ಅಂದು ಮನೆಯೇ ಮೊದಲ ಪಾಠಶಾಲೆ, ಈಗ ಮನೆಯಲ್ಲಿಯೇ ಮೊಬೈಲ್ ಪಾಠ ಶಾಲೆ, 

ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎನ್ನೋ ಕಾಲ ಅಂದಿತ್ತು, ಈಗ ಮನೆಯಲ್ಲಿಯೇ ಮೊಬೈಲ್ ಪಾಠ ಶಾಲೆ, ವಿವಿಧ ಆ್ಯಪ್ ಗಳೇ ಗುರು ಆಗಿ, ಶಿಕ್ಷಣ, ಶಿಕ್ಷಕ, ಶಿಷ್ಯಂದಿರ ಬದುಕು ಪರಸ್ಪರ ಮುಖಾಂತರ ಭೇಟಿ ಇಲ್ಲದೆ, ಕೇವಲ ಆನ್ ಲೈನ್ ಪ್ಲಾಟ್ ಫಾರಂ ನಲ್ಲಿ ನೋಡಿ ಕಲಿಯುವಂತಾಗಿದೆ, ಪಾಠ ಹೇಳುವಂತಾಗಿದೆ. 

ಕೊರೋನ ಎಂಬ ಮಾಯೇ ಎಲ್ಲವನ್ನೂ ಎಲ್ಲರನ್ನೂ ಬದಲಾಯಿಸಿ ಅತೀ ಹೆಚ್ಚಿನ ಸಮಯ ಮನೆಯಲ್ಲಿರಿಸಿತು, ಬಿಡುವು ಬೇಕೆಂದುಕೊಳ್ಳೊ ಮಂದಿ ಎಂದು ನಮಗೆ ಬಿಡುಗಡೆ ಎಂದು ಹೇಳೋ ತರ ಆಗಿ ಹೋಗಿದೆ. ವಿದ್ಯಾರ್ಥಿಗಳಿಗೆ ತರಗತಿಯ ಮಧ್ಯದಲ್ಲಿ ಅಟೆಂಡರ್ ರಜೆಯ ನೋಟೀಸ್ ತಂದಾಗ, ಪಾಠ ಮಾಡುವ ಉಪನ್ಯಾಸಕ ಓದಿದಾಗ ಅಂದು ಹೋ ಎಂದು ಹೇಳಿ ಖುಷಿ ಪಡುತ್ತಿದ್ದ ಮಕ್ಕಳಿಗೆ, ಈಗ ಅಯ್ಯೋ ಎಂದು ನಮ್ಮ ಕಾಲೇಜಿನಿಂದ, ಶಾಲೆಯಿಂದ ಕರೆ ಬರುತ್ತದೆ, ಪಾಠ ಎಂದಿನಂತೆ ನಡೆಯುತ್ತದೆ ಎಂದು ಚಾತಕ ಪಕ್ಷಿಯ ತರ ಕಾಯುತ್ತಿದ್ದಾರೆ.

ಆನ್ ಲೈನ್ ಏನು ಹೊಸತಲ್ಲ ಎಂದು ಜನ ಹೇಳಬಹುದು ಕಾರಣ ಆನ್ ಲೈನ್ ಲಿ ಶಾಪಿಂಗ್ ಶುರುಮಾಡಿ ಸರಿಸುಮಾರು ಐದಾರು ವರ್ಷಗಳೇ ಕಳೆದಿವೆ, ಆದರೆ‌ ಈ ಆನ್ ಲೈನ್ ಶಿಕ್ಷಣ ಎನ್ನೋದು ಕೇವಲ ಯೂಟ್ಯೂಬ್ ವಿಡಿಯೋಗಳಿಗೆ ಸೀಮಿತವಾಗಿದ್ದ ವೇದಿಕೆ ಈಗ ಲೈವ್ ಕ್ಲಾಸ್ ಮಾಡೋ ಹಂತಕ್ಕೆ ಬಂದು ನಿಂತಿದೆ. ಆದರೆ ಈ ಆನ್ ಲೈನ್ ತರಗತಿಗಳು ನೂರಕ್ಕೆ ನೂರರಷ್ಟು ಫಲಪ್ರದವಾಗಿಲ್ಲ ಎನ್ನೋದು ಮಾತ್ರ ಎಲ್ಲರಿಗೂ ತಿಳಿದಿರೋ ವಿಚಾರ, ಆದರೆ ವಿದ್ಯಾರ್ಥಿಗಳನ್ನು ಸುಮ್ಮನೆ ಮನೆಯಲ್ಲಿಯೇ ಕೂರುವಂತೆ ಮಾಡಿದರೆ ಡಾ.ಎ.ಪಿ.ಜೆ ಅಬ್ದುಲ್ ಕಲಾಂರು ಕಂಡ 2020 ರಲ್ಲಿ ಭಾರತ ಮುಂದುವರಿದ ದೇಶವಾಗುವ ಕನಸು ಕನಸಾಗಿಯೇ ಉಳಿಯುತ್ತದೆ.

ಅದಕ್ಕೆಂದೇ ಶಿಕ್ಷಕರು ಹೊಸತನ್ನು ಕಲಿತು, ನುರಿತು, ಅರಿತು ಮೊಬೈಲ್, ಲ್ಯಾಪ್‌ಟಾಪ್ ಮುಖೇನ ಅಂತರ್ಜಾಲದ ಸಹಕಾರದಿಂದ ಪಾಠ ಬೋಧಿಸುತ್ತಾ, ಪರೀಕ್ಷೆ ನೀಡುತ್ತಾ ನೂರಕ್ಕೆ ಅರವತ್ತು ಭಾಗದಷ್ಟು ವಿದ್ಯಾರ್ಥಿಗಳಿಗೆ ತಲುಪಿಸುತ್ತಿದ್ದಾರೆ. ಹೇಗೆ ಕಿಸಾ ಗೌತಮಿ ನಾಟಕದಲ್ಲಿ ಬರೋ ಸಾವಿಲ್ಲದ ಮನೆಯ ಸಾಸಿವೆ ತಾ, ಎಂಬಂತೆ ಈಗಿನ ಕಾಲಘಟ್ಟದಲ್ಲಿ ಮೊಬೈಲ್ ಇಲ್ಲದ ಮನೆಯಿಲ್ಲ ಅದರಲ್ಲೂ ಸ್ಮಾರ್ಟ್ ಫೋನ್ ಇಲ್ಲದ ಮನೆಯಿಲ್ಲ, ಡೇಟಾ ಪ್ಯಾಕ್ ಇಲ್ಲದ ಫೋನ್ ಇಲ್ಲ, ಶೇಕಡಾ 65% ಯುವ ಜನರೇ ಇರೋವಾಗ ಈ ಆನ್ ಲೈನ್ ಎನ್ನುವುದು ಕಷ್ಟಕರ ಅಲ್ಲ ಎನ್ನುವುದು ತಜ್ಞರ ಅಭಿಪ್ರಾಯ.

ಆದರೂ ಇಂದಿಗೂ ನೆಟ್ವರ್ಕ್ ಸಮಸ್ಯೆ, ಮೊಬೈಲ್ ಇಲ್ಲದೇ ಇರೋ ಬಡ ಕುಟುಂಬ, ಇದ್ದರೂ ಡೇಟಾ ಪ್ಯಾಕ್ ಹಾಕಿಸದಷ್ಟು ಬಡತನ ಹೀಗೆ ಒಂದಲ್ಲಾ, ಎರಡಲ್ಲಾ ತರದ ಸಮಸ್ಯೆಗಳು ಒಂದಾದರೆ, ಇನ್ನೊಂದೆಡೆ ಅತಿರೇಕದ ಮೊಬೈಲ್ ಬಳಕೆಯಿಂದ ಕಣ್ಣುಗಳು ಡ್ರೈ ಆಗೋದು, ಉರಿ ಬರೋದು, ಮೊಬೈಲ್ ಕಿನ್ನತೆಗೆ ಒಳಗಾಗೋದು ಇನ್ನೊಂದೆಡೆಯಾಗಿ ಪರಿಣಮಿಸಿದೆ.

ಹೀಗೆ ಬರೆಯುತ್ತಾ ಹೋದರೆ ಸುಮಾರು ವಿಷಯಗಳಿವೆ, ಗ್ರಾಮ್ಯ ಭಾಷೆಯ ಈಸ್ಕೂಲು ಈಗ ಅಕ್ಷರಶಃ ಇ-ಸ್ಕೂಲು ಆಗಿದ್ದು ಮಾತ್ರ ನಿಜಾನೆ ಅಲ್ವಾ. ಆಗ ಒಂದು ಸೆಮಿನಾರ್ ಮಾಡೋಕೆ ಎಷ್ಟು ಸರ್ವ ಪ್ರಯತ್ನಗಳು ಇರುತ್ತಿತ್ತು ಈಗ ಅದನ್ನು ‘ಗೂಗಲ್ ಫಾರಂ’ ಸುಲಭಮಾಡಿ ಕೊಟ್ಟು, ಸರ್ಟಿಫಿಕೇಟ್ ಅದಾಗೆ ಕಳಿಸೋ ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗೆ ಸಾಧಕ-ಬಾದಕಗಳ ನಡುವೆ, ಮುಂದೊಂದು ದಿನ ಮೊದಲಿನಂತೆಯೇ ತರಗತಿಯಲ್ಲಿ ಕೂತು ಕಲಿಯುವ ಶಿಕ್ಷಣ ಮತ್ತೆ ಬರಲಿ, ಇದೇ ತರದ ಆನ್ ಲೈನ್ ಶಿಕ್ಷಣ ವಾರಕ್ಕೆ ಒಮ್ಮೆಯಾದರೂ ಚಾಲ್ತಿಲಿ ಇರಲಿ, ಶಿಕ್ಷಕ-ಶಿಷ್ಯಂದಿರ ಬಾಂಧವ್ಯ ಸದಾ ಗಟ್ಟಿಯಾಗಿ ಉಳಿದು ಯಾವುದೇ ಹೊಸ ತರದ ಶಿಕ್ಷಣ ನೀತಿಗಳೂ ಬಂದರೂ ಕುಗ್ಗದೆ-ಜಗ್ಗದೆ ಅಜರಾಮರವಾಗಿರಲಿ.

 
 
 
 
 
 
 

2 COMMENTS

  1. ತುಂಬಾ ಒಳ್ಳೇ ಲೇಖನ ಸರ್….. ಆನ್ಲೈನ್ ಶಿಕ್ಷಣದ ಬಗ್ಗೆ ನೀವು ಹೇಳಿದ ಪ್ರತಿಯೊಂದು ಮಾತು ನಿಜ…. ಆದಷ್ಟು ಬೇಗ ಈಗಿರುವ ಪರಸ್ಥಿತಿ ಸರಿ ಹೋಗಲಿ ಅನ್ನೋದು ಆಶಯ

  2. ತುಂಬಾ ಒಳ್ಳೇ ಲೇಖನ ಸರ್…. ಆನ್ಲೈನ್ ಶಿಕ್ಷಣದ ಬಗ್ಗೆ ನೀವು ಹೇಳಿದ ಪ್ರತಿಯೊಂದು ಮಾತು ನಿಜ…. ಆದಷ್ಟು ಬೇಗ ಈಗಿರುವ ಪರಸ್ಥಿತಿ ಸರಿ ಹೋಗಲಿ ಅನ್ನೋದು ಆಶಯ

Leave a Reply