ವಿಜಯನಗರದ ಇಮ್ಮಡಿ ಹರಿಹರನ ಶಾಸನ ಪತ್ತೆ

ಕುಂದಾಪುರ ತಾಲೂಕಿನ ಜಪ್ತಿ ಗ್ರಾಮದ ಕೈಲ್ಕೆರೆ ಪ್ರದೇಶದಲ್ಲಿ ವಿಜಯನಗರದ ಸಂಗಮ ದೊರೆ ಇಮ್ಮಡಿ ಹರಿಹರನ ಶಾಸನವನ್ನು ರಾಜೇಶ್ವರ ಉಪಾಧ್ಯಾಯ ಕಂಚಾರ್ತಿ ಅವರು ಪತ್ತೆ ಮಾಡಿರುತ್ತಾರೆ. ಈ ಶಾಸನವನ್ನು ಓದಿ ಅರ್ಥೈಸುವಲ್ಲಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಸಹಕಾರ ನೀಡಿರುತ್ತಾರೆ. 6 ಅಡಿ ಉದ್ದ ಹಾಗೂ 2.5 ಅಡಿ ಅಗಲದ ಕಣ ಶಿಲೆ (ಗ್ರಾನೈಟ್) ಯಲ್ಲಿ ಕೊರೆಯಲ್ಪಟ್ಟ ಈ ಶಾಸನವು 54 ಸಾಲುಗಳನ್ನು ಹೊಂದಿದ್ದು ಕನ್ನಡ ಲಿಪಿ ಹಾಗೂ ಕನ್ನಡ ಮತ್ತು ಸಂಸ್ಕೃತ ¨ಭಾಷೆಯನ್ನು ಒಳಗೊಂಡಿದೆ.
‘ಶ್ರೀ ಗಣಾ​ಧಿ​ಪತಯೆ ನಮಃ’ ಎಂಬ ಶ್ಲೋಕದಿಂದ ಪ್ರಾರಂಭವಾಗುವ ಈ ಶಾಸನವು ಇಮ್ಮಡಿ ಹರಿಹರನುವಿಜಯನಗರದಲ್ಲಿ ಆಳ್ವಿಕೆ ಮಾಡುತ್ತಿರುವ​ ಜಯಾಭ್ಯುದಯ  ಶಕವರ್ಷ 1316 (ಕ್ರಿ.ಶ 1394, ನವಂಬರ್ 10 ಸೋಮವಾರ)​ ನೆಯ ಬಾವ ಸಂವತ್ಸರದ ಕಾರ್ತಿಕ ಶುದ್ಧ 10 ಸೋಮವಾರದಂದು ಭಾರದ್ವಾಜ ಗೋತ್ರದವರಾದ ನಾರಾಯಣ​ ವಾಜಪೇಯಯಾಜಿಗಳು ಮತ್ತು ನರಹರಿ ಸೋಮಯಾಜಿಗಳು ಹಾಗೂ ವಸಿಷ್ಠ ಗೋತ್ರದ ಪಂಡರಿ ದೀಕ್ಷಿತರುಗಳು​ ಪಂಪಾ ಕ್ಷೇತ್ರದ ಶ್ರೀ ವಿರೂಪಾಕ್ಷ ದೇವರ ಸನ್ನಿಧಿಯಲ್ಲಿ ಶಿವರಾತ್ರಿಯ ಪುಣ್ಯ ಕಾಲದಲ್ಲಿ ಸರ್ವ​ಬಾದ ಪರಿಹಾರವಾಗಿ​ ರಾಯರ ಹೆಸರಲ್ಲಿ ಹಿರಾಣ್ಯೋದಕ ದಾನವನ್ನು ಮಾಡಿರುವ ವಿವರವಿದೆ.

ಶ್ರೀ ವೀರ ಹರಿಹರ ಮಹಾರಾಯರ ಆಳ್ವಿಕೆಯ ಈ ಕಾಲದಲ್ಲಿ ರಾಯರ ನಿರೂಪದಿಂದ ಬಾರಕೂರು ರಾಜ್ಯವನ್ನುಕರಣಿಕ ಸಿಂಗಣ್ಣನ ತಮ್ಮ ಮಲ್ಲಪನು ಪ್ರತಿಪಾಲಿಸುತ್ತಿರುತ್ತಾನೆ. ಶ್ರೀ ವೀರ ಹರಿಹರ ಮಹಾರಾಯರಿಗೆ ಮಾಡಿದ ದಾನದ​ ಪ್ರತಿ​ಫಲವಾಗಿ ಮಲ್ಲಪನು ಸಿಂಗೇರಿ (ಶೃಂಗೇರಿ)ಯ ಶ್ರೀ ವಿದ್ಯಾರಣ್ಯ ಶ್ರೀಪಾದಂಗಳ ಸನ್ನಿದಿಯಲ್ಲಿ ಈ ಮೂವರು ವಿದ್ವಾನುಗಳಿಗೆ 130ವರಹ ಗದ್ಯಾಣಗಳನ್ನು, 468 ಕಾಟಿ ಗದ್ಯಾಣಗಳನ್ನು, 1ಪ್ರತಾಪ ಗದ್ಯಾಣವನ್ನು ಹಾಗೂ ಬಾರಕೂರಿನ​ ನಾಲ್ವತ್ತು ನಾಡೊಳಗಿನ ಪ್ರಮುಖವಾಗಿ ಕವಿಲಕೇರಿ, ವೊಲಗತ್ತೂರು, ಕಂದಾಉರ, ಹೊಂನ್ನಹಳಡಿಯ​ (ಈಗಿನ ಕೈಲ್ಕೆರೆ ವಲ್ಕುತ್ತೂರು, ಕಂದಾವರ, ಹೊರ್ನಾಡಿ) ಭೂಮಿಯನ್ನು ದಾನವಾಗಿ ನೀಡಿರುವುದಕ್ಕೆ ಬರಸಿಕೊಟ್ಟ​ ​ಧರ್ಮಶಾಸನ ಇದಾಗಿದೆ.
 
ಶಾಸನದಲ್ಲಿ ಕಂಚಿಕಾ ದೇವಿ, ವೊಲಗತ್ತೂರ ದೇವಸ್ವ, ಬ್ರಹ್ಮರ ಬನದ ಉಲ್ಲೇಖಗಳಿವೆ ಹಾಗೆಯೇಚತುಸೀಮೆಯನ್ನು ಗುರುತಿಸುವಾಗ ಗದ್ದೆಗಳ ಮತ್ತು ವ್ಯಕ್ತಿಗಳ ಉಲ್ಲೇಖವನ್ನು ಮಾಡಲಾಗಿದೆ. ಶಾಸನದ ಕೊನೆಯಲ್ಲಿ ಶಾಪಾಶಯ ವಾಕ್ಯವಿದ್ದು ಅದೇ ರೀತಿ ಶಾಸನವನ್ನು ರಕ್ಷಿಸಿದವರಿಗೆ ದೊರಕುವ ಮನ್ನಣೆಯನ್ನು ತಿಳಿಸಲಾಗಿದೆ.

ಈ ಮೂವರು ವಿದ್ವಾನುಗಳು ತಮ್ಮ​ ಧರ್ಮವಾಗಿ ಹೊರಗಣ ಸೋಮಯ್ಯ ದೇವರಿಗೆ (ಈಗಿನ ವಲ್ಕುತ್ತೂರಿನ​ ಶ್ರೀ ಮಹಾಲಿಂಗೇಶ್ವರ ದೇವಾಲಯ?) ಮಹಾನವಮಿಯ ಪರ್ವಕ್ಕೆ ಮೂರು ಹಾಡ ಎಣ್ಣೆಯನ್ನು ಪ್ರತಿವರುಷದಲ್ಲೂನೀಡಬೇಕೆಂಬ ವಿವರವಿದೆ. ರಾಯರು ಕೊಟ್ಟ ಈ ಧರ್ಮದ ಹರವರಿಗಳಿಗೆ ಯಾವ ಕಂಟಕವೂ ಬಾರದ ಹಾಗೆ ಆ
ಸೋಮಯ್ಯ ದೇವರ ಆರಾಧಕರು ಮತ್ತು ಮೂರು ಕೇರಿಯ ಹಲರು ಪಾಲಿಸಿಕೊಂಡು ಬರಬೇಕೆಂಬ ವಿವರವಿದೆ. 
 
​ ಶಾಸನಕ್ಕೆ ಶ್ರೀ ವೀರ ಹರಿಹರ ಮಹಾರಾಯರ ಶ್ರೀ ಹಸ್ತವಾಗಿ ಮಲ್ಲಪಗಳು ಒಪ್ಪಿಗೆಯನ್ನು ಹಾಕಿರುತ್ತಾರೆ.ಕ್ಷೇತ್ರಕಾರ್ಯ ಶೋ​ಧನೆಯ ​ಸಂದರ್ಭದಲ್ಲಿ  ಕೈಲ್ಕೆರೆಯ ವಿನಯ್ ಕೊಠಾರಿ ಮತ್ತು ರೋಶನ್ ಕೊಠಾರಿಯವರುಸಹಕಾರ ನೀಡಿರುತ್ತಾರೆ.​​​​
 
 
 
 
 
 
 
 
 

Leave a Reply