ಇಂದಿನ ಗಾದೆ ತೋರಣ.. 6~​ಪೂರ್ಣಿಮಾ ಜನಾರ್ದನ್

ಆಡುವಾಗ ಆಡು, ಓದುವಾಗ ಓದು…

ಪ್ರತಿಯೊಂದು ಕೆಲಸ ಕಾರ್ಯಗಳಿಗೆ ಅದರದ್ದೇ ಆದ ರೀತಿ ರಿವಾಜು,ನಿಯಮ ,ಸಮಯ ಎಂಬುದಿದೆ. ನಾವು ಯಾವಾಗ ಯಾವ ಕೆಲಸವನ್ನು‌ ಮಾಡಬೇಕೋ ಆವಾಗ ಅದನ್ನೇ ಮಾಡಬೇಕು‌. ಯಾವುದಕ್ಕೆ ಯಾವಾಗ ಎಷ್ಟು ಪ್ರಾಮುಖ್ಯತೆ ನೀಡಬೇಕೋ ಅದಕ್ಕೆ ಆವಾಗಲೇ ಪ್ರಾಮುಖ್ಯತೆ ನೀಡಿದಾಗ ಮಾತ್ರ ಉತ್ತಮ ಪರಿಣಾಮ ಸಾಧ್ಯ.

ಆಡುವ ಸಮಯದಲ್ಲಿ ಆಡುವ ಆಟ,ಓದುವ ಸಮಯದಲ್ಲಿ ಓದುವ ಓದು ನಮ್ಮ ಭವಿಷ್ಯ ರೂಪಿಸುತ್ತದೆ. ಬಾಲ್ಯದಲ್ಲಿ ಆಡುವ ಆಟ,ಓದುವ ಓದು ಹರೆಯದಲ್ಲಿ ಮಾಡುವ ವೃತ್ತಿ,ಸಂಪಾದನೆಯಿಂದಾಗಿ ವೃದ್ಧಾಪ್ಯದಲ್ಲಿ ನೆಮ್ಮದಿ,ಸಂತಸದ ಬದುಕು ನಮ್ಮದಾಗುತ್ತದೆ‌. ಅಲ್ಲದೇ ಆಯಾಯ ಸಮಯದಲ್ಲಿ ನಮಗೆ ಸಿಕ್ಕುವ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಬೇಕು.

ಸದವಕಾಶಗಳು ನಮ್ಮ ಕಾಲ‌ ಬಳಿಯೇ ಸುತ್ತುತ್ತಿರುತ್ತವೆ.ಆದರೆ ಅವನ್ನು ಬಾಚಿ ನಮ್ಮದಾಗಿಸಿಕೊಳ್ಳುವ ಚಾತುರ್ಯವಿರಬೇಕು. ಆಡಲು ಅವಕಾಶ ಸಿಕ್ಕಾಗ ಚೆನ್ನಾಗಿ ಮನದಣಿಯೆ ಆಡಿ ಮನವನ್ನು ಹಗುರಮಾಡಿಕೊಳ್ಳಬೇಕು.

ಓದುವ ಸಮಯದಲ್ಲಿ ಸಮಯವನ್ನು ವ್ಯರ್ಥ ಮಾಡದೇ ಚೆನ್ನಾಗಿ ಓದಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು.ಒಮ್ಮೆ ಕೈತಪ್ಪಿದರೆ ಮತ್ತೊಮ್ಮೆ ಆ ಅವಕಾಶ ನಮ್ಮದಾಗುವುದೆಂಬ ಭರವಸೆ ಇಲ್ಲ. ಹಾಗಾಗಿ ಹಲ್ಲಿದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲಿಲ್ಲ ಎಂಬ ಪರಿಸ್ಥಿತಿ ನಮ್ಮದಾಗ ಬಾರದು.

ಅದಕ್ಕಾಗಿ ನಾವು ಸಿಕ್ಕಿದ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಆಡುವ ಅವಕಾಶ ಸಿಕ್ಕಿದಾಗ ಆಡುತ್ತಾ, ಓದಲು ಅವಕಾಶ ಸಿಕ್ಕಿದಾಗ ಓದುತ್ತಾ ಆಯಾಯ ಸಂದರ್ಭಕ್ಕೆ ತಕ್ಕಂತೆ ವ್ಯವಹರಿಸಿ ಬೇರೆ ಯಾವುದೇ ನಕಾರಾತ್ಮಕ ಯೋಚನೆ ಮಾಡದೆ ಸಕಾರಾತ್ಮಕವಾಗಿ ಮುಂದುವರೆದಲ್ಲಿ ಜೀವನದಲ್ಲಿ ಯಶಸ್ಸು ನಿಶ್ಚಿತ ಎಂಬ ಮಾತಿನೊಂದಿಗೆಆಡುವಾಗ ಆಡು, ಓದುವಾಗ ಓದು ಎಂಬ ಗಾದೆ ಮಾತಿನ ಪ್ರಸ್ತುತಿ..

 
 
 
 
 
 
 
 
 
 
 

Leave a Reply