಷ್ಟೆ. 
 
 
ಇಂತಹ ಹೆದರಿಸುವ ಕಥೆಗಳು ಬಾಲ್ಯದ ಬೇಸಗೆ ರಜೆಯಲ್ಲಿ ರಾತ್ರಿ ಪವರ್ ಕಟ್ ಸಂಧರ್ಭದಲ್ಲಿ ಕೇಳಿ ಭಯಗೊಳ್ಳುವ ಅನುಭವ ಮರೆಯಲು ಅಸಾಧ್ಯ,​ ​ಒಂದು ರೀತಿಯ ಹಾರರ್ ಟೈಮ್ ಪಾಸ್ ಆಗಿತ್ತು, ಯಾರ ಕಥೆ ಎಷ್ಟು ಭಯಾನಕ ಎಂಬುದು ಕುತೂಹಲ. ಒಬ್ಬರ ನಂತರ ಮತ್ತೊಬ್ಬರ ಹಾರರ್ ಕಥಾ ಪ್ರವಚನದ ಪಾಳಿ.ಬೇಸಗೆಯಲ್ಲಿ ಮಿಂಚು ಹುಳ ಕಂಡದ್ದು ಕಡಿಮೆ, ಮಳೆಗಾಲ ಮುಗಿಯೋ ಹೊತ್ತಿಗೆ ಜಾಸ್ತಿ ಕಾಣ ಸಿಗುತ್ತಿತ್ತು. 
 
 
ವಿಮರ್ಶಾತ್ಮ್ಕ ವಾಗಿ ಹೇಳೋದಾದರೆ,​ ​ಇವುಗಳು ಬೆಳಕನ್ನು ಉತ್ಪತ್ತಿ ಮಾಡುವ ಪ್ರಕ್ರಿಯೆಯ ವೈಜ್ಞಾನಿಕ ಹಿನ್ನೆಲೆ ಅದ್ಭುತವಾದದ್ದು. ದೇಹದಲ್ಲಿ ಉಷ್ಣತೆಯನ್ನು ಉತ್ಪಾದಿಸದೆ, ಶಕ್ತಿಯನ್ನು ಪೂರ್ತಿಯಾಗಿ ಬೆಳಕಿಗೆ ಪರಿವರ್ತಿಸುವ ಮಿಣುಕು ಹುಳುಗಳ ತಾಕತ್ತಿನ ರಹಸ್ಯವನ್ನು ಜಗತ್ತು ಇನ್ನೂ ಪೂರ್ತಿಯಾಗಿ ಅರ್ಥಮಾಡಿಕೊಂಡಿಲ್ಲ, ಒಂದು ವೇಳೆ ಆ ಪಾರ್ಮುಲಾ ಬೇಧಿಸಿದರೆ, ಈಗಿರುವ ಬಲ್ಬು, ಸಿ.ಎಲ್.ಎಫ್.,ಎಲ್.ಇ.ಡಿ, ಟ್ಯೂಬ್ ಲೈಟ್ ಗಳು ಬೀರುವ ಬೆಳಕಿನ ಪ್ರಮಾಣವನ್ನು ಮತ್ತಷ್ಟು ಉತ್ತಮಗೊಳಿಸಬಹುದೇನೊ.
 
 ಇಂದು ಬಳಸುವ ಬೆಳಕು ಕೊಡುವ ಸಾಧನಗಳು ಬ ಬೆಳಕಿನ ಜೊತೆ ಸಾಕಷ್ಟು ಶಾಖವನ್ನೂ ಉತ್ಪಾದಿಸಿಸುತ್ತದೆ ಅಲ್ಲದೆ ಶಕ್ತಿಯನ್ನು ಅನಾವಶ್ಯಕವಾಗಿ ವ್ಯಯಮಾಡುತ್ತವೆ. ಮಿಣುಕುಹುಳುಗಳು ತಾವು ವ್ಯಯಿಸುವ ಶಕ್ತಿಯ ಸುಮಾರು ಶೇ.​100ರಷ್ಟನ್ನು ಬೆಳಕಾಗಿ ಉತ್ಪಾದಿಸುವುದು ಸೃಷ್ಟಿಯ ಅದ್ಬುತವೇ ಸರಿ.​ ​ಶಕ್ತಿಯನ್ನು ಬಳಸಿ ಬರುವ ಹೊಳಪಿನಿಂದ ತನ್ನ ಸಂಗಾತಿ ಹಾಗೂ ಶತ್ರು/ ಬೇಟೆಯನ್ನು ಆಕರ್ಷಿಸುತ್ತವೆ. 
 
ಇವುಗಳ ಪೂರ್ಣ ಆಯಸ್ಸು 12-20 ತಿಂಗಳು.​ ​ನಮ್ಮ ಭಾರತದಲ್ಲಿ ಕಂಡು ಬರುವ ಎಲ್ಲಾ ಮಿನುಗೆಲೆ ಹೊಳೆಯುವುದಿಲ್ಲ​. ​ ಕೇವಲ 7-8 ಪ್ರಭೇದಗಳು ಕಂಡು ಬಂದಿವೆ.​ ​ಅವುಗಳಲ್ಲಿ ಕೆಲವು ಹೊಳೆಯುವ ಶಕ್ತಿ ಪಡೆದಿದೆ, ಎಂದು ಓದಿದ ನೆನಪು.​ ​ಇಲ್ಲಿನ ಮಿಣುಕುಹುಳ ಜೇನಿನಂತೆ ಆಕ್ರಮಣ ಮಾಡುವುದಿಲ್ಲ,ಕ​ ​ಚ್ಚುವುದಿಲ್ಲ ವಿಷಕಾರಿಯೂ ಅಲ್ಲ, ಚಿಟ್ಟೆ ಯಂತೆ ವೇಗವಾಗಿ ಹಾರುವುದು ಇಲ್ಲ. ದುರಂತವೆನೆಂದರೆ ಹಳ್ಳಿಗಳಲ್ಲೂ ಈಗ ಇವುಗಳ ಸಂತತಿ ಮೊದಲಿನ ಸಂಖ್ಯೆಯಲ್ಲಿ ಇಲ್ಲದಿರುವುದು.ಮಹಾರಾಷ್ಟ್ರದ ಕಾಲ್ಸುಬಾಯಿ ಹರೀಶ್ಚಂದ್ರಗಡ ಜೈವಿಕ ಉದ್ಯಾನದಲ್ಲಿ ಹೇರಳವಾಗಿ ಇವುಗಳ ಭಾರತೀಯ ಪ್ರಭೇದಗನ್ನು ಸಂರಕ್ಷಿಸಲಾಗಿದೆ. 
 
 
ಜಗತ್ತಲ್ಲಿ ಮಿನುಗುವ ಶಕ್ತಿ ಇರುವ ಜೀವಿಗಳು ಅನೇಕ ಇವೆ, ಕಾಡಿನಲ್ಲಿ ಕೆಲವು ಅಣಬೆಗಳು ಮರವನ್ನು ಪೂರ್ಣ ವ್ಯಾಪಿಸಿ ರಾತ್ರಿ ಹೊತ್ತು ಎದೆ ಜಲ್ ಎನ್ನುವುದು ಗ್ಯಾರಂಟಿ. ಭೂಮಿ ಮೇಲೆ ಇರುವ ಜೀವಿಗಳ ಹೋಲಿಸಿದರೆ ಕಡಲಲ್ಲಿ ಮಿನುಗುವ ಜೀವಿಗಳು ಜಾಸ್ತಿ, ಆಳ ಸಮುದ್ರ ದ ಮೀನುಗಳು,ಪಾಚಿ, ಕೆಲ ಜಲಚರ ಗಳಿಗೆ ಮಿನುಗುವ ಶಕ್ತಿ ಹೆಚ್ಚು. ಇತ್ತೀಚೆಗೆ ಉಡುಪಿ ಕರಾವಳಿ ಕೆಲ ಭಾಗದ ಸಮುದ್ರ ತೀರಗಳು ರಾತ್ರಿ ಹೊತ್ತು ಮಿನುಗುವ ಸುದ್ದಿ ಬಂದದ್ದು ತಿಳಿದೇ ಇದೆ. Bioluminesce, ಜೈವದೀಪ್ತಿಯ ಪ್ರಕ್ರಿಯೆಯ ಕಾರಣ ಜೀವಿಗಳು ಹೊಳೆಯುತ್ತವೆ ಎಂಬುದು ವೈಜ್ಞಾನಿಕ ಕಾರಣ​. 
 
ಕೊನೆಯ ಭಾಗ ಶೀರ್ಷಿಕೆಗೆ ಪೂರಕವಾಗಿ ಹೇಳುವುದಾದರೆ, ಈ ಸೂಕ್ಷ್ಮ ಮಿನುಗುವ ಹುಳಗಳಿಂದ ಮನುಷ್ಯ ಕಲಿಯುವುದು ಏನು? ಕಲಿಯಲು ಏನಾದರೂ ಇದೆಯೇ? ಖಂಡಿತ, ಕಗ್ಗತಲಲ್ಲಿ ಹಾಗೂ ಕನಿಷ್ಟ ಜೀವಿತಾವಧಿಯಲ್ಲಿ 100% ಶಕ್ತಿಯನ್ನು ಬಳಸಿ ಬದುಕುವ ಈ ಜೀವಿಯು ನಮಗೆ ಸದ್ಯದ ವಿಷಮ ಪರಿಸ್ಥಿತಿಯಲ್ಲಿ ಮಾನಸಿಕವಾಗಿ ಮಿನುಗಲು ಶಕ್ತಿ ಕೊಡುತ್ತದೆ​. 
 
ಸಣ್ಣ ಸಣ್ಣ ಕಾರಣಗಳಿಂದ ತಪ್ಪು ನಿರ್ಧಾರ ತೆಗೆದುಕೊಳ್ಳೋ ಮಾನವನಿಗೆ ಒಗ್ಗಟ್ಟು,​ ​ತನ್ನ ಶಕ್ತಿ ಸಾಮರ್ಥ್ಯದ ಸರಿಯಾದ ಬಳಕೆಯ ದಾರಿ ತೋರಿಸುತ್ತದೆ. ಮಳೆ ಜೋರಾಗಿ ಬಂದಾಗ ಇವು ಎಲ್ಲಿ ಹೋಗುತ್ತವೆ? ​ ​ಅದೇ ರೀತಿ ಸಂಕಷ್ಟ ಬಂದಾಗ ತೆರೆಯ ಹಿಂದೆ ಮೌನದಿಂದ ಇದ್ದು ಯಾವುದೇ ತಪ್ಪು ನಿರ್ಣಯ ತೆಗೆದುಕೊಳ್ಳದೆ, ಸೂಕ್ತ ಸಮಯ ಬಂದಾಗ ಬೆಳಗುವ ನೀತಿ ಪಾಠ ಕೊಡುವುದಂತೂ ಸತ್ಯ. 
 
ಆಧ್ಯಾತ್ಮಿಕ ಚಿಂತನೆಯಲ್ಲಿ ನೋಡುವುದಾದರೆ ಕಗ್ಗತಲಿನ ಭಯದಲ್ಲಿ, ಸೃಷ್ಟಿಯ ಒಂದು ಸಣ್ಣ ಜೀವಿ ಕೊಡುವ ಬೆಳಕು ಸ್ಪೂರ್ತಿ, ಮಾರ್ಗದರ್ಶನ,​ ​ಆಶಾವಾದ, ಆಶ್ಚರ್ಯ, ಜಾಗೃತಿಯ ಭಾವನೆ ಯನ್ನು ಕೊಡುವುದರಲ್ಲಿ ಎರಡು ಮಾತಿಲ್ಲ. ನಿಮಗೂ ಬಾಲ್ಯದ ಮಿಣುಕು ಹುಳದ ಅನುಭವ ಇದ್ದಲ್ಲಿ ಮೆಲುಕು ಹಾಕಿ. ನಗರದ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. #ಫೈರ್ ಫ್ಲೈಸ್ # –
 
 
 
 
 
 
 
 
 
 
 

Leave a Reply