ವೈದ್ಯ ರೋಗಿಯ ಸಂಬಂಧವು ತಾಯಿ ಮಗುವಿನ ಸಂಬಂಧ~ರಾಜೇಶ್ ಭಟ್ ಪಣಿಯಾಡಿ

ಹೊತ್ತು ಗೊತ್ತು ಲೆಕ್ಕಿಸದೆ, ರಾತ್ರಿಹಗಲು ಎನ್ನದೆ ತನ್ನ ಜೀವವನ್ನೇ ಪಣಕ್ಕಿಟ್ಟು ವ್ಯಕ್ತಿನಿಷ್ಟೆಯಿಂದ ವೃತ್ತಿ ನಿಷ್ಟೆಯಿಂದ ಸುಶ್ರೂಷೆ ಮಾಡಿ ಜೀವದಾನ ಮಾಡುವ ಮಹಾದೇವತೆ ಈ ವೈದ್ಯ.

ತನ್ನ ಮನೆಯಲ್ಲಿ ಸಾವಾದರೂ ವೃತ್ತಿನಿರತ ವೈದ್ಯನೊಬ್ಬ ಬೇರೆಯವರ ಪ್ರಾಣ ಉಳಿಸಲು ಹೆಣಗಾಡಿದ ಉದಾಹರಣೆಗಳು ಸಾಕಷ್ಟಿವೆ. ಆರುತ್ತಿರುವ ದೀಪಕ್ಕೆ ಜೀವ ತೈಲವನ್ನು ಎರೆಯುವ ಸಂತ, ಎಷ್ಟೋ ತಾಯಂದಿರ ಮಾಂಗಲ್ಯ ಭಾಗ್ಯ ಉಳಿಸಿ ಸಿಂಧೂರ ಅಳಿಸಿ ಹೋಗದಂತೆ ಕಾಪಾಡುತ್ತಿರುವ ವಂಶ ರಕ್ಷಕ.

ಅದೆಷ್ಟೋ ಅರಳು ಮೊಗ್ಗುಗಳು ಅರಳುವ ಮೊದಲೇ ಬಾಡದಂತೆ ಕಾಯುವ ಕರುಣಾ ಸಿಂಧು. ಮುಳ್ಳಲ್ಲಿ ಬಿದ್ದ ಬಟ್ಟೆಯನ್ನು ಹೊರತೆಗೆವಂತೆ ದುಶ್ಚಟಗಳ ದಾಸರನ್ನು ಹೊರಗೆಡಹುವ, ಅವರ ಮನೆಯವರ ಮನತಣಿಸುವ ಆಪ್ತರಕ್ಷಕ ಈ ವೈದ್ಯ. ಹಾಗಾಗಿ ವೈದ್ಯರಿಗೆ “ವೈದ್ಯೋ ನಾರಾಯಣೋ ಹರಿ: ” ಎಂದು ಹೇಳುತ್ತಾರೆ.

ವೈದ್ಯ ನಾರಾಯಣ ನ ದಿವ್ಯ ಸ್ವರೂಪ. ಆಪತ್ಕಾಲದಲ್ಲಿ ಪ್ರತ್ಯಕ್ಷನಾಗಿ ತೊಳಲುತ್ತಿರುವ ಜೀವಕ್ಕೆ ಸಾಂತ್ವನ ನೀಡುವ ಜೀವದಾನ ಮಾಡುವ ಮಾತೃ ಹೃದಯಿ. ಆದರೆ ಒಬ್ಬ ರೋಗಿಗೂ ವೈದ್ಯನಲ್ಲಿ ನಂಬಿಕೆ ಇದ್ದಾಗ ಮಾತ್ರ ದೇಹಕ್ಕೆ ಅಂಟಿಕೊಂಡ ರೋಗ ಶೀಘ್ರ ಗುಣವಾಗಲು ಸಾಧ್ಯ.

ಒಬ್ಬ ರೋಗಿ ವೈದ್ಯನೆದುರು ಶುದ್ಧ ಮನಸ್ಸಿನ ಮಗುವಾಗಬೇಕು. ಅದೇ ರೀತಿ ಒಬ್ಬ ವೈದ್ಯ – ರೋಗಿಗೆ ಪ್ರೀತಿ ವಾತ್ಸಲ್ಯ ತೋರುವ ಮಾತೃಹೃದಯಿ -ತಾಯಿಯಾಗಬೇಕು. ವೈದ್ಯ – ರೋಗಿಯ ಸಂಬಂಧ ತಾಯಿ ಮಗುವಿನ ಸಂಬಂಧವಾದಾಗ ಮಾತ್ರ ಯಾವುದೇ ಕಠಿಣ ಖಾಯಿಲೆಗೂ ರಕ್ಷಾ ಕವಚ ನಿರ್ಮಾಣವಾಗುತ್ತದೆ.

ತಾಯಿ ಮಗುವಿಗೆ ವಿಷ ಕೊಟ್ಟರೂ ಅದು ಅಮೃತ ವಾಗುವುದಂತಲ್ಲವೇ? ಒಬ್ಬ ವೈದ್ಯ ಅವನು ಕೊಡುವ ಔಷಧದ ಜೊತೆ ರೋಗಿಗೆ ಧನಾತ್ಮಕ ಚಿಂತನೆ ಮಾನಸಿಕ ಸ್ಥೈರ್ಯ ತುಂಬುವ ಔಚಿತ್ಯ ಅರಿತಾಗ ರೋಗಿಯ ಖಾಯಿಲೆ ದುಪ್ಪಟ್ಟು ವೇಗದಲ್ಲಿ ಗುಣವಾಗುವುದರಲ್ಲಿ ಸಂಶಯವಿಲ್ಲ.

ನಮ್ಮ ಹಿಂದೂರಾಷ್ಟ್ರ ಆಯುರ್ವೇದ ಪದ್ಧತಿಯನ್ನು ಜಗತ್ತಿಗೆ ಸಾರಿದ ಒಂದು ಮಹಾನ್ ರಾಷ್ಟ್ರ. ಆತ್ರೇಯ ಮುನಿಯಿಂದ ಪಡೆದ ಜ್ಞಾನದಿಂದ ಚರಕ ಮಹರ್ಷಿಗಳು ಆಯರ್ ವೇದ ಪದ್ಧತಿಯನ್ನು ಪರಿಚಯಿಸಿದ ಮೂಲಪುರುಷರೆನಿಸಿಕೊಂಡು ಅದರ ಮೂಲ ಗ್ರಂಥ ” ಚರಕ ಸಂಹಿತೆ “ಯನ್ನು ವೈದ್ಯಲೋಕಕ್ಕೆ ಕೊಟ್ಟು ಆ ವೃತ್ತಿಗೆ ಭದ್ರ ಬುನಾದಿಯೊಂದನ್ನು ಹಾಕಿಕೊಟ್ಟವರು ಇವರು.

 

ಇದು 125 ಜ್ವರಗಳ ಬಗ್ಗೆ ಹಾಗೂ 600 ಕ್ಕೂ ಮಿಕ್ಕಿದ ಗಿಡಮೂಲಿಕೆಗಳ ಬಗ್ಗೆ ವ್ಯಾಖ್ಯಾನ ಹೊಂದಿದೆ. ಇದೇ ರೀತಿ ಅಲೋಪತಿ, ಹೋಮಿಯೋಪತಿ, ನಾಟಿ, ಯುನಾನಿ ಪದ್ಧತಿಯ ವೈದ್ಯಕೀಯ ಕ್ಷೇತ್ರದಲ್ಲೂ ಭಾರತದ ಮಹಾನ್ ವೈದ್ಯರುಗಳು ಹೆಸರು ಮಾಡಿದ್ದಾರೆ.

ಭಾರತ ರಸಾಯನ ವಿಜ್ಞಾನದ ಪಿತಾಮಹ ಸುಶ್ರುತರು ಶಸ್ತ್ರಚಿಕಿತ್ಸಾರಂಗದಲ್ಲಿ ಕ್ರಾಂತಿಯನ್ನು ಮಾಡಿದ ಮಹಾಮುನಿ – ಎರಡುವರೆ ಸಾವಿರ ವರುಷದ ಹಿಂದೆಯೇ ಪ್ಲಾಸ್ಟಿಕ್ ಸರ್ಜರಿಯಂತಹ ಚಿಕಿತ್ಸೆಯನ್ನು ಪ್ರಾರಂಭಿಸಿದ ಮಹಾನ್ ಪುರುಷ.

ಪ್ರಪ್ರಥಮ ಬಾರಿಗೆ ಕೃತಕ ಜೀನನ್ನು ತಯಾರು ಮಾಡಿದ ಡಾ| ಹರಗೋವಿಂದ ಖೊರಾನಾ, ಭಾರತದ ನೂತನ ರಸಾಯನ ಶಾಸ್ತ್ರದ ಪಿತಾಮಹ ಪ್ರಫುಲ್ಲಚಂದ್ರರೇ., ಹೀಗೆ ವೈದ್ಯಕ್ಷೇತ್ರಕ್ಕೆ ಮಹಾನ್ ಕೊಡುಗೆ ನೀಡಿದ ವ್ಯಕ್ತಿಗಳಿರುವ ನಮ್ಮ ಭಾರತ ದೇಶವೇ ಧನ್ಯ.

ಪ್ರಸ್ತುತ: ಕೊರೊನಾ ಮಹಾಮಾರಿಯಿಂದ ಜನಸಾಗರದ ರಕ್ಷಣೆಗೆ ತಮ್ಮ ಅಮೂಲ್ಯ ಜೀವನವನ್ನು ಸವೆಸುತ್ತಿರುವ ಎಲ್ಲಾ ವೈದ್ಯ ಬಂಧುಗಳಿಗೆ ನಮೋ ನಮಃ . ಜುಲೈ ಒಂದರಂದು (1882) ಹುಟ್ಟಿ ಜುಲೈ ಒಂದರಂದೇ (1962) ಇಹಲೋಕ ತ್ಯಜಿಸಿದ ಸ್ವಾತಂತ್ರ್ಯಯೋಧ, ಪಶ್ಚಿಮ ಬಂಗಾಳದ 2ನೇ ಮುಖ್ಯಮಂತ್ರಿ, ವೈದ್ಯಲೋಕಕ್ಕೆ ಕಲಶಪ್ರಾಯರಾದ ಭಾರತರತ್ನ ಡಾ| ಬಿಧನ್ ಚಂದ್ರ ರಾಯ್ ರವರ ನೆನಪಿಗಾಗಿ ಭಾರತದಲ್ಲಿ ವೈದ್ಯರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ಈ ಸಂದಭ೯ದಲ್ಲಿ ಸಮಾಜದ ಕಳಕಳಿಯಿಂದ ದುಡಿಯುತ್ತಿರುವ ಎಲ್ಲ ವೈದ್ಯ ಲೋಕದ ಸಹೃದಯಿ ಗಳಿಗೆ ವೈದ್ಯರ ದಿನಾಚರಣೆಯ ಶುಭ ಕಾಮನೆಗಳು.

 

 

 
 
 
 
 
 
 
 
 
 
 

Leave a Reply