Janardhan Kodavoor/ Team KaravaliXpress
25.6 C
Udupi
Saturday, July 2, 2022
Sathyanatha Stores Brahmavara

ಉಡುಪಿಯ ಶ್ರೀಕೃಷ್ಣ ಹಾಗೂ ಕಡಿಯಾಳಿ ಶ್ರೀಮಹಿಷಮರ್ದಿನಿಯ ಅಪೂರ್ವ ಬಾಂಧವ್ಯ~ ಪಿ.ಲಾತವ್ಯ ಆಚಾರ್ಯ

ಸಾವಿರಾರು ವರ್ಷಗಳ ಪೂರ್ವದಲ್ಲಿ ರಾಜಾ ರಾಮಭೋಜ ಎಂಬ ಅರಸನು ಉಡುಪಿಯ ಅಧಿಪತಿಯಾಗಿದ್ದ.ಗುರು ಹಿರಿಯರ ಸಲಹೆಯಂತೆ ರಾಜನು ಊರಿಗೊಂದು ಬೃಹತ್ ದೇವಾಲಯವನ್ನು ನಿರ್ಮಿಸುವ ಉದ್ದಿಶ್ಯ ಕಾರ್ಯ ಪ್ರವೃತ್ತನಾದ. ದೇವಾಲಯ ನಿರ್ಮಾಣದ ಪೂರ್ವಭಾವಿಯಾಗಿ ಭೂಮಿಪೂಜೆ ಸಲ್ಲಿಸುವ ನಿಮಿತ್ತ ನೇಗಿಲಿನಿಂದ ಭೂಮಿ ಉಳುವ ಸಂದರ್ಭದಲ್ಲಿ ವಿಷಸರ್ಪವೊಂದು ನೇಗಿಲಿನ ಎಡೆಗೆ ಸಿಲುಕಿ ಮೃತವಾಯಿತು.ಈ ಘಟನೆಯಿಂದ ರಾಜ ದುಃಖಿತನಾದ.ರಾತ್ರಿಯ ಸ್ವಪ್ನದಲ್ಲಿ ಪರಶುರಾಮ ದೇವರು ಕಾಣಿಸಿಕೊಂಡರು.
“ಚಿಂತಿಸುವ ಅವಶ್ಯಕತೆ ಇಲ್ಲ.ನಿನ್ನ ಯೋಜನೆಯನ್ನು ಹಾಳುಗೆಡಹುವ ಉದ್ದೇಶದಿಂದ ದೈತ್ಯನೊಬ್ಬನು ಈ ಷಡ್ಯಂತ್ರವನ್ನು ಹೆಣೆದಿದ್ದಾನೆ.ನಿನ್ನ ಕೆಲಸ ಮುಂದುವರಿಸು”ಎಂಬ ಸೂಚನೆ ಬಂದರೂ ರಾಜನ ಮನಸ್ಸು ಬದ ಲಾಗಲಿಲ್ಲ. ಮತ್ತೆ ಪರಶುರಾಮ ದೇವರು ಸ್ವಪ್ನದಲ್ಲಿ ಕಾಣಿಸಿಕೊಂಡು ಹೇಳಿದರು.”ಭವಿಷ್ಯದಲ್ಲಿ ನಿನ್ನ ಮತ್ತು ಈ ಊರಿನ ಎಲ್ಲಾ ಕಾರ್ಯಗಳು ಸುಗಮವಾಗಿ ನೆರವೇರಲು ಹಾಗೂ ಈ ನಾಡಿನ ಹೆಚ್ಚಿನ ರಕ್ಷಣೆಗಾಗಿ ಪ್ರಸ್ತುತ ನಿರ್ಮಿಸುತ್ತಿರುವ ದೇವಾಲಯದ 4 ದಿಕ್ಕುಗಳಲ್ಲಿ ನಾಲಕ್ಕು ದುರ್ಗಾಲಯ ಹಾಗೂ ನಾಲಕ್ಕು ಕೋನ ದಿಕ್ಕುಗಳಲ್ಲಿ ನಾಲಕ್ಕು ನಾಗಾಲಯ ನಿರ್ಮಿಸುವಂತೆ”ಸೂಚನೆ ನೀಡಿದರು. ಈ ಸಂದೇಶದಿಂದ ತೃಪ್ತನಾದ ರಾಜನು ನಾಲ್ಕು ದಿಕ್ಕುಗಳಲ್ಲಿ ಕಡಿಯಾಳಿ ಶ್ರೀಮಹಿಷಮರ್ದಿನಿ, ಬೈಲೂರು ಶ್ರೀಮಹಿಷಮರ್ದಿನಿ, ಪುತ್ತೂರು ಶ್ರೀದುರ್ಗಾಪರಮೇಶ್ವರಿ ಕನ್ನರಪಾಡಿ ಶ್ರೀಜಯದುರ್ಗಾ ಪರಮೇಶ್ವರಿ ಎಂಬ ನಾಲಕ್ಕು ದುರ್ಗಾಲಯಗಳನ್ನೂ ಹಾಗೂ ನಾಲಕ್ಕು ಕೋನ ದಿಕ್ಕುಗಳಲ್ಲಿದ್ದ ತಾಂಗೊಡು, ಮಾಂಗೋಡು,ಅರಿತೋಡು ಹಾಗೂ ಮುಚ್ಚಿಲಗೋಡು ಎಂಬಲ್ಲಿ ನಾಲಕ್ಕು ನಾಗಾಲಯಗಳನ್ನು ನಿರ್ಮಿಸಿದನು.
ರಾಜಾ ರಾಮಭೋಜ ಅರಸನ ಕನಸು ನನಸಾಯಿತು. ಉಡುಪಿಯಲ್ಲಿ ದೇವರ ಆಜ್ಞೆಯಂತೆ ಆತ ನಿರ್ಮಿಸಿದ  ದೇವಾಲಯವು ಶ್ರೀಮದನಂತೇಶ್ವರ ದೇವಾಲಯವೆಂದು ನಿರ್ವಿಘ್ನವಾಗಿ ನಿರ್ಮಾಣವಾಗಿ ಜಗತ್ಪ್ರಸಿದ್ದಿಯಾಯಿತು.
ರಾಜನ ಅಭೀಷ್ಟಗಳೆಲ್ಲವೂ ಈಡೇರಿತು. ಶ್ರೀಮದನಂತೇಶ್ವರ ದೇವಾಲಯದ ಈಶಾನ್ಯ ದಿಕ್ಕಿನಲ್ಲಿ ಕಡಿಯಾಳಿ ಎಂಬ ಸ್ಥಳದಲ್ಲಿ ಶ್ರೀಮಹಿಷಮರ್ದಿನಿ ದೇವಾಲಯವು ನಿರ್ಮಾಣಗೊಂಡಿತು.
ಕಡಿಯಾಳಿ ದೇವಾಲಯದ ವೈಶಿಷ್ಟ್ಯವೆಂದರೆ ಈ ಮಂದಿರವು ಶ್ರೀಮದನಂತೇಶ್ವರ ದೇವಾಲಯ ಹಾಗೂ ಶ್ರೀಕೃಷ್ಣಮಠಕ್ಕೆ ಅತೀ ಸಮೀಪದಲ್ಲಿ ಕೂಗಳತೆಯ ದೂರದಲ್ಲಿದೆ.ಅಷ್ಟೇ ಅಲ್ಲ ಕಡಿಯಾಳಿಯ ದೇವಿಯನ್ನು ಶ್ರೀಕೃಷ್ಣನ ಸಹೋದರಿ ಎಂಬ ಭಾವನೆಯಿಂದ ಪೂಜಿಸಲಾಗುತ್ತಿದೆ.
ಇದಕ್ಕೆ ನಿದರ್ಶನ ಎಂಬಂತೆ ವರ್ಷಂಪ್ರತಿ ವಿಜಯದಶಮಿಯಂದು (ಫಾವಂಜಿ)ಕೃಷ್ಣಮಠದಿಂದ ಕದಿರನ್ನು ಹಾಗೂ ಶ್ರೀಕೃಷ್ಣಪ್ರಸಾದವನ್ನು ವೈಭವೋಪೇತವಾದ ಮೆರವಣಿಗೆಯೊಂದಿಗೆ ಪಲ್ಲಕ್ಕಿಯಲ್ಲಿ ಹೊತ್ತು ಕಡಿಯಾಳಿ ದೇವಾಲ ಯಕ್ಕೆ ತರಲಾಗುವುದು.ಅಲ್ಲಿನ ದೇವಾಲಯದ ಮುಖ್ಯಸ್ಥರು ಶ್ರೀಕೃಷ್ಣಮಠದವರನ್ನು ಎದುರು ಗೊಳ್ಳುವರು. ಪರಸ್ಪರ ಉಭಯ ಕುಶಲೋಪಚರಿಯು ಜರಗುತ್ತದೆ.ತದನಂತರ ಕಡಿಯಾಳಿ ದೇವಾಲಯ ದಲ್ಲಿರುವ ಶಮಿವೃಕ್ಷದ ಸಣ್ಣ ಗೆಲ್ಲುಗಳನ್ನು ಎಲೆಗಳನ್ನು ತಂದು ಸನ್ನಿಧಿಯಲ್ಲಿಟ್ಟು ಪೂಜಿಸಿ ಪಲ್ಲಕ್ಕಿಯಲ್ಲಿರಿಸಿ ಅಲ್ಲಿಂದ ಮತ್ತೆ ಮೆರವಣಿಗೆ ಯಲ್ಲಿ ಕೃಷ್ಣನ ಸನ್ನಿಧಿಗೆ ಶಮಿಯನ್ನು ಗೌರವದಿಂದ ಬರಮಾಡಿಕೊಳ್ಳಲಾಗುವುದು.
ಕಡಿಯಾಳಿಯ ರಥೋತ್ಸವದ ಪೂರ್ವಭಾವಿಯಾಗಿ ಜರಗುವ ಕಟ್ಟೆಪೂಜೆಯ ಸಂದರ್ಭದಲ್ಲೂ ಕೂಡಾ ಕಡಿ ಯಾಳಿಯ ಶ್ರೀಮಹಿಷಮರ್ದಿನಿಯು ರಥದಲ್ಲಿ ವಿರಾಜಮಾನಳಾಗಿ ಕೃಷ್ಣನ ರಥಬೀದಿಗೆ ಆಗಮಿಸುವಳು. ಸಹೋದರಿ ಮಹಿಷಮರ್ದಿನಿಯು ಕೃಷ್ಣನ ಸನ್ನಿಧಾನದಲ್ಲಿ ವಿರಾಜಮಾನಳಾಗಿ ವಿಶೇಷ ಪೂಜೆ ಸ್ವೀಕರಿಸುವಳು. ಅಷ್ಟಾವದಾನಗಳು ಜರಗುವವು. ತದನಂತರ ಕೃಷ್ಣಮಠದ ಮಧ್ವ ಸರೋವರದಲ್ಲಿ ಮಹಿಷಮರ್ದಿನಿಯ
ಅವಬೃತೋತ್ಸವ ನೆರವೇರುತ್ತದೆ. ಸಹೋದರ ಕೃಷ್ಣನ ಕೆರೆಯಲ್ಲಿ ಮಹಿಷಮರ್ದಿನಿಯು ಓಕುಳಿ ಸ್ನಾನವನ್ನು ಪಡೆಯುತ್ತಾಳೆ.ನಂತರ ಪಲ್ಲಕ್ಕಿಯಲ್ಲಿರಿಸಿ ವಿಶೇಷ ಗೌರವದೊಂದಿಗೆ ಕೃಷ್ಣನ ಸಾನ್ನಿಧ್ಯದಿಂದ ದೇವಿಯನ್ನು ಬೀಳ್ಕೊಡಲಾಗುವುದು.ಪರ್ಯಾಯ ಕೃಷ್ಣಮಠದ ಯತಿಗಳು ಖುದ್ದು ಉಪಸ್ಥಿತರಿದ್ದು ದೇವಿಯ ಈ ಎಲ್ಲಾ ಪೂಜೆಯಲ್ಲಿ ಪಾಲ್ಗೊಳ್ಳುವರು.
ಈ ಸಂದರ್ಭದಲ್ಲಿ ಮಹಿಷಮರ್ದಿನಿ ದೇವಾಲಯದ ಸಮಸ್ತರಿಗೂ ಸಂಭಾವನೆ ಸಲ್ಲುತ್ತದೆ.ಮತ್ತು ದೇವಿಗೆ ನಿವೇದಿಸಿದ ವಸಂತ ಮಾಸದ ವಿಶೇಷ ತಿನಿಸುಗಳಾದ ಅರಳು, ಕಡಲೆ, ಕೋಸಂಬರಿ,ಹಾಗೂ ಒಳ್ಳೆಮೆಣಸು ಬೆಲ್ಲ ಶುಂಠಿ ಬೆರೆಸಿದ ಪಾನಕದ ಉಪಾಹಾರವೂ ಜರಗುತ್ತದೆ. ಆಶ್ಚರ್ಯವೆಂದರೆ ಉಡುಪಿಯಲ್ಲಿ ಅನೇಕ ದುರ್ಗಾಲಯಗಳು ಇವೆ.ಆದರೆ ಕೃಷ್ಣನ ರಥಬೀದಿಗೆ ರಥದಲ್ಲಿ ಆಗಮಿಸಿ ಸಹೋದರ ಕೃಷ್ಣನ ಸನ್ನಿಧಾನದಲ್ಲಿ ಪೂಜೆ ಸ್ವೀಕರಿಸುವ ಏಕೈಕ ಮಹಾ ತಾಯಿಯು ಕಡಿಯಾಳಿಯ ಶ್ರೀಮಹಿಷ ಮರ್ದಿನಿ ಎಂಬುದು ಇಲ್ಲಿನ ವಿಶೇಷತೆ.
ವರ್ಷಕ್ಕೊಮ್ಮೆ ಧನುರ್ಮಾಸದ ಸಂದರ್ಭದಲ್ಲಿ ಕಡಿಯಾಳಿ ಮಹಿಷಮರ್ದಿನಿಯ ದೇವಾಲಯದಲ್ಲಿ ಉಡುಪಿ ಕೃಷ್ಣದೇವರ ಹೆಸರಲ್ಲಿ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ (ಸಮಾರಾಧನೆ) ಜರಗುತ್ತದೆ.ಕೃಷ್ಣಮಠ ಹಾಗೂ ಕಡಿಯಾಳಿ ದೇವಾಲಯದ ಪ್ರಮುಖರು ಈ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ.
ಈ ಸನ್ನಿಧಾನದ ಇನ್ನೊಂದು ವೈಶಿಷ್ಟ್ಯ ವೆಂದರೆ..ಉಡುಪಿಯ ಅಷ್ಟಮಠದ ಯತಿಗಳು ಪರ್ಯಾಯ ಪೂರ್ವಭಾವಿಯಾಗಿ ಪುರ ಪ್ರವೇಶ ಸಲ್ಲಿಸುವ ಸಂದರ್ಭದಲ್ಲಿ ಉಡುಪಿಯ ಜೋಡುಕಟ್ಟೆಯಿಂದ ಆಗಮಿಸುವ ಸಂಪ್ರದಾಯವಿದೆ.
ಆದರೆ ಶ್ರೀಶಿರೂರು ಮಠದ ಪರಂಪರೆಯ ಯತಿಗಳು ಪರ್ಯಾಯ ಪೂರ್ವಭಾವಿ ಪುರಪ್ರವೇಶದ ಸಂದರ್ಭದಲ್ಲಿ ಕಡಿಯಾಳಿ ದೇವಾಲಯಕ್ಕೆ ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಶ್ರೀಮಹಿಷಮರ್ದಿನಿಯ ಸಮ್ಮುಖದಿಂದ ಪುರಪ್ರವೇಶವನ್ನು ಆರಂಭಿಸುತ್ತಾರೆ.ಈ ಶಿಷ್ಟಾಚಾರ ನೂರಾರು ವರ್ಷಗಳಿಂದ ಹರಿದು ಬಂದಿದೆ.
ಅಂತೆಯೇ ಕಡಿಯಾಳಿ ಉತ್ಸವಕ್ಕೆ ಪೂರ್ವಭಾವಿಯಾಗಿ ಕಟ್ಟೆಪೂಜೆ ನಿಮಿತ್ತ ಕೃಷ್ಣನ ಸನ್ನಿಧಾನಕ್ಕೆ ತೆರಳುವ ಮೊದಲು ಶ್ರೀಶಿರೂರು ಮಠಕ್ಕೆ ಆಗಮಿಸುವ ಮಹಾತಾಯಿಯು ಶ್ರೀವಿಠಲದೇವರ ಮುಂಭಾಗದಲ್ಲಿ ಪೂಜೆ ಸ್ವೀಕರಿಸುವಳು.
ಶ್ರೀಶಿರೂರುಮಠದ ಕೀರ್ತಿಶೇಷ ಶ್ರೀಲಕ್ಷ್ಮೀವರ ತೀರ್ಥ ಶ್ರೀಪಾದರು ಕಡಿಯಾಳಿ ಶ್ರೀಮಹಿಷಮರ್ದಿನಿಯ ಮಹಾನ್ ಉಪಾಸಕರಾಗಿದ್ದರು. ಶ್ರೀಶಿರೂರುಮಠದಲ್ಲಿ ವರ್ಷಂಪ್ರತಿ ಜರಗುತ್ತಿದ್ದ ದೇವಿಯ ಕಟ್ಟೆಪೂಜೆಯ ಸಂದರ್ಭದಲ್ಲಿ ತಾಯಿ ಮಹಿಷಮರ್ದಿನಿಯ ಪೂಜೆಗಾಗಿ ವಿಶಿಷ್ಟರೀತಿಯ ಸುಂದರವಾದ ಉಯ್ಯಾಲೆಯನ್ನು ನಿರ್ಮಿಸಿದ್ದರು.ಪೂಜೆಯ ಸಂದರ್ಭದಲ್ಲಿ ಈ ಉಯ್ಯಾಲೆಯಲ್ಲಿ ದೇವಿಯನ್ನು ತಾವೇ ಕೈಯ್ಯಾರೆ ಕೂರಿಸಿ ಉಯ್ಶಾಲೆಯನ್ನು ತೂಗುತ್ತಾ ಪೂಜೆ ಸಲ್ಲಿಸುತ್ತಿದ್ದರು.
ಜೊತೆಗೆ ಕಡಿಯಾಳಿಯ ಮಹಿಷಮರ್ದಿನಿ ದೇವಿಯ ಮೇಲಿನ ವಿಶೇಷ ಭಕ್ತಿಯಿಂದ ಹಲವಾರು ಭಾರಿ ನವ ರಾತ್ರಿಯ ಪರ್ವಕಾಲದಲ್ಲಿ ಕಡಿಯಾಳಿ ಶ್ರೀಮಹಿಷಮರ್ದಿನಿಯ ಅಲಂಕಾರವನ್ನು ಉಡುಪಿ ಕೃಷ್ಣನಿಗೆ ಸಲ್ಲಿ ಸಿದ್ದರು. ನೂರಾರು ವರ್ಷಗಳಿಂದ ಸಾಗಿ ಬರುತ್ತಿರುವ ಉಡುಪಿ ಕೃಷ್ಣಮಠ ಹಾಗೂ ಕಡಿಯಾಳಿ ಶ್ರೀಮಹಿಷ ಮರ್ದಿನಿ ದೇವಾಲಯದ ಈ ಸತ್ಸಂಪ್ರದಾಯಗಳು ಸಹೋದರ ಹಾಗೂ ಸಹೋದರಿಯ ಅಪ್ಪಟ ಪ್ರೀತಿ ಪ್ರೇಮ ವಾತ್ಸಲ್ಯಕ್ಕೆ ಜ್ವಲಂತ ಸಾಕ್ಷಿಯಾಗಿದೆ.
ಆತ್ಮೀಯ ಭಗವದ್ಭಕ್ತರೆ, ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಿರುವ ಕ್ಷಿಪ್ರ ಪ್ರಸಾದಿನಿ ಶ್ರೀಮಹಿಷಮರ್ದಿನಿಯ ಸನ್ನಿಧಿಯಲ್ಲಿ ಬ್ರಹ್ಮಕಲಶ ಸಂಭ್ರಮ ಇದೀಗ ವೈಭವದಿಂದ ಜರಗುತ್ತಿದೆ. ದೇವಿಯ ಪರಿಪೂರ್ಣ ಅನುಗ್ರಹ ಸರ್ವರಿಗೂ ಕರುಣವಾಗಲಿ ಎಂದು ಪ್ರಾರ್ಥಿಸುತ್ತಾ ಈ ಪುಟ್ಟ ಬರಹವನ್ನು ಜಗನ್ಮಾತೆಯ ಪಾದಕಮಲಗಳಿಗೆ ಅರ್ಪಿಸುತ್ತಿದ್ದೇನೆ.
!!ಸರ್ವೇ ಜನಾಃ ಸುಖಿನೋ ಭವಂತು!!
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!