ಚೌತಿಗೊಂದು ಚಿಂತನೆ

          ||  ಬಂದು ಹೋಗುವ “ಗಣಪತಿ” ||
   
           | ಆರಾಧನೆಯ ಪೂರ್ವಾಪರ |

ಆಗಮಿಸಿ , ಪೂಜೆಗೊಂಡು , ನಿರ್ಗಮಿಸುವ ಅಥವಾ ಆಹ್ವಾನಿಸಿ , ಆವಾಹಿಸಿ , ಪೂಜಿಸಿ ವಿಸರ್ಜಿಸುವ  ದೇವರುಗಳಲ್ಲಿ “ಗಣಪತಿ” ಒಬ್ಬ . ಋತುಮಾನಕ್ಕೆ ಅನುಗುಣವಾಗಿ ನಿರ್ದಿಷ್ಟ ದಿನಗಳಲ್ಲಿ‌ ಬಂದು ಹೋಗುವ ಈ ದೇವರುಗಳ ಆರಾಧನಾ ವಿಧಾನವು ಎಷ್ಟು ವೈಭವದಿಂದ ನಡೆದರೂ ತಾತ್ಕಾಲಿಕ ಕಲ್ಪನೆ ಮತ್ತು ಅನುಸಂಧಾನ ಆಧರಿತವಾಗಿರುವುದು ಗಮನಾರ್ಹ .ವರ್ಷಪೂರ್ತಿ ಬೇರೆಬೇರೆ ಸಂದರ್ಭಗಳಲ್ಲಿ ಇಂತಹ ದೇವರುಗಳ ಆಗಮನವಾಗುತ್ತಿರುತ್ತದೆ .ಶ್ರದ್ದೆಯ ಆರಾಧನೆ ನಡೆದು ಆ ದೇವರುಗಳನ್ನು ಬೀಳ್ಕೊಡಲಾಗುತ್ತದೆ .
       

ನಪದರ ಆಟಿಯ‌ಅಜ್ಜಿ , ಸೋಣದ ಬಲೀಂದ್ರನತಾಯಿ , ಹೊಸ್ತಿಲಿನ ದೇವರು, ತೆನೆಕಟ್ಟುವ ಆಚರಣೆ  , ತುಳುವರ ಪರ್ಬದ ಬಲೀಂದ್ರ , ಕೆಡ್ಡಸದ ಭೂಮಿತಾಯಿ , ಬಿಸುಕಣಿ ಹಾಗೂ ಶಿಷ್ಟದ ಗೌರಿ – ಗಣೇಶ , ನವರಾತ್ರಿಯ ಶಕ್ತಿಪೂಜೆ ,ದೀಪಾವಳಿಯ ಬಲೀಂದ್ರ  ಮುಂತಾದ ದೇವರುಗಳು ತಾತ್ಕಾಲಿಕವಾಗಿ ನೆಲೆಗೊಂಡು , ಪೂಜೆಗೊಂಡು ನಿರ್ಗಮಿಸುವಂತವರು .ಈ ಸ್ಥಿರವಲ್ಲದ ಉಪಾಸನೆಗೆ ಮಣ್ಣಿನಮೂರ್ತಿ‌, ಕಲಶ ,ದೀಪ , ಸ್ವಸ್ತಿಕೆ(ಸುತ್ತೆ) ಮುಂತಾದ ಸಂಕೇತಗಳು  ಮಾಧ್ಯಮಗಳಾಗುತ್ತವೆ .
                ಗೌರಿ – ಗಣೇಶರಿಗೆ ಮಣ್ಣಿನ ಮೂರ್ತಿಯಲ್ಲಿ ಪೂಜೆ .ಗಣೇಶನ ಎಷ್ಟೇ ಭೀಮಗಾತ್ರದ ಪ್ರತಿಮೆಯನ್ನಾದರೂ ಮಣ್ಣಿನಲ್ಲೆ ರಚಿಸುವುದು ,ಪೂಜೆಯ ಬಳಿಕ ನೀರಿನಲ್ಲಿ ವಿಸರ್ಜಿಸುವುದು . ನವರಾತ್ರಿಯ ಸಂದರ್ಭ  ಕಲಶದಲ್ಲಿ ಆವಾಹನೆ – ಪೂಜೆ  , ಸ್ವಸ್ತಿಕೆಯಲ್ಲಿ ಆರಾಧನೆ ಮತ್ತು ಶಾರದೆಯ ಮಣ್ಣಿನ ಮೂರ್ತಿಯ ಪೂಜೆ – ವಿಸರ್ಜನೆ ಇತ್ಯಾದಿ ವಿಶಿಷ್ಟ ವಿಧಾನದಲ್ಲಿ ಉಪಾಸನೆಗಳು  ನಡೆದು ಬಂದಿದೆ .
     ಪೊಲಿ ( ಸಮೃದ್ಧಿ)ಯನ್ನು ತೆನೆಯ ರೂಪದಲ್ಲಿ ಮನೆ ತುಂಬಿಸಿಕೊಳ್ಳುವ ಆಚರಣೆ ,   ಬಲೀಂದ್ರನನ್ನು ದೀಪದಲ್ಲಿ – ಬೆಳೆಯ ಸಮೃದ್ಧಿಯಲ್ಲಿ ಕಾಣುವುದು , ಮನೆಯಂಗಳದಲ್ಲಿ ಬೂದಿಯಲ್ಲಿ ಬರೆಯುವ ರಂಗವಲ್ಲಿ ಹಾಗೂ ಅದರಲ್ಲಿರಿಸುವ ಮಂಗಳ ದ್ರವ್ಯಗಳಲ್ಲಿ ಕೆಡ್ಡಸದ ಆಚರಣೆಯ  ಭೂಮಿತಾಯಿಯನ್ನು ಪೂಜಿಸುವುದು , ಮಂಗಳದ್ರವ್ಯಗಳೊಳಗೊಂಡ  ‘ವಿಷುಕಣಿ’ಯಲ್ಲಿ ಯುಗಾದಿಯ ಅಥವಾ ಹೊಸ ವರ್ಷದ ಭವಿಷ್ಯದ ದೇವರನ್ನು ಗುರುತಿಸುವುದು  ಮುಂತಾದ  ಕ್ರಮಗಳೆಲ್ಲ ತಾತ್ಕಾಲಿಕ ನೆಲೆಯಲ್ಲಿ ನೆರವೇರುತ್ತಿವೆ . ಅಂದರೆ ಈ ಸಂದರ್ಭಗಳಲ್ಲಿ ಪೂಜೆಗೊಳ್ಳುವ ನಂಬಿಕೆಗಳೆಲ್ಲ ಬಂದುಹೋಗುವ ಶ್ರದ್ಧೆಗಳಾಗಿವೆ .

ಅಂತೆಯೇ ನಮ್ಮ ಗಣಪತಿ  ಬಂದು ಹೋಗುವ ದೇವರುಗಳಲ್ಲಿ ಒಬ್ಬ .
      

   • ತಾಯಿ ಗೌರಿಯೊಂದಿಗೆ ಪ್ರತಿವರ್ಷ ಆಗಮಿಸಿ ಪೂಜೆಗೊಂಡು ನಿರ್ಗಮಿಸುವ ಗಣಪನ ಆರಾಧನೆಯಲ್ಲಿ ತಾಯಿ ಗೌರಿಗೂ ಪ್ರಾಧಾನ್ಯವಿದೆ .
ಮೊದಲು “ಗೌರಿ ತೃತೀಯ , ಬಳಿಕ ಗಣೇಶ ಚತುರ್ಥಿ” ಇದರಿಂದ ಆದಿಪೂಜಿತನಾದರೂ ಮೊದಲು ತಾಯಿಗೆ ಪೂಜೆ . 
            ಇಂದಿನ ಆಡಂಬರದ ವೈಭವೋಪೇತ
ಗಣಪತಿ ,ದುರ್ಗೆಯರ ,ಬಲೀಂದ್ರನ
ಉಪಾಸನಾ ವಿಧಾನಗಳ ಬಹು ವಿಸ್ತ್ರತ ಅಲಂಕಾರದ ಮರೆಯಲ್ಲಿ ಜನಸಾಮನ್ಯರ ಚಿಂತನೆಗೆ ಆಧಾರಗಳು ದೊರೆಯುತ್ತವೆ.ಸರಳ – ಸುಂದರ ಜನಪದೀಯ ಅನುಸಂಧಾನವು ಅಲ್ಲೆ ನಿಚ್ಚಳವಾಗಿರುತ್ತವೆ.‌ಏಕೆಂದರೆ ಜನಪದರ ಮನಸ್ಸುಗಳು ಕಲ್ಪಸಿದ ,ಆ ಆಲೋಚನೆಗಳನ್ನೆ ಮೂರ್ತಸ್ವರೂಪಕ್ಕೆ ಇಳಿಸಿದ ಪೂಜಾವಿಧಾನ – ಪ್ರತೀಕಗಳ ಚಿಂತನೆಗಳು ಸುಪ್ತವಾಗಿ ಗಮನ
ಸೆಳೆಯುತ್ತಿರುತ್ತವೆ .
            ಸಹಜ ,ಮುಗ್ಧ ಚಿಂತನೆಯಿಂದ  ವೈದಿಕದ ವೈಭವೋಪೇತ ಸೃಷ್ಟಿಯವರೆಗೆ ;  ಬೇಟೆ ಸಂಸ್ಕೃತಿಯಿಂದ ಆರಂಭಿಸಿ ಆಧುನಿಕ ಜೀವನ ಶೈಲಿಯ ಹರವಿನಲ್ಲಿ ಮಣ್ಣಿನ ಮಗ ಮಹಾಕಾಯ  ಮಹಾಗಣಪತಿಯ ಸ್ವೀಕಾರ ಮತ್ತು ಪೂಜಾವಿಧಾನಗಳಿಗೆ ರೋಚಕ ಇತಿಹಾಸವಿದೆ. ವಿಶ್ವದಾದ್ಯಂತ ಮಾನ್ಯತೆ ಇದೆ .
        ಒಂದು ಸಂಸ್ಕೃತಿಯ ಸಂಕೇತವಾಗಿ ,
ಒಬ್ಬ ಗಣವಾಗಿ , ಬ್ರಹ್ಮಣಸ್ಪತಿಯಾಗಿ ,
ಗಣಾಧ್ಯಕ್ಷನಾಗಿ ಈ ವಿನಾಯಕ ಆಧ್ಯಾತ್ಮಿಕ ಪ್ರಪಂಚದಲ್ಲಿ ಏರಿದ ಎತ್ತರ ಊಹಿಸಲಸಾಧ್ಯ .
ಆಸ್ತಿಕ ,ನಾಸ್ತಿಕ ಭೇದವಿಲ್ಲದೆ ಬಹುಮಾನ್ಯನಾದ ದೇವರು ಗಣಪತಿ .ಜಾತಿ – ಮತ – ಪಂಥಗಳ ಕಟ್ಟುಪಾಡುಗಳನ್ನು ಮೀರಿ ವಿಶ್ವವ್ಯಾಪಿಯಾಗಿ ತನ್ನ ಆಕರ್ಷಕ ವರ್ಚಸ್ಸಿನ ಮೂಲಕ ವಿಶ್ವವಂದ್ಯನಾದ ದೇವರು ವಿಶ್ವಂಬರ ಮೂರ್ತಿಯಾಗಿ ಬೆಳೆದದ್ದು ,ಜನಮಾನಸದಲ್ಲಿ ಸ್ಥಾಯೀ ಸ್ಥಾನವನ್ನು ಪಡೆದದ್ದು ಮಾತ್ರ ಸತ್ಯ .
      
        ವಿಘ್ನ ವಿಡ್ಡೂರಗಳು

     ಮಾನವ ಬಯಸಿದ್ದೆಲ್ಲ ನಿರಾಯಾಸವಾಗಿ ಪ್ರಾಪ್ತಿಯಾಗಬೇಕು ,ಜೀವನ ಸುಂದರ ಹಾಗೂ ನಿರಾಳವಾಗಬೇಕು , ಬದುಕಿನ ನಿರಂತರತೆಗೆ ಭಂಗ ಬರಬಾರದು , ನಿರ್ವಿಘ್ನವಾಗಿ ಬಾಳಬೇಕು ಎಂದು ಬಯಸಿದಾಗ ಸಹಜವಾಗಿ ವಿಘ್ನಗಳು ಬರುತ್ತವೆ , ಆಗ ಆತಂಕಕ್ಕೊಳಗಾಗುತ್ತೇವೆ.  ಕಾರ್ಯಾರಂಭಗಳಿಗೆ ವಿಘ್ನ – ವಿಡ್ಡೂರಗಳು ಬಂದಾಗ ವಿಘ್ನದ ಕುರಿತು ಗಮನಹರಿದಿರಬೇಕು . ವಿಘ್ನನಿವಾರಕ ದೇವರೊಬ್ಬನ ಚಿಂತನೆ ಬಂದಿರಬಹುದು .ಈ ತಲ್ಲಣ ,ಗೊಂದಲಗಳ ನಿವೃತ್ತಿಗಾಗಿ ವಿಘ್ನನಿವಾರಕ ದೇವರೊಬ್ಬ ಸಾಕಾರಗೊಂಡಿರಬೇಕು . ನಮ್ಮ ವಿಶಾಲ ಮನೋಭಾವದ ಆಧ್ಯಾತ್ಮಿಕ ಬದುಕು , ಸಾಂಸ್ಕೃತಿಕ ವೈಚಾರಿಕ ವೈಶಾಲ್ಯತೆಯಲ್ಲಿ ಗಜಮುಖನಾದರೂ ಸುಮುಖನಾಗಿ ಆದಿಪೂಜಿತನು ಪ್ರಥಮ ಪೂಜೆಗೊಳ್ಳುತ್ತಾನೆ .
       ಅಮೂರ್ತವಾದರೂ ಮೂರ್ತ ಚಿಂತನೆ ,ಅಲೌಕಿಕದ ಲೌಕಿಕ ದರ್ಶನ , ಪ್ರತಿಕೃತಿ ಆರಾಧನೆಗಳೆಲ್ಲ ವಿವಿಧ ಹಂತದಲ್ಲಿ ಅಭಿವೃದ್ಧಿ ಹೊಂದಿದಾಗಲೂ ನಮ್ಮ ಗಣಪ ಹಲವು ಸ್ಥಿತ್ಯಂತರ – ರೂಪಾಂತರಗಳಿಗೆ ಒಳಗಾದರೂ ಬೆಳೆದದ್ದು ಭವ್ಯವಾಗಿ .ಸಂಸ್ಕೃತಿಯ ಮೂಲದಲ್ಲೆ ಇದ್ದ ಅಥವಾ ಆವಿರ್ಭವಿಸಿದ ಒಂದು ಚಿಂತನೆ ಇದಾದುರಿಂದ ಇದರ ಪರಿಣಾಮ ಇಷ್ಟು ತೀವ್ರವಾಗಿದೆ .ಗಾಢವಾಗಿ ಬೇರೂರಿದೆ .
       ಅಸಂಗತ ,ಅಸಂಬದ್ದ ಪ್ರತಿಮಾಲಕ್ಷಣ , ಧಾರಣೆ – ವಾಹನಗಳಲ್ಲೂ ವೈರುಧ್ಯ , ಆಯುಧಗಳಲ್ಲೂ ಏನೋ ಒಂದು ಮೂಲದ ನೆನಪು , ಪ್ರತ್ಯಕ್ಷ ವಿರೋಧ – ಪರಸ್ಪರ ವಿರೋಧದ ಗಣಪನ ಭವ್ಯ ಬಿಂಬದಲ್ಲಿ‌ ಪರಿಪೂರ್ಣತೆಯನ್ನು ,ಸುಮುಖತೆಯನ್ನು ,
ಪ್ರಕೃತಿ – ವಿಕೃತಿಗಳನ್ನು ದಿವ್ಯಸಾನ್ನಿಧ್ಯವನ್ನು ಗುರುತಿಸಿರುವುದು ಅಚ್ಚರಿಯ ಸಂಗತಿ .
         ಹೊಟ್ಟೆಗೆ ಬಿಗಿದುಕೊಂಡದ್ದು ಸರ್ಪ . ವಾಹನವಾಗಿ ಇಲಿ . ಇಲಿಯನ್ನು ಕಂಡ ಸರ್ಪ ಬೆನ್ನಟ್ಟಿ ಬೇಟೆಯಾಡುವುದು ಲೋಕರೂಢಿ. ಆದರೆ ಅಸಂಬದ್ಧ ಎನಿಸಿದರೂ ಈ ವಿನಾಯಕನ ಪ್ರತಿಮೆಯಲ್ಲಿ ಜಾತಿವೈರಗಳೇ ಇಲ್ಲ .ಅಸಂಗತಗಳೇ ಸುಸಂಗತಗಳಾಗುವ ಪರಿಷ್ಕಾರ ಗಣಪತಿಯ ಬಿಂಬದಲ್ಲಿ ಸ್ಪಷ್ಟ.
        ಮಾನವ ದೇಹ ,ಆನೆಯ ತಲೆ ಇದು‌ ಒಂದು ರೀತಿಯ ಅಸಂಭವ . ಇಂತಹ ಬೇರೆ ದೇವರುಗಳೂ ನಮ್ಮಲ್ಲಿದ್ದಾರೆ .ಬೇಟೆ ಸಂಸ್ಕೃತಿಯ ಪ್ರತೀಕವಾಗಿ ಆನೆ ಎನ್ನುತ್ತಾ ಆದಿಮದ ಕಲ್ಪನೆಯಿಂದ ಗಜಾನನ ರೂಪವನ್ನು ಸಮರ್ಥಿಸಿದರೆ ಆತ ಬೇಟೆಯಿಂದ ಕೃಷಿ ಸಂಸ್ಕೃತಿಯವರೆಗೂ ತನ್ನ ಹರವನ್ನು ವಿಸ್ತರಿಸಿಕೊಳ್ಳುತ್ತಾನೆ .ಜನಪದರೊಂದಿಗೆ
ಸ್ಥಾನ ಪಡೆಯುತ್ತಾನೆ .ಮಕ್ಕಳಿಂದ ವೃದ್ಧರವರೆಗೆ ಹೇಗೆ ತನ್ನ ಛಾಪನ್ನು ಒತ್ತಿ ಪ್ರಿಯನಾಗುತ್ತಾನೆಯೋ ಅಂತೆಯೇ ಸಮಷ್ಟಿಯಲ್ಲಿ ಅದ್ಭುತ ಜನಪ್ರಿಯತೆವುಳ್ಳ ದೇವರಾಗುತ್ತಾನೆ . ಈ ಮಂಗಳಮೂರ್ತಿಯ ಪೂಜೆಯ ಅಥವಾ ಉಪಾಸನಾ ಅವಧಿಯಲ್ಲಿ ಆತ್ಮೀಯನಾಗುತ್ತಾ ಗಾಢವಾಗಿ ನಮ್ಮನ್ನು ಅಂದರೆ ಆರಾಧಕರನ್ನು ಆವರಿಸುತ್ತಾನೆ .ಈಗ ಹೇಳಿ ,ಈ ಮೂರ್ತಿ ನಿರ್ಣಯದಲ್ಲಿ ಅಸಂಗತವಿದೆಯೇ ?
        ಎಂತಹ ದುಷ್ಟ ಮರ್ದನದಲ್ಲೂ ಬಳಸಬಹುದಾದ  ಪ್ರಖರವಾದ ಆಯುಧ‌‌  ಧರಿಸಿದ್ದರೂ ಗಣಪತಿ ಮೂರ್ತಿ ಪರಿಪೂರ್ಣವಾಗಬೇಕಿದ್ದರೆ ಒಂದು ಕೈಯಲ್ಲಿ ಮೋದಕ ಇರಲೇ ಬೇಕು .ಇಲ್ಲಿಯೂ ಆಯುಧ – ಆಹಾರದ ಸಾಂಗತ್ಯ ಅಚ್ಚರಿ ಮೂಡಿಸುವಂತಹದ್ದೆ .
     ಗಾಣಪತೇಯರು ,ಆಧ್ಯಾತ್ಮಿಕ ಚಿಂತಕರು ,
ವೈದಿಕ ವಿದ್ವಾಂಸರು ಗಣಪನನ್ನು ಪ್ರಣವ ಸ್ವರೂಪನೆಂದೇ ಕೊಂಡಾಡಿದರು .
ಮಣ್ಣಿನಿಂದ ತೊಡಗಿ ಬಾನೆತ್ತರಕ್ಕೆ ಹರಡಿಕೊಳ್ಳಬಲ್ಲ ವಿಸ್ತೃತ ವ್ಯಾಖ್ಯಾನ ನೀಡುತ್ತಾ ವಿರಾಟ್ ಗಣಪನನ್ನು ನಮ್ಮ ಮುಂದಿರಿಸಿದರು. ಹೀಗೆ ಗಣಪತಿ ಬಹುಪ್ರೀತ , ಬಹುಮಾನ್ಯ .ಕಿವಿ , ಹೊಟ್ಟೆಗಳ ವೈಶಾಲ್ಯದಲ್ಲಿ ಪ್ರಪಂಚ ವಿಶಾಲತೆಯನ್ನು ಪ್ರಕಟಿಸುತ್ತಾ ಈ ಕಾಲದ ದ್ವಂದ್ವ ಹಾಗೂ ವಿರೋಧಾಭಾಸದ ಪ್ರಾಪಂಚಿಕ ವ್ಯವಹಾರಗಳಿಗೆ ಉತ್ತರ ನೀಡುತ್ತಾನೆ.

     “ಸಾರ್ಪತ್ಯ ಆವೊಂದಿಪ್ಪೊಡು”

      • ಜನಪದರ ಹೆಣ್ಣು ಮೈಸಗೆಯನ್ನು‌ ಶಿವ ಪ್ರೀತಿಸುವುದು .ಶಿವ ತಾವರೆ ಹೂವಾಗುವುದು .
ಗುಟ್ಟಿನಲ್ಲಿ ಜೊತೆಯಾಗುವುದು .
ಮುಂದುವರಿಯುವ ಕತೆಯಲ್ಲಿ ಭಾಮಕುಮಾರನ ಜನನ .ಈತ ಗಜಮುಖನಾಗುವುದು ಪಾರ್ವತಿ ಮಗುವನ್ನು ಸಾಕುವುದು . ಪಾರ್ವತಿ ಸಹಜವಾಗಿ ಮೈಸಗೆಯನ್ನು ಸ್ವೀಕರಿಸುವುದು .ಪ್ರತಿ ಮನೆಯಲ್ಲೂ ಗಣಪತಿ ಪೂಜೆ ನಡೆಯಬೇಕು . ಅಲ್ಲೆಲ್ಲ ಗಣಪತಿ “ಸಾರ್ಪತ್ಯ ಆವೊಂದಿಪ್ಪೊಡು” ಎಂಬುದು ಶಿವನ ವರ . ಇದು ಭಾಮಕುಮಾರ ಸಂಧಿಯಲ್ಲಿ ಬರುವ ಕತೆ . 
                   
               ಗಣಪನ ಹೊಟ್ಟೆ

• ಕಣಜ , ಕಣಜಕ್ಕೆ ಸುತ್ತುವ ಹಗ್ಗ ( ಪೆರ್ಮರಿ) ಇವು ಗಣಪತಿಯ ಹೊಟ್ಟೆ ಮತ್ತು ಹೊಟ್ಟೆಗೆ ಸುತ್ತಿದ ಸರ್ಪವನ್ನು ಸಾಂಕೇತಿಸುತ್ತವೆ .
ಅಕ್ಕಿ – ಭತ್ತಕ್ಕೆ ಹಾಗೂ ಇತರ ಬೆಳೆಗಳಿಗೆ
ಇಲಿಕಾಟ ಸಹಜ ( ಅರಿಬಾರ್ ಇತ್ತಿನಲ್ಪ ಎಲಿ ಪೆರ್ಗುಡೆ ಕಡಮೆನಾ ) . ಇಂತಹ ಆಹಾರದ ರಕ್ಷಣೆಗಾಗಿ ಸರ್ಪ(ಹಗ್ಗ). ಗಣಪನ ಹೊಟ್ಟೆ ಕೃಷಿ ಸಮೃದ್ಧಿಯ ದಾಸ್ತಾನು . ಹೇಗಿದೆ ಜನಪದರ ಕಲ್ಪನೆ .
                 
             ಬೆಣಚುಕಲ್ಲಿನ ‘ಬೆನಕ’

• ಗಣಪತಿ ಬೇಟೆ ಸಂಸ್ಕೃತಿಯ ಪ್ರತಿನಿಧಿ‌ :
ಗಣಪನ ಮೂರ್ತಿ ಶಿಲ್ಪದಲ್ಲೆ ಪಾಚೀನತೆಯನ್ನು ಗುರುತಿಸುವ ಸಂಶೋಧಕರು ಇವನ ಅಸ್ತಿತ್ವಕ್ಕೆ ಅಥವಾ ಕಲ್ಪನೆಗೆ ಬೇಟೆ ಸಂಸ್ಕೃತಿಯಷ್ಟು ಪಾಚೀನತೆಯನ್ನು ಅಥವಾ ಅದಕ್ಕಿಂತಲೂ ಪೂರ್ವದ ಜನಜೀವನದ ಕಾಲದವರೆಗೆ ಒಯ್ಯುತ್ತಾರೆ .ಬೇಟೆ , ಬೇಟೆಗೆ ಬಳಸುತ್ತಿದ್ದ  ಬೆಣಚುಕಲ್ಲು ಪ್ರಧಾನ ಆಯುಧ . ಇಲ್ಲಿಂದಲೇ  ಬೆಣಚುಕಲ್ಲಿನಿಂದ “ಬೆನಕ” ಎಂದು ಪೂಜಿಸುವ ವಿಧಾನ ರೂಢಿಗೆ ಬಂದಿರಬಹುದು . ಈ ಶೈಲಿಯ ಪೂಜೆ
ಈಗಲೂ ರೂಢಿಯಲ್ಲಿವೆ .ವೈಭವದ ಮೂರ್ತಿಗಳ ಭವ್ಯತೆಯ ನೇಪಥ್ಯದಲ್ಲಿ ಈ ಬೆನಕನಿದ್ದಾನೆ . ಬೇಟೆಯ ಕಾಲಘಟ್ಟದಲ್ಲಿ ಆನೆಯ ಕಲ್ಪನೆ ಬಂದಿರಬಹುದು .
               
                  ಶ್ರಮ ಸಂಸ್ಕೃತಿ

• ಶ್ರಮ ಸಂಸ್ಕೃತಿಯ ಸಂಕೇತವಾಗಿ ಗಣಪತಿ ಗುರುತಿಸಲ್ಪಡುವುದಿದೆ .ಶ್ರಮದಿಂದ ಮೈಬೆವರುತ್ತೆ , ಇದೇ ಮೈಯ ಮಣ್ಣಿಗೆ ಕಾರಣವಾಗುತ್ತದೆ .ಪಾರ್ವತಿಯ ಮೈಯ ಮಣ್ಣಿನಿಂದ ಗಣಪನ ಸೃಷ್ಟಿ .ಮಣ್ಣಿನ ಮಗನ ಕಲ್ಪನೆ ಎಷ್ಟು ಸುಂದರ .ಕಪಿಲ ವರ್ಣ , ಕಾವಿಬಣ್ಣ , ಮಣ್ಣಿನ ಬಣ್ಣ ,ಧೂಮ್ರವರ್ಣ , ಕಪ್ಪು – ಕೆಂಪು ಬಣ್ಣಗಳ ಸಂಯುಕ್ತ ಇದೂ ಮಣ್ಣಿನ ಬಣ್ಣವೆ .ಇದು ವಿಘ್ನೇಶನ ಮೈ ಬಣ್ಣ .
  • ಕೃಷಿ ಸಂಸ್ಕೃತಿ: “ಸೆಗಣಿಯ ಗಣಪಂಗೆ ಸಂಪಗೆಯರಳಲ್ಲಿ ಪೂಜಿಸಿದರೆ” ಭೂಮಿಯ  ಫಲವತ್ತತೆಗಾಗಿ ಸೆಗಣಿ  – ಕೃಷಿಗೆ ಪೂರಕವಾಗಿ ಒದಗಿದ ಪಶುಪಾಲನೆ. ಸೆಗಣಿಗೆ ಹಸಿರು ಗರಿಕೆಯನ್ನು ಇಟ್ಟು ಪೂಜಿಸುವ ಗಣಪತಿಯ ಕಲ್ಪನೆಯೊಂದಿದೆ .
     • ಕಬ್ಬು ಪ್ರಧಾನವಾಗಿ ಆನೆಮುಖ ಹೊಂದಿರುವ ಸ್ವರೂಪದ ಆರಾಧನೆ . ಇವು ಜನಪದರ ಚಿಂತನೆಗಳು .

• ಕೆ.ಎಲ್.ಕುಂಡಂತಾಯ

 
 
 
 
 
 
 

Leave a Reply