ಗಾದೆ ತೋರಣ: 10~ ಪೂರ್ಣಿಮಾ ಜನಾರ್ದನ್ 

ಜನನೀ ಜನ್ಮ‌ಭೂಮಿಶ್ಚ ಸ್ವರ್ಗಾದಪೀ ಗರೀಯಸಿ.
ಎಲ್ಲರಿಗೂ ಆತ್ಮೀಯ ನಮಸ್ಕಾರದೊಂದಿಗೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಶುಭಾಶಯಗಳು. ಜನನೀ ಜನ್ಮ‌ಭೂಮಿಶ್ಚ ಸ್ವರ್ಗಾದಪೀ ಗರೀಯಸಿ ಎಂಬ ಸಂಸ್ಕ್ರತದ ಗಾದೆಮಾತು ಹೆತ್ತ ತಾಯಿ, ಹೊತ್ತ ಭೂಮಿ ಇವರಿಬ್ಬರೂ ಸ್ಬರ್ಗಕ್ಕಿಂತಲೂ ಮಿಗಿಲು ಎಂಬ ಅರ್ಥವನ್ನು ಧ್ವನಿಸುತ್ತದೆ.

ನಮ್ಮ‌ಜನ್ಮಕ್ಕೆ ಕಾರಣವಾದ ಜನನಿಯ ಮಡಿಲು ಪ್ರೀತಿ ಅಕ್ಕರೆಯ ಕಡಲು. ನಮಗೆ ಜೀವನಪೂರ್ತಿ ಒಳಿತನ್ನು ಬಯಸುವ ಆಕೆಯ ಮಡಿಲಲ್ಲಿ‌ ಮಲಗಿದರೆ, ನಮ್ಮ ದುಗುಡ, ನೋವು, ಆಯಾಸ ದೂರವಾಗಿ‌ ಮನಕ್ಕೆ ಸಾಂತ್ವನದ ಅನುಭವವಾಗುತ್ತದೆ. ಹೊತ್ತು ಹೆತ್ತು ಸಾಕಿ ಸಲಹುವ ತಾಯಿಯ ಮಮತೆಗೆ ಬೆಲೆ ಕಟ್ಟಲಾಗದು‌.

ಅಲ್ಲದೆ ನಮ್ಮ ಜನ್ಮ ಭೂಮಿ ಅಂದರೆ ನಾವು ವಾಸಿಸುವ ಸ್ಥಳ ತುಂಬಾ ಪವಿತ್ರವಾದದ್ದು. ನಮ್ಮನ್ನು‌ಜೀವನ ಪೂರ್ತಿ ತನ್ನ ಮಡಿಲಲ್ಲಿರಿಸಿಕೊಂಡು ಪೊರೆದು ಪೋಷಿಸುವ ನಮ್ಮ ನಾಡು, ನಮ್ಮ ದೇಶ, ನಮ್ಮ ಭಾರತ ಬೇರೆಲ್ಲಾ ದೇಶಗಳಿಗಿಂತ ಹೆಚ್ಚು ಆಪ್ತವಾದದ್ದು, ಮನಕ್ಕೆ ಹತ್ತಿರವಾದದ್ದು,ಹೆಮ್ಮೆ ತರುವಂತದ್ದು.

ನಾವು ನಮ್ಮ ದೇಶ, ನಾವು ಭಾರತೀಯರೆಂಬ ಭಾವನೆಯೇ ನಮಗೆ ಒಂದು ರೀತಿಯ ರೋಮಾಂಚನ ತರುವಂತದ್ದು. ರಾಮಾಯಣ ಮಹಾಕಾವ್ಯದಲ್ಲಿರುವ ಒಂದು ಸಂದರ್ಭ ನೆನಪಿಗೆ ಬರುತ್ತದೆ.

ರಾವಣನನ್ನು ಸಂಹರಿಸಿದ ಬಳಿಕ ಶ್ರೀರಾಮನಿಗೆ ಸ್ವರ್ಣಮಯ ಲಂಕೆಯ ಚಕ್ರಾಧಿಪತ್ಯವನ್ನು ಒಪ್ಪಿಸಲು ಬಂದಾಗ ಖಡಾಖಂಡಿತವಾಗಿ ನಿರಾಕರಿಸಿದ ಶ್ರೀರಾಮಚಂದ್ರ ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪೀ ಗರೀಯಸಿ ಎಂಬ ಮಾತನ್ನು ಉದ್ಗರಿಸಿದನೆಂಬ ಉಲ್ಲೇಖವಿದೆ. ಮಾತೃದೇವೋಭವ ಎನ್ನುವ ಸಂಸ್ಕ್ರತಿ ನಮ್ಮದು.

ತಾಯಿಯನ್ನು ಪೂಜಿಸುವ ,ತಾಯ್ನಾಡನ್ನು ಗೌರವಿಸುವ ಸಂಪ್ರದಾಯ ನಮ್ಮದು.ನಮ್ಮನ್ನು ಹೆತ್ತ ತಾಯಿ, ಹೊತ್ತ ಧರಿತ್ರಿ ಇವರಿಬ್ಬರೂ ಸ್ವರ್ಗಕ್ಕಿಂತಲೂ ಮಿಗಿಲು ಎಂಬ ಆಶಯದೊಂದಿಗೆ ನಮ್ಮನ್ನು ಹೆತ್ತ ಮಾತೆಗೆ ಹೊತ್ತ ಭಾರತ ಮಾತೆಗೆ ನಮನ ಸಲ್ಲಿಸುತ್ತಾ ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪೀ ಗರೀಯಸಿ ಎಂಬ ಗಾದೆ ಮಾತಿನ ಪ್ರಸ್ತುತಿ.
ನಮಸ್ಕಾರ..

 
 
 
 
 
 
 
 
 
 
 

1 COMMENT

  1. ಆತ್ಮೀಯ ಪೂರ್ಣಿ, ಇಂದಿನ ಗಾದೆ ತೋರಣದ ವಿಶ್ಲೇಷಣೆ ತುಂಬಾ ಸೊಗಸಾಗಿ ಮೂಡಿಬಂದಿದೆ. ಜನನಿ ಹಾಗೂ ಜನ್ಮ ಭೂಮಿ ಎಲ್ಲಕಿಂತ ಮಿಗಿಲು ಇದನ್ನೇ ಶ್ರೀರಾಮನು ವಿಭೀಷಣನಿಗೆ ಹೇಳಿದ್ದು. ತನ್ನ ಜನನಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತ ಹೆಚ್ಚು ಎಂದು ಹೇಳಿ ತನ್ನ ತಾಯ್ನಾಡಿಗೆ ಮರಳಿ ಬಂದಿರುವನು ಆದರೆ ನಮ್ಮಲ್ಲಿ ಎಷ್ಟು ಜನ ಇದನ್ನು ಅನುಸರಿಸುತ್ತಿದ್ದಾರೆ ಎಂಬುವುದು ಈಗಿನ ಪ್ರಶ್ನೆ. ವಿದ್ಯೆ ಪಡೆದು ವಿದೇಶಕ್ಕೆ ಹೋಗುವುದು ಹಾಗೂ ವಿದೇಶಕ್ಕೆ ಕಳುಹಿಸುವುದು ನಮ್ಮ ಜನರ ಖಯಾಲಿ. ಆಡುವುದು ಸುಲಭ ಆದರೆ ಪಾಲಿಸುವುದು ವಿರಳ.

Leave a Reply