Janardhan Kodavoor/ Team KaravaliXpress
31.6 C
Udupi
Wednesday, December 8, 2021
Sathyanatha Stores Brahmavara

ಕೆಡ್ಡಸ’ ಮರೆತು ಹೋಗುತ್ತಿರುವ ಆಚರಣೆ~ಕೆ.ಎಲ್.ಕುಂಡಂತಾಯ

||ಭೂಮಿತಾಯಿ ‘ಪುಷ್ಪವತಿ’ಎಂಬ ‘ಒಸಗೆ’|| [ಫೆ.10,11,12 ಅಂದರೆ ಮಕರಮಾಸದ ಕೊನೆಯ ಮೂರು ದಿನ, ಪುಯಿಂತೆಲ್ ತಿಂಗಳ ಅಂತ್ಯದ ದಿನಗಳು ,’ಭೂರಜಸ್ವಲಾ ದಿನ’.]
‌‌‌
‘ನಿಸರ್ಗ ದೇಶಕ್ಕೆ ಸೌಭಾಗ್ಯವನ್ನು ಕೊಡುತ್ತದೆ’ ಎಂಬುದು ಒಂದು ಹಳೆಯ ರೂಢಿಯ ಮಾತು. ಕಾಡು ನಾಡಾಗುತ್ತಾ ಕೃಷಿ ಲಾಭಕಾರಿ ಎನಿಸದೆ, ಅವಗಣನೆಗೆ ಒಳಗಾಗಿರುವ ಅಭಿವೃದ್ಧಿಯ ಭರಾಟೆಯ ಈ ಕಾಲಘಟ್ಟದಲ್ಲಿ ಒಂದು ಪುರಾತನ ಸಾಂಸ್ಕೃತಿಕ ಸಂಭ್ರಮ ಮರೆಯಾಗುತ್ತಿದೆ. ಆದುದರಿಂದಲೇ ನಮ್ಮ ಆಚರಣೆಗಳು ಮೂಲ ಆಶಯ ಕಳೆದುಕೊಳ್ಳುತ್ತಿವೆ, ಔಪಚಾರಿಕ ವಾಗುತ್ತಿವೆ. ಅಥವಾ ಮರೆತೇ ಹೋಗುತ್ತಿವೆ.

ಮರೆತು ಹೋದ – ಹೋಗುತ್ತಿರುವ ಆಚರಣೆಗಳಲ್ಲಿ ತುಳುವರ ‘ಕೆಡ್ಡಸ’ ಒಂದು; ಹೌದು… ಕೆಡ್ಡಸ ಹಾಗಂದರೆ ಏನು, ಯಾವಾಗ ಸನ್ನಿಹಿತವಾಗುತ್ತದೆ ಎಂದು ಪ್ರಶ್ನಿಸುವಂತಾದ ಈ ಸ್ಥಿತಿಗೆ ನಮ್ಮ ಬದುಕಿನ ರೀತಿ-ನೀತಿ-ರಿವಾಜುಗಳು ಬದಲಾದುದೇ ಕಾರಣ. ಮನಸ್ಸು – ಮನಸ್ಸುಗಳ ನಡುವಿನ ಮಾನಸಿಕ ಅಂತರ ಹಿಗ್ಗುತ್ತಾ ಭಾವನಾತ್ಮಕ ಸಂಬಂಧಗಳು ಕೇವಲ ‘ಸೋಗು ಅನ್ನಿಸುತ್ತಾ’ ಮುಂದೆ ಗಮಿಸುವ ಅತಿ ಉತ್ಸಾಹದಲ್ಲಿ ನೆಲ, ಜಲ, ಮರಮಟ್ಟು ,ಒಟ್ಟಿನಲ್ಲಿ ಪ್ರಕೃತಿಯನ್ನು ಕಾಣುವ ದೃಷ್ಟಿಯೂ ಬದಲಾಗಿದೆ. ಒಂದು ಕಾಲಕ್ಕೆ ಪ್ರಕೃತಿ ನಮ್ಮನ್ನು ಪೋಷಿಸುವ, ಜೀವನಾಧಾರಳಾಗಿರುವ ತಾಯಿ. ನೆಲದವ್ವೆಯನ್ನು ನಂಬಿದ್ದು ಎಲ್ಲಿಯವರೆಗೆ ಎಂದರೆ ‘ಭೂಮಿಸಾಕ್ಷಿಯಾಗಿ ಹೇಳುತ್ತೇನೆ’ ಎಂದು ಭೂಮಿಯನ್ನು ಸ್ಪರ್ಶಿಸಿ ಸಾಕ್ಷಿ ಹೇಳುವ ಮಾತು ಜನಮಾನಸದಲ್ಲಿ ಸಹಜವಾಗಿ ಚಾಲ್ತಿಯಲ್ಲಿತ್ತು.

ನಾವು ಭೂಮಿಯನ್ನು ಗೌರವಿಸುತ್ತಿದ್ದೆವು, ಪೂಜಿಸುತ್ತಿದ್ದೆವು.ಜನಪದರ ಜೀವನ ಭೂಮಿಗೆ ಅಂತಹ ಮಹತ್ತರ ಪ್ರಾಶಸ್ತ್ಯ ಕೊಟ್ಟಿತ್ತು ಎಂಬುದಕ್ಕೆ ‘ಕೆಡ್ಡಸ’ ಆಚರಣೆಯ ಸ್ವರೂಪ, ಕಲ್ಪನೆ, ಅನು ಸಂಧಾನಕ್ಕೆ ಆಧಾರವಾಗುತ್ತದೆ.

ಭೂಮಿ ಹೆಣ್ಣು ಎಂದು ಪರಿಗ್ರಹಿಸಿದ ಮಾನವ ಭೂಮಿಯಂತೆ ಫಲಸಮೃದ್ಧಿಯನ್ನು ನೀಡುವ, ಜನ್ಮ ನೀಡಿದ ತಾಯಿಯ ಔದಾರ್ಯಕಂಡ; ‘ನೆಲವನ್ನು ಅಬ್ಬೆ ಎಂದು ಪ್ರೀತಿಸಿದ. ಆಕೆಯ ಉತ್ಪನ್ನ ಗಳೆಲ್ಲ ‘ಫಲವೆಂದು ಪರಿಗ್ರಹಿಸಿ ತಾಯಿಯಿಂದ ತಾನು, ಭೂಮಿಯಿಂದ ಫಲವಂತಿಕೆ’ ಎಂದು ಸಮೀಕರಿಸಿ ಆರಾಧಿಸತೊಡಗಿದ.

ಜನಪದರ ಸರಳ, ಮುಗ್ಧ ಆದರೆ ಗಾಢವಾದ ಚಿಂತನೆಯುಳ್ಳ ಪ್ರಕೃತಿ ಪರ ಕಾಳಜಿ ಎಷ್ಟು ಭವ್ಯವಾಗಿದೆ ತಾನೆ! ಸ್ತ್ರೀ ಸಹಜ ದೈಹಿಕ ಬದಲಾವಣೆಯನ್ನು ಗಮನಿಸುತ್ತಾ ಪ್ರಕೃತಿಯ ಋತು ಚಕ್ರಕ್ಕನುಗುಣವಾಗಿ ಭೂಮಿತಾಯಿಯಲ್ಲಿ ಕಾಣುವ ಸ್ಥಿತ್ಯಂತರಗಳನ್ನು ಕ್ರೋಡೀಕರಿಸಿಕೊಂಡ ಜನಪದರು ತನ್ನ ತಾಯಿಯಂತೆಯೇ ಭೂಮಿದೇವಿಯೂ ‘ಋತುಮತಿ’ಯಾಗುವ ಕಾಲವನ್ನು, ಮತ್ತೆ ಸೃಷ್ಟಿಗೆ ಅಣಿಯಾಗುವ ಸಂದರ್ಭವನ್ನು ಪ್ರಾಕೃತಿಕ ಋತುಮಾನಕ್ಕೆ ಅನುಗುಣವಾಗಿ ನಿಗದಿಪಡಿಸಿ ಆಚರಿಸತೊಡಗಿದ ,

ಹೇಗಿದೆ ಮುಗ್ಧ ಹೃದಯಗಳ ಕಲ್ಪನೆ? ನಮ್ಮವ್ವೆ ತಿಂಗಳಿಗೊಮ್ಮೆ ಪುಷ್ಪವತಿಯಾಗುವುದಾದರೆ, ‘ಭೂಮಿ ಅವ್ವೆ ವರ್ಷಕ್ಕೊಮ್ಮೆ ಋತುಮತಿಯಾಗುವುದು. ನಮ್ಮ ಜೀವನ ವಿಧಾನದಲ್ಲಿ ಇರುವ ಎಲ್ಲ ವಿಧಿ-ನಿಷೇಧಗಳೂ ಭೂಮಿತಾಯಿಗೂ ಇದೆ ಎಂದು ನಿರ್ಧರಿಸಿ ಭೂಮಿಯನ್ನು ಅಗೆಯಬಾರದು, ಕೃಷಿಗೆಂದು ಉಳಬಾರದು, ಮರಗಿಡಗಳನ್ನು ಕಡಿಯಬಾರದು , ಬದಲಾಗುವ ನಿಸರ್ಗದ ಸೌಂದರ್ಯ ನೋಡುತ್ತಾ ಸೌಭಾಗ್ಯ ರೂಪದ ಕೃಷಿ ಸಮೃದ್ಧಿ ನೀಡಲು ಭೂಮಿತಾಯಿ ಪ್ರಕೃತಿಯ ಮಡಿಲಲ್ಲಿ ಮತ್ತೆ ಅಣಿಯಾದಳು ಎಂಬ ಸಂಕೇತವಾಗಿ ಫಲೀಕರಣಕ್ಕೆ ಮುನ್ನ ಪುಷ್ಪವತಿಯಾಗಿ ತಾನು ಸಿದ್ಧಳಾಗುತ್ತಿದ್ದಾಳೆ ಎಂದು ಭವದ ಭವ್ಯತೆಯನ್ನು ನಿರೂಪಿಸಿರಬೇಕು.

‘ಭೂದೇವಿ ಪುಷ್ಪವತಿ’ ಎಂಬ ಸಡಗರವಾದರೆ ಈ ಸಂಭ್ರಮಾಚರಣೆಗೆ ‘ಬೇಟೆ’ ಒಂದು ಪೂರಕ ಅಂಗ. ‘ಪುಂಡದ’ ಎಂಬ ಹಕ್ಕಿಗೆ ಜ್ವರ ಬರುವ ದಿನಗಳಂತೆ, ಉಳಿದಂತೆ ಕಾಡು ಪ್ರಾಣಿಗಳ ಕಾಲಿನ ಪಾದದ (ಗೊರಸು, ಪಂಜ ಇತ್ಯಾದಿ) ಅಡಿಭಾಗ ಬಿರಕು ಬಿಟ್ಟು ಓಡಲು ಕಷ್ಟವಾಗುವ ಸಂದರ್ಭವು ಕಾಲಮಾನಕ್ಕೆ ಸರಿಯಾಗಿ ಒದಗುತ್ತದದಂತೆ. ಊರಿನ ಜನರೆಲ್ಲ ಸಾಮೂಹಿಕವಾಗಿ ಬೇಟೆಯಾಡುತ್ತಾ ಬೇಟಯನ್ನು ಸಂಭ್ರಮಿಸುತ್ತಾರೆ. ಊರಿನ ಮುಖ್ಯಸ್ಥನ ಅಥವಾ ಅರಸನ ಅಪ್ಪಣೆಯೂ ಬೇಟೆಯಾಟಕ್ಕೆ ಇತ್ತಂತೆ. ಒಟ್ಟಿನಲ್ಲಿ ಸ್ತ್ರೀಯರ ಆಚರಣೆಯಲ್ಲಿ ಪುರುಷರಿಗೆ ಬೇಟೆಯ ಅವಕಾಶ.

ಮನೆಯಂಗಳದಲ್ಲಿ ‘ಕೆಡ್ಡಸ’ ಬರೆದು ಅದರ ಮೇಲೆ ಮಾಂಗಲ್ಯ ಸೂಚಕ ವಸ್ತುಗಳನ್ನು ಕೊಡಿಬಾಳೆ ಎಲೆಯಲ್ಲಿಡುವ, ಸ್ನಾನಕ್ಕೆ ಬೇಕಾದ ಪ್ರಕೃತಿಜನ್ಯ ಸವಲತ್ತುಗಳನ್ನು ಒದಗಿಸುತ್ತಾ ಫುಷ್ಪವತಿಯಾದ ತಾಯಿ ಮಡಿಸ್ನಾನದಿಂದ ಪರಿಶುದ್ಧಳಾಗಿ ಮನೆಯೊಳಗೆ ಬರುವ ಮುಂತಾದ ವಿವಿಧ ಆಚರಣೆಗಳು ನಡೆಯುತ್ತವೆ. ಫಲವತಿಯಾಗುವ ಸರ್ವ ಲಕ್ಷಣ ಸಂಪನ್ನೆಯಾಗಿ ಪುಷ್ಪವತಿಯಾಗುವ ಪೂರ್ವ ಭಾವೀ ಚಿಂತನೆ, ಸ್ನಾನದ ಸಡಗರ, ಈ ನಡುವೆ ತಿನ್ನಲು ನೀಡುವ ,ಆ ಕಾಲದಲ್ಲಿ ಲಭ್ಯವಿರುವ ಧಾನ್ಯಗಳನ್ನು ಹುರಿದು ತಯಾರಿಸಿದ ವಿಶೇಷ ತಿನಿಸುಗಳು ತುಳುನಾಡಿನ ‘ಕೆಡ್ಡಸ’ ಆಚರಣೆಯ ವಿಶಿಷ್ಟ ವಿಷಯಗಳು.

ಧಾನ್ಯಗಳಲ್ಲಿ ‘ಜೀವ’ವನ್ನು, ದೈಹಿಕ ಕಾಮನೆಗಳನ್ನು ಪ್ರಚೋದಿಸುವ ಗುಣಗಳು ಇವೆ ಎಂಬುದೂ ಒಂದು ಆಯಾಮದ ಚಿಂತನೆ. ಭೂ ದೇವಿಗೆ ಪುಷ್ಪವತಿ ಎಂಬ ಸಂಭ್ರಮ ಮುಗಿದು ಜಳಕದ ಸಿದ್ಧತೆಗಳಾಗುತ್ತಿವೆ. ಇದು ‘ಕೆಡ್ಡಸ’. 

ಕುಡುವರಿ – ನನ್ನೆರಿ:  ಕುಡುವರಿ ನನ್ನೆರಿ ಅಕ್ಕಿ, ಹುರುಳಿ, ಹೆಸರು ಮುಂತಾದ ಧಾನ್ಯಗಳನ್ನು ಹುರಿದು ತೆಂಗಿನ ಕಾಯಿ ತುಂಡುಗಳನ್ನು ಬೆರೆಸಿ ತಯಾರಿಸುವ ವಿಶಿಷ್ಟ ತಿನಿಸು ‘ಕೆಡ್ಡಸದ
ಕುಡುವರಿ’. ಹೀಗೆ ಹುರಿದ ಧಾನ್ಯಗಳನ್ನು ಕುಟ್ಟಿಪುಡಿ ಮಾಡಿ ಬೆಲ್ಲ ಮತ್ತು ತೆಂಗಿನ ಕಾಯಿ ಬೆರೆಸಿ ಸಿದ್ಧಗೊಳಿಸುವ ‘ನನ್ನೆರಿ’ ಎಂಬುದು ಪ್ರಾದೇಶಿಕ ಭಿನ್ನತೆಯಾಗಿ ರೂಢಿಯಲ್ಲಿದೆ.

• ಕುಡುವರಿಯನ್ನು ಎಲ್ಲರೂ ತಿನ್ನಬೇಕು. ಊರಿನಲ್ಲಿಲ್ಲದಿದ್ದರೆ ತೆಗೆದಿಟ್ಟು ಬಂದಾಗ ಕೊಡಬೇಕು. ಚೊಚ್ಚಲ ಮಕ್ಕಳಿಗೆ ಇದರಲ್ಲೂ ಆದ್ಯತೆ. • ಕೆಡ್ಡಸದ ಗಾಳಿ, ಕೆಡ್ಡಸ ಬರೆಪುನಿ ಮುಂತಾದುವು ಕೇಳಿಬರುತ್ತಿರುವ ಶಬ್ದಗಳು. ಈಗ ಗಾಳಿಯೂ ಬೀಸುವುದಿಲ್ಲ. ಭೂಮಿಯೂ ಪರಿಮಳ ಬೀರು ವುದಿಲ್ಲ. ಮಂದಾರ ರಾಮಾಯಣದಲ್ಲಿ ‘ಬನ್ನಗನೆ ಕೆಡ್ಡಸದ ಪೊತ್ತುದಿನರಿ, ಕುಡುಕಡಲೆ, ಪೇರ‍್ಪದೆಂಗಿದ ಪೊದಿಕೆನ್ ಕಣತ್ ದೀದ್’ ಎಂಬ ಉಲ್ಲೇಖವಿದೆ.

• ಕೆಡ್ಡಸ ಒಂದು ಕಾಲದ ವಿಜೃಂಭಣೆಯ ಆಚರಣೆಯಾಗಿತ್ತು. ಆದರೆ ಈಗ ನೆನಪೇ ಆಗದ ಪರ್ವ ದಿನ’ವಾಗಿದೆ. ಒಂದು ವ್ಯತ್ಯಾಸವಾದರೆ ಅದನ್ನು ಆಧರಿಸಿದ ಎಲ್ಲವೂ ವ್ಯತ್ಯಸ್ತಗೊಂಡಂತೆ ತಾನೆ?
ಪ್ರಕೃತಿಯ ಮಡಿಲಲ್ಲಿ ನಿಸರ್ಗದ ನಿಶ್ಚಿತ ಸ್ಥಿತ್ಯಂತರಗಳ ವಿಸ್ಮಯಗಳನ್ನು ಗಮನಿಸುತ್ತಾ ಮನುಷ್ಯ ಬದುಕು ಕಟ್ಟಿದ. 

• ಪುಯಿಂತೆಲ್ ಅಥವಾ ಪೊನ್ನಿ ತಿಂಗಳ (ಮಕರಮಾಸ) ಇಪ್ಪತ್ತೇಳನೇ ದಿನ ಸಂಜೆಯಿಂದ ಮಾಯಿ ತಿಂಗಳು ಬರುವ ಸಂಕ್ರಮಣ (ಕುಂಭ ಸಂಕ್ರಮಣ)ದವರೆಗೆ ಮೂರು-ನಾಲ್ಕು ದಿನ ‘ಕೆಡ್ಡಸ’. ಸುರುಕೆಡ್ಡಸ-ನಡುಕೆಡ್ಡಸ-ಕಡೆಕೆಡ್ಡಸವೆಂದು ಮೂರು ದಿನ ಆಚರಣೆ. ಫಲವಂತಿಕೆಯನ್ನು ನೀಡುವ ಭೂದೇವಿ ಬೆಳೆ ಸಮೃದ್ಧಿಯನ್ನು ನೀಡಲು ಮತ್ತೆ ಸನ್ನದ್ಧಳಾದಳೆಂಬ ಸಂದರ್ಭದ ಆರಾಧನಾ ವಿಧಿಯಾಗಿ ‘ಕೆಡ್ಡಸ’ ತುಳುವರ ವಿಶಿಷ್ಟ ಹಬ್ಬ.

• ಮಳೆಗಾಲದ ಪ್ರಧಾನ ಕೃಷಿಗೆ (ಕರಾವಳಿಯಲ್ಲಿ ಹೆಚ್ಚಾಗಿ ಭತ್ತ) ಪೂರ್ವಭಾವಿ ಸಿದ್ಧತೆಯನ್ನು ಚಳಿಗಾಲ ಮುಗಿದು ಧಾನ್ಯಗಳ ಬೆಳೆಯ ಬಳಿಕ ಆರಂಭಿಸಲಾಗುತ್ತದೆ. ಪೊನ್ನಿ ತಿಂಗಳ (ಜನವರಿ ತಿಂಗಳ ಮಧ್ಯದಿಂದ ಫೆಬ್ರವರಿ ತಿಂಗಳ ಮಧ್ಯದವರೆಗೆ) ಆರಂಭವು ಬೇಸಗೆ ಕಾಲವನ್ನು ಘೋಷಿಸುತ್ತದೆ. ಮುಂದಿನ ಮಳೆಗಾಲದಲ್ಲಿ ಭೂಮಿ (ಗದ್ದೆಯನ್ನು) ಉತ್ತು, ನೇಜಿ ನೆಡಲು ಸಿದ್ಧತೆ ನಡೆಸಲು ಜಾಗೃತನಾಗುವಂತೆ ಕೃಷಿಕನನ್ನು ಎಚ್ಚರಿಸುತ್ತಾಳೆ ಪ್ರಕೃತಿ.

• ಮೂಡು ದಿಕ್ಕಿನಿಂದ ವಿಶಿಷ್ಟವಾದ ಗಾಳಿ ಬೀಸತೊಡಗುತ್ತದೆ. ಭೂಮಿಗೆ ವಿಶೇಷ ಕಂಪು ಬರುತ್ತದೆ. ಇದು ಪುಯಿಂತೆಲ್ ಕೊನೆಯ ದಿನಗಳಾಗಿರುತ್ತವೆ. • ಇದು ‘ಭೂ ರಜಸ್ವಲಾ’ ಪರ್ವ ಕಾಲವಾಗಿರುತ್ತದೆ. ಭೂದೇವಿ ರಜಸ್ವಲೆಯಾದಳೆಂದು ನಂಬಲಾಗುವ ಈ ದಿನಗಳು ಪರ್ವವಾಗಿ ಸ್ವೀಕರಿಸಲ್ಪಟ್ಟ ಕಲ್ಪನೆ ಹಾಗೂ ಕೃಷಿ ಆಧಾರಿತ ಜೀವನ ಶೈಲಿ.

• ಭೂಮಾತೆಗೆ ಬಡಿಸುವ ಆಹಾರ (ಕುಡುಅರಿ – ನನ್ನೆರಿ) ವಸ್ತುಗಳೆಲ್ಲ ಫಲವಂತಿಕೆಯ ಬಯಕೆಯ ಸಂಕೇತಗಳೇ ಆಗಿರುತ್ತವೆ. ಹಲಸಿನ ಎಳಸು ಕಾಯಿ ಹಾಕಿದ ಪದಾರ್ಥ, ಉದ್ದಿನ ದೋಸೆ, ನುಗ್ಗೆ ಕೋಡು ಹಾಕಿದ ಪಲ್ಯಗಳು ಪ್ರಧಾನ.

• ಕೆಡ್ಡಸದ ಅವಧಿಯಲ್ಲಿ ಹೆಂಗಸರು ಮುಟ್ಟಾದರೆ ಹಸಿ ಸೋಗೆಯಲ್ಲಿ ಮಲಗಬೇಕು. ತಾನು ಮುಟ್ಟಾಗುವ ವೇಳೆ ಇತರ ಹೆಣ್ಣು ಮಕ್ಕಳುಮುಟ್ಟಾಗುವುದನ್ನು ಭೂಮಿತಾಯಿ ಸಹಿಸಲಾರಳೆಂಬ ಕಲ್ಪನೆ ಜನಪದರಲ್ಲಿದೆ. ಕೈಯಲ್ಲಿ ಹಿಡಿದುಕೊಂಡೇ ತಿಂಡಿ ತಿನ್ನುವ, ಊಟ ಮಾಡುವ ಸಂಪ್ರದಾಯವೂ ಇದೆ‌ (ಇತ್ತು).

• ಭೂಮಿಯನ್ನು ಯಾವುದೇ ಕಾರಣಕ್ಕೆ ಅಗೆಯಬಾರದು ಎಂಬ ನಿಷೇಧ ಕೆಡ್ಡಸದ ಅವಧಿಯಲ್ಲಿ ಅನುಸರಿಸಲಾಗುತ್ತದೆ ಅಥವಾ ಅನುಸರಿಸಲಾಗುತ್ತಿತ್ತು. • ಭೂದೇವಿ ಪುಷ್ಪವತಿಯಾಗುವಳೆಂಬ ಕಲ್ಪನೆಯೇ ಅನನ್ಯವಾದುದು. ಬೆಳೆ ಆಕೆಯ ಫಲವಂತಿಕೆಯ ಫಲಗಳೆಂಬುದು ವಿಶಿಷ್ಟ ಕಲ್ಪನೆ.

ಕೆಡ್ಡಸದ ಬೋಂಟೆ: ‘ಕೆಡ್ಡಸ’ ಎಂದರೆ ಬೇಟೆ ಸಂಬಂಧಿಯಾದುದು ಎಂಬ ನಿರ್ವಚನವೂ ಇದೆ. ಆದುದರಿಂದಲೇ ಬೇಟೆಯೂ ಕೆಡ್ಡಸದ ಅವಿಭಾಜ್ಯ ಅಂಗ. ‘ಪುಂಡದ’ ಎಂಬ ಹಕ್ಕಿಗೆ ಈ ಶ್ರಾಯದಲ್ಲಿ ಜ್ವರ ಬರುತ್ತದೆಯಂತೆ. ‘ಪುಂಡದ ಬೋಟೆ’ ಎಂಬುದು ವಾಡಿಕೆ.

‘ಕೆಡ್ಡಸ’ ಎಂದರೆ ತೊಡಗು ಎಂಬ ಅರ್ಥವೂ ಇದೆ. ತೊಡಗುವುದು ಎಂದರೆ ಕೃಷಿ ಆರಂಭಿಸು ಎಂದು ಪರಿಗ್ರಹಿಸಬಹುದು. ಕೆಡ್ಡಸದ ನೇಮ, ಕೆಡ್ಡಸದ ಆಯನ, ಕೆಡ್ಡಸದ ಗಾಳಿ, ಕೆಡ್ಡಸದ ಕುಡುಅರಿ ಮುಂತಾದವು ಜನಪದರಲ್ಲಿ ರೂಢಿಯಲ್ಲಿರುವ ಆಡು ಮಾತು.

ಸಂಪ್ರದಾಯ : ಮೂರುದಿನ ಹಸಿ ಕಡಿಯಬಾರದು, ಒಣಗಿರುವುದನ್ನು ಮುರಿಯಬಾರದು ಎಂಬ ನಂಬಿಕೆಇದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!