ದೀಪಾವಳಿಯ ಸಂಭ್ರಮದೋಕುಳಿ~ ಪೂರ್ಣಿಮಾ ಜನಾರ್ದನ್ ಕೊಡವೂರು

ಮತ್ತೆ ಬಂದಿದೆ ಬೆಳಕಿನ ಭವ್ಯ ಹಬ್ಬ ದೀಪಾವಳಿ…
ತಂದಿದೆ ಸಂತಸ, ಸಮೃದ್ಧಿಯ ಸಂಭ್ರಮದೋಕುಳಿ..

ದುರುಳ ನರಕಾಸುರನ ವಧೆಯ ನೆನಪಿಸುವ ಚತುರ್ದಶಿಯಿದು ….
ಶ್ರೀಕೃಷ್ಣ ಸತ್ಯಭಾಮೆಯರ ಗೆಲುವನ್ನು ಹರ್ಷಿಸುವ ದಿನವಿದು…

ಸಪ್ತ ಚಿರಂಜೀವಿಗಳ ನೆನೆಯುತ್ತಾ ತೈಲಾಭ್ಯಂಜನ ಮಾಡಿ ಭಗವಂತನ ಆರಾಧಿಸುವ ಹಬ್ಬವಿದು…
ಸಕಲ ಐಶ್ವರ್ಯ ನೀಡಿ, ಮನಕೆ ನೆಮ್ಮದಿಯೊಂದಿಗೆ ತನುವಿಗೆ ಆರೋಗ್ಯ ಅನುಗ್ರಹಿಸೆಂದು ಮಹಾಲಕ್ಷ್ಮಿಯ ಪೂಜಿಸುವ ಅಶ್ವಯುಜ ಮಾಸವಿದು….

ಭೂಮಿಪುತ್ರ ಬಲಿಯೇಂದ್ರನನ್ನು ಕೂಗಿ ಕರೆದು ಆತಿಥ್ಯವ ನೀಡುವ ಉತ್ಸವವಿದು… ಮುಕ್ಕೋಟಿ ದೇವತೆಗಳ ಆವಾಸ ಸ್ಥಾನ ಗೋಮಾತೆಯನ್ನು ಆರಾಧಿಸುವ ಪರ್ವಕಾಲವಿದು…

ನಮ್ಮನ್ನು ಪೊರೆವ ಪ್ರಕೃತಿ ದೇವತೆ, ಪೊತ್ತ ಪ್ರಥ್ವಿ ಮಾತೆಗೆ ನಮಿಸುವ ಅಮೃತ ಮುಹೂರ್ತವಿದು…
ಯಮ ದ್ವಿತೀಯ, ಭಗಿನಿ ತೃತೀಯ ಸಡಗರದಿ ಒಡ ಹುಟ್ಟಿದವರನ್ನು ಉಪಚರಿಸುವ ಆಚರಣೆ ಇದು….

ಪಂಚಕಜ್ಜಾಯ, ದೋಸೆ, ಕಡುಬು ಮೆಲ್ಲುತ್ತಾ ಪರಸ್ಪರ ಪ್ರೀತಿಯ ಹಂಚುವ ಖುಷಿಯಿದು…

ಮಾನವೀಯತೆಯ ಹಣತೆಯ ಬೆಳಗಿ ಮನೆ ಮನಗಳನ್ನು ಅರಳಿಸುವ ಸಡಗರವಿದು..

ಪಟ ಪಟ ಪಟಾಕಿ ಹೊಡೆದು ಸುರ್ ಸುರ್ ಬತ್ತಿಯ ಹೊತ್ತಿಸಿ ಕಷ್ಟಗಳೆಲ್ಲ ಕರಗಿ ಹೋಗಲೆಂದು ಪ್ರಾರ್ಥಿಸುವ ಹೊತ್ತಿದು..

ಹೊಸ ಉಡುಗೆಯ ಧರಿಸಿ ಗುರು ಹಿರಿಯರಿಗೆ ನಮಸ್ಕರಿಸಿ ಅವರ ಆಶೀರ್ವಾದವ ಬಯಸುವ ವೇಳೆಯಿದು…      ತುಳಸಿ ಸಂಕೀರ್ತನೆ,ಲಕ್ಷ ದೀಪೋತ್ಸವದ ಗೌಜಿಯಲಿ ಪರಮಾತ್ಮನ ವಿಶ್ವರೂಪಕ್ಕೆ ನಮಿಸುವ ಬೆಳಕಿನ ಹಬ್ಬವಿದು..ಸರ್ವ ಜನತೆಗೆ ಸರ್ವ ಮಂಗಲದ ಶುಭಾಶಯ ಕೋರುವ ಸವಿ ಗಾನವಿದು…

 
 
 
 
 
 
 
 
 

Leave a Reply