ಯಕ್ಷಗಾನದ ಅಂತರಂಗ – ಬಹಿರಂಗ’ ಪುಸ್ತಕಕ್ಕೆ ವಿದ್ವಾಂಸರ ಪ್ರತಿಕ್ರಿಯೆ

ಕರಾವಳಿ ಕನ್ನಡ ಜಿಲ್ಲೆಯವರಿಗೆ ಅತ್ಯಂತ ಇಷ್ಟವಾದ ರಂಗಕಲೆ ಯಕ್ಷಗಾನದ ಬಗೆಗೆ ಹೊಸಹೊಸ ಬರಹಗಳು ಬರುತ್ತಲೇ ಇರಬೇಕು.ಹೊಸಕಾಲಕ್ಕೆ ಅರ್ಥವಾಗುವ ಮಾತು ಬರುವುದು ಅವಶ್ಯ.ನಮ್ಮ ಕಾಲಕ್ಕೆ ನಮ್ಮ ನುಡಿ ಅನೇಕರಿಗೆ ಪ್ರೇರಣೆ ನೀಡಿದೆ ಎಂಬುದಕ್ಕೆ ಮಿತ್ರರಾದ ಕೆ.ಎಲ್.ಕುಂಡಂತಾಯರಂಥ ಅನೇಕ ಕಲಾಸಕ್ತರು ಅಧ್ಯಯನಶೀಲರಾಗಿ ರಂಗದ ಒಳ – ಹೊರಗನ್ನು ಆಳವಾಗಿ ತಿಳಿದು ಪ್ರವರ್ತಿಸಿದರೆಂಬುದೇ ಪುರಾವೆ , ಇದಕ್ಕೆ ಇನ್ನಷ್ಟು ಬಲವಾದ ಸಾಕ್ಷ್ಯ ಈ ಹೊತ್ತಿಗೆ – ಕುಂಡಂತಾಯರ ಯಕ್ಷಗಾನದ ಅಂತರಂಗ – ಬಹಿರಂಗ.

ಪ್ರಸ್ತುತ ಪುಸ್ತಕ – ಆರು ಸಂದರ್ಶನಾಧಾರಿತ ಲೇಖನಗಳು ,ರಂಗ ಸಮೀಕ್ಷೆಗೆ ಸಂಬಧಿಸಿದ ಹನ್ನೊಂದು ಲೇಖನಗಳು ಮತ್ತು ಮುಂಬಯಿಯ ಯಕ್ಷಗಾನ ಸಾಹಿತ್ಯ ಸಮ್ಮೇಳನದಲ್ಲಿ ಕುಂಡಂತಾಯರು ಮಾಡಿದ ಅಧ್ಯಕ್ಷ ಭಾಷಣ ಹೀಗೆ ಹದಿನೆಂಟು ಲೇಖನಗಳ ಸಮಾಹಾರವಿದೆ.
ಯಕ್ಷಗಾನದ ಸಮಕಾಲೀನ ಸ್ಥಿತಿಗತಿಯ ಕುರಿತ ಒಂದು ಕಿರಿದಾದರೂ ಮಹತ್ವದ ದಾಖಲಾತಿ ಇದು. ಬಾಯಾರಿದವನಿಗೆ ಎಳನೀರಿನ ಹಾಗೆ ಅರಿವಿನಿಂದ ತೃಪ್ತಿಕೊಡುವ ಕೃತಿಯಿದು.ಇದನ್ನು ಜನತೆ ಭಾವನಾತ್ಮಕವಾಗಿ ಓದಿ ಅರ್ಥಮಾಡಿಕೊಂಡು ತಮ್ಮ ಪಾಲಿನ ಕೊಡುಗೆ ನೀಡಲಿ. ಆ ಮೂಲಕ ಯಕ್ಷಗಾನ ಇನ್ನಷ್ಟು ಕೀರ್ತಿಶಾಲಿ ಆಗಬೇಕೆಂದು ಹಾರಯಿಸುತ್ತೇನೆ. ( ಮುನ್ನುಡಿಯಲ್ಲಿ)
ಡಾ.ಕೆ.ಎಂ. ರಾಘವ ನಂಬಿಯಾರ್ (ಯಕ್ಷಗಾನ ವಿದ್ವಾಂಸರು – ಸಂಶೋಧಕರು)
***
•”ಯಕ್ಷಗಾನದ ಅಂತರಂಗ ಬಹಿರಂಗ”
ಒಂದು ವಿಶಿಷ್ಟ ಸಂಕಲನ. ಯಕ್ಷಗಾನದ ಕುರಿತು ಹಲವು ಕೃತಿಗಳು ಹೊರಬರುತ್ತಿದ್ದರೂ ಈ ಪುಸ್ತಕಕ್ಕೆ ಪ್ರತ್ಯೇಕತೆ ಇದೆ. ಕಲೆಯ ಇತಿಹಾಸ,ವಿದ್ಯಮಾನ, ವಿಶಿಷ್ಟ ಸಂಗತಿಗಳ ಬಗೆಗೆ ಮಾಹಿತಿ – ಅಭಿಮತ – ವಿಶ್ಲೇಷಣೆಗಳು ಒಟ್ಟಾಗಿದೆ . ಸಂದರ್ಶನಗಳು ಪ್ರಸ್ತಾವಗಳ ದಾಖಲಾತಿಗಳು ಅಪೂರ್ವ.ಇತಿಹಾಸದ ಮಾಹಿತಿ ಸಂಶೋಧನೆಗೆ ದ್ರವ್ಯ ನೀಡಿವೆ .

ಪುನಾರಚನೆ ,ಪರಿಷ್ಕಾರ,ವಿಸ್ತಾರ ಕುರಿತಾದ ತೂಕದ ಅಭಿಮತಗಳಿವೆ .ವಿಶಿಷ್ಟರೆನಿಸದ ಮಹಾನ್ ಸಾಧಕ ಎರ್ಮಾಳು ವಾಸುದೇವ ರಾಯರ ಪರಿಚಯ ಪುಣ್ಯದ ಕಾರ್ಯ . ಡಾ.ರಾಘವ ನಂಬಿಯಾರ್ ಅವರ ಮುನ್ನುಡಿ ಪುಸ್ತಕಕ್ಕೆ ನ್ಯಾಯ ಒದಗಿಸಿದೆ. ಚೊಕ್ಕ ,ಸರಳ ನಿರೂಪಣೆ ಇತ್ಯಾತ್ಮಕ ಆಸಕ್ತಿ ಪ್ರೇರಕ ಗ್ರಂಥ.ಮುಖಚಿತ್ರದಲ್ಲೂ ಹೊಸತನದ ದಾರಿ ಇದೆ. ಕೆಲವು ವಿವರಣೆ ಗಳು ಇನ್ನಷ್ಟು‌ ಬೇಕಿತ್ತು. ಡಾ.ಎಂ.ಪ್ರಭಾಕರ ಜೋಷಿ. (ಯಕ್ಷಗಾನ ವಿದ್ವಾಂಸರು, ಸಂಶೋಧಕರು )
****
• ಶ್ರೀ ಕೆ.ಎಲ್.ಕುಂಡಂತಾಯರ ಹೊಸಕೃತಿ ‘ಯಕ್ಷಗಾನದ ಅಂತರಂಗ- ಬಹಿರಂಗ’ ಓದಿ ಆನಂದವಾಯಿತು. ಅದರ ಮೊದಲ ಭಾಗ ಕಲಾಭಿಜ್ಞರ ಸಂದರ್ಶನಕ್ಕೆ ಮೀಸಲು. ಅದರ ಒಟ್ಟು ಸಾರ ಯಕ್ಷಗಾನದ. ಮೂಲಸೌಂದರ್ಯವನ್ನು ಕಾಪಾಡಿಕೊಳ್ಳುವುದು ಹೇಗೆಂಬುದೇ ಆಗಿದೆ.

ಎರಡನೆಯ ಭಾಗವಂತೂ ಲೇಖಕರ ಬಹುಕಾಲದ ಚಿಂತನೆಯಾದ ‘ಯಕ್ಷಗಾನ ರಂಗದ ಪುನಾರಚನೆ’ಯ ಕುರಿತ ಗಹನ ವಿಚಾರಗಳನ್ನು ಕುರಿತಾಗಿದೆ. ದೀವಟಿಗೆ ಬೆಳಕಿನ ಆಟ, ಪತ್ರಿಕೆಗಳಲ್ಲಿ ಯಕ್ಷಗಾನ, ಶೇಣಿಯವರ ಅರ್ಥಶ್ರೇಣಿ, ಯಕ್ಷಗಾನದಲ್ಲಿ ಪರಿಷ್ಕರಣ, ರಾಗವಿಸ್ತಾರ ಮುಂತಾದ ಶಿರೋನಾಮೆಗಳಲ್ಲಿ ಕಿರಿದಾದರೂ ಹಿರಿದಾದ ವಿಷಯಗಳನ್ನು ಅಡಕಗೊಳಿಸಿದ್ದಾರೆ. ಕಟೀಲು ಮೇಳಗಳು ಹೊರಡುವ ಸಡಗರ ದಾಖಲಾತಿಯ ದೃಷ್ಟಿಯಿಂದ ಮಹತ್ವಪಡೆಯುತ್ತದೆ.

ಪ್ರಸಂಗಪಠ್ಯದ ಅವಲಂಬನೆ ಎಷ್ಟು ಮತ್ತು ಹೇಗೆ ಎಂಬುದು ತೀರ್ಮಾನವಾಗದ ಜಟಿಲ ಸಮಸ್ಯೆ. ಆ ಲೇಖನ ನನ್ನನ್ನು ಸದಾ ಕಾಡುತ್ತಿದೆ. ಒಂದು ಒಳ್ಳೆಯ ಕೃತಿಯ ಲಕ್ಷಣ ಇದೇ ತಾನೆ? ಪುಟಗಳು ಮುಗಿದರೂ ವಿಚಾರಗಳು ಪುಟಗೊಳ್ಳುವ ಹಾಗೆ ಮಾಡುವ ಕೃತಿಯೇ ಸತ್ಕೃತಿ. ಕುಂಡಂತಾಯರ ಕೃತಿ ಈ ತೆರನಾದುದು ಎನ್ನಬೇಕು. ಡಾ. ವಸನ್ತ ಭಾರದ್ವಾಜ ,ಕಬ್ಬಿನಾಲೆ. ( ಯಕ್ಷಗಾನ ವಿದ್ವಾಂಸರು , ಸಂಶೋಧಕರು)
~~~
• ಪುಸ್ತಕ ಓದಲು ಖುಷಿ ಆಗುತ್ತದೆ. ಯಕ್ಷಗಾನ ಕ್ಷೇತ್ರಕ್ಕೆ ಪತ್ರಕರ್ತರು ಬಂದರೆ ಅಪರೂಪದ ಅನುಭವಗಳ ಕ್ರೋಢೀಕರಣ ಆಗುತ್ತದೆ ಎನ್ನುವುದಕ್ಕೆ ನೀವು ಸಾಕ್ಷಿ. ಮತ್ತೊಬ್ಬರು ನಮ್ಮ ರಾ.ನಂ. ನಿಮ್ಮ ಮನೆಯಲ್ಲೇ ಆ ಕಲೆ ಬೆಳೆದುಕೊಂಡು ಬಂದಿತ್ತೆಂದು ಈಗಲೇ ಗೊತ್ತಾದದ್ದು.‌ ನಿಮ್ಮ ಪಿಜ್ಜ ಘೋರಶೂರ್ಪನಖೆಯಾಗಿ ತಾಳಮದ್ದಳೆಗೆ ಬಂದು ಕೂರುವ ದೃಶ್ಯವನ್ನು ಕಲ್ಪಿಸಿ ಮುದಗೊಂಡೆನು.ನಿಮ್ಮ ಸ್ವಂತ ವಿಚಾರಗಳು ಆನುಭಾವಿಕ ನೆಲೆಯಿಂದ ದಾಖಲಾಗಿವೆ. ಅವೂ ಮುಖ್ಯ. ಪುಸ್ತಕಕ್ಕೆ ಶುಭಕೋರುವೆ. ಇದರ ಯೋಗ್ಯತೆ ಗುರುತಿಸಲ್ಪಡಲಿ.‌ – ಡಾ.ಬಿ .ಜನಾರ್ದನ ಭಟ್ (ವಿಮರ್ಶಕ ,ಸಾಹಿತಿ, ಕವಿ)
~~~~~

 
 
 
 
 
 
 
 
 
 
 

Leave a Reply