​​’ಭಿಕೋ-ಎಕೋ’ಗಳ ನಡುವಿನ ಆನ್ಲೈನ್ ಶಿಕ್ಷಣ.

ಆಡಿ ಬಾ ಎನ್ನ ಕಂದ ಅಂಗಾಲ ತೊಳೆದೇನ
ತೆಂಗಿನ ಕಾಯಿ ತಿಳಿನೀರ| ತಕ್ಕೊಂಡು
ಬಂಗಾರದ ಮೊರೆ ತೊಳೆದೇನ||
ಕೂಸು ಇದ್ದ ಮನೆಗೆ ಬೀಸಣಿಗೆ ಯಾತಕೆ
ಕೂಸು ಕಂದಯ್ಯ ಒಳ ಹೊರಗ| ಆಡಿದರೆ ಬೀಸಣಿಗೆ ಗಾಳಿ ಸುಳಿದಾವ||

ಇದು ಜಾನಪದ ಸಾಹಿತ್ಯದಲ್ಲಿ ಮಕ್ಕಳನ್ನು ವರ್ಣಿಸೋ, ಪೋಷಿಸುವ ಬಗೆ. ಹೇಗೆ ಒಂದು ಮಗು ಮನೆಯಲ್ಲಿ ಇದ್ದರೆ ಮನಸ್ಸಿಗೆ ನೆಮ್ಮದಿ ಇರುತ್ತದೆ, ಹಾಗೆಯೇ ಒಂದು ತಾಯಿ ಎಷ್ಟೆಲ್ಲಾ ಕಾರ್ಯವನ್ನು ಒಂದು ಮಗುವಿನ ಬೆಳವಣಿಗೆಯಲ್ಲಿ ಮೀಸಲಿಡುತ್ತಾಳೆ ಎಂಬುದು ಇಲ್ಲಿ ಅರ್ಥವಾಗುತ್ತದೆ. ಈ ಸಾಹಿತ್ಯದಲ್ಲಿ ಹೇಳಿದಂತೆ ಒಂದು ಮಗು ಮನೆಯಲ್ಲಿ ಇದ್ದರೆ ಮನೆಗೆ ಬೀಸಣಿಕೆಯ ಅಗತ್ಯವಿಲ್ಲ ಕಾರಣ ಅದು ಹೊರಗೆ, ಒಳಗೆ ಓಡಾಡಿದರೂ ಸಾಕು ಸ್ವಚ್ಛಂದದ ಗಾಳಿ ಸುಳಿಯುತ್ತದೆ ಎಂದು.

ಈಗಾಗಲೇ ಎಲ್ಲೆಡೆಯೂ ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣ ಶುರುವಾಗಿದೆ,  ಕಾಲೇಜಿನಲ್ಲಿ ಪ್ರಾರಂಭವಾಗಿದ್ದು ಪಾಠ ಮಾಡಲೆಂದು ಆಯಾಯ ತರಗತಿಗೆ ಹೋದಾಗ ಇಡೀ ಕೊಠಡಿಗಳು ‘ಭಿಕೋ ಎನ್ನು​ತ್ತಿರುತ್ತವೆ, ನಮ್ಮ ಧ್ವನಿಯೇ ಪ್ರತಿಧ್ವನಿಸಿ(ಎಕೋ) ನಮ್ಮ ಕಿವಿಗೇ ಬಂದು ಎಗರುತ್ತಿತ್ತು’. ಹೇಗೆ ಮನೆಯೆಂದ ಮೇಲೆ ಮಕ್ಕಳಿರಬೇಕೋ, ಹಾಗೆಯೇ ಶಾಲೆ, ಕಾಲೇಜು ಎಂದ ಮೇಲೆ ಮಕ್ಕಳು ನಮ್ಮೆದುರೇ ತರಗತಿಯ ಕುಳಿತಿರಬೇಕು. ಆದರೆ ಈ ಹಿಂದೆ ಬಂದಂತಹಾ ಎಷ್ಟೋ ಮಾರಿ ಕಾಯಿಲೆಗಳ ಇತಿಹಾಸವನ್ನು ಅಳಿಸಿ ಈ ಕೋವಿಡ್ ಮಹಾಮಾರಿ ಎಲ್ಲವನ್ನು ಉಲ್ಟಾಮಾಡಿ ಹಾಕಿತು.
ಆದರೆ ಸರ್ಕಾರವನ್ನು ಕೆಲವೊಂದು ವಿಚಾರದಲ್ಲಿ ಶ್ಲಾಘಿಸಲೇ ಬೇಕು, ಕಾರಣ ಶಿಕ್ಷಣದ ಮುಖ್ಯ ಘಟ್ಟವಾದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಇವೆರೆಡಕ್ಕೂ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿ, ಸರಿಯಾದ ಸಮಯಕ್ಕೆ ಫಲಿತಾಂಶ ನೀಡಿ, ಪದವಿ ಪೂರ್ವ, ಪದವಿ ಕಾಲೇಜುಗಳ ನೋಂದಣಿಗೆ ಅನುಕೂಲ ಮಾಡಿಕೊಟ್ಟಿತು. ಹೀಗೆ ಪಾಸಾದ ವಿದ್ಯಾರ್ಥಿಗಳು ಪದವಿ ಪೂರ್ವ, ಪದವಿ ತರಗತಿಯಲ್ಲಿ ಈಗ ಆನ್ಲೈನ್ ನಲ್ಲಾದರೂ ಮುಂದಿನ ಶಿಕ್ಷಣ ಕಲಿಯುವಂತಾಗಿದೆ‌.
ಈಗ ಉಪನ್ಯಾಸಕರು ಮಾತ್ರ ಆಫ್ಲೈನ್, ಆನ್ಲೈನ್ ಇವೆರೆಡಕ್ಕೂ ಒಗ್ಗಿಕೊಂಡು ಪಾಠ-ಪ್ರವಚನಗಳಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ನಡೆದ ಯಾವುದೋ ಒಂದು ಕ್ರಿಕೆಟ್ ಮ್ಯಾಚ್ ನಲ್ಲಿ ಗ್ಯಾಲರಿಯಲ್ಲಿ ವೀಕ್ಷಕರ ಫೋಟೋಗಳನ್ನು ಇಟ್ಟು ಆಟ ಆಡಿಸಿದ್ದರು, ಹೀಗೆಯೇ ಮುಂದುವರಿದರೆ, ವಿದ್ಯಾರ್ಥಿ ಭಾವಚಿತ್ರವನ್ನು ಅವರವರ​ ​​ಸ್ಥಳದಲ್ಲಿ ಇಟ್ಟು ಖಾ​ಲಿಯಾದ ತರಗತಿಯಲ್ಲಿ ಉಪನ್ಯಾಸಕ ಕುಳಿತು, ಆನ್ಲೈನ್ ಮುಖೇನ ಮನೆಯಲ್ಲಿ ಕುಳಿತು ಕೇಳುವ ವಿದ್ಯಾರ್ಥಿಗಳಿಗೆ ಪಾಠ ಹೇಳಬೇಕಾಗಿರುವುದು ಪ್ರಸ್ತುತ ಕಾಲಘಟ್ಟದಲ್ಲಿ ಅನಿವಾರ್ಯವಾಗಿ ಪರಿಣಮಿಸಿದೆ.
ಇದರ ನಡುವೆ ಕ್ಲಾಸ್ ಖಾಲಿ ಖಾಲಿ ಇರುವುದರಿಂದ ಕೆಲವೊಮ್ಮೆ ವಿದ್ಯಾರ್ಥಿಗಳಿಗೆ ಪ್ರತಿಧ್ವನಿ (ಎಕೋ) ದ ಸಮಸ್ಯೆ, ಇಂಟರ್ನೆಟ್ ಸಮಸ್ಯೆ, ಮೊಬೈಲ್ ಚಾರ್ಜ್ ಸಮಸ್ಯೆ, ಕಣ್ಣಿನ ಸಮಸ್ಯೆ ಹೀಗೆ ಒಂದಲ್ಲಾ ಒಂದು ಸಮಸ್ಯೆ ಎದುರಿಸಿ 80% ವಿದ್ಯಾರ್ಥಿಗಳು ಈಗಾಗಲೇ ಪಾಠಗಳಲ್ಲಿ ಲಾಗಿ ಇನ್ ಆಗಿ ಅಭ್ಯಾಸ ಮಾಡುತ್ತಿದ್ದಾರೆ, ಉಳಿದ 20% ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆಯನ್ನೂ ಕಂಡುಕೊಂಡಿದ್ದೇವೆ. ಇನ್ನಾದರೂ ಪರಿಸ್ಥಿತಿ ಸುಧಾರಿಸಿ, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಶಾಲೆ-ಕಾಲೇಜಿಗೇ ಬಂದು ಕುಳಿತು ಕೇಳುವಂತಾಗಲಿ, ಇದೇ ನಮ್ಮ ಅಂಬೋಣ.
 
 
 
 
 
 
 
 
 
 
 

Leave a Reply