ಸುಭದ್ರ ಜೀವನಕ್ಕೆ ಸುರಕ್ಷಿತ ಯೋಜನೆ~ಪೂರ್ಣಿಮಾ ಜನಾರ್ದನ್

ಸುಭದ್ರ ಜೀವನಕ್ಕೆ ಸುರಕ್ಷಿತ ಯೋಜನೆ ,- ಅಂಚೆ ಜೀವ ವಿಮೆ‌ ಮತ್ತು ಗ್ರಾಮೀಣ ಅಂಚೆ ಜೀವ ವಿಮೆ..

ಒಂದು ಬೆಳಿಗ್ಗೆ ಕಚೇರಿಗೆ ಹೊರಡುವ ಗಡಿಬಿಡಿಯಲ್ಲಿದ್ದಾಗ ಚರವಾಣಿಗೆ ನನ್ನ ಆತ್ಮೀಯ ಗೆಳತಿಯ ಕರೆ. ಮತ್ತೆ ತೆಗೆಯೋಣ ಎಂದನ್ನಿಸಿದರೂ ಎಡೆಬಿಡದೆ‌ ಬರುತ್ತಿರುವ ಆಕೆಯ ಕರೆ ಏನೋ ಅವಸರದ ವಿಷಯವುರ ಬಹುದೆಂದೆನಿಸಿ‌ ಮಾತನಾಡಲು ಉದ್ಯಕ್ತಳಾದೆ. ಕರೆ ಸ್ವೀಕರಿಸುತ್ತಲೇ ಅಳುತ್ತ ಅಳುತ್ತ ಅವಳು ಅಂದ ಮಾತಿನಿಂದ ಆ ದಿ ಬೆಳಿಗ್ಗೆ ನಮ್ಮ ಕಾಲೇಜು ಸಹಪಾಠಿ ನಡುಹರೆಯದಲ್ಲಿ ಹೃದಯಾಘಾತವಾಗಿ ಎಲ್ಲರನ್ನೂ ಅಗಲಿ ಜೀವನ ಪಯಣ ಮುಗಿಸಿ ಇಹಲೋಕ ಯಾತ್ರೆ ಕೈಗೊಂಡಿದ್ದ.ಲೋಕ ಜ್ಞಾನ ಅರಿಯದ ಪತ್ನಿ, ಈಗಷ್ಟೇ ಜಗತ್ತನ್ನು ಅರಿಯಲು ಯತ್ನಿಸುವ ಇಬ್ಬರು ಮಕ್ಕಳು. ಒಟ್ಟಾರೆ ಒಂದು ಕುಟುಂಬದ ಕಷ್ಟದ ಬದುಕು ಮುಂದಿತ್ತು. ಕೆಳ ಮಧ್ಯಮ ವರ್ಗದ ಆತ ನನ್ನ ಒತ್ತಾಯದ ಮೇರೆಗೆ ಸುಮಾರು ಹತ್ತು ಲಕ್ಷದ ಅಂಚೆ ಜೀವ ವಿಮೆಯನ್ನು ಮಾಡಿಸಿ ಕೇವಲ‌ ಎರಡು ವರುಷ ಕಳೆದಿತ್ತು. ಕೆಲವೇ ದಿನಗಳಲ್ಲಿ ಪೂರ್ತಿ ಹತ್ತು ಲಕ್ಷ ಹಾಗು ಎರಡು ವರುಷದ ಬೋನಸ್ ಒಟ್ಟು ಸೇರಿಸಿದ ಚೆಕ್ ಆತನ ಮಡದಿಯ ಕೈಗಿಟ್ಟಾಗ ದಿಕ್ಕೆಟ್ಟ ಆಕೆಯ ಕಣ್ಣುಗಳಲ್ಲಿ ಸ್ವಲ್ಪ ನೆಮ್ಮದಿಯ ಅಶ್ರುಧಾರೆ.

ಮತ್ತೊಂದು ದಿನ ಹೀಗೇ ಒಂದು ಭಾನುವಾರ ಮನೆಯಲ್ಲಿ ‌ಕಥೆ ಪುಸ್ತಕ ಓದುತ್ತಾ ಸಂಜೆ ಹೊತ್ತಿನಲ್ಲಿ ಕುಳಿತಿರುವಾಗ ಒಂದು ಕಾರಿನಲ್ಲಿ ಎಷ್ಟೋ ವರ್ಷಗಳ ಹಿಂದೆ ನನ್ನೊಂದಿಗೆ ಸಹೋದ್ಯೋಗಿಯಾಗಿ‌ ಕೆಲಸ ಮಾಡುತ್ತಿದ್ದ ಹಿರಿಯರೊಬ್ಬರು ಪರಿವಾರ ಸಮೇತ ಮನೆಗೆ ಬಂದರು. ಬಂದವರೇ ನಿಮ್ಮ ಉಪಕಾರದಿಂದ ನನ್ನ ಮಗಳ‌ ಮದುವೆ ಯಾವುದೇ ಕಷ್ಟವಿಲ್ಲದೆ ನೀರು ಕುಡಿದಂತೆ ಆಯಿತು, ನಿಮಗೆ ಕೃತಜ್ಞತೆ ಸಲ್ಲಿಸಲು‌ ಬಂದೆ ಎಂದಾಗ ವಿಸ್ಮಯದಿಂದ ವಿಷಯ ಏನೆಂದು ಕೇಳಲು ಆಗ ಅವರು ಬೇಡ ಬೇಡ ಅಂದರೂ ನನ್ನ ಒತ್ತಾಯದಿಂದ ಮಾಡಿಸಿದ ಅಂಚೆ ಜೀವ ವಿಮೆ ಇದೀಗ ಪಕ್ವಗೊಂಡಿದ್ದು ಸುಮಾರು ಇಪ್ಪತ್ತು ಲಕ್ಷದಷ್ಟು ಹಣ ಅವರಿಗೆ ಮಗಳ ಮದುವೆ ಸಮಯಕ್ಕೆ ಸಿಕ್ಕಿದ್ದು ಸಂತಸ ತಂದಿತ್ತು.

ಇದು ಭಾರತೀಯ ಅಂಚೆ ಇಲಾಖೆಯ ಅಂಚೆ ಜೀವ ವಿಮೆ ಹಾಗು ಗ್ರಾಮೀಣ ಅಂಚೆ ಜೀವ ವಿಮೆಯ ಹೆಚ್ಚು ಗಾರಿಕೆ. ತಿಂಗಳಿಗೊಮ್ಮೆ ಇಲ್ಲವೇ ಮೂರು ತಿಂಗಳಿಗೊಮ್ಮ ಅಥವಾ ಅರ್ಧ ವಾರ್ಷಿಕ, ವಾರ್ಷಿಕ ಸಮಯದಲ್ಲಿ ಕಡಿಮೆ ಪ್ರೀಮಿಯಮ್ ‌ಕಟ್ಟಿ ಅಧಿಕ ಬೋನಸ್‌ ಪಡೆಯಬಹುದಾದ‌ ಅಂಚೆ ಜೀವ ವಿಮೆ ಪೋಸ್ಟಲ್ ಲೈಫ್ ಇನ್ಯೂರೆನ್ಸ್ ಬಲು ಪ್ರಚಲಿತ. 19 ವರುಷದಿಂದ 55 ವರುಷಗಳ‌ ಒಳಗಿನ ಸರಕಾರಿ, ಅರೆ ಸರಕಾರಿ ಉದ್ಯೋಗಿಗಳು, ಬಿಎಡ್ ಪದವೀಧರರು, ಅಧ್ಯಾಪಕರು, ಇಂಜಿನಿಯರ್, ಡಾಕ್ಟರ್, ವಕೀಲಿ ವೃತ್ತಿ, ಚಾರ್ಟರ್ಡ ಅಕೌಂಟೆಂಟ್, ನರ್ಸಿಂಗ್, ಹೀಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಪ್ರೊಫೆಷನಲ್ಸ್ ಮಾಡಬಹುದಾದ ಈ ಯೋಜನೆ ಯಲ್ಲಿ ಹೂಡುವ ಹಣವು ತೆರಿಗೆಯಲ್ಲಿ ವಿನಾಯತಿ‌ ಪಡೆಯಲೂ ತೋರಿಸಬಹುದಾಗಿದೆ.ಅಂತರ್ಜಾಲ ಮುಖಾಂತರ, ಇಲ್ಲವೇ ಭಾರತದ ಯಾವುದೇ ಅಂಚೆ ಕಚೇರಿಯಲ್ಲಿ ತಿಂಗಳ ಕಂತು ಕಟ್ಟಬಹುದಾಗಿದ್ದು ಕಡಿಮೆ ಪ್ರೀಮಿಯಮ್ ಅಧಿಕ ಬೋನಸ್ ಎಂಬ ಘೋಷಣಾ ವಾಕ್ಯದೊಂದಿಗೆ ಜನ ಸೇವೆಗೆ ತೆರೆದುಕೊಂಡಿದೆ. ಗ್ರಾಮೀಣ ಪ್ರದೇಶದ ಜನರ ಅನುಕೂಲಕ್ಕಾಗಿ ಗ್ರಾಮೀಣ ಅಂಚೆ ಜೀವ ವಿಮಾ ಸೌಲಭ್ಯ ಲಭ್ಯವಿದ್ದು ಗ್ರಾಮೀಣ ಪಂಚಾಯತ್ ಪ್ರದೇಶದಲ್ಲಿ ವಾಸಿಸುವ ಎಲ್ಲರಿಗೂ ಇದನ್ನು ಮಾಡಿಸುವ ಅವಕಾಶವಿದೆ.

ಕಡಿಮೆ ವೆಚ್ಚದಲ್ಲಿ ಅಧಿಕ ಲಾಭ ಇರುವ ಜೀವ ವಿಮೆಯೊಂದಿಗೆ ಉಳಿತಾಯ ಲಾಭ ಕೂಡಾ ಇದರ ಮುಖ್ಯ ಆಶಯ.
ಅನಿಶ್ಚಿತತೆಯ ಈ ಬದುಕಿನಲ್ಲಿ ನಮ್ಮ ಭವಿಷ್ಯಕ್ಕಾಗಿ ನಮ್ಮವರ ವರ್ತಮಾನಕ್ಕಾಗಿ ಭಾರತೀಯ ಅಂಚೆ ಇಲಾಖೆಯ ಇಂತಹ ಮಹತ್ತರ ಯೋಜನೆಯಲ್ಲಿ ಹಣ ಹೂಡಿ, ನೆಮ್ಮದಿಯ ಜೀವನವನ್ನು ಹೊಂದಿ ಎಂಬ ಆಶಯದೊಂದಿಗೆ ಇಂದು ರಾಷ್ಟ್ರದಾದ್ಯಂತ ಅಂಚೆ ಜೀವ ವಿಮೆ ದಿನವನ್ನಾಗಿ ಆಚರಿಸುತ್ತಿರುವ ಹಿನ್ನಲೆಯಲ್ಲಿ ಎಲ್ಲರಿಗೂ ಶುಭಾಶಯಗಳು..

 
 
 
 
 
 
 
 
 
 
 

1 COMMENT

Leave a Reply