ಗುರ್ಮೆ ಸುರೇಶ್ ಶೆಟ್ಟಿ ನಮ್ಮಕಾಪು ಕ್ಷೇತ್ರದ ಹೆಮ್ಮೆ~ ಉದಯ ಬಿ. ಶೆಟ್ಟಿ, ಪಂಜಿಮಾರು

ಗುರ್ಮೆ ಸುರೇಶ್ ಶೆಟ್ಟಿಯವರು ಬಳ್ಳಾರಿಯಲ್ಲಿ ಉದ್ಯಮಿ ಮತ್ತು ಮೂಲತಃ ಕಳತ್ತೂರು ಗ್ರಾಮದ ಪೈಯಾರಿನ ಗುರ್ಮೆ ಎಂಬಲ್ಲಿಯವರು ಎಂದು ತಿಳಿದಿತ್ತು. 2014ರಲ್ಲಿ ಮತ್ತೆ ತಿಳಿಯಿತು; ಅವರೂ ಕೂಡ ಶಿರ್ವದ ಹಿಂದೂ ಜೂನಿಯರ್ ಕಾಲೇಜಿನ ಹಳೆ ವಿದ್ಯಾರ್ಥಿ ಎಂದು. ಅದೇ ವರ್ಷ ಹಿಂದೂ ಜೂನಿಯರ್ ಕಾಲೇಜಿನ ಕಾಯಕಲ್ಪಕ್ಕೆ ದೇಣಿಗೆ ಸಂಗ್ರಹ ಮಾಡುವ ಮುಂಬಯಿ ತಂಡದಲ್ಲಿ ನಾನೂ ಒಬ್ಬನಾಗಿದ್ದೆ. ಹಾಗಾಗಿ ಮುಲುಂಡ್ ಪಶ್ಚಿಮದಲ್ಲಿರುವ ಅವರ ಮನೆಗೆ ಹೋಗಿದ್ದೆವು.

ಈ ಮೊದಲು ಅವರನ್ನು ಮುಖತಃ ಬೇಟಿಯಾಗಿರಲಿಲ್ಲ. ಸಮಯ ಸುಮಾರು ಮಧ್ಯಾಹ್ನ 3 ಘಂಟೆ. ಮನೆಯ ಕರೆಘಂಟೆ ಬಾರಿಸಿದೆವು. ಸುರೇಶಣ್ಣನ ಮಾತೃಶ್ರೀ ಪದ್ಮಾವತಿ ಶೆಟ್ಟಿಯವರು ಬಾಗಿಲು ತೆಗೆದರು. ಸುರೇಶ ಈಗ ತಾನೇ ಅಮೆರಿಕಾದಿಂದ ಬಂದು ಮಲಗಿದ್ದಾನೆ ಎಂದರು. ನಾವು ಮುಖ ಮುಖ ನೋಡಿಕೊಂಡೆವು. ಏನು ಮಾಡುವುದು.? ಎಬ್ಬಿಸಲು ಹೇಳುವುದೋ? ಅಥವಾ ತಿರುಗಿ ಮತ್ತೊಮ್ಮೆ ಬರುವುದೋ ಎಂಬರ್ಥದಲ್ಲಿ. ಕರೆಘಂಟೆಯ ಶಬ್ದಕ್ಕೆ ಎಚ್ಚೆತ್ತ ಅವರೇ ತಾಯಿಯಲ್ಲಿ ಕೇಳಿದರಂತೆ. ಯಾರೋ ಊರಿನವರು. ತುಳು ಮಾತನಾಡುತ್ತಿದ್ದಾರೆ ಎಂದರಂತೆ ತಾಯಿ. ಆ ಮಾತನ್ನು ಕೇಳಿ ಬಿಳಿಯ ಮುಂಡು ಉಟ್ಟುಕೊಂಡು ನೇರವಾಗಿ ಪಡಸಾಲೆಗೆ ಬಂದರು.

ಅಮೆರಿಕಾದಲ್ಲಿ ನಡೆದಿದ್ದ ‘ಅಕ್ಕ ಸಮ್ಮೇಳನ’ದಲ್ಲಿ ಭಾಗವಹಿಸಲು ಹೋಗಿದ್ದೆ ಎಂದರು. ಹಲವಾರು ತಾಸುಗಳ ನಿರಂತರವಾದ ವಿಮಾನ ಯಾನದ ಯಾತನೆ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಆದರೂ ನಾವುಗಳು ಬಂದಿರುವ ವಿಷಯ ಕೇಳಿದರು. ಒಳ್ಳೆಯ ವಿಚಾರ. ನನ್ನಿಂದ ಏನಾಗಬೇಕು ಎಂದು ಕೇಳಿದರು. ವಿದ್ಯಾನಿಧಿಗಾಗಿ ನಾವು ಮೊತ್ತವನ್ನು ಹೇಳಿದೆವು. ಒಂದು ನಿಮಿಷ ಈಗ ಬಂದೆ ಎನ್ನುತ್ತ ನೇರ ಒಳಗೆ ಹೋದರು. ತಿರುಗಿ ಬಂದವರು ನಾವು ಹೇಳಿದ್ದ ಮೊತ್ತದ ಅರ್ಧವನ್ನು ನಮ್ಮ ಕೈಯಲ್ಲಿರಿಸಿ ಮತ್ತರ್ಧವನ್ನು ಸಮಾರಂಭದ ಸಮಯದಲ್ಲಿ ನೀಡುತ್ತೇನೆ ಎಂದರು. ಹತ್ತಿರದ ಹೋಟೆಲಿನಿಂದ ಊಟ ತರಿಸುತ್ತೇನೆ. ಊಟ ಮಾಡಿ ಹೋಗಿ ಎಂದು ಒತ್ತಾಯಿಸಿದರು. ನಾವು ಊಟಕ್ಕೆ ನಿಲ್ಲದೆ ಅಲ್ಲಿಂದ ನಿರ್ಗಮಿಸಿದೆವು.

ನುಡಿದಂತೆ ಉಳಿದರ್ಧ ಮೊತ್ತವನ್ನು ನೀಡಿದ್ದಲ್ಲದೇ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಆ ಕಾರ್ಯಕ್ರಮದ ನಂತರ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾಗಿ ಕೂಡ ಅವರು ಆಯ್ಕೆಯಾದರು. ಇದನ್ನೆಲ್ಲ ಏಕೆ ನೆನಪಿಸಿಕೊಳ್ಳ ಬೇಕೆಂದರೆ ನುಡಿದಂತೆ ನಡೆವ ಅವರ ಗುಣ ಮತ್ತು ಸೌಜನ್ಯಕ್ಕಾಗಿ. 2020, ಫೆಬ್ರವರಿ 9ರಂದು ನಮ್ಮ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜ್ ಶಿರ್ವದ ಹಳೆ ವಿದ್ಯಾರ್ಥಿ ಸಂಘ ಮುಂಬಯಿ ಘಟಕದ ಜಾಗತಿಕ ಸಮಾವೇಶ ನಡೆದಾಗ ಸುರೇಶಣ್ಣ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡುತ್ತ ಇದೊಂದು ಅಪೂರ್ವ ಸಂಯೋಜನೆ.

ಸಂಘಟಕರ, ಹಳೆ ವಿದ್ಯಾರ್ಥಿಗಳ ಸಾಂಘಿಕ ಪ್ರಯತ್ನವನ್ನು ಮನಸಾರೆ ಶ್ಲಾಘಿಸಿದರು. ನಮ್ಮ ಸಂಘದ ಅಧ್ಯಕ್ಷರಾದ ಉದಯ್ ಸುಂದರ್ ಶೆಟ್ಟಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸುರೇಶ್ ಶೆಟ್ಟಿಯವರು ಸಾಮಾಜಿಕ, ಸಾಂಸ್ಕ್ರತಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ಯಾವುದೇ ಪ್ರತಿಫಲಾಪೇಕ್ಷೆಗಳಿಲ್ಲದೆ ತೊಡಗಿಕೊಂಡಿರುವಂತೆ ರಾಜಕೀಯ ಧುರೀಣರೂ ಆಗಿದ್ದಾರೆ. ಮುಂದೆ ಅವರಿಗೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಬಂದಾಗ ನಮ್ಮ ಹಳೆ ವಿದ್ಯಾರ್ಥಿಗಳು ಒಗ್ಗಟ್ಟಿನಿಂದ ಶ್ರಮಿಸುತ್ತಾರೆ. ಏಕೆಂದರೆ ಸುರೇಶಣ್ಣ ಶಾಸಕರಾದರೆ ನಮ್ಮ ವಿದ್ಯಾಸಂಸ್ಥೆಗಳ ಉತ್ಕರ್ಷಕ್ಕೆ ಬೆನ್ನೆಲುಬಾಗಿ ನಿಲ್ಲುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದಿದ್ದಾರೆ. ಅಧ್ಯಕ್ಷರ ಮಾತಿನಂತೆ ಹಳೆ ವಿದ್ಯಾರ್ಥಿಗಳು ಮುಂಬಯಿ ಮತ್ತು ಕಾಪು ಕ್ಷೇತ್ರದಲ್ಲಿ ಕಾರ್ಯನಿರತರಾಗಿದ್ದಾರೆ.

ಸುರೇಶಣ್ಣ, ಈಗ ಅಪೂರ್ವವಾಗಿ ಮರು ನಿರ್ಮಾಣಗೊಳ್ಳುತ್ತಿರುವ ಕಾಪು ಹೊಸ ಮಾರಿಗುಡಿಯ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದಾರೆ. ಮುಂಬಯಿಯಲ್ಲಿ ಅಭಿವೃದ್ಧಿ ಸಮಿತಿಗಳನ್ನು ರಚಿಸುವ ಪೂರ್ವಭಾವಿ ಸಭೆ ಸಾಯಿ ಪ್ಯಾಲೇಸ್ ಹೋಟೆಲ್, ಚಕಲಾ ಅಂದೇರಿ ಇಲ್ಲಿ ನಡೆದಿತ್ತು. ಪ್ರಾಸ್ತಾವಿಕವಾಗಿ ಮಾತನಾಡಿದ್ದ ಸುರೇಶಣ್ಣ ಕಾಪು ಮಾರಿ ಅಮ್ಮನ ಕಾರಣಿಕದ ಬಗ್ಗೆ ಮಾತನಾಡುತ್ತ ಭಾವೋದ್ವೇಗಕ್ಕೆ ಒಳಗಾದರು. ಅವರ ಕೊರಳ ಸೆರೆ ಉಬ್ಬಿ ಬಂದು ಒಂದರೆಕ್ಷಣ ಮಾತು ನಿಲ್ಲಿಸ ಬೇಕಾಯಿತು. ಬಡತನ ಊರಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಬಿಡದೆ ಇದ್ದಾಗ ಪರವೂರಿಗೆ ಹೊರಟು ನಿಂತ ಕ್ಷಣವನ್ನು ನೆನಪಿಸಿಕೊಂಡರು. ಅವರ ತಾಯಿ ಒಟ್ಟುಗೂಡಿಸಿಟ್ಟಿದ್ದ 50 ರೂಪಾಯಿಗಳನ್ನೂ ಕಾಪು ಮಾರಿ ಅಮ್ಮನ ಗಂಧಪ್ರಸಾದವನ್ನು ಕೈಗಿತ್ತು ಆಶಿರ್ವದಿಸುತ್ತ ಹೋಗು ಮಗ ಈ ತಾಯ ಆಸೆಯಂತೆ ಆ ಮಹಾತಾಯಿ ನಿನ್ನನ್ನು ಸದಾ ಸಲಹಿ ರಕ್ಷಿಸುತ್ತಾಳೆ ಎಂದಿದ್ದರಂತೆ. ಸುರೇಶಣ್ಣನ ತಾಯಿ ಪದ್ಮಾವತಿ ಶೆಟ್ಟಿಯವರು ಒಂದೆರಡು ವರ್ಷಗಳ ಮೊದಲು ಕೀರ್ತಿಶೇಷರಾಗಿದ್ದಾರೆ.

ಸುರೇಶಣ್ಣ ಈ ಸಲ ಕಾಪು ಕ್ಷೇತ್ರದ ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ. ಅವರು ಸ್ಥಳೀಯ ಅಭ್ಯರ್ಥಿಯೂ ಹೌದು. ಅವರ ಮನೆ ಕಾಪು ಸನಿಹದ ಕಳತ್ತೂರಿನ ಗುರ್ಮೆ. ಅವರ ಎದುರಾಳಿ ವಿನಯ ಕುಮಾರ್ ಸೊರಕೆಯವರು ನಮ್ಮ ಕ್ಷೇತ್ರಕ್ಕೆ ಹೊರಗಿನವರು. ದೂರದ ಪುತ್ತೂರಿನವರು. ಸೊರಕೆಯವರೂ ಕೂಡ ವಿರೋಧ ಪಕ್ಷದ ನಾಯಕ ಸಿದ್ರಾಮಯ್ಯನ ವರಂತೆ; ಇದು ನನ್ನ ಕೊನೆಯ ಚುನಾವಣೆ. ಇನ್ನು ಮೇಲೆ ನಾನು ಚುನಾವಣೆಗೆ ನಿಲ್ಲುವುದಿಲ್ಲ.

ಆದ್ದರಿಂದ ನನ್ನನ್ನು ಗೆಲ್ಲಿಸಿ ಎಂದು ಮತ ಬೇಡುತ್ತಿದ್ದಾರೆ. ಸನ್ಮಾನ್ಯ ಪ್ರಧಾನಿ ಮೋದಿಯವರು ಹೇಳಿದಂತೆ ವಿಶ್ರಾಂತಿ ಮಾಡಲಿರುವ ಅಭ್ಯರ್ಥಿಗಳನ್ನು ಯಾಕಾಗಿ ಗೆಲ್ಲಿಸಬೇಕು. ಮತದಾರ ಬಾಂಧವರು ಭಾವುಕರಾಗದೆ ನಿರಂತರ ಕೆಲಸ ಮಾಡಲು ಚೈತನ್ಯವಿರುವ ಅಭ್ಯರ್ಥಿಗಳನ್ನು ಗೆಲ್ಲಿಸ ಬೇಕು. 1947ರಿಂದ ಇಂದಿನ ವರೆಗೆ ತುಷ್ಠೀಕರಣದ ರಾಜತೀಯ ಮಾಡುತ್ತ ಬಂದಿದೆ ಕಾಂಗ್ರೆಸ್. ಈಗ ಕಾಂಗ್ರೆಸ್ ಮುಕ್ತ ಭಾರತದ ಅಗತ್ಯ ನಮಗಿದೆ. ಕರ್ನಾಟಕದಲ್ಲಿ ಬಿಜೆಪಿ ಗೆದ್ದು ಮೋದಿಯವರ ಕೈಗಳನ್ನು ಬಲಪಡಿಸಬೇಕಾದ ಅನಿವಾರ್ಯ ಅಗತ್ಯ ನಮ್ಮ ಮುಂದಿದೆ. ಡಬ್ಬಲ್ ಇಂಜಿನ್ ಸರಕಾರದಿಂದ ಡಬ್ಬಲ್ ಪ್ರಗತಿ, ವಿಕಾಸ ಆಗುವುದರಲ್ಲಿ ಅನುಮಾನವೇ ಇಲ್ಲ.

ಸುರೇಶ್ ಶೆಟ್ಟಿ ಗುರ್ಮೆಯವರು ಅಜಾತ ಶತ್ರು. ಅನಾಥರ, ಬಡವರ ಬಂಧು. ಅಪತ್ಬಾಂಧವ. ಜಾತಿ, ಮತ, ಬಡವ, ಬಲ್ಲಿದ, ಪಂಡಿತ, ಪಾಮರ, ಭೇದವಿಲ್ಲದೇ ಸ್ಪಂದಿಸುವ ಹೃದಯವಂತರು. ಧಾರ್ಮಿಕ ಪ್ರವೃತ್ತಿಯ ನಾಯಕರು. ಸುಸಂಸ್ಕ್ರತ ಮನೆತನದವರು. ಗೋವುಗಳ ಪೂಜಕರು. ಗೋಶಾಲೆಯ ನಿರ್ಮಾತೃರು. ವಿದ್ಯಾವಂತರು. ಅತ್ಯುತ್ತಮ ವಾಗ್ಮಿ. ಅವರ ಮಾತುಗಳನ್ನು ಕೇಳುವದೇ ಕರ್ಣಾನಂದ. ಕನ್ನಡದ ತತ್ವಪದಗಳ, ಶರಣರ ವಚನಗಳ ಕುರಿತಾಗಿ ನಿರಂತರ ಅಧ್ಯಯನ ನಿರತರು. ಸನಾತನ ಮತ್ತು ಭಾರತೀಯ ಸಂಸ್ಕ್ರತಿ, ಸಂಸ್ಕಾರಗಳ ಕುರಿತಾಗಿ ಅಪಾರ ಜ್ಞಾನವಿರುವವರು. ದೈವ ದೇವರುಗಳ, ಸಾಧು, ಸಂತರ, ಸನ್ಯಾಸಿಗಳ ಮೇಲೆ ಅತೀವ ಭಕ್ತಿಯುಳ್ಳವರು.

ಇವೆಲ್ಲಕ್ಕಿಂತ ಮೇಲಾಗಿ ನಿಷ್ಕಲಂಕರು. ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಎಂದೆನಿಸುವ, ಕೆರೆಯ ನೀರನ್ನು ಕೆರೆಗೆ ಚೆಲ್ಲುವ ಪ್ರವೃತ್ತಿಯ ಕೊಡುಗೈ ದಾನಿಗಳು. ಪ್ರಚಾರವಿಲ್ಲದ ವಿಚಾರವಂತರು. ಪ್ರಾಮಾಣಿಕರು. ಕ್ಷೇತ್ರದ ಸಮಸ್ಯೆಗಳ, ಪ್ರಾಕೃತಿಕ ಸಂಪತ್ತುಗಳ, ಪ್ರವಾಸೋದ್ಯಮದ ಬಗ್ಗೆ ತಳಮಟ್ಟದ ಅರಿವು ಇರುವ ಸ್ಥಳೀಯರು. ಆದ್ದರಿಂದ ಗುರ್ಮೆ ಸುರೇಶ್ ಶೆಟ್ಟಿ ನಮ್ಮ ಹೆಮ್ಮೆ. ಅವರ ವಿಜಯವು ಬುದ್ಧಿವಂತ, ಪ್ರಜ್ಞಾವಂತ, ಸನಾತನಿ ಮತದಾರರ ಪರಮ ಕರ್ತವ್ಯವಾಗಿದೆ. ಮೇ 10ರಂದು ಮತದಾನ ಎಂಬ ಮಹಾ ಯಜ್ಞದಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಮಲದ ಗುರುತಿಗೆ ಮತ ಚಲಾಯಿಸಿಬೇಕು. ನಾವೆಲ್ಲರೂ ಈ ಪರಮ ಕರ್ತವ್ಯದಲ್ಲಿ ಪಾಲು ಪಡೆದು ಧನ್ಯರಾಗೋಣ. ಮಾನ್ಯರಾಗೋಣ.

 
 
 
 
 
 
 
 
 

Leave a Reply