ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ವಿಧೇಯಕ -2020~ ಗಿರೀಶ್ ಐತಾಳ್ ಕರಂಬಳ್ಳಿ, ಉಡುಪಿ

“ಪ್ರತಿಯೊಬ್ಬರೂ ಎಲ್ಲರಿಗಾಗಿ ಎಲ್ಲರೂ ಪ್ರತಿಯೊಬ್ಬರಿಗಾಗಿ” ಎಂಬ ಧ್ಯೇಯ ವಾಕ್ಯದೊಂದಿಗೆ ಆರಂಭಗೊಂಡ  ಸಾಕಷ್ಟು  ಸಹಕಾರಿ ಸಂಘಗಳು, ಸಹಕಾರಿ ಬ್ಯಾಂಕುಗಳು, ಬಹು ರಾಜ್ಯ ಸಹಕಾರಿ ಬ್ಯಾಂಕುಗಳು ಇಂದು ತಮ್ಮ ಸದಸ್ಯರಿಗೆ, ಗ್ರಾಹಕರಿಗೆ ಉತ್ತಮ ಸೇವೆಗಳನ್ನು  ನೀಡುತ್ತಿದೆ. ಇಂದು ವಾಣಿಜ್ಯ ಬ್ಯಾಂಕುಗಳಿಗೆ ಸವಾಲೊಡ್ಡುವ ರೀತಿಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ   ಸಹಕಾರಿ ಕ್ಷೇತ್ರ ಬೆಳೆದಿದೆ ಎಂದರೆ ತಪ್ಪಾಗಲಾರದು. 
ಸಹಕಾರಿ ಬ್ಯಾಂಕುಗಳು ಆರ್.ಬಿ.ಐ. ವ್ಯಾಪ್ತಿಗೆ ಅಥವಾ ನಿಯಂತ್ರಣಕ್ಕೆ ಎಂದಾಗ  ಹೆಚ್ಚಿನ ಜನರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಯಾಕೆಂದರೆ ಸಹಕಾರಿ ಬ್ಯಾಂಕುಗಳು ಈಗಾಗಲೇ ಕೆಲವೊಂದು ವಿಚಾರಗಳಲ್ಲಿ ಆರ್.ಬಿ.ಐ.ನ ನಿಯಂತ್ರಣದಲ್ಲಿದೆ. ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ , ಬೆಂಗಳೂರಿನ  ಗುರು ರಾಘವೇಂದ್ರ ಸಹಕಾರಿ ಬ್ಯಾಂಕು ಹಾಗೆಯೇ ದೇಶದ ಇನ್ನಿತರ ಸಹಕಾರಿ ಬ್ಯಾಂಕುಗಳಲ್ಲಿ ಆದ ಅವ್ಯವಹಾರಗಳಿಂದ ಠೇವಣಿದಾರರ ಹಿತರಕ್ಷಣೆಯನ್ನು ಕಾಪಾಡುವ ದೃಷ್ಟಿಯಿಂದ, ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949ರಲ್ಲಿ ಹಲವು ತಿದ್ದುಪಡಿಯನ್ನು ಮಾಡಿ,   ಸೆಪ್ಟೆಂಬರ್, 16ರಂದು ಲೋಕಸಭೆಯಲ್ಲಿ ಅಂಗೀಕಾರವಾಗಿದೆ.
ಸಹಕಾರಿ ಸಂಘಗಳಿಗೂ, ಸಹಕಾರಿ ಬ್ಯಾಂಕ್ ಗಳಿಗೂ ಬಹಳಷ್ಟು ವ್ಯತ್ಯಾಸಗಳಿವೆ. ಪ್ರಾಥಮಿಕ ಕೃಷಿ ಸಹಕಾರ ಸಂಘಗಳನ್ನು/ ಇತರ ಯಾವುದೇ ಸಹಕಾರ ಸಂಘಗಳನ್ನು ಆಯಾ ರಾಜ್ಯ ಸಹಕಾರಿ ಸಂಘಗಳ ಕಾಯ್ದೆ ಅಥವಾ ಬಹು ರಾಜ್ಯ ಸರಕಾರ ಕಾಯ್ದೆ ಅಡಿಯಲ್ಲಿ ನೋಂದಾಯಿಸಲಾಗಿದೆ ಮತ್ತು ಆಯಾ ಕಾಯ್ದೆಗಳ ನಿಬಂಧನೆಗಳಿಂದ ನಿಯಂತ್ರಿಸಲ್ಪಡುತ್ತದೆ, ಇವುಗಳ ಮೇಲಿನ ಹಂತದಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು ಜಿಲ್ಲಾ ಮಟ್ಟದಲ್ಲಿಯೂ, ರಾಜ್ಯ ಮಟ್ಟದಲ್ಲಿ ರಾಜ್ಯ ಸಹಕಾರಿ ಬ್ಯಾಂಕುಗಳು (ಅಪೆಕ್ಸ್) ಕಾರ್ಯ ನಿರ್ವಹಿಸುತ್ತಿವೆ.  ಜಿಲ್ಲಾ ಮತ್ತು ರಾಜ್ಯ ಸಹಕಾರಿ ಬ್ಯಾಂಕುಗಳನ್ನು ರಿಸರ್ವ್ ಬ್ಯಾಂಕ್ ನಿಯಂತ್ರಿಸುತ್ತದೆ ಮತ್ತು ಇವುಗಳ ಮೇಲ್ವಿಚಾರಣೆ ಯನ್ನು ನಬಾರ್ಡ್ ಮಾಡುತ್ತದೆ.
ನಗರ/ಪಟ್ಟಣ ಸಹಕಾರಿ ಬ್ಯಾಂಕುಗಳು ಆಯಾ ರಾಜ್ಯದ ಸಹಕಾರಿ ಸಂಘಗಳ ಕಾಯ್ದೆಯಡಿಯಲ್ಲಿ ಅಥವಾ ಬಹುರಾಜ್ಯ ಸಹಕಾರಿ ಸಂಘಗಳ ಕಾಯ್ದೆ, 2002ರಡಿಯಲ್ಲಿ ನೋಂದಾಯಿಸಲ್ಪಟ್ಟಿರುತ್ತವೆ. ಸಹಕಾರಿ ಬ್ಯಾಂಕುಗಳನ್ನು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949ರ ವ್ಯಾಪ್ತಿಗೆ ತರುವ ಉದ್ದೇಶದಿಂದ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949ರ ಕೆಲವು ನಿಬಂಧನೆಗಳನ್ನು ಮಾರ್ಚ್ 1, 1966ರಿಂದ ಅನ್ವಯವಾಗುವಂತೆ ಜಾರಿಗೊಳಿಸಲಾಗಿದೆ.
ಹಾಗಾಗಿ ಈ ಸಹಕಾರಿ ಬ್ಯಾಂಕುಗಳು ಆಯಾ ರಾಜ್ಯ ಸರ್ಕಾರಗಳು / ಕೇಂದ್ರ ಸರ್ಕಾರ ಮತ್ತು ರಿಸರ್ವ್ ಬ್ಯಾಂಕಿನ ಉಭಯ ನಿಯಂತ್ರಣದಲ್ಲಿದೆ. ನೋಂದಣಿ, ನಿರ್ವಹಣೆ, ಆಡಳಿತ ಮತ್ತು ನೇಮಕಾತಿ, ಸಂಯೋಜನೆ ಮತ್ತು ದಿವಾಳಿಯಂತಹ ಬ್ಯಾಂಕುಗಳೇತರ ಅಂಶಗಳನ್ನು ರಾಜ್ಯ/ ಕೇಂದ್ರಸರ್ಕಾರಗಳು ನಿಯಂತ್ರಿಸುತ್ತಿದರೆ, ಬ್ಯಾಂಕಿಂಗ್ ಸಂಬಂಧಿಸಿದ ವಿಷಯಗಳನ್ನು  ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ರ ಅಡಿಯಲ್ಲಿ ನಿಯಂತ್ರಿಸುತ್ತಿದೆ ಹಾಗಾಗಿ ಈ ತಿದ್ದುಪಡಿ ಆಗುವ ಮೊದಲೂ ರಿಸರ್ವ್ ಬ್ಯಾಂಕ್ ಸಹಕಾರಿ ಬ್ಯಾಂಕುಗಳನ್ನು ನಿಯಂತ್ರಿಸುತ್ತಿದೆ ಮತ್ತು ಮೇಲ್ವಿಚಾರಣೆ ಮಾಡುತ್ತಿದೆ. 
ಇದರೊಂದಿಗೆ ಇನ್ನಷ್ಟು  ವಿಚಾರಗಳನ್ನು ಸೇರಿಸಿ, ಕಾಯ್ದೆಯಲ್ಲಿ ತಿದ್ದುಪಡಿ ಮಾಡಿ ದೇಶದ  ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರಿಗೆ ಇನ್ನಷ್ಟು ವಿಶ್ವಾಸವಿರಿಸುವಂತೆ ಮಾಡಿದೆ. 2020ರ ಬ್ಯಾಂಕಿಂಗ್ ನಿಯಂತ್ರಕ (ತಿದ್ದುಪಡಿ) ವಿಧೇಯಕವು ದೇಶದ ಒಟ್ಟು1,540 (1,482 ನಗರ ಸಹಕಾರಿ ಬ್ಯಾಂಕುಗಳು ಮತ್ತು 58 ಬಹುರಾಜ್ಯ ಸಹಕಾರಿ ಬ್ಯಾಂಕುಗಳು)ಸಹಕಾರಿ ಬ್ಯಾಂಕುಗಳಿಗೆ ಅನ್ವಯಿಸುತ್ತದೆ. 
ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ವಿಧೇಯಕ -2020ರ ಪ್ರಮುಖ ಅಂಶಗಳು:
1.ಈ ವಿಧೇಯಕವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ,ಇತರ ಸಹಕಾರ ಸಂಘಗಳಿಗೆ, ಭೂ ಅಭಿವೃದ್ಧಿ ಸಹಕಾರಿ ಬ್ಯಾಂಕ್ /ಸಹಕಾರಿ ಭೂ ಅಡಮಾನ ಬ್ಯಾಂಕ್  ಹಾಗೂ ಕೃಷಿ ಅಭಿವೃದ್ಧಿಗೆ ದೀರ್ಘಾವಧಿಯ ಸಾಲಗಳನ್ನು ನೀಡುವ ಸಹಕಾರಿ ಸಂಘಗಳಿಗೆ ಅನ್ವಯಿಸುವುದಿಲ್ಲ.
2. ಯಾವುದೇ ಸಹಕಾರಿ ಬ್ಯಾಂಕುನಲ್ಲಿ  ಅವ್ಯವಹಾರಗಳು ಆದ ಸಂಧರ್ಭದಲ್ಲಿ ಬ್ಯಾಂಕ್ ನ ವ್ಯವಹಾರವನ್ನು ಸ್ವಲ್ಪ ಸಮಯದವರೆಗೆ  ನಿಷೇಧದಲ್ಲಿರಿಸುವ(ಮೊರಾಟೋರಿಯಮ್) ಅಧಿಕಾರ ರಿಸರ್ವ್ ಬ್ಯಾಂಕ್ ಗೆ ನೀಡಿದೆ. ಈ ನಿಷೇಧದ  ಅವಧಿಯಲ್ಲಿ ಎಲ್ಲಾ ರೀತಿಯ ವಿಚಾರಣೆ ನಡೆದ, ವೀಕ್ಷಣೆ ನಡೆದ  ನಂತರ, ಠೇವಣಿದಾರರ ಹಿತಾಸಕ್ತಿ, ಸಾರ್ವಜನಿಕರ ಹಿತಾಸಕ್ತಿ, ಬ್ಯಾಂಕ್ ನ ಆಡಳಿತವನ್ನು ಸರಿ ಪಡಿಸುವ, ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸರಿಪಡಿಸುವ ಉದ್ದೇಶದಿಂದ  ಸಹಕಾರಿ ಬ್ಯಾಂಕ್ ಅನ್ನು ಪುನಃರಚಿಸುವ ಅಥವಾ ಬೇರೊಂದು ಬ್ಯಾಂಕ್ ನೊಂದಿಗೆ ವಿಲೀನ ಗೊಳಿಸುವ ಅಧಿಕಾರವನ್ನು  ರಿಸರ್ವ್ ಬ್ಯಾಂಕ್ ಗೆ ಸೆಕ್ಷನ್ 45ರಲ್ಲಿ ನೀಡಿದೆ.
3.ಬಂಡವಾಳ ಹೂಡಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಆರ್.ಬಿ.ಐ ಯ ಪೂರ್ವಾನುಮತಿಯನ್ನು ಪಡೆದು, ಈಕ್ಟಿಟಿ, ಆದ್ಯತಾ, ಅಥವಾ ವಿಶೇಷ ಷೇರುಗಳನ್ನು ಅವುಗಳ ಮುಖಬೆಲೆ ಅಥವಾ ಅದಕ್ಕಿಂತ ಅಧಿಕಬೆಲೆಯಲ್ಲಿ, ಮತ್ತು ಡಿಬೆಂಚರ್ ಗಳನ್ನು , ಬಾಂಡ್ ಗಳನ್ನು10 ವರ್ಷಗಳು ಅಥವಾ ಅಧಿಕ ಅವಧಿಗೆ ಕಾರ್ಯವ್ಯಾಪ್ತಿಯ ಸದಸ್ಯರಿಗೆ, ವ್ಯಕ್ತಿಗಳಿಗೆ ನೀಡಬಹುದು.
4. ಆರ್.ಬಿ.ಐ  ಅನುಮತಿ ಇಲ್ಲದೆ ಷೇರು ಬಂಡವಾಳವನ್ನು ಕಡಿಮೆ ಮಾಡುವಂತಿಲ್ಲ ಮತ್ತು ಯಾವುದೇ ವ್ಯಕ್ತಿ ತಾನು ಹೊಂದಿರುವ ಷೇರಿನ  ಮೌಲ್ಯದ ಉಳಿದ  ಹಣವನ್ನು   ನೀಡಲು ಅಸಾಧ್ಯವೆಂದು ಕಂಡು ಬಂದಾಗ  , ಆತ ತನ್ನ ಷೇರುಗಳ ಮುಟ್ಟುಗೋಲನ್ನು ತಪ್ಪಿಸಲು, ಅವುಗಳ ಮೇಲಿನ ಒಡೆತನದ ಹಕ್ಕನ್ನು ( surrender of shares) ಬ್ಯಾಂಕ್ ಗಳಿಗೆ  ಬಿಟ್ಟುಕೊಡುವಂತಿಲ್ಲ, ಯಾಕೆಂದರೆ ಇದೂ  ಷೇರು ಬಂಡವಾಳವನ್ನು ಕಡಿಮೆ ಗೊಳಿಸುತ್ತದೆ.
3.ಸಹಕಾರಿ ಬ್ಯಾಂಕುಗಳು ಆರ್.ಬಿ.ಐ ನ ಅನುಮತಿಯನ್ನು ಪಡೆಯದೇ ತನ್ನ ಕಾರ್ಯವ್ಯಾಪ್ತಿಯ ಪ್ರದೇಶದ ಹೊರಗಡೆ ಹೊಸ ವ್ಯವಹಾರವನ್ನು, ಶಾಖೆಗಳನ್ನು ಆರಂಭಿಸುವಂತಿಲ್ಲ.
4.ಬಹುರಾಜ್ಯ ಸಹಕಾರಿ  ಬ್ಯಾಂಕುಗಳಲ್ಲಿ  ಅವ್ಯವಹಾರಗಳು ನಡೆದ ಸಂಧರ್ಭದಲ್ಲಿ, ಠೇವಣಿ ದಾರರ  ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ,  ನಿರ್ದೇಶಕರ ಮಂಡಳಿಯನ್ನು ಐದು ವರ್ಷಗಳವರೆಗೆ ಮೇಲ್ವಿಚಾರಣೆ ಮಾಡುವ ಅಧಿಕಾರ ಆರ್.ಬಿ.ಐ ಗೆ ನೀಡಿದೆ.
5.ಆದರೆ ನಗರ ಸಹಕಾರಿ ಬ್ಯಾಂಕುಗಳ ನೋಂದಣಿ, ನಿರ್ವಹಣೆ, ಆಡಳಿತ,  ನೇಮಕಾತಿ, ಸಂಯೋಜನೆ ಮತ್ತು ದಿವಾಳಿಯಂತಹ ಬ್ಯಾಂಕುಗಳೇತರ ಅಂಶಗಳನ್ನು ರಾಜ್ಯಸರ್ಕಾರಗಳು ನಿಯಂತ್ರಿಸುತ್ತವೆ, ಅದರಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ.
ಕೇಂದ್ರ ಸರ್ಕಾರ  ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯಲ್ಲಿ ಮಾಡಿದ ತಿದ್ದುಪಡಿ, ಸಹಕಾರ ತತ್ವಗಳಿಗೂ ಪ್ರಾಮುಖ್ಯತೆ ನೀಡುವುದರ ಮೂಲಕ, ಠೇವಣಿದಾರರ ಹಿತಾಸಕ್ತಿ , ಸಾರ್ವಜನಿಕ ಹಿತಾಸಕ್ತಿ ಯನ್ನು ಕಾಪಾಡುವ ಮೂಲಕ, ದೇಶದ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ವಿಶ್ವಾಸವಿರಿಸುವಂತೆ ಮಾಡಿದೆ

Leave a Reply