27 C
Udupi
Sunday, October 25, 2020

ಮದ್ದಳೆ ಮಾಂತ್ರಿಕ ಹಿರಿಯಡ್ಕ ಗೋಪಾಲರಾಯರಿಗೆ ನುಡಿ ನಮನ~ ಸುರೇಂದ್ರ ಪಣಿಯೂರ್.  

ಯಕ್ಷಗಾನ ಕ್ಷೇತ್ರದಲ್ಲಿ ಅವನದ್ದ ವಾದ್ಯಗಳ ವಾದಕರಾಗಿ ಪರಿಪೂರ್ಣತೆ ಪಡೆಯಲು ಸಾಕಷ್ಟು ಪರಿಶ್ರಮದ ಅಗತ್ಯ ಇದೆ .ಅದರಲ್ಲೂ ಮದ್ದಳೆವಾದನ ಎಂಬುದು ಅತೀ ಕ್ಲಿಷ್ಟಕರವಾದ ವಾದನಕಲೆಯಾಗಿದ್ದು ಅದಕ್ಕೆ ವಾದ್ಯದ ರಚನೆ ಬಗ್ಗೆ ಅನುಭವ ಬೇಕಿದ್ದು ಜೊತೆಗೆ ವಾದನಕ್ಕೆ ಮುಂಚೆ ಮದ್ದಳೆಯನ್ನು ಶೃತಿ  ಹೊಂದಿಸುವ ಬಗ್ಗೆ. (ಇದನ್ನು ಸುರ್ತಾನ್ ಮಾಡೋದು ಅನ್ನುತ್ತಾರೆ ) ಅಪರಿಮಿತವಾತ ಜ್ಞಾನ ಹಾಗೂ ವಾದ್ಯದ ಗುಣ ಸ್ವಭಾವದ ಅರಿವು ಬೇಕು. ಇದು ಒಂದು ವಿಭಾಗವಾದರೆ ಶ್ರುತಿಗೂಡಿದ ಮದ್ದಳೆಯನ್ನು ಭಾಗವತನ ಪದಕ್ಕೆ ಜೀವನಾಡಿಯಾಗಿ ನುಡಿಸುವ ಕಲೆ ಕರಗತ ಆಗಿ ನುಡಿಸೋದು ಕೂಡ ಸಾಧನೆಯಿಂದ ಕೈಗೂಡುವಂತದ್ದು  ಅದು ಸಿದ್ಧಿಸಬೇಕಾದರೆ ಅವಿರತ ಶ್ರಮ ,ಆಸಕ್ತಿ, ಜೊತೆಗೆ ಸಾಹಿತ್ಯ ಜ್ಞಾನ, ಸ್ಥಾಯಿಭಾವ ದ ಜ್ಞಾನ ಬೇಕು ಇದೆಲ್ಲ ಕೈಗೂಡಿದರೆ ಪ್ರಸಂಗ ಜ್ಞಾನ ,ಪರಂಪರೆ ಸಂಪ್ರದಾಯದ, ಅಧ್ಯಯನದಿಂದ  ಧೀರ್ಘಕಾಲೀನ ಶ್ರಮದಿಂದ ಉತ್ತಮ ಭಾಗವತರ  ಮುಮ್ಮೇಳದ ಕಲಾವಿದರ  ಸಾಂಗತ್ಯದಿಂದ ಒಬ್ಬ ಪರಿಪೂರ್ಣ ಮದ್ದಳೆಗಾರ  ರೂಪುಗೊಳ್ಳಲು ಸಾಧ್ಯ. ಇಷ್ಟೆಲ್ಲ ಸಾಧ್ಯವಾಗಲು ಆತನಿಗೆ ಆಸಕ್ತಿ ಹಾಗೂ ಪರಿಶ್ರಮ ದೈವಾನುಗ್ರಹ ಇರಬೇಕು ಇದೆಲ್ಲವೂ ಇದ್ದು ಯಕ್ಷಗಾನ ಮಾಯಾಲೋಕ ಕಂಡ ಅದ್ಭುತ ಮದ್ದಳೆಯ ಮಾಂತ್ರಿಕ  ಶ್ರೀ ಹಿರಿಯಡ್ಕ ಗೋಪಾಲರಾಯರು. 
ಶೇಷಗಿರಿರಾವ್ ಹಾಗೂ ಲಕ್ಷ್ಮಿ ಬಾಯಿ ದಂಪತಿಗಳಿಗೆ 1919 ಇಸವಿ ಡಿಸೆಂಬರ್ ತಿಂಗಳ  15 ನೇ ತಾರೀಕಿ ನಂದು ಜನಸಿದವರು ಗೋಪಾಲರಾಯರು.  6 ಮಕ್ಕಳಲ್ಲಿ 3 ಹೆಣ್ಣು 3 ಗಂಡುಗಳ  ಪೈಕಿ ಎರಡನೆಯವರೇ ಗೋಪಾಲರಾಯರು​ ಜಾತಕದ ಹೆಸರು ಗೋವಿಂದ ಅಂತ ಇದ್ದರೂ ಹುಟ್ಟಿದ ಮಕ್ಕಳು ಸತತವಾಗಿ ತೀರಿಕೊಂಡು  ಬದುಕದ ಕಾರಣ ದಲಿತರಿಗೆ ಕೊಟ್ಟು ಹಿಂದೆ ಪಡೆದ ರಿವಾಜಿನ  ನಂತರ  ಇಟ್ಪ ಹೆಸರೇ  ಗೋಪಾಲ.
​​
 ತನ್ನ  ಸಾಂಪ್ರದಾಯಿಕ ವಿದ್ಯಾಭ್ಯಾಸವನ್ನು 7ನೇ  ಕ್ಲಾಸ್ ತನಕ  ಓದಿದ  ಗೋಪಾಲರಾಯರು ಕಲಿಕೆಯನ್ನು  5ನೇ ತರಗತಿ ತನಕ ಆಂಗ್ಲ ಮಾಧ್ಯಮದಲ್ಲಿ  ಉಡುಪಿಯ  ಶ್ರೀ ಮದನಂತೇಶ್ವರದಲ್ಲೂ ಮುಂದೆ  6ನೇ ತರಗತಿ ಯಿಂದ ಹಿರಿಯಡ್ಕ ಬೋರ್ಡು ಶಾಲೆಯಲ್ಲೂ ಪೂರೈಸಿದರು​. ಯಕ್ಷಗಾನ ಗೋಪಾಲರಾಯರಿಗೆ ಹಿರಿಯರ  ಪಾರಂ ಪರ್ಯ ದಿಂದ ಬಂದಿದ್ದು​. ​ ಅಜ್ಜ ಲಕ್ಷ್ಮಣಯ್ಯ ಮದ್ದಳೆವಾದಕರಾಗಿದ್ದರು.​ ​ಗೋಪಾಲರಾಯರ ತಂದೆಯವರು ಸ್ವತಃ  ಮದ್ದಳೆವಾದಕ ಹಾಗೂ  ಭಾಗವತಿಕೆ ಮಾಡುವ ಜೊತೆಗೆ ಮದ್ದಳೆ ಮುಚ್ಚಿಕೆ ಮಾಡೋದನ್ನು ಕೂಡ ಅರಿತವ ರಾಗಿದ್ದರು .
 
ಮೂಲತಃ  ಐಗಳ ಮಠದಲ್ಲಿ  ಯಕ್ಷಗಾನದ ಮೂಲ ಪಾಠ   ಕಲಿತ ಇವರು ತನ್ನ 16 ನೇ ವಯಸ್ಸಿನಲ್ಲಿ ತಂದೆ ಯಿಂದ ಮದ್ದಳೆ ವಾದನವನ್ನೂ ಗುರು ನಾಗಪ್ಪ ಕಾಮತ್ ಇವರಿಂದ  ಪ್ರಥಮವಾಗಿ ನಾಟ್ಯವನ್ನೂ  ಅಭ್ಯಾಸ ಮಾಡಿದರು.​ ​ನಂತರ ಹಾಸ್ಯಗಾರ  ಪೆರ್ಡೂರು ವೆಂಕಟ ಕಾಮತರಿಂದ​ ​ಮದ್ದಳೆ ವಾದನದಲ್ಲಿ   ಹೆಚ್ಚಿನ ಕಲಿಕೆ ಮಾಡಿದ  ಶ್ರೀ ಗೋಪಾಲರಾಯರು ಪ್ರಪ್ರಥಮವಾಗಿ 1933ರಲ್ಲಿ  ಹಿರಿಯಡ್ಕ ಚಿಕ್ಕಮೇಳದಲ್ಲಿ ತಿರುಗಾಟ ಮಾಡಿದ ಇವರು 1934 ರಲ್ಲಿ ಹಿರಿಯಡ್ಕ ಮೇಳದಲ್ಲಿ ಪಾತ್ರಧಾರಿಯಾಗಿ ತಿರುಗಾಟ ಮಾಡಿದರೂ ಆವಾಗಲೇ ಚಂಡೆ ಮದ್ದಳೆ ನುಡಿಸುವಲ್ಲಿ  ಪರಿಣತಿ ಹೊಂದಿದ್ದರು.
ಜೊತೆಗೆ 1936 ರ ತನಕ ಇದೇ ಹಿರಿಯಡ್ಕ ಮೇಳದಲ್ಲಿ ಒತ್ತು ಮದ್ದಳೆಗಾರರಾಗಿ ತಿರುಗಾಟ ಪೂರೈಸಿದ ಇವರು 1937 ರಲ್ಲಿ ಪೆರ್ಡೂರು ಮೇಳದ ಪ್ರಧಾನ ಮದ್ದಳೆ ವಾದಕರಾಗಿ ದುಡಿದು ಮುಂದೆ ಒಂದು ವರ್ಷ ಅಮೃತೇಶ್ವರಿ ಮೇಳದಲ್ಲಿ ತಿರುಗಾಟ ಮಾಡಿದ ಇವರು ರಂಗಸ್ಥಳಕ್ಕೆ ಬೇಕಾದ ಮದ್ದಳೆಯ ನುಡಿಸಾಣಿಕೆಯನ್ನು  ಭಾಗವತ ಮಾರ್ವಿ ಶ್ರೀನಿವಾಸ ಉಪ್ಪೂರರ ಮಗ  ವಾಸುದೇವ ಉಪ್ಪೂರರಿಂದ ತನ್ನದಾಗಿಸಿಕೊಂಡರು​. ಮುಂದಿನ ದಿನ ಗಳಲ್ಲಿ 1967ನೇ ಇಸವಿ ತನಕ ನಿರಂತರವಾಗಿ ಮಂದಾರ್ತಿ ಮೇಳದಲ್ಲಿ ಸತತ 25 ವರ್ಷಗಳಸ್ಟು ಕಾಲ ಪ್ರಧಾನ ಮದ್ದಳೆಗಾರರಾಗಿ ತಿರುಗಾಟ ಮಾಡಿದ ಗರಿಮೆ ಗೋಪಾಲ ರಾಯರದ್ದಾಗಿದ್ದು ಮುಂದೆ 1967ರ   ಮೇ ತಿಂಗಳಲ್ಲಿ ಮೇಳ  ತಿರುಗಾಟದಿಂದ  ನಿವೃತ್ತಿ  ಹೊಂದಿದರು.
 
ತನ್ನ ತಿರುಗಾಟದಲ್ಲಿ ಸುಧೀರ್ಘಕಾಲ ಯಕ್ಷಗಾನ  ಲೋಕ ಕಂಡ ಸರ್ಪ ಕಂಠದ ಮೇರು ಭಾಗವತರಾದ ಕುಂಜಾಲು ಶೇಷಗಿರಿ ಕಿಣಿ ಭಾಗವತರಿಗೆ ಸಾಥಿಯಾಗಿ ಮದ್ದಳೆ ನುಡಿಸಿದ ಇವರು, ಇನ್ನುಳಿದ ಮಹಾನ್ ಭಾಗವತ ರಾದ ಮಾರ್ವಿ ಶ್ರೀನಿವಾಸ ಉಪ್ಪೂರರು , ಜಾನುವಾರು ಕಟ್ಟೆ ಗೋಪಾಲಕೃಷ್ಣ ಕಾಮತರು,  ರಾಮಚಂದ್ರ ನಾವ ಡರು ,ನಾರಣಪ್ಪ ಉಪ್ಪೂರರಿಗೂ  ಹಾಗೂ ಘೋರ್ಪಡೆ ವಿಠ್ಠಲ್ ಪಾಟೀಲ್ ರವರಿಗೂ. ಮದ್ದಳೆ ಸಾಥಿಯಾ ಗಿದ್ದ  ಖ್ಯಾತಿವಂತರು​​. ಇವರ ಮದ್ದಳೆ ವಾದನಕ್ಕೆ ರಂಗದಲ್ಲಿ ಕುಣಿದು ದಣಿವರಿಯದ ಕಲಾವಿದರಾದ ಹಾರಾಡಿ​ ​ರಾಮ​, ವೀರಭದ್ರ ನಾಯಕ​,​ ಹಾರಾಡಿ ಕುಷ್ಠಗಾಣಿಗ​,​  ಕೊಕ್ಕರಣೆ ನರಸಿಂಹರೇ  ಮುಂತಾದ ಅತಿರಥ ಮಹಾ ರಥ  ದಂಡೇ ಇದೆ ಅವರೆಲ್ಲರಿಗೂ ಇವರ ಮದ್ದಳೆಗಾರಿಕೆ ಬಗ್ಗೆ ಅತೀವ ಪ್ರೀತಿ .
 
1961ರಲ್ಲಿ   ಮಳೆಗಾಲದ ಬಿಡುವಿನ ಕಾಲದಲ್ಲಿ  ಕಾರಂತರ ಜೊತೆ.  ಯಕ್ಷಗಾನ ನಾಟ್ಯಗಳಿಗೆ ಮದ್ದಳೆ ಗಾರನಾಗಿ ದುಡಿದ ಇವರು ನಿವೃತ್ತಿಯ ನಂತರ   ಕಾರಂತರಿಂದ ​ಬ್ರಹ್ಮಾವರದಲ್ಲಿ 1968 -69 ರಲ್ಲಿ ಪ್ರಾರಂಭಗೊಂಡ  ಯಕ್ಷಗಾನ ತರಭೇತಿ ಕೇಂದ್ರದ ಸ್ಥಾಪಕ ಗುರುವಾಗಿಯೂ ತೊಡಗಿಸಿಕೊಂಡರು . ಮುಂದೆ ಇದೇ ಯಕ್ಷಗಾನ ಕೇಂದ್ರವು ಉಡುಪಿಯಲ್ಲಿ 1971ರಿಂದ ಪ್ರಾರಂಭಗೊಂಡಾಗ 1976 ರ ತನಕ  ಅಲ್ಲಿಯೂ ಪ್ರಾಚಾರ್ಯರಾಗಿ  ದುಡಿದ ಹೆಗ್ಗಳಿಕೆ  ಇವರದು .
1969ರಲ್ಲಿ ಅಮೆರಿಕದ ಪ್ರಜೆ  ಪೀಟರ್ ಕ್ಲಾಸ್  ತಬಲಾ ಮದ್ದಳೆ ಹಾಗೂ ತಬಲಾ ವಾದನವನ್ನು ಇವರಿಂದಲೇ ಕಲಿತಿದ್ದು  ಶಿವರಾಮ ಕಾರಂತರ ಆದೇಶದ ಮೇರೆಗೆ ಅಮೆರಿಕ ಪ್ರಜೆಯಾದ ಮಾರ್ಥ ಅಸ್ಟನ್  1969 ರಿಂದ 1971 ರ ತನಕ ಇವರ ನೆಚ್ಚಿನ ಶಿಷ್ಯಳಾಗಿ ಯಕ್ಷಗಾನ ಕಲಿತು, ಪ್ರಪ್ರಥಮವಾಗಿ ವಿದೇಶಿ ಮಹಿಳೆಯೊಬ್ಬಳು ಯಕ್ಷಗಾನದಲ್ಲಿ ಡಾಕ್ಟರೇಟ್ ಪಡೆದದ್ದು ದಾಖಲೆ. ಯಕ್ಷಗಾನ ಲೋಕಕ್ಕೆ ಏರು ಮದ್ದಳೆಯನ್ನು ನೀಡಿದ  ಕೀರ್ತಿ ಇವರಿಗೆ ಸಲ್ಲಬೇಕು 
 
 
1973 ರಲ್ಲಿ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ  ದಿಲ್ಲಿಯಲ್ಲಿ ಕಾರಂತರ ನೃತ್ಯ ನಾಟಕಕ್ಕೆ ಮೂರು ತಿಂಗಳ ಅವಧಿಯಲ್ಲಿ ಟ್ರೈನಿಂಗ್ ಪಡೆದ ಇವರು ಮುಂದೆ 1975 – 76 ರಲ್ಲಿ  ಕಾರಂತರ ಯಕ್ಷರಂಗದ ಮದ್ದಳೆ ವಾದಕ ರಾಗಿ ಈಶಾನ್ಯ ಭಾರತ ಪ್ರವಾಸ  ಮಾಡಿದ್ದು 1976 -77 ರಲ್ಲಿ  ಡಾ​. ​ಮಾರ್ಥಾ ಅಸ್ಟನ್ ಜೊತೆ ಸೇರಿ ಅಮೆರಿಕದಲ್ಲಿ ನಾಲ್ಕು ತಿಂಗಳಲ್ಲಿ  11 ಕಾರ್ಯಕ್ರಮವನ್ನು ಕೊಟ್ಟು ಪ್ರಪ್ರಥಮವಾಗಿ ಯಕ್ಷಗಾನ ಕಂಪನ್ನು ವಿದೇಶದ ನೆಲದಲ್ಲಿ ಪಸರಿಸಿದರು ಮುಂದೆ 1979 ರಲ್ಲಿ ಮೇಳದ ಜೊತೆ ಅಮೆರಿಕ ಪ್ರವಾಸ ಮಾಡಿದ ಇವರು ವಿದೇಶಿ ನೆಲದಲ್ಲಿ ಪ್ರಥಮವಾಗಿ ಯಕ್ಷಗಾನವನ್ನು ಪೂರ್ಣ ಪ್ರಮಾಣದಲ್ಲಿ ಪ್ರದರ್ಶನ ಗೈದ ಸಾಧನೆ ಮಾಡಿದವರು.
 
ಇವರ ಸಾಧನೆಗಾಗಿ 1972ರಲ್ಲಿ  ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಹಾಗೂ 1992 ರಲ್ಲಿ.  ದ.ಕ ಜಿಲ್ಲಾ  5ನೇ ಸಾಹಿತ್ಯ ಸಮ್ಮೇಳನ ಸನ್ಮಾನ 1997 ರಲ್ಲಿ ಕರ್ನಾಟಕ ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಯ ಜೊತೆ ನೂರಾರು ಪ್ರಶಸ್ತಿ ಸನ್ಮಾನಗಳು ಒಲಿದು ಬಂದವು​. ಸಂಪ್ರದಾಯ ಹಾಗೂ ಪರಂಪರೆ ಯ ಬಗ್ಗೆ ಅತೀವ ಕಾಳಜಿಯುಳ್ಳ ಹಿರಿಯಡ್ಕ ಗೋಪಾಲ ರಾಯರು ಬದಲಾವಣೆಯ ಸೋಗಲ್ಲಿ ಅನ್ಯ ರಂಗದ ಹಾವಳಿಯಿಂದ ಯಕ್ಷಗಾನವನ್ನು  ಮುಂದಿನ ಪೀಳಿಗೆಗೆ ಸಂರಕ್ಷಿಸಿ ಇಡಬೇಕೆನ್ನುವ ಭದ್ದತೆ ​ಇದ್ದವರು​. ​ ತನ್ನ ಇಳಿ ವಯಸ್ಸಿನಲ್ಲೂ ಕಾಜಾರಗುತ್ತು ಯಕ್ಷಗಾನ ಸಂಘದ  ಮೂಲಕ ಸಂಪ್ರದಾಯಭದ್ದ ಯಕ್ಷಗಾನವನ್ನು ಕಲಿಸಿ ಪ್ರದರ್ಶಿಸಿದವರು ರಂಗದಲ್ಲಿ  ಲುಪ್ತಗೊಂಡ ದೀವಟಿಗೆ ಬೆಳಕಿನ ಆಟವನ್ನುರಂಗದಲ್ಲಿ ಪುನಃ ಸೃಷ್ಟಿಸಿದವರು ಶತಾಯಸ್ಸಿನ ಹರೆಯದಲ್ಲೂ  ಮದ್ದಳೆಯಲ್ಲಿ ಕೈಯಾಡಿಸಿ ಆತ್ಮಾನಂದ ಪಡೆವ ಯಕ್ಷ ಋಷಿಗೆ 2018 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ  ಯಕ್ಷಗಾನ ಪ್ರಶಸ್ತಿ ಒಲಿದು ಬಂದದ್ದು ತಡವಾಗಿಯಾದರು ಗಮ್ಯ ತಾಣವನ್ನು  ಸೇರಿದಂತಾಗಿದೆ​. 
 
ನಮ್ಮೆಲ್ಲರ ಆಸೆಯಂತೆ ರಾಷ್ಟ್ರ ಪ್ರಶಸ್ತಿಯನ್ನು ಗಳಿಸಬೇಕಾದ ಹಿರಿಯ ಜೀವ ಇಂದು ಸಂಜೆ 8 30 ರ ಹೊತ್ತಿಗೆ ನಮ್ಮನ್ನು ಆಗಲಿ ದೇವರ ದಿವ್ಯ ಪದವನ್ನು ಸೇರಿದ್ದು ಭರಿಸಲಾರದ ನಷ್ಟ ಹಾಗೂ ದುಃಖವಾಗಿದೆ​. ಶ್ರೀಯುತರ ಆತ್ಮಕ್ಕೆ ಸದ್ಗತಿ ದೊರ​ಕಲಿ.
 ಸುರೇಂದ್ರ ಪಣಿಯೂರ್​, ಯಕ್ಷಗಾನ ಭಾಗವತರು​, ಪಣಿಯೂರು
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ರಾಜ್ಯೋತ್ಸವ ಪ್ರಶಸ್ತಿಯ ಅಂತಿಮ ಪಟ್ಟಿ ಅ.27ರಂದು ಪ್ರಕಟ

ಬೆಂಗಳೂರು: ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಸಾಧಕರಿಗೆ ನೀಡುವ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನವೆಂಬರ್ 1ರಂದು ನಡೆಸಲು ಸರ್ಕಾರ ತೀರ್ಮಾನಿಸಿದ್ದು, ಆಯ್ಕೆ ಪಟ್ಟಿ ಮಂಗಳವಾರ ಪ್ರಕಟವಾಗುವ ಸಾಧ್ಯತೆಗಳಿವೆ. ಒಟ್ಟುಈ ವರ್ಷ 65 ಜನರಿಗೆ ಪ್ರಶಸ್ತಿ...

ರಕ್ಷಿತಾ ನಾಯಕ್ ನಿಗೂಢ ಸಾವು,  ಪ್ರಶಾಂತ್  ಪತ್ತೆಗಾಗಿ  ಪೊಲೀಸರು ಶೋಧ

ಉಡುಪಿ: ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿಯನ್ನು ಆಸ್ಪತ್ರೆಗೆ ಸೇರಿಸಿ,  ಪರಿಚಯವಿದ್ದ  ಯುವತಿ ಅಸ್ವಸ್ಥಳಾದ ಕೂಡಲೇ ಯುವಕ ಕೈ ಕೊಟ್ಟ ಘಟನೆ ಉಡುಪಿಯಲ್ಲಿ ನಡೆದಿದೆ. ಯುವಕ ನಾಪತ್ತೆ ಯಾಗಿದ್ದಾನೆ. ದಾಖಲಾದ ಕೆಲವೇ ಹೊತ್ತಿನಲ್ಲಿ ಯುವತಿ  ರಕ್ಷಿತಾ...

ಎಸ್.ಎಲ್.ವಿ.ಟಿ ಯಲ್ಲಿ ವಿಶೇಷ ದೀಪಾರಾಧನೆ ಸೇವೆ   

ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಶ್ರೀ ಶಾರದಾ ಮಾತೆ ಸನ್ನಿದಿಯಲ್ಲಿ ಶನಿವಾರ ರಾತ್ರಿ ವಿಸರ್ಜನಾ ಪೂಜಾ ವೇಳೆ  ಸಾವಿರಾರು ಹಣತೆ ದೀಪಗಳ ನ್ನು  ಬೆಳಗಿಸಿ ವಿಶೇಷ ದೀಪಾರಾಧನೆ ಸೇವೆಯನ್ನು ನೆರವೇರಿಸಲಾಯಿತು. ದೇವಳದ...

ಉಡುಪಿ ಸಾರ್ವಜನಿಕ ಶಾರದಾ ಸಮಿತಿಯ ಶಾರದಾ ದೇವಿಯ ಶೋಭಾಯಾತ್ರೆ  

ಉಡುಪಿ ಸಾರ್ವಜನಿಕ ಶಾರದಾ ಸಮಿತಿ ಹಮ್ಮಿಕೊಂಡ 5 ನೇ ವರ್ಷದ ಶಾರದಾ ದೇವಿಯ ಶೋಭಾಯಾತ್ರೆಗೆ ಅರ್ಚಕರಾದ  ಶಶಿಧರ್ ಭಟ್   ಶಾರದಾ ದೇವಿಗೆ ಆರತಿ  ಬೆಳಗಿಸಿ ಶೋಭಾಯಾತ್ರೆಗೆ ಚಾಲನೆ ನೀಡಿದರು. ಯಾತ್ರೆಯಲ್ಲಿ  ಮಹಿಳಾ  ಚಂಡೆ...

ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಚಂಡಿಕಾಯಾಗ ಸಂಪನ್ನ

ಇತಿಹಾಸ ಪ್ರಸಿದ್ಧ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ  ಗೋವರ್ಧನ ತಂತ್ರಿಗಳ ತಂತ್ರಿತ್ವದಲ್ಲಿ ಹಾಗೂ ಪ್ರಕಾಶಾಚಾರ್ಯರ ಮಾರ್ಗದರ್ಶನದಲ್ಲಿ  ಪ್ರವೀಣ ಐತಾಳರ ಆಚಾರ್ಯತ್ವದಲ್ಲಿ ಲೋಕ ಕಲ್ಯಾಣಕ್ಕಾಗಿ ಸಮಸ್ತ ಭಕ್ತರ ಸಹಭಾಗಿತ್ವದಲ್ಲಿ ಶ್ರೀ ಚಂಡಿಕಾಯಾಗವು ಸಂಪನ್ನಗೊಂಡಿತು....
error: Content is protected !!