Janardhan Kodavoor/ Team KaravaliXpress
29.6 C
Udupi
Sunday, August 1, 2021

ಜಾದೂಲೋಕದ ಅಂತರ್ ರಾಷ್ಟ್ರೀಯ ತಾರೆ​  ಜೂನಿಯರ್ ಶಂಕರ್ ​~ ರಾಜೇಶ್ ಭಟ್ ಪಣಿಯಾಡಿ .  ​ ​

ಪೂರ್ಣ ಚಂದ್ರನ ತೇಜಸ್ಸಿರುವ ತೇಜಸ್ವಿ ಇನ್ನೂ ಕಾಲೇಜು ಓದುವ ಹುಡುಗನಂತೆ ಕಾಣುವ ಮೇಧಾವಿ​. ​ ಆದರೆ ಜಾದೂ ಕ್ಷೇತ್ರದಲ್ಲಿ – ಜಗತ್ತನ್ನೇ ಒಂದರೆ ಘಳಿಗೆ ಮರೆಮಾಚಬಹುದಾದ ಸಾಮರ್ಥ್ಯ ಇರುವ ವಿಸ್ಮಯ ಮಾಂತ್ರಿಕ.​ ಮ್ಯಾಜಿಕ್ ಮಾಂತ್ರಿಕ ಪ್ರೊಫೆಸರ್ ಶಂಕರ್ ಹಾಗೂ ಲಕ್ಷ್ಮಿ ಶಂಕರ್ ರವರ ಪ್ರೀತಿಯ ಕುವರ​. ​ತಂದೆಯ ಪ್ರೇರಣೆಯಿಂದ ಅತೀ ಚಿಕ್ಕ ಪ್ರಾಯದಲ್ಲಿ ಅಂದರೆ ತೊದಲು ನುಡಿಗಳಾಡುವ 3 ವರ್ಷದ ವಯಸ್ಸಿನಲ್ಲೇ ಪ್ರಥಮ ಜಾದೂ  ಕಾರ್ಯಕ್ರಮ ನೀಡಿದ ಅದ್ಭುತ ಕಲಾವಿದ. 

ತನ್ನ 4ನೇ ವರ್ಷದ ಪ್ರಾಯದಲ್ಲಿ 50,000 ಕ್ಕೂ ಮಿಕ್ಕಿದ ಅಪಾರ ಜನಸ್ತೋಮದ ಎದುರು ದೂರದ ನ್ಯೂಯಾರ್ಕ್ ನಲ್ಲಿ ಜಾದೂ ಪ್ರದರ್ಶನ. ಅಂದಿನಿಂದ ಇಂದಿನವರೆಗೂ ನಡೆದ ಇಂದ್ರಜಾಲದ ಈ ಪಯಣದಲ್ಲಿ ಛೂ ಮಂತರ್, ಗಿಲಿಗಿಲಿ ಮ್ಯಾಜಿಕ್ ಶೀರ್ಷಿಕೆಯಡಿಯಲ್ಲಿ ದೇಶ ವಿದೇಶಗಳಲ್ಲಿ ಆ ಎಳೆಯ ಪ್ರಾಯದಲ್ಲೇ​ ಸುಮಾರು 5500 ಕ್ಕೂ ಹೆಚ್ಚು ಜಾದೂ ಕಾರ್ಯಕ್ರಮಗಳನ್ನು ನೀಡಿರುವುದು  ದೊಡ್ಡ ಸಾಧನೆಯಲ್ಲದೆ ಇನ್ನೇನು?…

ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರ ಸಮ್ಮುಖದಲ್ಲಿ , ರಾಷ್ಟ್ರಪತಿ ದಿ. ಜೈಲ್ ಸಿಂಗ್ ಹಾಗೂ ಶಂಕರ್ ದಯಾಳ್ ಶರ್ಮಾರವರಿಗಾಗಿ ರಾಷ್ಟ್ರಪತಿ ಭವನದಲ್ಲಿ , ಭಾರತ – ಪಾಕಿಸ್ತಾನ ಗಡಿಪ್ರದೇಶದಲ್ಲಿ ಸಿಕ್ಕಿಂ ಹಿಮಚ್ಛಾದಿತ ಪರ್ವತ ಪ್ರದೇಶಗಳ ಕಾರ್ಯನಿರತ ಸೇನಾ ಯೋಧರಿಗಾಗಿ, ಆಸ್ಪತ್ರೆ, ವೃದ್ಧಾಶ್ರಮ, ಅನಾಥಾಶ್ರಮಗಳಲ್ಲಿ ಉಚಿತವಾಗಿ, ಹೊಸ್ಟನ್, ಲಾಸ್ ಏಂಜಲೀಸ್, ಹಾಲೆಂಡ್ ಹೀಗೆ ವಿದೇಶೀ ನೆಲದ ಜಾದೂ ಸಮ್ಮೇಳನಗಳಲ್ಲಿ ತನ್ನ ಪ್ರತಿಭೆಯನ್ನು ಮೆರೆದ ನಮ್ಮೂರ ಹೆಮ್ಮೆಯ ಕಲಾ ಕಣ್ಮಣಿ ಈತ.
ಬಯಲಿನಲ್ಲಿ ಆನೆಯನ್ನೇ ಮರೆ ಮಾಡುವ, ಕೋವಿಯಿಂದ ಹಾರಿದ ಗುಂಡನ್ನು ಕ್ಕೆಯಿಂದ ಹಿಡಿಯುವ ಹೀಗೆ ಹಲವು ವಿಭಿನ್ನ ವಿಸ್ಮಯಗಳ ಚಮತ್ಕಾರಗಳಿಂದ ದೇಶ ವಿದೇಶೀಯರ ಗಮನ ಸೆಳೆಯುವ ಜೊತೆಗೆ ಜಗತ್ಪ್ರಸಿದ್ಧ ಜಾದೂಗಾರರಾದ ಡಗ್ ಹೆನ್ನಿಂಗ್, ವಿಲ್ಸನ್ ಆಲಿ ಭಾಂಗೋ ಮುಂತಾದವರಿಂದ ಪ್ರಶಂಸಿಸಲ್ಪಟ್ಟ ಯುವ ಭಾರತೀಯ ಜಾದೂಗಾರರೆನಿಸಿ ಕೊಂಡಿರುವುದು ನಮ್ಮ ನಾಡಿಗೇ ಹೆಮ್ಮೆ.
ಹಲವಾರು ಪ್ರಶಸ್ತಿಗಳಿಂದ ಪುರಸ್ಕೃತರಾದ ಇವರು ಸಂಗೀತ, ಹಿಮ್ಮೇಳ , ಸಾಹಿತ್ಯ, ಬರವಣಿಗೆ, ಸಂಪನ್ಮೂಲ ವ್ಯಕ್ತಿಯಾಗಿ , ರಂಗಮಂಚದಲ್ಲಿ ಬೆಳಕಿನ ವಿನ್ಯಾಸ ಹೀಗೆ ಹಲವು ಹವ್ಯಾಸಗಳಲ್ಲಿ ಸೈ ಎನಿಸಿಕೊಂಡ ಸರದಾರ. ಪ್ರಸ್ತುತ ಮಂಗಳೂರಿನ ಸ್ಕಂದಾ ಎಲೆಕ್ಟ್ರಿಕಲ್ ನ ಮ್ಯಾನೇಜರ್ ಹಾಗೂ ಸಾಫ್ಟ್ ವೇರ್ ಡೆವಲಪರ್ ಆಗಿ ವೃತ್ತಿ ಜೀವನ ನಡೆಸುತ್ತ ಕಲಾವಿದೆ ಪತ್ನಿ ಮೈಥಿಲಿ ಹಾಗೂ ಮುದ್ದಿನ ಮಗು ವರ್ಚಸ್ವಿಯ ಜೊತೆ ಕ್ಷೀರ ಶರ್ಕರದಂತೆ  ಸುಖೀ ಜೀವನ ನಡೆಸುತ್ತಿದ್ದಾರೆ.
ಅವರ ಜೀವನದ ಈ ವಿಶೇಷ ಸಾಧನೆಗೆ ತಲೆಬಾಗಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ). ಮತ್ತು ಇ-ಸಮುದಾಯ ಉಡುಪಿ ಅವರನ್ನು ಗುರುತಿಸಿ, ಅವರ ಜೊತೆ ಮುಕ್ತ ಸಂವಾದಗೈಯುವುದರ ಮೂಲಕ ಗೌರವ ಪೂರ್ಣವಾಗಿ ಅಭಿನಂದಿಸುತ್ತದೆ. ಇದೇ ಬರುವ 17 ರಂದು ಸಂಜೆ 6 ಗಂಟೆಗೆ samskruthi vishwa you tube ಚಾನಲ್ ನಲ್ಲಿ ವಿಶ್ವ ಕಲಾ ಸಂಭ್ರಮ ಕಾರ್ಯಕ್ರಮದಡಿಯಲ್ಲಿ ಅವರ ಕಲಾ ಪ್ರೌಡಿಮೆಯನ್ನು ವೀಕ್ಷಿಸಲು ಮರೆಯಬೇಡಿ.

​​

- Advertisement -

ಸಂಬಂಧಿತ ಸುದ್ದಿ

Leave a Reply

ಸುಪ್ರಭಾತ

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!