ಗಾದೆ ತೋರಣ…3, ಕುಂಬಾರನಿಗೆ ವರುಷ…ದೊಣ್ಣೆಗೆ ನಿಮಿಷ~ ಪೂರ್ಣಿಮಾ ಜನಾರ್ದನ್

ಒಂದು ಒಳ್ಳೆಯ ಕೆಲಸ ಫಲಪ್ರದವಾಗಬೇಕಾದಲ್ಲಿ ಅದಕ್ಕೆ ತುಂಬ ಶ್ರಮ ಪಡಬೇಕು.ಆದರೆ ಅದೇ ಕೆಲಸವನ್ನು ಕೆಡಿಸಲು ಒಂದು ನಿಮಿಷ ಸಾಕು. ಮಣ್ಣನ್ನು ಕುಟ್ಟಿ ಹದ ಮಾಡಿ ಅದಕ್ಕೊಂದು ಮಡಕೆಯ ಆಕಾರ ಕೊಡಲು ಕುಂಬಾರ ತುಂಬ ಸಮಯ ಶ್ರಮಿಸುತ್ತಾನೆ.

ಆದರೆ ಅದನ್ನು ಒಡೆದು ಹಾಳುಮಾಡಲು ದೊಣ್ಣೆಗೆ ಕೆಲವೇ ಕ್ಷಣಗಳು ಸಾಕು. ಕಟ್ಟುವುದು ಕಠಿಣ, ಕೆಡಹುವುದು ಬಲು ಸುಲಭ. ಅದು ಮನೆ ಆಗಿರಬಹುದು, ಸಂಸ್ಕೃತಿ, ವ್ಯಕ್ತಿತ್ವ ,ಒಳ್ಳೆಯ ಹೆಸರು ಹೀಗೆ ಯಾವುದೇ ಆಗಿರಬಹುದು. ಅದನ್ನು ಕಟ್ಟವುದು, ಬೆಳೆಸುವುದು ಬಲು‌ ಕಠಿಣ‌. ಆದರೆ ಅದನ್ನು ಕೆಡಹುವುದು ಕಷ್ಟವಲ್ಲ.

ನಮ್ಮ ‌ಮೇಲೆ ಬೇರೆಯವರಿಗೆ ನಂಬಿಕೆ , ವಿಶ್ವಾಸ ಮೂಡಲು ನಾವು ಬಹಳಷ್ಟು ಸಮಯ,ಪ್ರಯತ್ನ ಪಡಬೇಕಾಗುತ್ತದೆ. ಆದರೆ ಒಂದು ಕ್ಷಣದ ಅವಿಶ್ವಾಸದ ಎಳೆ ಕಾಣಿಸಿಕೊಂಡಾಗ ಅಷ್ಟು ವರುಷ ಗಳಿಂದ ಕಾಯ್ದಿಟ್ಟ ವಿಶ್ವಾಸ ನೀರು ಪಾಲಾಗುತ್ತದೆ.

ವರ್ಷಗಟ್ಟಲೆ ಕಷ್ಟ ಪಟ್ಟು ಬೆಳೆಸಿದ ಫಲಭರಿತ ಗಿಡ ಮರಗಳು, ಆಹ್ಲಾದ ನೀಡುವ ಪೃಕೃತಿಯನ್ನು ಹಾಳುಗೆಡವಲು ಒಂದು ನಿಮಿಷದ ಕಾಡ್ಗಿಚ್ಚು, ಜಲ ಪ್ರಳಯ ಇಲ್ಲವೇ ಮನುಷ್ಯನ ಕೊಡಲಿಯೇಟು ಸಾಕು. ನಿರ್ಮಾಣ, ಆರಂಭ, ಬಾಳಿಕೆ ಎಷ್ಟು ಕಷ್ಟವೋ ವಿನಾಶ , ಲಯ ಅಷ್ಟೇ ಸುಲಭ ಎಂಬ ಅನಿಸಿಕೆ ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಗಾದೆಮಾತಿನಲ್ಲಿ ಧ್ವನಿಸುತ್ತಿದೆ.

ಆತ್ಮೀಯರೆ… ಏನನ್ನಾದರೂ ಸಾಧಿಸಲು ಇರಲಿ ತಾಳ್ಮೆ ನಮ್ಮ ಜೀವನದಲ್ಲಿ..
ಎಲ್ಲವೂ ವ್ಯರ್ಥವಾಗುವುದು ಕ್ಷಣಿಕ ಸಿಟ್ಟಿನ‌ ಕೈಗೆ ಬುದ್ಧಿಯನ್ನು ಕೊಟ್ಟಲ್ಲಿ.

 
 
 
 
 
 
 
 
 
 
 

Leave a Reply