ವಿಶ್ವಪ್ರಸಿದ್ಧ ಛಾಯಾಗ್ರಾಹಕ  ಉಡುಪಿಯ ಆಸ್ಟ್ರೋ ಮೋಹನ್~ ರಾಜೇಶ್ ಭಟ್ ಪಣಿಯಾಡಿ .

ಜಗತ್ತಿನ ಆಗುಹೋಗುಗಳನ್ನು ಕ್ಯಾಮರಾ ಕಣ್ಣುಗಳಲ್ಲಿ ತನ್ನ ಕಲ್ಪನೆಗಳಿಗೆ  ಒರೆ ಹಚ್ಚಿ ವಿಭಿನ್ನ ಶೈಲಿಯಲ್ಲಿ ಸೆರೆಹಿಡಿದು ಮಾತು-ಬರಹಕ್ಕೂ ನಿಲುಕದ ವಿಷಯಗಳನ್ನು ಕ್ಲಿಕ್ಕೆನಿಸಿದ ಚಿತ್ರದಲ್ಲೇ ತೋರಿಸಬಲ್ಲ
ಪ್ರವೀಣ (​ಹೆಂಡತಿಯ ಹೆಸರು ಕೂಡಾ) ಆಸ್ಟ್ರೋ ಮೋಹನ್.  
ಈ ಕ್ಷೇತ್ರದಲ್ಲಿ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಜಗತ್ತಿನ ಪ್ರಚಲಿತ ವಿದ್ಯಮಾನಗಳ  ಸುಂದರ ಚಿತ್ರಣಗಳನ್ನು ಮನೆಮನಗಳಿಗೆ ತಲುಪಿಸುವ ಹಿರಿಯ ಸುದ್ದಿಗಾರ. ಫೊಟೋ ಜರ್ನಲಿಸಮ್ ನಲ್ಲಿ 27 ವರ್ಷಗಳ ಅನುಭವ. ಇವರು ಹುಟ್ಟಿ ಬೆಳೆದ ಊರು ಬಳ್ಳಾರಿಯಾದರೂ ಪ್ರಾಥಮಿಕ ಕಲಿಕೆಯನ್ನು ಬೆಳಗಾವಿಯಲ್ಲಿ ಮುಗಿಸಿ BA ಪದವಿಯನ್ನು ಮಂಗಳೂರಿನ ಕೆನರಾ ಕಾಲೇಜ್ ನಲ್ಲಿ ಪೂರೈಸಿ ಉಡುಪಿಯಲ್ಲಿ ವೃತ್ತಿ ಜೀವನದ ಜೊತೆ ನೆಲೆ ಕಂಡವರು ಈತ.  
ಮಣಿಪಾಲದ ಹೆಸರಾಂತ ದಿನಪತ್ರಿಕೆ ಉದಯವಾಣಿಯ ಹಿರಿಯ ನ್ಯೂಸ್ ಫೊಟೋಗ್ರಾಫರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಈ ವರೆಗೆ ಛಾಯಾಗ್ರಹಣಕ್ಕೆ ಸಂಬಂಧಪಟ್ಟಂತೆ 450 ಕ್ಕೂ ಮಿಕ್ಕಿದ ರಾಷ್ಟ್ರೀಯ ಹಾಗೂ ಅಂತರ್ ರಾಷ್ಟ್ರೀಯ ಪುರಸ್ಕಾರಗಳಿಗೆ ಭಾಜನರಾಗಿರುವುದು ಸಂತಸದ ವಿಷಯ.  ” ಕರಾವಳಿ ಕಂಬಳ ” ಎಂಬ ಇವರ ಚಿತ್ರ ಅಂತರ್ ರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಿಟ್ಟಿಸಿಕೊಂಡಿರುವುದು ಹೆಮ್ಮೆಯ ಸಂಗತಿ.
 
ಬೇರೆ ಎಲ್ಲಾ OK..ಮೋಹನ್ ರ ಹಿಂದೆ ಆಸ್ಟ್ರೋ ಯಾಕೆ? ಅನ್ತೀರಾ… ಇವರೊಬ್ಬ ಬಹುಮುಖ ಪ್ರತಿಭೆ. ಮುಖ್ಯವಾಗಿ ಜ್ಯೋತಿಷ್ಯ ಶಾಸ್ತ್ರದ ಮತ್ತು ಹಸ್ತ ಭವಿಷ್ಯದ ಬಗ್ಗೆ ಅತೀವ ಆಸಕ್ತಿ ಹಾಗೂ ಅನುಭವ ಹೊಂದಿರುವುದರಿಂದ ಅದು ಅವರ ಆಪ್ತ ಬಳಗ ಪ್ರೀತಿ ಹಾಗೂ ಅಭಿಮಾನದಿಂದ ಕರೆಯುವ ಆಸ್ಟ್ರೋ ಎಂಬ ಡಾಕ್ಟರೇಟ್ ಡಿಗ್ರಿ. ಮಹಾನದಿ ಚಿತ್ರದ ಮೂಲಕ ಚಿತ್ರನಟ ಎನಿಸಿಕೊಂಡ ಇವರು ಒಳ್ಳೆಯ  ಕಾರ್ಯಕ್ರಮ ಸಂಯೋಜಕ, ವಿಮರ್ಶಕ , ಮಾತುಗಾರ, ಚಿತ್ರಕಾರ ಜೊತೆಗೆ ಜಾಧೂಗಾರ ಕೂಡ.

ಅವರ ಈ ಎಲ್ಲ ಜೀವನ ಶ್ರೇಷ್ಠ ಸಾಧನೆಗೆ ಶಿರಬಾಗಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಮತ್ತು ಇ-ಸಮುದಾಯ  ಅವರನ್ನು  ಗುರುತಿಸಿ  ಅವರ ಜೊತೆ ಮುಕ್ತ ಸಂವಾದ ಗೈಯುವುದರ ಮೂಲಕ ಗೌರವ ಪೂರ್ಣವಾಗಿ ಅಭಿನಂದಿಸುತ್ತದೆ. ಇದೇ ಬರುವ 16 ರಂದು ಸಂಜೆ 6 ಗಂಟೆಗೆ Samskruthi Vishwa YouTube ಚಾನಲ್ ನಲ್ಲಿ ವಿಶ್ವ ಕಲಾ ಸಂಭ್ರಮ ಕಾಯ೯ಕ್ರಮದಡಿಯಲ್ಲಿ ಅವರ ಕಲಾ ಪ್ರೌಡಿಮೆಯನ್ನು ವೀಕ್ಷಿಸಲು ಮರೆಯಬೇಡಿ.
 
 
 
 
 
 
 
 
 
 
 

Leave a Reply