ಬುದ್ಧ ಪೂರ್ಣಿಮಾ ವಿಶೇಷ:ಶ್ರೀಲಂಕಾದ ಬುದ್ಧನ ಪವಿತ್ರ ದಂತ ದೇವಸ್ಥಾನ ✍️ಸುಬ್ರಹ್ಮಣ್ಯ ಹೆಗಡೆ, ಉಡುಪಿ

ಶುದ್ದೋಧನ ಮತ್ತು ಮಾಯಾದೇವಿ ಮಗನಾಗಿಜನಿಸಿ ಸಕಲ ರಾಜ ಬೋಗ್ಯದೊಂದಿಗೆ ಯಾವುದೇ ಕಷ್ಟಗಳಿಲ್ಲದೇ ಚಕ್ರವರ್ತಿ ಆಗಬೇಕಿದ್ದ ಸಿದ್ದಾರ್ಥ ಸರ್ವವನ್ನು ಅನುಭವಿಸಿ ಸರ್ವ ಸಂಘ ಪರಿತ್ಯಾಗಿ ಯಾಗಿ ಗೌತಮ ಬುದ್ಧ ನಾದ.ದುಃಖದಿಂದ ಹೊರಬರುವ ಮಾರ್ಗವನ್ನು ಜಗತ್ತಿಗೆ ಬೋಧಿಸಿದ. ಬೌದ್ಧ ಧರ್ಮದ ಸ್ಥಾಪಕನಾದ.

ಇಂದು ಮಹಾವಿಷ್ಣುವಿನ ಅವತಾರ ಎಂದು ನಂಬುವ ಗೌತಮ ಬುದ್ಧನ ಜನ್ಮ ದಿನ ಅದುವೇ ಬುದ್ಧ ಪೂರ್ಣಿಮಾ. 2019 ರಲ್ಲಿ ನಾನು 15 ದಿನಗಳ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದೆ. ಆಗ ಬುದ್ಧನ ಪವಿತ್ರ ಹಲ್ಲಿನ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದೆ. ಅದೊಂದು ಅವಿಸ್ಮರಣಿಯ ಭೇಟಿ.

ಶ್ರೀಲಂಕಾದ ಕ್ಯಾಂಡಿ ಅತ್ಯಂತ ಪ್ರಾಚಿನ ನಗರ. ಕಡಿಮೆ ಜನಸಂಖ್ಯೆ ಇರುವ ಸಾಂಸ್ಕೃತಿಕ ರಾಜಧಾನಿ ಜೊತೆಗೆ ಆಧ್ಯಾತ್ಮಿಕ ಕೇಂದ್ರ ಕೂಡ ಹೌದು.ನಮಗೆ ಮೈಸೂರು ಹೇಗೋ ಹಾಗೆ. ಶ್ರೀಲಂಕಾದ ಬೌದ್ಧ ಧರ್ಮದ ಕೇಂದ್ರವೂ ಹೌದು.ಇಂಥ ಕ್ಯಾಂಡಿಯಲ್ಲಿ ಗೌತಮ ಬುದ್ಧನ ಹಲ್ಲಿನ ದೇವಸ್ಥಾನವೊಂದಿದೆ.ಹಿನ್ನೆಲೆ: ಬುದ್ಧನ ನಿರ್ವಾಣದ ಬಳಿಕ ಅವರದೇ ಆಶಯದಂತೆ ಅವರ ದೇಹವನ್ನ ಸುಡಲಾಯಿತು. ನಂತರ ಅವರ ದಿನ ಬಳಕೆಯ ವಸ್ತುಗಳನ್ನ ಅವರ ಆಪ್ತ ಅನುಯಾಯಿಗಳು ವಶಕ್ಕೆ ಪಡೆದು ರಕ್ಷಿಸಿದರು. ಅದೇ ರೀತಿ ಚಿತೆಯಲ್ಲಿ ಬೂದಿಯಾಗಿದೇ ಉಳಿದ ಅವರ ದವಡೆ ಹಲ್ಲನ್ನು ಸಹ ಅವನ ನೆನಪಿಗಾಗಿ ಸಂರಕ್ಷಿಸಿದ್ದಾರಂತೆ. ಬುದ್ಧನ ನಿರ್ವಾಣದ ಬಳಿಕ ಇನ್ನೂರು-ಮುನ್ನೂರು ವರ್ಷಗಳ ತರುವಾಯ ಅವನು ಹುಟ್ಟು ಹಾಕಿದ ಧರ್ಮದಲ್ಲಿ ಬಿರುಕು ಮೂಡಿತ್ತು.

ಹೀನಾಯಾನ ಮಹಾಯಾನಗಳೆಂಬ ಪಂಗಡಗಳಾದವವು. ಬುದ್ಧನ ಮೂಲ ಆರಾಧಕರು ತನ್ನ ನಂತರ ಬಂದ ವಿಗ್ರಹದೊಂದಿಗೆ ಹೊಂದಿಕೊಳ್ಳಲಾಗದೆ ದೂರಾದರು. ಈ ರೀತಿ ದೂರದ ಮೂಲ ಆರಾಧಕರ ಗುಂಪೇ ಮುಂದೆ ನೇರವಾದಿಗಳು ಎಂಬ ಪಂಥವಾಗಿ ಗುರುತಿಸಿಕೊಂಡರು. ಮುಂದೆ ಎಷ್ಟೋ ವರ್ಷಗಳವರೆಗೂ ಬುದ್ಧನ ಹಲ್ಲು ಹಾಗೂ ಇತರ ಅವರ ವಸ್ತುಗಳು ಇವರ ಹತ್ತಿರವಿದ್ದವು.

ಆಮೇಲೆ ಆ ಹಲ್ಲಿಗಾಗಿ ಹಲವು ಧಾರ್ಮಿಕ ಘರ್ಷಣೆಗಳು ನಡೆದು ಹೋದವು. ಚರಿತ್ರೆಯಲ್ಲಿ ಕ್ರಿ.ಶ 1 ರಿಂದ ಹಿಡಿದು ಕ್ರಿ.ಶ 15 ರವರೆಗೂ ಈ ಒಂದು ಹಲ್ಲಿಗಾಗಿ ಜರುಗಿದ ರಕ್ತ ಪಾತಗಳು, ಹಿಂಸೆ ಗಳು,ಯುದ್ಧಗಳು ಅನೇಕ.ಈ ಕಾಲಾವಧಿಯಲ್ಲಿ ಈ ದಂತ ಒಬ್ಬರಿಂದ ಇನ್ನೊಬ್ಬರಿಗೆ, ಸಾಮ್ರಾಜ್ಯದಿಂದ ಸಾಮ್ರಾಜ್ಯಕ್ಕೆ, ದೇಶದಿಂದ ದೇಶಕ್ಕೆ, ಮನೆತನದಿಂದ ಮನೆತನಕ್ಕೆ ಪಯಣಿಸಿದ ಕಥೆ ತುಂಬಾ ದೀರ್ಘವಾದದ್ದು.
ಇಷ್ಟೆಲ್ಲ ರಕ್ತ ಪಾತಕ್ಕೆ ಕಾರಣ ಬುದ್ಧನ ಹಲ್ಲು.ಆ ಹಲ್ಲು ಯಾರ ವಶದಲ್ಲಿದ್ದು ಪೂಜೆಗೊಳ್ಳುತ್ತದೆಯೋ ಅವನೇ ಶಕ್ತಿ ಶಾಲಿ ಮತ್ತು ಕೀರ್ತಿವಂತ ಅನ್ನುವ ನಂಬಿಕೆ.

ಪೋರ್ಚುಗಿಸರು 1603 ರಲ್ಲಿ ಶ್ರೀಲಂಕಾದ ಕ್ಯಾಂಡಿಯ ಮೇಲೆ ದಾಳಿ ನಡೆಸಿ ಹಲ್ಲನ್ನು ತಮ್ಮ ದೇಶಕ್ಕೆ ಕೊಂಡೊಯ್ದರು.ಅದನ್ನು 2 ನೇ ರಾಜಸಿಂಹ ದೇಶಕ್ಕೆ ಮರಳಿ ತರುವಲ್ಲಿ ಯಶಸ್ವೀಯಾದ. ಹೀಗೆ ಹಲವು ಬಾರಿ ಹಲವು ಕಡೆ ಸ್ಥಾನ ಪಲ್ಲಟಗೊಂಡ ಈ ಹಲ್ಲು ಕೊನೆಗೆ ವೀರ ನರೇಂದ್ರ ಸಿಂಹನು ಕ್ಯಾಂಡಿಯಲ್ಲಿ ನಿರ್ಮಿಸಿದ ದೇವಳದಲ್ಲಿ ಸ್ಥಾಪಿತವಾಯಿತು.

ಇಂದು ಜಗತ್ತಿನ 4 ರಾಷ್ಟ್ರಗಳು ಬುದ್ಧನ ಹಲ್ಲು ನಮ್ಮಲ್ಲಿ ಇದೆ ಅನ್ನುವ ವಾದ ಮಾಡುತ್ತಿದೆ. ತೈವಾನ್,ಭೂತಾನ್,ಶ್ರೀಲಂಕಾ, ಜಪಾನ್. ಎಲ್ಲಾ ದೇಶಗಳು ತಮ್ಮ ಹತ್ತಿರ ಇರುವುದೇ ಬುದ್ದನ ನಿಜವಾದ ಹಲ್ಲು ಎನ್ನುತ್ತಿವೆ. ಅದೇನೇ ಇದ್ದರೂ ನಂಬಿಕೆ ಎಲ್ಲಕ್ಕಿಂತ ಮಿಗಿಲು. ಅವರವರ ನಂಬಿಕೆ ಅವರಿಗೆ ಶ್ರೇಷ್ಠ.

ಟೆಂಪಲ್ ಆಫ್ ದಿ ಟೂತ್ ರೆಲಿಕ್: ಶ್ರೀಲಂಕಾದ ಅತ್ಯಂತ ಸುಂದರ ಕ್ಯಾಂಡಿ ಸರೋವರದ ಎದುರಲ್ಲೇ ಬುದ್ಧನ ಹಲ್ಲಿನ ದೇವಸ್ಥಾನವಿದೆ. ತುಂಬಾ ಜಗತ್ ಪ್ರಸಿದ್ಧವೂ ಹೌದು. 1988ರಲ್ಲಿ ಯುನೆಸ್ಕೊ ಮಾನ್ಯತೆ ಪಡೆದ ಈ ದೇವಸ್ಥಾನದಲ್ಲಿ ಬುದ್ಧನ ಹಲ್ಲನ್ನು ಸಂರಕ್ಷಿಸಿ ಇಡಲಾಗಿದೆ. ಪವಿತ್ರ ಹಲ್ಲನ್ನು ನೋಡಲು ಅಸಂಖ್ಯಾತ ಭಕ್ತರು ಪ್ರತೀ ದಿನ ಬರುತ್ತಾರೆ.

ಚಿನ್ನದ ಲೇಪನಗಳಿಂದ ದೇವಸ್ಥಾನದ ಒಳಬಾಗ ಅಲಂಕೃತಗೊಂಡರೆ ಹೊರಭಾಗ ಸಂಪೂರ್ಣ ಶ್ವೇತಮಯದಿಂದ ಕಂಗೊಳಿಸುತ್ತಿದೆ. ಹಲ್ಲಿರುವ ಬಾಗಿಲ ಎರಡು ಕಡೆ ಬ್ರಹತ್ ಆದ ಆನೆ ದಂತವಿದೆ.ಹಲ್ಲು ನೇರವಾಗಿ ಕಾಣಿಸದು. ಏಳು ಚಿನ್ನದ ಕ್ಯಾಸ್ಕೆಟ್ಗಳಲ್ಲಿ ಇರಿಸಲಾಗುತ್ತದೆ. ಸ್ತೂಪಗಳಂತಿರುವ ಆಕಾರದಲ್ಲಿದೆ ಮತ್ತು ರತ್ನದ ಕಲ್ಲುಗಳಲ್ಲಿ ಮುಚ್ಚಲಾಗಿದೆ.

ಬರುವ ಭಕ್ತರಲ್ಲಿ ಅನೇಕರು ಶ್ವೇತಾದಾರಿಗಳು ಜೊತೆಗೆ ಕೈಯಲ್ಲಿ ತಮ್ಮ ಕೋರಿಕೆ ಈಡೇರಲೆಂದು ಮಲ್ಲಿಗೆ, ತಾವರೆಗಳ ದಂಡು ಹಿಡಿದು ಭಕ್ತಿಯಿಂದ ಸಾಗುವ ದ್ರಶ್ಯ ಮನಮೋಹಕ. ಪ್ರತೀ ವರ್ಷ ನಡೆಯುವ ಪೆರೇರಾ ಉತ್ಸವದಲ್ಲಿ ಬುದ್ಧನ ಹಲ್ಲನ್ನು ಆನೆಯ ಮೇಲಿರಿಸಿ ಮೆರವಣಿಗೆ ಮಾಡ ಲಾಗುತ್ತದೆ. ಆ ಸಮಯ ಮಾತ್ರ ಅದನ್ನು ನೋಡಲು ಸಿಗುತ್ತದೆ. ಪವಿತ್ರ ದಂತ ಎಂದು ನಂಬಲಾಗುವುದು.

ದೇವಸ್ಥಾನ ಸುತ್ತ ಮುತ್ತ ಬುದ್ಧನ ಹಿನ್ನೆಲೆ, ಇತಿಹಾಸ, ಬೌದ್ಧ ಧರ್ಮಕ್ಕೆ ಸಂಬಂದಿಸಿದ ಜೊತೆಗೆ ಬುದ್ಧನ ಪುರಾತನ ವಿಗ್ರಹಗಳ ವಸ್ತು ಸಂಗ್ರಹಲಯವೇ ಇದೆ.ಭಕ್ತಿ ಭಾವ- ನಂಬಿಕೆಗಳ ಮಹಾ ಸಂಗಮವೇ ಈ ಪವಿತ್ರ ದಂತದ ದೇವಸ್ಥಾನ. ಆಸೆಯೇ ದುಃಖಕ್ಕೆ ಮೂಲ ಅನ್ನುವ ಬುದ್ಧನ ಘೋಷ ವಾಕ್ಯ ಸಾರ್ವಕಾಲಿಕ ಪ್ರಸ್ತುತ.

 
 
 
 
 
 
 
 
 
 
 

Leave a Reply