ಕನ್ನಡ ಮಾಧ್ಯಮವಾಗಿರಲಿ, ಇಂಗ್ಲಿಷ್ ಒಂದು ಭಾಷೆಯಾಗಿ ಬರಲಿ​~ಭಾಗ್ಯಶ್ರೀ ಐತಾಳ್​​​

ಕನ್ನಡವು ಒಂದು ದ್ರಾವಿಡ ಭಾಷೆಯಾಗಿದೆ. ಕನ್ನಡ ಲಿಪಿ ಸುಮಾರು 1500-1600 ವರ್ಷಗಳಿಗಿಂತಲೂ ಹಿಂದಿನದು. ಐದನೆಯ ಶತಮಾನದ ಹಲ್ಮಿಡಿ ಶಾಸನದ ಸಮಯಕ್ಕಾಗಲೇ ಕನ್ನಡವು ಸಾಕಷ್ಟು ಅಭಿವೃದ್ಧಿ ಹೊಂದಿತ್ತು. ಹೀಗಿರಲು ಒಂದನೇ ತರಗತಿಯಿಂದ ಆಂಗ್ಲಭಾಷೆ ಕಲಿಸುವ ಸರ್ಕಾರದ ಚಿಂತನೆಗೆ ರಾಜ್ಯದಲ್ಲಿ ಪರ-ವಿರೋಧ ವಾದಗಳು ತಲೆಎತ್ತಿವೆ. ಇಂತಹ ಸಂಗ್ಧಿದ್ದ ಪರಿಸ್ಥಿತಿಯಲ್ಲಿ ಒಂದೆಡೆ ನಾಡು, ಭಾಷೆ, ಸಂಸ್ಕೃತಿಗಳಿಗೆ ಎದುರಾಗಿರುವ ಆಪತ್ತಿನ ನಿವಾರಣೆಯ ಬಯಕೆ, ಮತ್ತೊಂದೆಡೆ ಈ ಸ್ಪರ್ಧಾತ್ಮಕ ಪ್ರಪಂಚ ದಲ್ಲಿ ನಮ್ಮ ಮಕ್ಕಳು ಯಶಸ್ವಿಯಾಗಲು ಪೂರಕವಾದ ಓದು, ವಿದ್ಯೆಯನ್ನು ಅವರಿಗೆ ಒದಗಿಸಬೇಕೆಂಬ ಹಂಬಲ. ಆಯ್ಕೆಯ ಅನಿವಾ ರ್ಯತೆ ಇದ್ದಾಗ ಎರಡನೆಯದಕ್ಕೇ ನಮ್ಮ ಪ್ರಾಮುಖ್ಯತೆ.

ಆದರೆ ಸರಳವಾಗಿ ಚಿಂತಿಸೋಣ. ನಮ್ಮ ಮನೆಯ ಮಾತು ಕನ್ನಡ. ನಮ್ಮ ಮಗು ಹುಟ್ಟಿದ ಕ್ಷಣದಿಂದ, ಅದನ್ನುದ್ದೇಶಿಸಿ ನಾವು ಆಡುವ ಮುದ್ದಿನ ನುಡಿಗಳು, ಹಾಡುವ ಲಾಲಿ ಹಾಡುಗಳು ಕನ್ನಡದಲ್ಲಿಯೇ ಇರುತ್ತವೆ. ನಾವು ಅದರೊಡನೆ ಸಂಭಾಷಿಸುವುದು ಕೂಡಾ ಕನ್ನಡದಲ್ಲಿ. ಇನ್ನು ಹುಟ್ಟಿದ ಪುಟ್ಟ ಮಗುವಿಗೆ ಯಾವುದೇ ವಿಷಯ ಅರ್ಥವಾಗುವುದು… ನೋಡುವುದರಿಂದ, ನೋಡಿದ್ದನ್ನು ಕೇಳುವುದರಿಂದ, ಕೇಳಿದ್ದನ್ನು ಅನುಕರಿಸುವುದರಿಂದ. ಹೀಗಾಗಿ, ದಿನನಿತ್ಯ ತಾನು ಕೇಳುವ ಮಾತೃಭಾಷೆಯ ಮೂಲಕ ತನ್ನ ಸುತ್ತ ಮುತ್ತಲಿನ ಪ್ರಪಂಚವನ್ನು ಮಗು ಅರ್ಥೈಸಿಕೊಳ್ಳುತ್ತಾ ಬೆಳೆಯುತ್ತದೆ.

ಮನೆಯೆ ತಾನೇ ಮೊದಲ ಶಾಲೆ ಜನನಿ ತಾನೇ ಮೊದಲ ಗುರು ಎಂಬಂತೆ ಮಗು, ತಾಯಿ ತಂದೆಯರನ್ನು, ಮನೆಯ ಇತರೆ ಸದಸ್ಯರನ್ನೂ, ಅವರ ನಡವಳಿಕೆಯನ್ನು ಗಮನಿಸುತ್ತಾ, ಅನುಕರಿಸುತ್ತಾ, ಅವರ ನಿರ್ದೇಶನಗಳನ್ನು ಪಾಲಿಸುತ್ತಾ ಕಲಿಯುತ್ತದೆ. ಈ ಪ್ರಕ್ರಿಯೆಯಲ್ಲಿ ಬಳಕೆಯಾಗುವ ಭಾಷೆಯೇ ಮಾತೃಭಾಷೆ.​ ​ಇನ್ನು ಮುಂದಿನ ಹಂತದಲ್ಲಿ ಮಗು, ತನ್ನ ಸುತ್ತಲಿನ ಪರಿಸರ-ಸಮಾಜ, ಇವುಗಳನ್ನು ನೋಡುತ್ತಾ, ಅಕ್ಕಪಕ್ಕದ ಜನರ, ನೆಂಟರಿಷ್ಟರ ನಡವಳಿಕೆಗಳನ್ನು ಗಮನಿಸುತ್ತಾ ಕಲಿಯುತ್ತದೆ. ಈ ಹಂತದಲ್ಲಿ ಮಗು ಬೆಳೆಯುವ ಪರಿಸರದ ಭಾಷೆ ಪ್ರಮುಖ ಸ್ಥಾನ ಪಡೆಯುತ್ತದೆ. ಅಂದರೆ ಕಲಿಕೆಯ ಮೊದಲ ಹಂತದಲ್ಲಿ ಮಗುವಿಗೆ, ಪ್ರಪಂಚ ಪರಿಚಯ – ಮಾತೃಭಾಷೆ ಮತ್ತು ಪಾರಿಸಾರಿಕ ಭಾಷೆಯಲ್ಲಿ ಆಗುತ್ತದೆ.​ ​ನಂತರದ ಹಂತವೇ ಶಾಲಾ ಪ್ರವೇಶ ಮತ್ತು ವ್ಯವಸ್ಥಿತ ವಾದ ಶಿಕ್ಷಣ ಪದ್ಧತಿಯ ಕಲಿಕಾ ಪ್ರಕ್ರಿಯೆಗೆ ಮಗು ಒಳಗಾಗುತ್ತದೆ. 
 
ಈಗ ಮಗುವಿಗೆ ಯಾವ ಶಿಕ್ಷಣ ದೊರಕಿಸಿಕೊಡುವುದು ಉತ್ತಮ ಎಂಬುದನ್ನು ನಿರ್ಧರಿಸುವ ಹೊಣೆ, ಅದರ ತಂದೆ ತಾಯಿಯರ ಹೆಗಲಿಗೆ ಬೀಳುತ್ತದೆ ಎಂಬುದು ಸತ್ಯವೇ ಆದರೂ, ಇಡೀ ಸಮಾಜ ಇದಕ್ಕೆ ಜವಾಬ್ದಾರಿಯಾಗ ಬೇಕಾಗುತ್ತದೆ. ಶಿಕ್ಷಣದ ಭಾಷಾ ಮಾಧ್ಯಮ ಯಾವುದಾಗಿರಬೇಕು? ಎಂಬ ಪ್ರಶ್ನೆ ಈಗ ಉದ್ಭವಿಸುತ್ತದೆ​.​ ಪ್ರಪಂಚದ ಅನೇಕ ಶ್ರೇಷ್ಠ ಭಾಷಾ ವಿಜ್ಞಾನಿಗಳು ಈ ವಿಷಯದಲ್ಲಿ ದಶಕಗಳ ಕಾಲ ನಡೆಸಿದ ಸಂಶೋಧನೆಗಳನ್ನು ಇಲ್ಲಿ ಈಗ ಪ್ರಸ್ತಾಪಿಸುವುದು ಸೂಕ್ತವೆಂದು ತೋರುತ್ತದೆ.

1. ಮಕ್ಕಳಿಗೆ ಪ್ರಪಂಚದ ಪರಿಚಯ ಬಾಲ್ಯದಲ್ಲಿ ಆಗುವುದು ಅದರ ಮಾತೃಭಾಷೆಯಲ್ಲಿಯೆ. ಹೀಗಾಗಿ, ಶಿಕ್ಷಣವನ್ನು ಮಾತೃ ಭಾಷೆಯಲ್ಲಿ ನೀಡುವುದು ಅತ್ಯಂತ ಉತ್ತಮ ವಿಧಾನ.​ 2. ಪ್ರಾಥಮಿಕ ಹಂತದ ಶಿಕ್ಷಣ – ಪ್ರಪಂಚದ, ಪದಗಳ, ವಸ್ತುಗಳ ಪರಿಚಯವನ್ನು ನೀಡುವುದೇ ಆಗಿರುತ್ತದೆ. ಮಗು, ಈ ಎಲ್ಲವನ್ನೂ ಮೊದಲಬಾರಿಗೆ ತಿಳಿದು​ ​ಕೊಳ್ಳುತ್ತಿರುವುದರಿಂದ, ಅದು ಈಗಾಗಲೆ ಸ್ವಲ್ಪವಾದರೂ ತಿಳಿದಿರುವ ಭಾಷೆಯಲ್ಲಿ ತಿಳಿಸುವುದು ಸೂಕ್ತ.​ 3. ಮಗುವಿನ ಕಲಿಕೆ, ಪರಭಾಷೆಯಲ್ಲಾದರೆ, ಅದಕ್ಕೆ ಮಾತೃ ಭಾಷೆಯಲ್ಲಿ ಕಲಿಯಲು ಬೇಕಾಗುವ ಸಮಯದ ಸುಮಾರು ಏಳು ಪಟ್ಟು ಹೆಚ್ಚು ಸಮಯ ವ್ಯಯವಾಗುತ್ತದೆ.ಅಂದರೆ ವಾಸ್ತವದಲ್ಲಿ, ಮಾತೃಭಾಷೆಯಲ್ಲಿ ಚಿಂತಿಸಲು, ಯೋಚಿಸಲು ಆಗದ ಮಗು, ತನ್ನ ಕ್ರಿಯಾತ್ಮಕತೆಯನ್ನು ಕಳೆದುಕೊಳ್ಳುತ್ತದೆ.

ಕನ್ನಡ ಮಾಧ್ಯಮದಲ್ಲಿ ಕಲಿತ ಅನೇಕ ಸ್ನೇಹಿತರ ಒಂದು ಆತಂಕವೆಂದರೆ – ನಮಗೆ ಯೋಗ್ಯತೆ, ಜಾಣತನ ಎಲ್ಲಾ ಇದ್ದೂ ಕೇವಲ ಇಂಗ್ಲಿಷ್‌ ಭಾಷೆ ಬಾರದೆ ಹೋಗಿದ್ದಕ್ಕಾಗಿ ಅವಕಾಶವಂಚಿತರಾಗಬೇಕಾಯ್ತು. ನಮ್ಮ ಮಕ್ಕಳಿಗೂ ಕನ್ನಡ ಮಾಧ್ಯಮದಲ್ಲಿ ಕಲಿಸಿದರೆ ಹೀಗೆಯೇ ಕಷ್ಟ ಆಗಬಹುದು ಎಂಬ ಭಯ.​ ಆದರೆ ನೆನಪಿರಲಿ ಭಾಷೆ ಒಂದು – ಸಂವಹನ ಮಾಧ್ಯಮ. ಭಾಷೆಯೇ ಜ್ಞಾನವಲ್ಲ. ಭಾಷೆ ಕಲಿಸುವ ವ್ಯಾಮೋಹದಲ್ಲಿ, ಜ್ಞಾನ ಕಲಿಕೆಗೆ ಪೆಟ್ಟು ನೀಡುವುದು ಸರಿಯೇ? ಮೊದಲಿಗೆ ವಿಷಯ ಗ್ರಹಿಕೆ, ಕಲಿಕೆ ಮುಖ್ಯವಾದಲ್ಲಿ ,ಮಗು ಅದನ್ನು ಅತ್ಯುತ್ತಮವಾಗಿ ಯಾವ ಮಾಧ್ಯಮದ ಮೂಲಕ ಕಲಿಯಲು ಸಾಧ್ಯವೋ ಆ ಮಧ್ಯಮದ ಮುಖೇನ ಕಲಿಸುವುದು ಸೂಕ್ತ. 
 
ಇನ್ನು ಶಿಕ್ಷಣ ತಜ್ಞರ ಪ್ರಕಾರ ಮಕ್ಕಳ  ಆರಂಭಿಕ ಹಂತದ ಶಿಕ್ಷಣಕ್ಕೆ ಮಾತೃಭಾಷೆಯಲ್ಲಿ ಮಾನ್ಯತೆ ನೀಡಬೇಕು. ಏಕೆಂದರೆ ಮಕ್ಕಳು ಸಾಮಾನ್ಯವಾಗಿ ಹೊಸ ಭಾಷೆಯ ಅಕ್ಷರಗಳನ್ನು ಒಂದಕ್ಕೊಂದು ಸೇರಿಸಿ ಓದಬೇಕಾಗುತ್ತದೆ. ಹೀಗಿರುವಾಗ ವಾಕ್ಯಗಳನ್ನು ವೇಗ ವಾಗಿ ಓದಲು ಸಾಧ್ಯವಾಗುವುದಿಲ್ಲ. ಅವರ ಮಾನಸಿಕ ಶ್ರಮವೆಲ್ಲ ಅಕ್ಷರಗಳನ್ನು ಒಂದೊಂದಾಗಿ ಪೋಣಿಸಿ, ಶಬ್ದಗಳನ್ನು ರಚಿಸುವು ದರಲ್ಲೇ ವ್ಯಯವಾಗುತ್ತದೆ. ಹೀಗಾಗಿ ಇಡೀ ವಾಕ್ಯಾರ್ಥದ ಕಲ್ಪನೆ ಅವರಲ್ಲಿ ದಾಖಲಾಗುವುದೇ ಇಲ್ಲ. ಹೀಗೆ ವೇಗವಾಗಿ ಓದಲು ಅಸಮರ್ಥವಾದ ಮಗುವಿಗೆ ಪಾಠದ ಒಟ್ಟು ಅರ್ಥವಾಗಲಿ, ಶಿಕ್ಷಕರು ಏನು ಹೇಳುತ್ತಿದ್ದಾರೆ ಎಂಬುದು ತಿಳಿಯುವುದು ಸಾಧ್ಯವಿಲ್ಲ. ನಿಜ, ಮಕ್ಕಳು ಎರಡು ಅಥವಾ ಮೂರು ಭಾಷೆಗಳನ್ನು ಕಲಿಯುವುದು ಕಷ್ಟವೇನಲ್ಲ. 
 
ವಾಸ್ತವವಾಗಿ ಎಂಟು ವರ್ಷದ ಕೆಳಗಿನ ಮಕ್ಕಳು ಹೊಸ ಭಾಷೆಗಳನ್ನು ಅತಿ ಸುಲಭವಾಗಿ ಕಲಿಯಬಲ್ಲರು. ಆದರೆ, ಮಾತೃಭಾಷೆಯ ಮೇಲೆ ಪೂರ್ಣ ಹಿಡಿತ ಬಂದಾದ ಮೇಲೆ ಮಾತ್ರ ಇನ್ನೊಂದು ಭಾಷೆಯ ಕಲಿಕೆ ಸುಲಭವಾಗುತ್ತದೆ. ಮಾತೃಭಾಷೆಯನ್ನು ಕಲಿಯು ವಾಗ ಮಗುವಿನ ಕಲ್ಪನಾಶಕ್ತಿ ವಿಕಾಸಗೊಳ್ಳುತ್ತಾ ಹೋಗುತ್ತದೆ. ಅನಂತರ ಅದೇ ಮಾದರಿಯನ್ನನುಸರಿಸಿ ದ್ವಿತೀಯ ಭಾಷೆಯ ಕಲಿಕೆ ಮಗುವಿಗೆ ಕಷ್ಟವಾಗದು.

ಇನ್ನು ಕಲಿಕೆ ಎಂದರೆ ಒಂದು ಜೀವಿ ಪಡೆದುಕೊಳ್ಳುವ ಎಲ್ಲ ಬಗೆಯ ತಿಳಿವು, ನೈಪುಣ್ಯ ಅಥವಾ ವರ್ತನೆಯ ರೀತಿಯ ಸಂಪಾ ದನೆ.ಇನ್ನು ಮಕ್ಕಳ ಐಕ್ಯೂ 12 ವರ್ಷದ ಒಳಗೆ ಬೆಳೆಯುತ್ತದೆ ಆದುದರಿಂದಮಕ್ಕಳು ಬುದ್ಧಿವಂತರಾಗಲು ಈ ಅವಧಿಯಲ್ಲಿ ತೊಡ ಕಿಲ್ಲದ ಮಾಧ್ಯಮದ ಮೂಲಕ ಕಲಿಯಬೇಕು. ಪ್ರಾಥಮಿಕ ಮತ್ತು ಮಾಧ್ಯಮಿಕ ಕಲಿಕೆ ಮಾತೃ​ ​ಭಾಷೆಯಲ್ಲಾದರೆ, ಮಗು ವಿಷಯ ಗ್ರಹಿಸುವುದು, ಅಭಿವ್ಯಕ್ತಪಡಿಸುವುದು ಸುಲಭವಾಗುತ್ತದೆ. ಈ ಹಂತದಲ್ಲಿ, ಮಗುವನ್ನು ಇತರ ಭಾಷೆಗಳಿಗೆ ಒಡ್ಡಬಹುದು. ಆದರೆ, ಅವನ್ನೂ ಕಲಿಯುವುದು ಮಾತೃಭಾಷೆಯ ಮೂಲಕವೇ ಆಗಿರಬೇಕು. ಒಂದು ಭಾಷೆಯನ್ನು ಜೀರ್ಣಿಸಿಕೊಂಡ ಮಗು, ಅದರ ತಳಹದಿಯ ಮೇಲೆ ಇತರ ಭಾಷೆಗಳನ್ನು ಸುಲಭವಾಗಿ ಕಲಿಯುತ್ತದೆ. ಅದುದರಿಂದ​ ಕನಿಷ್ಠ ಪ್ರೌಢಶಾಲೆಯವರೆಗೆ ಭಾರತೀಯ ಭಾಷೆಗಳ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ ಮಕ್ಕಳಲ್ಲಿ ವಿಷಯಗ್ರಹಣೆ, ಅವುಗಳನ್ನು ಕುರಿತ ಚಿಂತನೆ, ಸಮರ್ಥವಾದ ಸಂವಹನೆ ಮುಂತಾದ ಬಹುಮುಖ್ಯವಾದ ನಿಜವಾದ ಹಾಗೂ ಆಳವಾದ ಬುದ್ಧಿವಂತಿಕೆಯ ಅಂಶಗಳು ಹೆಚ್ಚಾಗಿ ಬೆಳೆದಿರುವುದು ಕಂಡುಬಂದಿದೆ.

ಸುಪ್ರಸಿದ್ಧ ಬಾಹ್ಯಾಂತರಿಕ್ಷ ವಿಜ್ಞಾನಿ ಪ್ರೊ. ಯು.ಆರ್. ರಾವ್, ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಕಲಿತಿದ್ದು ಕನ್ನಡ ಮಾಧ್ಯಮ ದಲ್ಲಿ.  ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಎನ್.ಆರ್. ನಾರಾಯಣಮೂರ್ತಿ ಕೂಡ ಕಲಿತ ಮಾಧ್ಯಮ ಕನ್ನಡ. ಇಂಥ ಬೇಕಾ ದಷ್ಟು ಉದಾಹರಣೆಗಳನ್ನು ಕೊಡಬಹುದು.​ ಜ್ಞಾನಕ್ಕೆ ಭಾಷೆಯ ಹಂಗಿರುವುದಿಲ್ಲ. ಅಭಿವ್ಯಕ್ತಿ ಮಾಧ್ಯಮಕ್ಕೆ ಮಾತ್ರ ಆ ಸಮಸ್ಯೆ. ತನ್ನ ಪರಿಸರದ ಭಾಷೆಯಲ್ಲಿ ಅರ್ಥ ಮಾಡಿಕೊಂಡ ಸಾಮಾನ್ಯ ಮಗುವೂ ಅಸಾಮಾನ್ಯ ಕೊಡುಗೆ ನೀಡಬಲ್ಲುದು.

 
 
 
 
 
 
 
 
 
 
 

Leave a Reply