ಸ್ತನಪಾನ ಪ್ರತಿ ಮಗುವಿನ ಜನ್ಮಸಿದ್ಧ ಹಕ್ಕು~ ಡಾ| ರಾಜಲಕ್ಷ್ಮೀ, ಸಂತೆಕಟ್ಟೆ

ಸ್ತನಪಾನ ಪ್ರತಿ ಮಗುವಿನ ಜನ್ಮಸಿದ್ಧ ಹಕ್ಕು ಹಾಗೂ ಪ್ರತೀ ಮಹಿಳೆಯ ಪ್ರವೃತ್ತಿ. ಎದೆಹಾಲು ನೀಡುವುದು ಪ್ರತಿಯೊಬ್ಬ ತಾಯಿಯು ತನಗೆ ಹಾಗೂ ತನ್ನ ಶಿಶುವಿಗೆ ನೀಡುವ ಅತ್ಯಮೂಲ್ಯ ಕೊಡುಗೆ. ಸ್ತನ್ಯಪಾನ ಮಗುವಿಗೆ ಬೆಚ್ಚನೆಯ ರಕ್ಷಣೆಯ ಅನುಭವದೊಂದಿಗೆ ಅಗತ್ಯವಿರುವ ಆಹಾರವನ್ನು ಎಲ್ಲಾ ಪೋಷಕಾಂಶಗಳೊಂದಿಗೆ ಕ್ಲಪ್ತ ಸಮಯದಲ್ಲಿ ಒದಗಿಸಿಕೊಡುತ್ತದೆ.

ಸ್ತನ್ಯಪಾನದ ಬಗ್ಗೆ ತಾಯಂದಿರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಆಗಸ್ಟ್ ತಿಂಗಳ ಮೊದಲ ವಾರವನ್ನು (ಆಗಸ್ಟ್ 1-7) ಸ್ತನ್ಯಪಾನ ಸಪ್ತಾಹವಾಗಿ ಆಚರಿಸಲಾಗುತ್ತದೆ. ಈ 2021ನೇ ವರ್ಷದ ಸ್ತನ್ಯಪಾನ ಸಪ್ತಾಹದ ಧ್ಯೇಯ Protect breastfeeding, a shared responsibility ಸ್ತನ್ಯಪಾನವನ್ನು ರಕ್ಷಿಸಿ ಜವಾ ಬ್ದಾರಿ ಯನ್ನು ಹಂಚಿಕೊಳ್ಳಿ ಎಂಬುದಾಗಿರುತ್ತದೆ.

ಮಗುವಿನ ಜನನದಿಂದ ಆರು ತಿಂಗಳವರೆಗೆ ಎದೆಹಾಲನ್ನು ಮಾತ್ರ ಮಗುವಿಗೆ ನೀಡುವಂತೆ ವೈದ್ಯರು ಸಲಹೆ ಮಾಡುತ್ತಾರೆ. ಇದು ತಾಯಿ ಮತ್ತು ಮಗುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವುದರ ಜೊತೆಗೆ ಮಗುವಿಗೆ ಅತೀ ಅವಶ್ಯಕ ಆಹಾರಾಂಶಗಳನ್ನು ಯಥೇಚ್ಛವಾಗಿ ಯಾವುದೇ ಖರ್ಚು ಇಲ್ಲದೆ ದೊರಕಿಸಿಕೊಡುತ್ತದೆ. ಮಗುವಿನ ರೋಗನಿರೋಧಕ ಶಕ್ತಿಯನ್ನು ವರ್ಧಿಸಿ ಹಲವು ರೋಗ ಬರದಂತೆ ರಕ್ಷಣೆ ನೀಡುತ್ತದೆ

ಹೆರಿಗೆಯಾದ ಮೊದಲ 3-4 ದಿನಗಳಲ್ಲಿ ಕಂಡು ಬರುವ ದಪ್ಪ ಹಳದಿ ಬಣ್ಣದ ಹಾಲನ್ನು ಕೊಲೊಸ್ಟ್ರಂ (colostrum) ಎಂದು ಕರೆಯುತ್ತಾರೆ. ಇದು ಮಗುವಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮಗುವಿಗೆ ಹಲವಾರು ರೋಗಗಳ ವಿರುದ್ಧ ಪ್ರತಿಕಾಯಗಳನ್ನು ಒದಗಿಸುತ್ತದೆ.

ಹಾನಿಕಾರಕ ಸೂಕ್ಷ್ಮ ಜೀವಿಗಳನ್ನು ನಾಶಪಡಿಸಲು ಸಹಕಾರಿಯಾಗಿದೆ. ಇದನ್ನು Baby super food ಅಂತಲೂ ಕರೆಯುತ್ತಾರೆ. ಮಗುವಿನ ಹೃದಯ ಹಾಗು ಮೂಳೆಗಳು ಬೆಳವಣಿಗೆಗೆ ಪೂರಕವಾದ magnesium ರೋಗನಿರೋಧತೆ ಹೆಚ್ಚಿಸುವ copper, zinc ಮುಂತಾದ ಖನಿಜಗಳನ್ನು ಧಾರಾಳವಾಗಿ ಪೂರೈಸುತ್ತದೆ. ಜಿಂಕ್ colostrum ನಲ್ಲಿ ಹಾಲಿಗಿಂತ 4 ಪಟ್ಟು ಹೆಚ್ಚು ಇದ್ದು ಮಗುವಿನ ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗಿದೆ.

ಕೊಲೊಸ್ಟ್ರಂ ನವಜಾತ ಶಿಶುಗಳ ಸೋಂಕನ್ನು ತಡೆಗಟ್ಟಲು ಕಾರ್ಯ ನಿರ್ವಹಿಸುವುದರ ಜೊತೆಗೆ ನವಜಾತ ಶಿಶುಗಳ ಜಾಂಡಿಸ್ ನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಗುವಿಗೆ ಅಗತ್ಯವಾದ ವಿಟಮಿನ್ ಗಳನ್ನು ಒದಗಿಸಿಕೊಡುತ್ತದೆ. ಆದ್ದರಿಂದ ತಾಯಂದಿರೆಲ್ಲರೂ ನವಜಾತ ಶಿಶುವಿಗೆ ಈ ಹಾಲನ್ನು ನೀಡಬೇಕು.

ಸ್ತನ್ಯಪಾನದಿಂದ ತಾಯಿ ಮಗು ಇಬ್ಬರಿಗೂ ಹಲವಾರು ಪ್ರಯೋಜನ ಹಾಗೂ ಲಾಭಗಳಿವೆ. ಎದೆಹಾಲು ಕುಡಿದ ಮಗುವಿನಲ್ಲಿ ಅಲರ್ಜಿ, ಅಸ್ತಮಾ, ಅತಿಸಾರ, ಶ್ವಾಸಕೋಶದ ಮತ್ತು ಕರುಳಿನ ಸೋಂಕು ಕಡಿಮೆ ಕಂಡು ಬರುತ್ತದೆ. ಮಾತು ಹಾಗೂ ಹಲ್ಲಿನ ತೊಂದರೆಗಳು, ಕಿವಿಯ ಸೋಂಕು, ಮೆದುಳು ಜ್ವರದ ಪ್ರಮಾಣವೂ ಗಣ ನೀಯವಾಗಿ ಕಡಿಮೆ.

ಮಗು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಹಾಗೂ ಶಿಶು ಮರಣ ಪ್ರಮಾಣವೂ ಕಡಿಮೆಯಾಗಿದೆ. ಎದೆಹಾಲು ಪಡೆದ ಮಗುವಿನ ಮುಂದಿನ ದಿನಗಳಲ್ಲಿ ಮಧುಮೇಹ, ಬೊಜ್ಜುತನ ಹಾಗೂ ಕ್ಯಾನ್ಸರ್ ಗಳು ಬರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ತಾಯಿಯ ಗರ್ಭಕೋಶ ತನ್ನ ಹಿಂದಿನ ಆಕಾರ ಹಾಗೂ ಗಾತ್ರಕ್ಕೆ ಮರಳಲು ಸಹಾಯಕವಾಗುವುದಲ್ಲದೇ ತಾಯಿಯ ತೂಕ ಕಡಿಮೆಯಾಗುತ್ತದೆ. ಬಾಣಂತಿತನದ ರಕ್ತಸ್ರಾವ ಮತ್ತು ರಕ್ತಹೀನತೆ ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ಮನಸ್ಸು ಆಹ್ಲಾದಕರವಾಗಿದ್ದು ಬಾಣಂತನದ ಖಿನ್ನತೆಗೊಳಗಾಗುವುದಿಲ್ಲ. ಪ್ರಯಾಣ ಸುಲಭ ವಾಗಿರುತ್ತದೆ. ಮಗುವಿನ ಆಹಾರ ಪ್ರತ್ಯೇಕವಾಗಿ ಒಯ್ಯಬೇಕೆಂದಿಲ್ಲ.

ಮಗುವಿನ ಮುಂದಿನ ದಿನಗಳಲ್ಲಿ ವಾತ, ಹೃದಯ/ನರ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಕಡಿಮೆ ಇರುತ್ತದೆ. ಮಗುವಿಗೆ ಎದೆ ಹಾಲು ನೀಡಿದ ಮಹಿಳೆಯರಲ್ಲಿ ಸ್ತನ ಹಾಗೂ ಅಂಡಾಶಯ ಕ್ಯಾನ್ಸರ್, ಮೂಳೆ ಸವೆತ, ಮಧುಮೇಹ, ಅತಿ ರಕ್ತದೊತ್ತಡ ಹಾಗೂ ಹೃದಯದ ಕಾಯಿಲೆಗಳು ಹೆಚ್ಚಾಗಿ ಕಾಣಬರುವುದಿಲ್ಲ.

ಎದೆಹಾಲು ನೀಡುವುದರ ಕುರಿತಾಗಿ ತಾಯಂದಿರಿಗೆ ಗರ್ಭಿಣಿಯಾಗಿದ್ದಾಗಲೇ ಸೂಕ್ತ ಮಾಹಿತಿ ಒದಗಿಸುವುದು ಅತ್ಯಗತ್ಯ. ಸ್ತನಗಳ ಸ್ವಚ್ಛತೆ, ಎದೆ ಹಾಲು ಕೊಡಲು ಕುಳಿತುಕೊಳ್ಳುವ ಸರಿಯಾದ ಭಂಗಿ, ಮಗುವಿಗೆ ಎಷ್ಟು ಬಾರಿ, ಎಷ್ಟು ಗಂಟೆಗೊಮ್ಮೆ ಹಾಲುಣಿಸಬೇಕು, ಹಾಲಿನ ಗುಣಮಟ್ಟ ಹೆಚ್ಚಿಸಲು ಯಾವ ಆಹಾರ ಸೇವಿಸಬೇಕು ಮುಂತಾದ ವಿಷಯಗಳ ಬಗ್ಗೆ ತಾಯಂದಿರು ಗರ್ಭಾವಸ್ಥೆಯಲ್ಲೇ ಮಾಹಿತಿ ಪಡೆದು ಕೊಂಡಿರಬೇಕು.

ಈಗಿನ ಕೋವಿಡ್ ದಿನಗಳಲ್ಲಿ ತಾಯಂದಿರು ಸೋಂಕಿತರಾಗಿದ್ದರೂ, ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಎದೆಹಾಲು ನೀಡಬಹುದು. ಹಾಗೆಯೇ ಸ್ತನ್ಯಪಾನ ನೀಡುತ್ತಿರುವ ತಾಯಂದಿರು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದು ಉತ್ತಮ. ಲಸಿಕೆಯಿಂದ ನಿಮಗೆ ಅಥವಾ ನಿಮ್ಮ ಮಗುವಿಗೆ ಯಾವುದೇ ತೊಂದರೆಯಾಗುವುದಿಲ್ಲ.

ಮಗುವಿನ ಸರ್ವತೋಮುಖ ಬೆಳವಣಿಗೆಗೆ ಕಾರಣವಾದ ಸ್ತನ್ಯಪಾನವನ್ನು ನೀಡಲು ಅನುಕೂಲಕರ ವಾತಾವರಣ ನಿರ್ಮಿಸುವುದು ಎಲ್ಲರ ಜವಾಬ್ದಾರಿ. ಹಾಲುಣಿಸವ ತಾಯಿಗೆ ಅಗತ್ಯವಿರುವ ಪೋಷಕ ಆಹಾರ, ವಿಶ್ರಾಂತಿ ಹಾಗೂ ಮಾನಸಿಕ ನೆಮ್ಮದಿಯ ಬಗ್ಗೆ ಕಾಳಜಿ ವಹಿಸುವಲ್ಲಿ ಮಗುವಿನ ತಂದೆ ಮತ್ತು ಕುಟುಂಬದವರ ಪಾಲುದಾರಿಕೆಯೂ ಅಗತ್ಯ.

ಎಲ್ಲರೂ ಸಹಕಾರ ನೀಡಿ ಮಗುವಿನ ಸ್ತನ್ಯಪಾನದ ಬಗ್ಗೆ ತಮ್ಮ ತಮ್ಮ ಜವಾಬ್ದಾರಿಯನ್ನು ಅರಿತು ನಿರ್ವಹಿಸಿದಲ್ಲಿ ಮಗು ಆರೋಗ್ಯವಂತವಾಗಿ ಬೆಳೆಯುವುದರಲ್ಲಿ ಯಾವುದೇ ಸಂದೇಹವಿಲ್ಲ.

 
 
 
 
 
 
 
 
 

Leave a Reply