Janardhan Kodavoor/ Team KaravaliXpress
29.6 C
Udupi
Thursday, January 20, 2022
Sathyanatha Stores Brahmavara

ಎಲ್ಲೆಡೆ ಬೆಳಗಲಿ ಹಣತೆಯ ದಿವ್ಯ ಪ್ರಭಾವಳಿ~ ರಾಘವೇಂದ್ರ ಪ್ರಭು ಕರ್ವಾಲು

ದೀಪಾವಳಿ ಹಬ್ಬವು ಕೇವಲ ಹಬ್ಬವಲ್ಲ ಇದು ಜನಸಾಮಾನ್ಯರ ಸಂತೋಷದ ಕ್ಷಣವೆಂದರೆ ತಪ್ಪಾಗಲಾರದು. ಇದು ಧನ ತ್ರಯೋದಶಿಯಿಂದ ಆರಂಭಿಸಿ ಅಮಾವಾಸ್ಯೆ ದಾಟಿ ಬಿದಿಗೆವರೆಗೂ ಈ ಸಡಗರ ವಿಸ್ತರಿಸುತ್ತದೆ. ನವರಾತ್ರಿ ಉಕ್ಕಿಸಿದ ನವಸಡಗರ  ಮನಸ್ಸಲ್ಲಿನ್ನೂ ಹಿತವಾಗಿ ಹರಡಿಕೊಂಡಿರುವಂತೆ ಮುಸ್ಸಂಜೆಯ ಮುದ್ದಾದ ಮಳೆ, ಚೂರುಚೂರೇ ಆವರಿಸಿಕೊಳ್ಳುತ್ತಾ ಖುಷಿ ಕೊಡುವ ಚಳಿಯ ನಡುವೆ ಮತ್ತೊಂದು ಸಂಭ್ರಮ ಬಂದಿದೆ. ಅದು ಬೆಳಕಿನ, ಬದುಕಿನ ಕುಟುಂಬದ ಹಬ್ಬ, ಊರ ಹಬ್ಬವಾದ ದೀಪಾವಳಿ.  ಪ್ರಕೃತಿಯಲ್ಲಿ ಹೊಸ ಹೂವು ಅರಳುವ ಸಮಯ. ಈ ಘಳಿಗೆ ಬದುಕು ಸಡಗರದ ಮತ್ತೊಂದು ಶಿಖರದೆಡೆಗೆ ಹೊರಳುತ್ತದೆ. 

 ಭಕ್ತಿ ಶಕ್ತಿ-ಪ್ರೇಮ-ಪ್ರಕೃತಿಯ ಹಬ್ಬ: ದೀಪಾವಳಿ ಕೆಲವರಿಗೆ ಪಂಚ ದಿನಗಳ ಹಬ್ಬ. ಈ ಎಲ್ಲ ದಿನಗಳಲ್ಲಿ ಮೆರೆ ಯವುದು ಭಕ್ತಿ, ಶಕ್ತಿ ಪ್ರೀತಿ ಮತ್ತು ಪ್ರಕೃತಿ. ಇದು ಬದುಕಿಗೆ ಆಧಾರವಾದ ಜೀವ ಶಕ್ತಿಯ ವೈವಿಧ್ಯಮಯ ಸ್ವರೂಪಗಳ ಆರಾಧನೆ, ಕೃತಜ್ಞತೆ ಸಮರ್ಪಣೆಗೆ ವೇದಿಕೆ. ಸಂಬಂಧಗಳ ನಂಟನ್ನು ಮತ್ತಷ್ಟು ಗಾಢವಾಗಿಸುವ ಬೆಸುಗೆ. ದೀಪಾವಳಿ ಎಂದರೆ ಮನೆ-ಮನ ಎಲ್ಲವೂ ಒಮ್ಮೆ ಸ್ವಚ್ಛವಾಗಿ ಲಕಲಕಿಸುತ್ತದೆ. ಅಂತೆಯೇ ಹಳೆ ನೆನಪು, ನೋವುಗಳ ದು:ಖಗಳ ಕೊಳೆಯೂ ಗುಡಿಸಿ ಹೋಗುತ್ತದೆ. ಹೊಸ ಬಣ್ಣ, ಹೊಸ ಬೆಳಕು, ಹೊಸ ಬಟ್ಟೆಗಳ ‘ ಮಿಂಚು ಹಿತವಾಗುತ್ತದೆ. ದೇವ, ದೈವದೊಂದಿಗಿನ ಕುಟುಂಬ, ಪ್ರಕೃತಿಯೊಂದಿಗಿನ ಸಂಬಂಧ ಮತ್ತೆ ನವೀಕರಣಗೊಳ್ಳುತ್ತದೆ.

 ದುಷ್ಟ ಶಿಕ್ಷಣದ ಕಥಾನಕ: ಶ್ರೀಕೃಷ್ಣ ನರಕಾಸುರನನ್ನು ಸಂಹಾರ ಮಾಡಿದ್ದು, ರಾವಣ ಸಂಹಾರದ ಬಳಿಕ ಶ್ರೀರಾಮ ಸೀತಾ ಸಮೇತನಾಗಿ ಮತ್ತೆ ಅಯೋಧ್ಯೆ ಪ್ರವೇಶಿಸಿದ್ದು, ಅಸಾಮಾನ್ಯ ಶೂರನಾದರೂ ಅತಿಯಾಸೆಗೆ ಬಲಿಯಾದ ಬಲಿ ಚಕ್ರವರ್ತಿಯನ್ನು ವಾಮನ ಮೂರ್ತಿ ಪಾತಾಳಕ್ಕೆ ತುಳಿದದ್ದು, ಸಮುದ್ರ ಮಥನ ಕಾಲದಲ್ಲಿ ಲಕ್ಷ್ಮೀದೇವಿಯ ಜನನವಾಗಿದ್ದು, ಇಂದ್ರನ ಕ್ರೋಧ ರೂಪವಾದ ಮಳೆಯಿಂದ ಗೋವುಗಳನ್ನು ರಕ್ಷಿಸಲು ಶ್ರೀಕೃಷ್ಣ ಗೋವರ್ಧನಗಿರಿಯನ್ನು ಎತ್ತಿ ಹಿಡಿದದ್ದು.. ಎಲ್ಲವೂ ದೀಪಾವಳಿಯ ಜತೆಗೆ ಬೆಸೆದುಕೊಂಡ ಪೌರಾಣಿಕ ಕಥನ ಗಳು. ಎಲ್ಲ ಕಥೆಗಳ ಆಳದಲ್ಲಿರುವುದು ದುಷ್ಟ ಶಿಕ್ಷಣ-ಶಿಷ್ಟ ರಕ್ಷಣ, ಅಸಹಾಯಕತೆಯ ಕ್ಷಣಗಳಲ್ಲಿ ಕೈಹಿಡಿವ ದೇವರ ದಯೆ.

ಸ್ತ್ರೀಶಕ್ತಿ ಮೆರೆವ ಹಬ್ಬ: ಪುರುಷ ಮಾತ್ರರಿಂದ ಮರಣವಿಲ್ಲದ ವರ ಪಡೆದ ನರಕಾಸುರನನ್ನು ಸಂಹರಿಸುವಲ್ಲಿ ಕೃಷ್ಣ ನಿಮಿತ್ತ ಮಾತ್ರ. ಧನುರ್ಧಾರಿಣಿಯಾಗಿ ಕದನ ಕಣದಲ್ಲಿ ಸೆಣಸಿ ಗೆದ್ದದ್ದು ಸತ್ಯಭಾಮೆ. ಅವಳಿಂದಾಗಿಯೇ 16 ಸಾವಿರ ಗೋಪಿಕಾ ಸ್ತ್ರೀಯರ ಬಂಧಮುಕ್ತಿ. ಸಮುದ್ರ ಮಥನ ಕಾಲದಲ್ಲಿ ಎದ್ದು ಬಂದ ಲಕ್ಷಿ ್ಮ ಮುಂದೆ ಐಶ್ವರ್ಯ ತಾಯಿಯಾಗಿ ಮೆರೆದಾಡಿದ್ದರ ಮೂಲವಿರುವುದು ಇಲ್ಲಿ. ಇದು ಸ್ತ್ರೀಶಕ್ತಿಯ ದ್ಯೋತಕ. ದೀಪಾವಳಿಯ ಸರ್ವ ದಿನಗಳಲ್ಲೂ ಮಹಿಳೆಯರೇ ಪ್ರಧಾನ ಪಾತ್ರ ವಹಿಸುವುದು ಅತ್ಯಂತ ವಿಶೇಷ ವಲ್ಲವೇ ?

ದೀಪಾವಳಿ ಹೊಸ ಹೊಸ  ಬೆಳಕಿನ ಹಬ್ಬ: ದೀಪಾವಳಿ ಎಂದರೆ ಹಣತೆಗಳ ಸಾಲು, ಈ ಸಾಲುಗಳು ಕತ್ತಲೆ ಓಡಿಸುವುದು ಮಾತ್ರವಲ್ಲ ಸೌoದಯ೯ದ ದ್ಯೋತಕವಾಗಿದೆ. ದೀಪಗಳ ಜಗಮಗ, ಪಟಾಕಿಗಳು ಸೃಷ್ಟಿಸುವ ನಕ್ಷತ್ರಲೋಕ. ಬದುಕಿನ ಒಳಗೂ ಹೊರಗೂ ಬಣ್ಣದ ಬೆಳಕು ಹರಿಸಿ ಸಂತೋಷ, ಆತ್ಮವಿಶ್ವಾಸ ಹೆಚ್ಚಿಸುವ, ಹೊಸತನದೆಡೆಗೆ ತುಡಿಯುವಂತೆ ಮಾಡುವ ಹಬ್ಬ.

ಈ ಬೆಳಕು ಬರೀ ಕಣ್ಣಿಗಲ್ಲ. ಮುಚ್ಚಿದ ಮನದ ಬಾಗಿಲೊಳಗೂ ಬೆಳಕಿನ ಕಿರಣಗಳು ಸೋಕುತ್ತವೆ. ಹೊಸ ಬೆಳಕು ಚೆಲ್ಲಿ, ಹಳೆ ನೋವು ಸಂಕಟಗಳನ್ನು ಕಿತ್ತುಹಾಕಿ ಸಂಭ್ರಮಕ್ಕೆ ಅಣಿ ಮಾಡುತ್ತವೆ. ಬೆಳಗುವ ಪ್ರತಿ ದೀಪದಲ್ಲಿ, ಈ ಸಡಗರ ಪ್ರೀತಿ ಇರುತ್ತದೆ.

ಇದು ಪ್ರತಿ ಕುಟುಂಬದ ಹಬ್ಬ: ದೀಪಾವಳಿ ನಿಜಾರ್ಥದಲ್ಲಿ ಕುಟುಂಬದ ಹಬ್ಬ. ಪುಟ್ಟ ಮಗುವಿನಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರನ್ನೂ ಎದ್ದು ನಿಲ್ಲಿಸುವಂತೆ ಮಾಡುವ ಘನತೆ ಇದರಲ್ಲಿದೆ. ಮಾನವೀಯ ಸಂಬಂಧ ಗಳು  ದೂರವಾಗುತ್ತಿರುವ ಈ ಕಾಲದಲ್ಲೂ ಕುಟುಂಬದ ಎಲ್ಲರೂ ಜತೆ ಸೇರಲು, ಖುಷಿಪಡಲು, ಜತೆಯಾಗಿ ಊಟ ಸವಿಯಲು, ಸಂತೋಷದಿಂದ ಕುಣಿದಾಡಲು ವೇದಿಕೆ ಕೊಡುವುದು ಈ ದೀಪಾವಳಿ. ಸಣ್ಣವರಿಗೆ. ಆಶೀರ್ವಾದದ ಮೂಲಕ ಹಿರಿಯರು ಎತ್ತರಕ್ಕೇರುತ್ತಾರೆ, ಎಣ್ಣೆಹಳದಿ  ಸ್ನಾನದ ಮೂಲಕ ತಾಯಿ-ಮಕ್ಕಳು, ಗಂಡ-ಹೆಂಡತಿ, ಸಹೋದರ, ಸಹೋದರಿಯರು ಹತ್ತಿರವಾಗುತ್ತಾರೆ.

ಇದು ಕೃತಜ್ಞತೆಯ ಹಬ್ಬವಾಗಿದೆ :- ದೀಪಾವಳಿ ಬಂದ ಕೂಡಲೇ ಎಲ್ಲವೂ ದೈವೀ ಸ್ಥಾನ ಪಡೆಯುತ್ತದೆ.ಎಣ್ಣೆ ಸ್ನಾನಕ್ಕೆ ಮುನ್ನ ನೀರಿನ ಹಂಡೆಯೂ ಹೂವಿನಿಂದ ಅಲಂಕಾರಗೊಳ್ಳುತ್ತದೆ, ದೀಪದ ಬೆಳಕಲ್ಲಿ ಅದು ದೇವರಾಗು ತ್ತದೆ. ಪೈರು ಗದ್ದೆಯ ನಡುವೆ ದೀಪವಿಟ್ಟು ಸಲ್ಲಿಸುವ ಪ್ರಾರ್ಥನೆ, ಎಲ್ಲ ಕೃಷಿ ಪರಿಕರಗಳಿಗೆ ನಡೆಯುವ ಪೂಜೆ ಪ್ರಕೃತಿಗೆ ಸಲ್ಲಿಸುವ ಕೃತಜ್ಞತೆಯ ರೂಪಕಗಳಾಗುತ್ತವೆ. ಬದುಕಿನ ಭಾಗವಾಗಿ ಜತೆಯಾಗಿ ಬಾಳುವ ಗೋವುಗಳ ಮೇಲಿನ ಪ್ರೀತಿ ಉತ್ತುಂಗಕ್ಕೇರುವ ಕಾಲ ಇದು. ಹಿತವಾದ ಸ್ನಾನ, ಬಣ್ಣ ಬಣ್ಣದ ಹೂವುಗಳ ಅಲಂಕಾರ, ರುಚಿಕರ ತಿನಿಸಿನ ಜತೆಗೆ ಬೆಳಗುವ ದೀಪಾರತಿಯಲ್ಲಿ ಒಲವಿನ ಧಾರೆಯೇ ಹರಿಯುತ್ತದೆ.

ಹೊಸ ವಸ್ತು ಖರೀದಿ ಹಬ್ಬ: ಬಂದ ಫಸಲಿನಿಂದ ಹಳೆ ಬಾಕಿ ತೀರಿಸಿ, ಹೊಸ ವಸ್ತು ಖರೀದಿಸಿ ಹೊಸ ಲೆಕ್ಕ ಶುರು ಮಾಡುವುದು ದೀಪಾವಳಿಯ ಹಳೆ ಶಿಷ್ಟಾಚಾರ. ಧನಲಕ್ಷಿ ್ಮ ಪೂಜೆಯೇ ಈ ಸಡಗರ. ದೀಪಾವಳಿಯ ಈ ಖರೀದಿ ಸಂಭ್ರಮ ಈಗಂತೂ ಹೊಸ ಎತ್ತರಕ್ಕೇರಿದೆ. ಮನೆ-ಮನೆಗಳ ಸಂಭ್ರಮ ಹೆಚ್ಚಿಸುವ ಸಲಕರಣೆಗಳ ಖರೀದಿಗೆ ಸಾವಿರ ವೈವಿಧ್ಯಗಳು ಹಿತವಾಗಿ ತೆರೆದುಕೊಳ್ಳುವುದರಿಂದ ದೀಪಾವಳಿ ಕಾತರವನ್ನು ಉಂಟು ಮಾಡು ತ್ತದೆ. ಬಡವರಿಂದ ಹಿಡಿದು ಶ್ರೀಮಂತರವರೆಗಿನ ಸರ್ವರಿಗೂ ಹಿತಕರವಾಗಿರುವ ಬೆಲೆ ಮತ್ತು ಗುಣಮಟ್ಟದ ವಿಸ್ತಾರ ಲೋಕ ದೀಪಾವಳಿಯ ವಿಶೇಷ.

ಜಗತ್ತಿನ ಹಬ್ಬ: – ಈ ಹಬ್ಬ ವಿವಿಧ ದೇಶದಲ್ಲಿ ಆಚರಿಸಲ್ಪಡುತ್ತದೆ. ಅಮೇರಿಕಾದ ವೈಟ್ ಹೌಸ್ ನಲ್ಲಿ ಕೂಡ ಈ ಹಬ್ಬ ನಡೆಯುತ್ತಿರುವುದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ಈ ಬೆಳಕಿನ ಹಬ್ಬ ಜಗತ್ತಿನ ಹಬ್ಬವಾಗಿ ಬದ ಲಾಗುತ್ತಿರುವುದು ಸಂತೋಷದ ವಿಚಾರ. ಮನೆ ಮನದ ಹಬ್ಬ ಗಡಿ ದಾಟಿ ಮುನ್ನಡೆಯುತ್ತಿರುವುದು ಉತ್ತಮ ಬೆಳವಣಿಗೆ.

ಈ ದೀಪದ ಬೆಳಕು ಕರೋನಾ ದೂರಮಾಡಲಿ: ಈ ದೀಪದ ಬೆಳಕು ಜನರ ಮನಸ್ಸಿನ ಕತ್ತಲೆ ದೂರ ಮಾಡಲಿ ದೇಶ ಪರ ದೇಶವನ್ನು ಚಿಂತೆಗೆ ದೂಡಿದ ಜನರ ಬದುಕಿನ ಪರೀಕ್ಷೆಗೆ ಅಣಿಮಾಡಿಸಿದ ಕರೋನಾ ಮಹಾಮಾರಿ ದೂರವಾಗಲಿ ಮತ್ತೊಮ್ಮೆ ಹಳೆಯ ದಿನಗಳು ಮರುಕಳಿಸಲಿ. ಈ ಬೆಳಕು ದೂರ ದೂರ ಸಾಗಿ ಸಮಸ್ತ ಕತ್ತಲೆ ದೂರವಾಗಲಿ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!