ಪ್ರಾಣ ಸ್ನೇಹಿತ~ ಅಮೃತ ವರ್ಷಿಣಿ

ಒಂದಾನೊಂದು ಊರಿನಲ್ಲಿ ಚಿಂಟು ಮತ್ತು ಮಿಂಟು ಎಂಬ ಬಾತು ಕೋಳಿಗಳಿದ್ದವು. ಅವು ಪ್ರಾಣ ಸ್ನೇಹಿತರಾಗಿದ್ದವು. ಒಂದು ದಿನ ಚಿಂಟು ಆಹಾರವನ್ನು ಹುಡುಕುತ್ತಾ ಹೋಗುತ್ತಿರುವಾಗ ರೋಗ ದಿಂದ ಬಳಲುತ್ತಿದ್ದ ಬಸವನ ಹುಳುವನ್ನು ಕಂಡು ಚಿಂತಿಸಿತು.

‘ಈ ಬಸವನ ಹುಳುವನ್ನು ಇಲ್ಲಿಯೇ ಬಿಟ್ಟರೆ ತೊಂದರೆಯಾಗಬಹುದು’ ಎಂದು ಯೋಚಿಸಿ ಅದನ್ನು ತನ್ನ ಮನೆಗೆ ಕರಕೊಂಡು ಹೋಯಿತು. ಬಂದ ಗೆಳೆಯನನ್ನು ನೋಡಿ~

ಮಿಂಟು: ಓ! ಇವತ್ತು ನೀನು ಬೇಗ ಬಂದೆಯಾ?
ತಿನ್ನಲು ಏನು ತಂದಿರುವೆ ?
ಚಿಂಟು: ಮೀನು ಹಾಗೂ ….
ಮಿಂಟು: ಹಾಗೂ …ಏನು?
ಚಿಂಟು: ಬಸವನ ಹುಳು
ಮಿಂಟು: ಬಸವನ ಹುಳು ?
ಚಿಂಟು: ತಿನ್ನಲಿಕ್ಕಲ್ಲ. ಅದು ರೋಗದಿಂದ ಬಳಲುತ್ತಿತ್ತು. ಆದ್ದರಿಂದ ಕರೆದುಕೊಂಡು ಬಂದೆ
ಮಿಂಟು: ಏನು?
ಚಿಂಟು: ದಯವಿಟ್ಟು, ಅದಿಲ್ಲಿರಲಿ
ಮಿಂಟು: ಸರಿ. ಇರಲಿ

ಬಸವನ ಹುಳುವಿನ ಆರೈಕೆ ಮಾಡುತ್ತಿದ್ದ ಚಿಂಟುವನ್ನು ಕಂಡ ಮಿಂಟು ಸಂತೋಷಗೊಂಡಿತು. ಚಿಂಟುವಿನ ಆರೈಕೆಯಿಂದ ಬಸವನ ಹುಳು ಸ್ವಲ್ಪ ಸಮಯದ ನಂತರ ಆರೋಗ್ಯ ಪೂರ್ಣವಾಗಿ ತನ್ನ ಮನೆಗೆ ಹೋಗಲು ತಯಾರಾಗಿತ್ತು. ಆದರೆ ಚಿಂಟು ಅದರೊಟ್ಟಿಗೆ ಇದ್ದು ಅದನ್ನು ಅದರ ಮನೆಗೆ ಕಳುಹಿಸಿ ಕೊಡಲು ಮನಸ್ಸಿರಲಿಲ್ಲ.

ಚಿಂಟು: ನಿನಗೆ ನಿಜವಾಗಲೂ ಮನೆಗೆ ಹೋಗಬೇಕಾ? ನಮ್ಮ ಜೊತೆಯೇ ಸುರಕ್ಷಿತವಾಗಿ ಇರಬಹುದಲ್ಲ?
ಬಸವನ ಹುಳು: ನನಗೆ ನನ್ನ ಕುಟುಂಬವನ್ನು ನೋಡಬೇಕು.
ಮಿಂಟು: ಅವನು ಹೋಗಲಿ, ಚಿಂತೆ ಮಾಡಬೇಡ.
ಚಿಂಟು: ಆಯ್ತು.

ಬಸವನ ಹುಳು ‘ಧನ್ಯವಾದ’ ಎಂದು ಹೇಳಿ ತನ್ನ ಮನೆಯ ಕಡೆಗೆ ಹೊರಟಿತು. ಬಸವನ ಹುಳುವಿನ ಅಗಲುವಿಕೆಯಿಂದ ಬೇಸರಗೊಂಡ ಚಿಂಟು ಎರಡು ವಾರ ಕಳೆಯುವುದರಲ್ಲಿ ಬಸವನ ಹುಳುವನ್ನ ಹುಡುಕಲಾರಂಭಿಸಿತು. ಅದು ಎಲ್ಲಿಯೂ ಕಾಣಸಿಗಲಿಲ್ಲ. ಒಂದು ದಿನ ಚಿಂಟುವಿನ ಮತ್ತೊಬ್ಬ ಗೆಳೆಯ ಟಾಮ್ ಮನೆಗೆ ಬಂದನು.

ಚಿಂಟು: ನನಗೆ ನನ್ನ ಗೆಳೆಯ ಬಸವನ ಹುಳುವನ್ನು ಹುಡುಕಲು ನೆರವಾಗುವೆಯಾ?

ಟಾಮ್ ಮತ್ತು ಚಿಂಟು ಬಸವನ ಹುಳುವನ್ನು ಎಲ್ಲೆಲ್ಲಿ ಹುಡುಕಿದರೂ ಕಾಣಸಿಗಲಿಲ್ಲ. ಒಂದು ದಿನ ಚಿಂಟು ಆಹಾರ ತರಲು ಹೊರಗೆ ಹೋದಾಗ ಬಸವನ ಹುಳುವನ್ನು ಕಂಡಿತು ಹಾಗೂ ತುಂಬಾ ಸಂತೋಷಗೊಂಡಿತು.

ಚಿಂಟು: ಓ ನನ್ನ ಗೆಳೆಯ, ನಿನ್ನನ್ನು ಎಲ್ಲಾ ಕಡೆಯೂ ಹುಡುಕಿದೆ. ಆದರೆ ನೀನು ಇಲ್ಲೇ ಇರುವೆ.
ಬಸವನ ಹುಳು: ಗೆಳೆಯ? ನಾನು ನಿನ್ನ ಗೆಳೆಯನಲ್ಲ. ನೀನು ನನಗೆ ಸಹಾಯ ಮಾಡಿರುವೆ. ಅದಕ್ಕಾಗಿ ಧನ್ಯವಾದಗಳು. ಆದರೆ ನೀನು ನನ್ನ ಗೆಳೆಯನಲ್ಲ. ನೀನು ನಮ್ಮನ್ನು ತಿನ್ನುತ್ತಿ. ನನಗೆ ಅಂತಹ ಗೆಳೆಯ ಬೇಡ.

ಚಿಂಟು ದುಃಖದಿಂದ ಮನೆಗೆ ಹಿಂತಿರುಗಿತು.  ಮಿಂಟು: ಇವತ್ತಿನ ದಿನ ಹೇಗಿತ್ತು?
ಚಿಂಟು: ತೊಂದರೆ ಇಲ್ಲ
ಮಿಂಟು: ಗೆಳೆಯ ಆಹಾರ ತೆಗೆದುಕೋ
(ಆಗ ಚಿಂಟು ಯೋಚಿಸಿತು) ನನ್ನ ಪ್ರಾಣ ಸ್ನೇಹಿತ ನನ್ನ ಬಳಿಯೇ ಇರುವಾಗ ನನಗೆ ಬೇರೆ ಗೆಳೆಯ ಯಾಕೆ?
ನನ್ನ ಪ್ರೀತಿಯ ಸ್ನೇಹಿತ ಮಿಂಟು.

 
 
 
 
 
 
 
 
 
 
 

Leave a Reply