ನಿದ್ರೆಗೆಟ್ಟ ನಿತ್ಯ ರಾತ್ರಿಗಳು ~ಕಾತ್ಯಾಯಿನಿ ಕುಂಜಿಬೆಟ್ಟು

ಇರುಳು ರೆಕ್ಕೆ ಬಿಚ್ಚಿದ ಹೊತ್ತು
ನಿತ್ಯ ಎರಡು ಗಂಟೆಗೆ
ಅಲರಾಂ ಇಟ್ಟ ಹಾಗೆ
ಕಾಗೆ
ನನ್ನ ಎದೆಯ ಗೂಡಿಂದ
ಕ್ಸಾವ್ ಅರಚುತ್ತ ಹಾರುತ್ತದೆ.
ಅದರ ಹಿಂದೆ ನಿದ್ದೆಗೆಟ್ಟ ನಾನು

ಮುಡಿ ಬಿಚ್ಚಿ ಬತ್ತಲೆ ನಿಂತ ಮರ ಗಿಡ ಬಳ್ಳಿಗಳು
ಬರಿ ಮೈ ರೋಮ ರಾಶಿಗಳ
ನಾಗ ಸಾಧುಗಳಂತೆ ನಿಂತ ಹುಲ್ಲ ಬೆಟ್ಟಗುಡ್ಡ ಗಿರಿ ಶಿಖರಗಳು
ತಲೆ ಕೆದರಿಕೊಂಡು ನಗುವ ನಕ್ಷತ್ರಗಳು ಕೆಂಗಣ್ಣಲ್ಲಿ
ಹಾಡು ಹಾಡುತ್ತವೆ
ಚಂದ್ರನಿಲ್ಲದ ರಾತ್ರಿ
ತನ್ನ ಕರಿಯ ತೋಳುಗಳಿಂದ
ಕಬಂಧನಂತೆ ಹಿಡಿದು ನುಂಗುತ್ತದೆ
ಅದರ ಉದರದ ಆಳಕ್ಕೆ ಜಾರುತ್ತೇನೆ
ಜಾರುತ್ತಲೇ ಇರುತ್ತೇನೆ
ಕಾಲ ದೇಶದ ಪರಿವೆಯಿಲ್ಲದೆ

ತಲೆ ಕೆಟ್ಟ ಕಾಗೆ
ಅರಚುತ್ತದೆ
ಬೆಳಗಾಗುತ್ತದೆ
ಇರುಳೆಲ್ಲ ನಿದ್ರೆಗೆಟ್ಟ ಮೈ
ಯಂತ್ರದಂತೆ ನಡೆಯುತ್ತದೆ ಕೆಲಸಕ್ಕೆ
ತಲೆ ನಿದ್ರೆ ಇಲ್ಲದೆ ಹೊರಳಾಡುತ್ತದೆ
ನಾಲಗೆ ಪಾಠ ಮಾಡುತ್ತದೆ
ಮೈ ರುಂಡವೇ ಇಲ್ಲದ ಅಕ್ಟೋಪಸಿನಂತೆ
ಕಾಗೆಗಾಗಿ ಮರಗಳನ್ನು ಜಾಲಾಡುತ್ತದೆ.

ಕಾಗೆ ಎದೆಯಲ್ಲಿ ನಿದ್ದೆ ಮಾಡುತ್ತಿದೆ

ಕಾತ್ಯಾಯಿನಿ ಕುಂಜಿಬೆಟ್ಟು

 
 
 
 
 
 
 
 
 
 
 

Leave a Reply