ಶ್ರೀ ಶಿರೂರುಶ್ರೀಗಳೊಂದಿಗಿನ ಮರೆಯಲಾಗದ ನೆನಪುಗಳು​/4~ ಅಕ್ಷೋಭ್ಯ ಆಚಾರ್ಯ

ಈಜಿನಲ್ಲಿ ಅನೇಕ ಸಾಧನೆಗಳನ್ನು ಸಾಧಿಸಿದ ಅಪರೂಪದ ಯತಿ ಶಿರೂರು ಮಠದ ಶ್ರೀ ಲಕ್ಷ್ಮೀವರತೀರ್ಥಶ್ರೀಪಾದರು.ಈಜುವುದೆಂದರೆ ಅವರಿಗೆ ಎಲ್ಲಿಲ್ಲದ ಹುಮ್ಮಸ್ಸು. ಸಮುದ್ರವಿರಲಿ, ನದಿಯಿರಲಿ, ಸರೋವರವೇ ಇರಲಿ ನೀರಿನ ಆಳಕ್ಕೆ ಇಳಿದು ಸಾಹಸಿಕವಾಗಿ ಗಂಟೆಗಟ್ಟಲೆ ಅವರು ಈಜುವ ರೀತಿಗೆ ಸರಿಸಾಟಿಯೇ ಇಲ್ಲ.ಕೃಷ್ಣ ಮಠದ ಮಧ್ವಸರೋವರಕ್ಕೆ ಇಳಿದರೆಂದರೆ ಕನಿಷ್ಠ 2 ಗಂಟೆಗಳ ಕಾಲ ಈಜುತ್ತಿದ್ದರು. ಇವರ ಈಜಿನ ವೈವಿಧ್ಯತೆ ನೋಡಲು ಸರೋವರದ ಬದಿಯಲ್ಲೆಲ್ಲಾ ಭಾರಿ ಜನ ಸೇರುತ್ತಿದ್ದರು. ಅವರು ನೀರಿಗಿಳಿದರೆಂದರೆ ಮಠದ ಎಲ್ಲಾ ಹುಡುಗರು ಸರೋವರಕ್ಕೆ ಬಂದು ಅವರೊಡನೆ ಈಜಲೇ ಬೇಕು. ಈಜು ತಿಳಿಯದವರಿಗೆ ಅವರೇ ವೈಯುಕ್ತಿಕ ಕಾಳಜಿ ತೆಗೆದುಕೊಂಡು ಈಜು ಕಲಿಸುತ್ತಿದ್ದರು.​​

9ನೇ ತರಗತಿಯಲ್ಲಿ ಓದುತ್ತಿದ್ದೆ. ನನಗೆ ಈಜು ಬರುವುದಿಲ್ಲಾ ಎಂಬ ವಿಷಯ ಸ್ವಾಮೀಜಿಯವರಿಗೆ ತಿಳಿದಿತ್ತು. ಆ ನಿಮಿತ್ತ ಒಂದು ದಿನ ಸಂಜೆ ನಾನು ಮಠದಲ್ಲಿದ್ದಾಗ ನನಗೆ ಕರೆ ಬಂದಿತು. ಹೆದರುತ್ತಾ ಸರೋವರದ ಬಳಿ ಬಂದೆ. ತಕ್ಷಣ ನನ್ನನ್ನು ಕಂಡ ಶ್ರೀಪಾದರು”ಅಕ್ಷೋಭ್ಯ” ಎಂದು ಕರೆದರು. ತಕ್ಷಣ ನೀರಿನ ಬದಿಯ ಮೆಟ್ಟಿಲಲ್ಲೇ ನಿಂತು ಏನು ಎಂದು ಕೇಳುವಸ್ಟರಲ್ಲೇ ಯಾರೋ ಒಬ್ಬ ಪೋಕರಿ ಹುಡುಗ ಹಿಂದಿನಿಂದ ಬಂದು ನೀರಿಗೆ ದೂಡಿಯೇ ಬಿಟ್ಟ. “ಅಯ್ಯಮ್ಮಾ..”ಎಂದು ಬೆಚ್ಚಿ ಬೊಬ್ಬಿಡುತ್ತಾ ನೀರಿನೊಳಗೆ ಬಿದ್ದು ಕೈಕಾಲು ತಟಪಟಾಂತ ಬಡಿಯುತ್ತಾ ಮುಳುಗಿ ಮೇಲೇಳುತ್ತಿದ್ದಂತೆ  ನೀರಿನಲ್ಲೇ ಇದ್ದ ಶ್ರೀಪಾದರು ಬಂದು ನನ್ನನ್ನು ನೀರಿನಿಂದ ಮೇಲೆಳೆದು ಅವರ ಬೆನ್ನಮೇಲೆ ಏರಿಸಿಕೊಂಡರು.
ಹೆದರಿ ಕಂಗಾಲಾಗಿದ್ದ ನಾನು ಕಣ್ಣನ್ನು ತೆರೆಯಲೇ ಇಲ್ಲ​​. ಮೂಗು ಬಾಯೊಳಗೆ ನೀರು ಹೋಗಿದ್ದ ಕಾರಣ ಕೆಮ್ಮುತ್ತಿದ್ದೆ. ಪಕ್ಕದಲ್ಲಿದ್ದ ಮಕ್ಕಳೆಲ್ಲ ನನ್ನ ಪರಿಸ್ಥಿತಿ ನೋಡಿ ಬಿದ್ದು ಬಿದ್ದು ನಗುತ್ತಿದ್ದರು. ನನ್ನನ್ನು ದೂಡಿದ ಹುಡುಗನ ಮೇಲೆ ಸಿಕ್ಕಾಪಟ್ಟೆ ಸಿಟ್ಟು ಬಂದಿತ್ತು. ಆನಂತರ ಸ್ವಾಮೀಜಿಯವರು ನನ್ನನ್ನು ಬೆನ್ನ ಮೇಲೆ ಇರಿಸಿಕೊಂಡು ಈಜುತ್ತಾ ಸರೋವರಕ್ಕೆ ಒಂದು ಪ್ರದಕ್ಷಿಣೆ ಬಂದರು. ನನ್ನ ಕೋಪವನ್ನು ಗಮನಿಸಿದ  ಸ್ವಾಮೀಜಿಯವರು ಮೆಲ್ಲನೆ ನಗುತ್ತಾ ಹೇಳಿದರು. ನಾನೇ ಆ ಹುಡುಗನಿಗೆ ನಿನ್ನನ್ನು ದೂಡಲು ಹೇಳಿದ್ದು. ನಾನು ಈಜು ಕಲಿಸುವ ರೀತಿಯೇ ಹಾಗೆ. ಇಲ್ಲದಿದ್ದರೆ ನಿನಗೆ ನೀರಿಗೆ ಇಳಿಯಲಿಕ್ಕೇ ಒಂದು ವರ್ಷ ಬೇಕಾಗುತ್ತದೆ ಎಂದು ಹೇಳಿದ ಮೇಲೆ ನನ್ನ ಕೋಪ ತುಸು ಶಾಂತವಾಯಿತು.

ಕೆಲವೇ ದಿನಗಳಲ್ಲಿ ನಾನು ಈಜಿನಲ್ಲಿ ಸಂಪೂರ್ಣ ಪರಿಣತಿಯನ್ನು ಪಡೆದೆ. ನನ್ನ ತಂಗಿ ಅಕ್ಷರಳಿಗೂ ಈಜು ಕಲಿಸಿದೆ.ಈ ನಡುವೆ ಘಟನೆಯೊಂದು ನಡೆಯಿತು.ರಜಾ ದಿನಗಳಲ್ಲಿ ಜರಗುತ್ತಿದ್ದ ವೇದ ಶಿಬಿರಗಳಲ್ಲಿ ಪ್ರಶಾಂತ ಎಂಬ ಹೆಸರಿನ ಮುಗ್ಧ ಹುಡುಗ ಯಾವಾಗಲೂ ನನ್ನ ಜೊತೆಗೆಯೇ ಇರುತ್ತಿದ್ದ. ಮಠದಲ್ಲಿ ಯಾರು ಏನೇ ಕೆಲಸ ಹೇಳಿದರು ತುಂಬಾ ಶ್ರದ್ಧೆಯಿಂದ ಮಾಡುತ್ತಿದ್ದ.ಆದರೆ ಆತ ಮಾನಸಿಕವಾಗಿ ಅಷ್ಟೊಂದು ಪ್ರಬುದ್ಧನಾಗಿರಲಿಲ್ಲ. ಆತನಿಗೆ ಈಜು ಕಲಿಯಬೇಕೆಂದು ವಿಪರೀತ ಆಸೆ.ಒಮ್ಮೆ ಕೆರೆಯ ತಟದಲ್ಲಿ ನಿಂತು ನಾವೆಲ್ಲಾ ಈಜುವುದನ್ನು ಗಮನಿಸುತ್ತಿದ್ದ ಪ್ರಶಾಂತನು ಈಜುವ ಆಸೆ ತಡೆಯಲಾಗದೆ ನೇರವಾಗಿ ನೀರಿಗೆ ಜಿಗಿದೇಬಿಟ್ಟ.


ನೋಡು ನೋಡುತ್ತಿದ್ದಂತೆ ನೀರಿನ ಆಳಕ್ಕೆ ಸಾಗುತ್ತಿದ್ದ ಆತನನ್ನು ಸ್ವಾಮೀಜಿಯವರು ನೀರಿನಿಂದ ಮೇಲೆ ಎಳೆದು ತಂದರು. ಈತನಿಗೆ ನೀರಿನಲ್ಲಿರುವ ಆಕರ್ಷಣೆ ಗಮನಿಸಿದ ಶ್ರೀಪಾದರು  ತಡಮಾಡದೆ ಈಜು ಕಲಿಸಿಯೇ ಬಿಟ್ಟರು. ಒಂದು ಸಂಜೆ ಈಜಿನ ಮೋಜು ಜೋರಾಗಿ ಸಾಗುತ್ತಿದ್ದಾಗ ಪ್ರಶಾಂತಗೆ ಆತನ ಕೊರಳಲ್ಲಿ ಇದ್ದ ಬೆಳ್ಳಿಯ ತುಳಸೀಮಣಿ ಸರ ನೀರಲ್ಲಿ ಜಾರಿದ್ದು ಗೊತ್ತಾಗಲೇ ಇಲ್ಲ.ಇತ್ತೀಚೆಗಷ್ಟೆ ಆತನ ಉಪನಯನದ ಸಂದರ್ಭದಲ್ಲಿ ತಂದೆ ಉಡುಗೊರೆಯಾಗಿ ನೀಡಿದ್ದ ಹಾರ ನೀರಲ್ಲಿ ಮರೆಯಾದಾಗ ಪ್ರಶಾಂತನಿಗೆ ದುಃಖ ತಡೆದುಕೊಳ್ಳಲು ಆಗಲಿಲ್ಲ
 
ವಿಷಯ ತಿಳಿಯುತ್ತಿದ್ದಂತೆಯೇ ಶ್ರೀಪಾದರು ಸಹಿತವಾಗಿ ಎಲ್ಲರೂ ನೀರೊಳಗೆ ಮುಳುಗಿ ಹಾರವನ್ನು ಹುಡುಕಲು ಆರಂಭಿಸಿದರು. ಆದರೆ ಅಷ್ಟು ಹೊತ್ತಿಗೆ ಕತ್ತಲಾಗಿತ್ತು. ಪ್ರಶಾಂತ ಕೆರೆಯ ಮೆಟ್ಟಿಲ ಬಳಿ ನಿಂತು ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಆತನ ದುಃಖವನ್ನು ಕಂಡ ಶ್ರೀಪಾದರು “ನೀನು ನನ್ನೊಡನೆ ಮಠಕ್ಕೆ ಬಾ. ನಾಳೆ ಪುನಃ ಹುಡುಕೋಣ”ಎಂದು ಪ್ರಶಾಂತನಿಗೆ ಸಮಾಧಾನ ಹೇಳಿ ರಾತ್ರಿ ಪೂಜೆಯ ನಿಮಿತ್ತ ಮಠಕ್ಕೆ ತೆರಳಿದರು. ರಾತ್ರಿ ಪೂಜೆ ಎಲ್ಲಾ ಮುಗಿದ ಮೇಲೆ ಮಂತ್ರಾಕ್ಷತೆ ಕೊಡುವ ಸಂದರ್ಭದಲ್ಲಿ ಶ್ರೀಪಾದರು ಪ್ರಶಾಂತನನ್ನು ಕರೆದು ಆತನ ಕೊರಳಿಗೆ ಬೆಳ್ಳಿಯ ಹೊಚ್ಚ ಹೊಸ ತುಳಸೀಮಣಿ ಹಾರವನ್ನು ನೀಡಿ ಆಶೀರ್ವದಿಸಿದರು.ಪ್ರಶಾಂತ ಸಂತೋಷದಿಂದ ಕುಣಿದು ಕುಪ್ಪಳಿಸಿದ.

ಆಶ್ಚರ್ಯವೆಂದರೆ ಮರುದಿನ ಸಂಜೆ ಎಂದಿನಂತೆ ಶ್ರೀಪಾದರು ಸರೋವರದಲ್ಲಿ ಸ್ನಾನಕ್ಕೆ ಇಳಿಯುತ್ತಿದ್ದಂತೆ ಪ್ರಶಾಂತನ ಹಾರವನ್ನು ಹುಡುಕಲು ಆರಂಭಿಸಿದರು.ಒಂದೆರಡು ನಿಮಿಷದಲ್ಲೇ ಪ್ರಶಾಂತನ ಸರ ನೀರಿನ ಆಳದಲ್ಲಿ ಶ್ರೀಪಾದರಿಗೆ ಲಭಿಸಿತು. ಈ ಹಿಂದೆ ತನ್ನಲಿದ್ದ ಹಾರ ಶ್ರೀಪಾದರಿಗೆ ದೊರಕುತ್ತಿದ್ದಂತೆ ಪ್ರಶಾಂತ ಗೊಂದಲಕ್ಕೀಡಾದ. ತಕ್ಷಣ ಆತನ ಮುಖಭಾವವನ್ನು ಗಮನಿಸಿದ ಶ್ರೀಪಾದರು ಕೆರೆಯ ಮೆಟ್ಟಿಲ ಬಳಿ ಬಂದು ಹೇಳಿದರು.“ನಿನ್ನೆ ನಾನು ನೀಡಿದ ಹಾರ ಹಾಗೂ ಈಗ ದೊರಕಿದ ನಿನ್ನ ಹಾರವನ್ನು ನಿತ್ಯ ಜಪ ಪೂಜೆ ಮಾಡುವಾಗ ತಪ್ಪದೆ ಧಾರಣೆ ಮಾಡು ನಿನಗೆ ಶ್ರೇಯಸ್ಸಾಗುತ್ತದೆ” ಎಂದು ಹರಸಿ ಮತ್ತೆ ನೀರಿಗೆ ದುಮುಕಿದರು.

ಮೊನ್ನೆ ಶ್ರೀಶಿರೂರುಮಠದ ಶ್ರೀಲಕ್ಷ್ಮೀವರತೀರ್ಥ  ಶ್ರೀಪಾದರು ಅನಿರೀಕ್ಷಿತವಾಗಿ ಹರಿಪಾದ ಸೇರಿದಾಗ ಅವರ ಅಂತಿಮ ದರ್ಶನಕ್ಕಾಗಿ ಪ್ರಶಾಂತ್ ಬೆಂಗಳೂರಿಂದ ಒಂದೇ ಉಸಿರಲ್ಲಿ ಶಿರೂರಿಗೆ ಬಂದಿದ್ದ.ಇತ್ತೀಚೆಗೆಬೆಂಗಳೂರಿನಲ್ಲಿ ಹೆಸರಾಂತ ಐಟಿ ಸಂಸ್ಥೆಯಲ್ಲಿ ಆತನಿಗೆ ಉನ್ನತ ಹುದ್ದೆ ಲಭಿಸಿತ್ತು.ನನ್ನನ್ನು ನೋಡುತ್ತಿದ್ದಂತೆಯೇ ಬಳಿಗೆ ಬಂದು ತನ್ನ ಕೊರಳಲ್ಲಿದ್ದ ಎರಡೂ ತುಳಸೀಮಣಿ ಹಾರವನ್ನು ತೋರಿಸಿ ಕಣ್ಣೀರಿಟ್ಟ.10 ವರುಷಗಳ ಹಿಂದೆ ಸರೋವರದಲ್ಲಿ ನಡೆದ ಘಟನೆಯನ್ನು ಪುನಃ ಹೇಳಲು ಪ್ರಯತ್ನಿಸುತ್ತಿದ್ದ. ಆದರೆ ತೀವ್ರ ದುಃಖದಿಂದ ಗಂಟಲು ತುಂಬಿ ಬಂದು ಆತನಿಗೆ ಮಾತೇ ಹೊರಡುತ್ತಿರಲಿಲ್ಲ.

ಹೌದು ನಿಷ್ಕಲ್ಮಶ ನಿರಪೇಕ್ಷ ಉದಾರ ಹೃದಯದ ಶ್ರೀಪಾದರು ನಾಡಿನ ಸಹಸ್ರಾರು ಭಕ್ತವರ್ಗದ  ಪ್ರೀತಿಗೆ ಪಾತ್ರರಾಗಿದ್ದರು.ವಿಶೇಷವೆಂದರೆ ಶಿರೂರು ಶ್ರೀಪಾದರು ಅಂದು ಪ್ರೀತಿಯಿಂದ ಪ್ರಾರ್ಥಿಸಿ ನೀಡುತ್ತಿದ್ದ ಅನುಗ್ರಹ ಮಂತ್ರಾಕ್ಷತೆಯಿರಲಿ,ತುಳಸೀಹಾರವಿರಲಿ,ವಸ್ತ್ರಗಳಿರಲಿ ಏನೇ ಸ್ಮರಣಿಕೆಗಳಿರಲಿ ಅವೆಲ್ಲವೂ ಇಂದು ನೂರಾರು ಭಕ್ತರ ಶ್ರೇಯಸ್ಸಿಗೆ ಉನ್ನತಿಗೆ ಕಾರಣವಾಗುತ್ತಿದೆ ಎನ್ನುವುದು ಪ್ರಶಾಂತನಂತಹ ನೂರಾರು ಭಕ್ತರ ಅಂತರಾಳದ ಮಾತು.

 
 
 
 
 
 
 
 
 
 
 

Leave a Reply